ಆರ್‌ಡಿಎಸ್‌ಎಸ್ ಯೋಜನೆ ಜಾರಿಯಾಗಬೇಕಾದರೆ ಸರ್ಕಾರ ಹಾಗೂ ಸರ್ಕಾರದ ಅಂಗಸಂಸ್ಥೆಗಳು ಎಸ್ಕಾಂಗೆ ಬಾಕಿ ಇರುವ ಸಂಪೂರ್ಣ ಬಿಲ್ ಪಾವತಿಸಬೇಕು.
ಬೆಂಗಳೂರು (ಜು.17): ರಾಜ್ಯದಲ್ಲಿ ಕೊನೆಗೂ ಎಲ್ಲಾ ವಿಧದ ಗ್ರಾಹಕರಿಗೂ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಮುಂದಾಗಿರುವ ರಾಜ್ಯ ಸರ್ಕಾರವು ಮೊದಲ ಹಂತವಾಗಿ ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್)ದ ವ್ಯಾಪ್ತಿಯಲ್ಲಿ ₹3,779 ಕೋಟಿ ವೆಚ್ಚದಲ್ಲಿ ‘ಆರ್‌ಡಿಎಸ್‌ಎಸ್’ ಯೋಜನೆ ಅನುಷ್ಠಾನಗೊಳಿಸಲು ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸುವ ಸಾಧ್ಯತೆಯಿದೆ.
ವಿಶೇಷವೆಂದರೆ, ಆರ್‌ಡಿಎಸ್‌ಎಸ್ ಯೋಜನೆ ಜಾರಿಯಾಗಬೇಕಾದರೆ ಸರ್ಕಾರ ಹಾಗೂ ಸರ್ಕಾರದ ಅಂಗಸಂಸ್ಥೆಗಳು ಎಸ್ಕಾಂಗೆ ಬಾಕಿ ಇರುವ ಸಂಪೂರ್ಣ ಬಿಲ್ ಪಾವತಿಸಬೇಕು. ಇದೀಗ ಸೆಸ್ಕ್ ವ್ಯಾಪ್ತಿಯಲ್ಲಿ ಬಾಕಿಯಿರುವ ಹಣವನ್ನು ಸರ್ಕಾರ ಭರಿಸುತ್ತದೆಯೋ ಅಥವಾ ಸ್ಥಳೀಯ ಸಂಸ್ಥೆಗಳ ಮೂಲಕ ಸಾರ್ವಜನಿಕರಿಗೆ ಶೇ.2 ರಷ್ಟು ಹೆಚ್ಚುವರಿ ತೆರಿಗೆ ವಿಧಿಸಿ ಸಂಗ್ರಹಿಸಲಾಗುತ್ತದೆಯೋ ಎಂಬುದು ಗುರುವಾರ ನಿರ್ಧಾರವಾಗಲಿದೆ. ಹೀಗಾಗಿ ಸಂಪುಟ ಸಭೆ ತೀವ್ರ ಕುತೂಹಲ ಮೂಡಿಸಿದೆ.
ಏನಿದು ಆರ್‌ಡಿಎಸ್‌ಎಸ್?: ಆರ್‌ಡಿಎಸ್‌ಎಸ್ (ರಿವ್ಯಾಂಪ್ಡ್ ಡಿಸ್ಟ್ರಿಬ್ಯೂಷನ್ ಸೆಕ್ಟರ್ ಸ್ಕೀಂ) ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಇದರಡಿ ರಾಜ್ಯ ಸರ್ಕಾರವು ಒಪ್ಪಂದ ಮಾಡಿಕೊಂಡರೆ ಶೇ.100 ರಷ್ಟು ಮೀಟರ್‌ಗಳನ್ನು ಸ್ಮಾರ್ಟ್ ಮೀಟರ್ ಆಗಿ ಬದಲಿಸಬೇಕು. ಇದಕ್ಕಾಗಿ ಮೀಟರ್‌ಗೆ ಶೇ.15 ರಷ್ಟು ಸಬ್ಸಿಡಿ ಹಾಗೂ ಮೂಲಸೌಕರ್ಯ ವ್ಯವಸ್ಥೆಗೆ ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತದೆ. ಆದರೆ, ಈ ಯೋಜನೆ ಅನುಷ್ಠಾನಗೊಳಿಸಲು ಮೊದಲು ಎಸ್ಕಾಂಗಳಿಗೆ ಸರ್ಕಾರ ಪಾವತಿಸಬೇಕಾದ ಹಣ ಸಂಪೂರ್ಣ ಪಾವತಿಸಬೇಕು.
