2023ರ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿ ಜಿಲ್ಲೆ ಆಳಂದ ವಿಧಾನಸಭಾ ಕ್ಷೇತ್ರದ ಮತಕಳವು ಯತ್ನ ಕೃತ್ಯದ ಹಿಂದೆ ಕ್ಷೇತ್ರದ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಸುಭಾಷ್ ಗುತ್ತೇದಾರ್, ಅವರ ಪುತ್ರನ ಪಾತ್ರವಿದೆ ಎಂದು ವಿಶೇಷ ತನಿಖಾ ತಂಡ‍ (ಎಸ್‌ಐಟಿ) ಶುಕ್ರವಾರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಗಿರೀಶ್ ಮಾದೇನಹಳ್ಳಿ

ಬೆಂಗಳೂರು : 2023ರ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿ ಜಿಲ್ಲೆ ಆಳಂದ ವಿಧಾನಸಭಾ ಕ್ಷೇತ್ರದ ಮತಕಳವು ಯತ್ನ ಕೃತ್ಯದ ಹಿಂದೆ ಕ್ಷೇತ್ರದ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಸುಭಾಷ್ ಗುತ್ತೇದಾರ್, ಅವರ ಪುತ್ರನ ಪಾತ್ರವಿದೆ ಎಂದು ವಿಶೇಷ ತನಿಖಾ ತಂಡ‍ (ಎಸ್‌ಐಟಿ) ಶುಕ್ರವಾರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.

ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿರುವ 22 ಸಾವಿರ ಪುಟಗಳ ಬೃಹತ್‌ ಆರೋಪಪಟ್ಟಿ ಇದಾಗಿದ್ದು, ಪ್ರಕರಣದಲ್ಲಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್‌, ಅವರ ಪುತ್ರ ಹರ್ಷಾನಂದ ಗುತ್ತೇದಾರ್‌ ಹಾಗೂ ಪಶ್ಚಿಮ ಬಂಗಾಳ ಮೂಲದ ಆದ್ಯ ಸೇರಿ ಏಳು ಮಂದಿಯನ್ನು ಆರೋಪಿಗಳು ಎಂದು ಉಲ್ಲೇಖಿಸಲಾಗಿದೆ.

ಈ ಆರೋಪ ಪಟ್ಟಿ ಹಿನ್ನೆಲೆಯಲ್ಲಿ ದೇಶಾದ್ಯಂತ ಮತಕಳವು ನಡೆದಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಮೊದಲ ಪುರಾವೆ ಸಿಕ್ಕಂತಾಗಿದೆ. ಅಲ್ಲದೆ, ಮತಕಳವು ವಿರುದ್ಧ ದೆಹಲಿಯಲ್ಲಿ ಇದೇ ತಿಂಗಳ 14ರಂದು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಬೃಹತ್‌ ಪ್ರತಿಭಟನೆಗೆ ಬಹುದೊಡ್ಡ ಅಸ್ತ್ರವೂ ಲಭಿಸಿದಂತಾಗಿದೆ.

ಆಳಂದ ಕ್ಷೇತ್ರದಲ್ಲಿ 5,994 ಮತಗಳನ್ನು ಅಳಿಸಿ ಹಾಕಲು ಕಲಬುರಗಿಯ ಖಾಸಗಿ ಕಾಲ್‌ ಸೆಂಟರ್‌ವೊಂದನ್ನು ಸುಭಾಷ್ ಗುತ್ತೇದಾರ್ ಹಾಗೂ ಅವರ ಪುತ್ರ ಹರ್ಷಾನಂದ ಬಳಸಿಕೊಂಡಿದ್ದರು. ಈ ಮತ ಕಳವಿಗೆ ಮಾಜಿ ಶಾಸಕರು ಹಣ ಕೂಡ ಪಾವತಿಸಿದ್ದಾರೆ. ಈ ಕೃತ್ಯದಲ್ಲಿ ತಂದೆ-ಮಗ ಪ್ರಮುಖ ಆರೋಪಿಗಳು ಎಂದು ಎಸ್‌ಐಟಿ ಹೇಳಿರುವುದಾಗಿ ಮೂಲಗಳು ಮಾಹಿತಿ ನೀಡಿವೆ.