ಪ್ರಸ್ತುತ ರಾಜ್ಯದಲ್ಲಿ ವಿವಿಧ ಸರ್ಕಾರಿ ಸಂಸ್ಥೆಗಳು ಎಸ್ಕಾಂಗಳಿಗೆ 15,000 ಕೋಟಿ ರು. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ಇಷ್ಟು ಹಣ ಪಾವತಿಸಲು ಸರ್ಕಾರದ ಬಳಿ ಹಣವಿಲ್ಲ. ಹೀಗಾಗಿ ಹರಿಯಾಣ ಮಾದರಿಯಲ್ಲಿ ಸಾರ್ವಜನಿಕರಿಗೆ ಶೇ.2 ರಷ್ಟು ಹೆಚ್ಚುವರಿ ತೆರಿಗೆ ವಿಧಿಸಿ ಬಂದಿರುವ ಹಣವನ್ನು ಎಸ್ಕಾಂಗಳಿಗೆ ಪಾವತಿಸಲು ಇಂಧನ ಸಚಿವ ಜಾರ್ಜ್ ಅಧ್ಯಕ್ಷತೆ ಸಭೆಯಲ್ಲಿ ಚರ್ಚಿಸಲಾಗಿತ್ತು. ಇದೀಗ ಮೈಸೂರು ವ್ಯಾಪ್ತಿಯಲ್ಲಿ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದ್ದು, ತೆರಿಗೆ ಬರೆ ಬೀಳಲಿದೆಯೇ ಎಂಬ ಕುತೂಹಲ ಉಂಟಾಗಿದೆ.
ಕಾಲ್ತುಳಿತ ಪ್ರಕರಣ ಕುರಿತ ಕುನ್ಹಾ ವರದಿ ಮಂಡನೆ: ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಂಟಾದ ಕಾಲ್ತುಳಿತ ದುರ್ಘಟನೆಗೆ ಕಾರಣವೇನು ಎಂಬ ಕುರಿತ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಆಯೋಗದ ವರದಿಯು ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ), ಆರ್‌ಸಿಬಿ ಮತ್ತು ಡಿಎನ್‌ಎ ಎಂಟರ್‌ಟೈನ್ಮೆಂಟ್ ನೆಟ್‌ವರ್ಕ್ಸ್ ಹಾಗೂ ಪೊಲೀಸ್ ಮತ್ತು ಗುಪ್ತಚರ ಇಲಾಖೆಗಳಲ್ಲಿ ಯಾರು ಹೊಣೆ ಹಾಗೂ ಯಾರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಿದೆ. ಈ ವರದಿ ಗುರುವಾರ ಬಹಿರಂಗವಾಗಲಿದೆ. ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟು, 56 ಜನ ಗಾಯಗೊಂಡ ಘಟನೆ ಸಂಬಂಧ ವಿಚಾರಣೆಗೆ ನ್ಯಾ.ಕುನ್ಹಾ ಅವರ ಏಕಸದಸ್ಯ ಆಯೋಗವನ್ನು ಸರ್ಕಾರ ರಚಿಸಿತ್ತು.
ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ತಾತ್ವಿಕ ಒಪ್ಪಿಗೆ?: ಕರ್ನಾಟಕ ರಾಜ್ಯದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸಲು ತಾತ್ವಿಕ ಅನುಮೋದನೆ ನೀಡುವ ಸಾಧ್ಯತೆಯಿದೆ. ಜತೆಗೆ ಎನ್‌ಟಿಪಿಸಿ ಸಂಸ್ಥೆಯು ಕರ್ನಾಟಕ ರಾಜ್ಯದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಗುರುತಿಸಿರುವ ಸಂಭಾವ್ಯ ಸ್ಥಳಗಳಲ್ಲಿ ಪ್ರಾಥಮಿಕ ಅಧ್ಯಯನ ನಡೆಸಲು ಅನುಮತಿ ನೀಡುವ ನಿರೀಕ್ಷೆಯಿದೆ.