ಏನಿದು ಪ್ರಕರಣ?:

2023ರ ವಿಧಾನಸಭಾ ಚುನಾವಣೆ ವೇಳೆ ಮತ ಕಳವು ಯತ್ನ ನಡೆದಿದೆ ಎಂದು ಕಾಂಗ್ರೆಸ್ ಹುರಿಯಾಳು ಬಿ.ಆರ್‌.ಪಾಟೀಲ್ ಆರೋಪಿಸಿದ್ದರು. ಈ ಬಗ್ಗೆ ಪರಿಶೀಲಿಸಿದ ಅಧಿಕಾರಿಗಳು, ಕೊನೆಗೆ ಮತ ಕಳವು ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತ ಕಳವು ನಡೆದಿದೆ ಎಂದು ಆರೋಪಿಸಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ದನಿ ಎತ್ತಿದ್ದರು. ಬಳಿಕ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದ ಮಹದೇವಪುರ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಆಳಂದ ಕ್ಷೇತ್ರಗಳಲ್ಲಿ ಮತ ಕಳವು ನಡೆದಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದರು. ಈ ಬಗ್ಗೆ ದೆಹಲಿಯಲ್ಲಿ ಸುದ್ದಿಗೋಷ್ಠಿ ಸಹ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಆಳಂದ ಕ್ಷೇತ್ರದ ಮತ ಕಳವು ಯತ್ನದ ತನಿಖೆಗೆ ಸರ್ಕಾರ ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿತ್ತು.

ಮತ ಕಳವಿಗೆ ಹಣ ಕೊಟ್ಟ ತಂದೆ-ಮಗ:

ದಶಕಗಳಿಂದ ಆಳಂದ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಬಿ.ಆರ್.ಪಾಟೀಲ್ ಹಾಗೂ ಬಿಜೆಪಿ ಮುಖಂಡ ಸುಭಾಷ್ ಗುತ್ತೇದಾರ್ ರಾಜಕೀಯ ಎದುರಾಳಿಗಳಾಗಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿಯಿಂದ ಮೂರು ಬಾರಿ ಗುತ್ತೇದಾರ್ ಶಾಸಕರಾಗಿದ್ದರೆ, ನಾಲ್ಕು ಬಾರಿ ಪಾಟೀಲ್ ವಿಧಾನಸಭೆ ಪ್ರವೇಶಿಸಿದ್ದಾರೆ. 2018ರಲ್ಲಿ 697 ಅಲ್ಪಮತಗಳಿಂದ ಪಾಟೀಲ್ ಅವರಿಗೆ ಸೋಲಾಗಿತ್ತು. ಆದರೆ 2023ರಲ್ಲಿ ಸುಭಾಷ್ ಗುತ್ತೇದಾರ್ ಅವರನ್ನು ಮಣಿಸಿ ಮತ್ತೆ ಬಿ.ಆರ್‌.ಪಾಟೀಲ್ ವಿಜಯದ ನಗೆ ಬೀರಿದ್ದರು. ತಮ್ಮನ್ನು ಮತ್ತೆ ಸೋಲಿಸಲು ಮತ ಕಳವು ಯತ್ನ ನಡೆದಿತ್ತು ಎಂದು ಪಾಟೀಲ್‌ ಗಂಭೀರ ಆರೋಪ ಮಾಡಿದ್ದರು.

ಈ ಪ್ರಕರಣದ ತನಿಖೆಗೆ ಚುನಾವಣಾ ಆಯೋಗ ಅಸಹಕಾರ ತೋರಿದೆ ಎಂಬ ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡಿದ್ದರು. ತಾಂತ್ರಿಕ ಮಾಹಿತಿ ಆಧರಿಸಿ ತನಿಖೆಗಿಳಿದ ಎಸ್‌ಐಟಿ, ಮತ ಅಳಿಸಿ ಹಾಕಲು ಸಲ್ಲಿಸಿದ್ದ ಅರ್ಜಿಗಳ ಮೂಲ ಕೆದಕಿದಾಗ ಮತಕಳ್ಳತನ ಜಾಲ ಬಯಲಾಗಿತ್ತು. ಕಲಬುರಗಿ ನಗರದಲ್ಲಿ ಅಕ್ರಮ್ ಪಾಷ ಎಂಬಾತ ಕಾಲ್ ಸೆಂಟರ್ ನಡೆಸುತ್ತಿದ್ದ. ಈತನಿಗೆ ಆಳಂದ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಿಂದ ಕೈ ಬಿಡಬೇಕಾದ ಮತದಾರರ ವಿವರವನ್ನು ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಹಾಗೂ ಅವರ ಪುತ್ರ ಹರ್ಷಾನಂದ್ ನೀಡಿದ್ದರು. ಪ್ರತಿ ಮತ ಡಿಲೀಟ್‌ ಮಾಡಲು ಸಲ್ಲಿಸುವ ಅರ್ಜಿಗೆ 80 ರು. ನಂತೆ ಮಾಜಿ ಶಾಸಕರಿಂದ ಪಾಷ ಹಣ ಪಡೆದಿದ್ದ. ಈ ಹಣ ಸಂದಾಯದ ಬಳಿಕ ಚುನಾವಣಾ ಆಯೋಗಕ್ಕೆ 2022ರ ಡಿಸೆಂಬರ್ ಹಾಗೂ 2023ರ ಫೆಬ್ರವರಿ ತಿಂಗಳಲ್ಲಿ ಆಳಂದ ಕ್ಷೇತ್ರದಲ್ಲಿ 6,018 ಮತಗಳ ರದ್ದತಿಗೆ ಅರ್ಜಿ ಸಲ್ಲಿಕೆಯಾಗಿದ್ದವು.

ಈ ಅರ್ಜಿಯನ್ನು ಸ್ಥಳೀಯರ ಹೆಸರಿನಲ್ಲಿ ಭರ್ತಿ ಮಾಡಿ ಪಾಷ, ಆತನ ಸೋದರ ಅಸ್ಲಾಂ ಪಾಷ ಹಾಗೂ ಸಂಬಂಧಿ ಮೊಹಮ್ಮದ್‌ ಅಶ್ಪಾಕ್‌ ಸಲ್ಲಿಸಿದ್ದರು. ಪ್ರತಿ ಅರ್ಜಿಗೆ 80 ರು. ನಂತೆ ಪಾಷ ತಂಡಕ್ಕೆ ಒಟ್ಟು 4.6 ಲಕ್ಷ ರು. ಪಾವತಿಯಾಗಿತ್ತು. ಇದಕ್ಕಾಗಿ ಪ್ರತಿ ಮತ ಡಿಲೀಟ್‌ಗೆ ಒಟಿಪಿ ಪಡೆಯಲು ತಲಾ ಒಂದು ಒಟಿಪಿಗೆ 10 ರು. ನಂತೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಆದ್ಯಗೆ ಪಾಷ ತಂಡ ಹಣ ಕೊಟ್ಟಿತ್ತು. ಈ ಸಂಬಂಧ ಆದ್ಯನನ್ನು ಎಸ್‌ಐಟಿ ಬಂಧಿಸಿತ್ತು. ಕೃತ್ಯದಲ್ಲಿ ಬಂಧನ ಭೀತಿಯಿಂದ ಮಾಜಿ ಶಾಸಕರು ಹಾಗೂ ಅವರ ಮಕ್ಕಳು ನಿರೀಕ್ಷಣಾ ಜಾಮೀನು ಪಡೆದಿದ್ದು, ನಂತರ ಎಸ್‌ಐಟಿ ಅವರನ್ನು ವಿಚಾರಣೆ ನಡೆಸಿತ್ತು.

ಅಲ್ಲದೆ ಕಲಬುರಗಿ ನಗರ ಮತ್ತು ಆಳಂದದಲ್ಲಿದ್ದ ಸುಭಾಷ್ ಗುತ್ತೇದಾರ್ ಹಾಗೂ ಅವರ ಮಕ್ಕಳು ಮತ್ತು ಕಾಲ್ ಸೆಂಟರ್‌ನ ಪಾಷ ತಂಡದ ಸದಸ್ಯರ ಮನೆಗಳ ಮೇಲೆ ಎಸ್‌ಐಟಿ ದಾಳಿಯನ್ನೂ ನಡೆಸಿತ್ತು. ಈ ವೇಳೆ ಲ್ಯಾಪ್‌ಟಾಪ್‌ ಹಾಗೂ ಮೊಬೈಲ್‌ಗಳು ಜಪ್ತಿಯಾಗಿದ್ದವು. ಆಗ ಕೆಲ ದಾಖಲೆಗಳನ್ನು ಮಾಜಿ ಶಾಸಕರ ಪುತ್ರ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಣ ವರ್ಗಾವಣೆ ದಾಖಲೆಗಳು ಲಭ್ಯ:

ಪಾಷ ಮನೆಯಲ್ಲಿ ಪತ್ತೆಯಾದ ಲ್ಯಾಪ್‌ಟಾಪ್‌ಗಳಲ್ಲಿ ಮತ ಕಳವು ಯತ್ನಕ್ಕೆ ಮಹತ್ವದ ಪುರಾವೆಗಳು ಪತ್ತೆಯಾಗಿದ್ದವು. ಮತ ಪಟ್ಟಿಯಲ್ಲಿ ಅಳಿಸಿ ಹಾಕಬೇಕಿದ್ದ ಮತದಾರರ ವಿವರ ಕಳುಹಿಸಿದ್ದ ಲ್ಯಾಪ್‌ಟಾಪ್‌ಗಳು ಎಸ್‌ಐಟಿಗೆ ಲಭಿಸಿದ್ದವು. ಜತೆಗೆ, ಪಾಷ ಹಾಗೂ ಆದ್ಯ ನಡುವೆ ನಡೆದಿದ್ದ ಹಣದ ವ್ಯವಹಾರದ ಬಗ್ಗೆ ಬ್ಯಾಂಕ್ ವಿವರ ಕೂಡ ಸಿಕ್ಕಿದೆ ಎಂದು ಮೂಲಗಳು ಹೇಳಿವೆ.

22 ಸಾವಿರ ಪುಟಗಳ ಆರೋಪಪಟ್ಟಿ?

ಆಳಂದ ಕ್ಷೇತ್ರದ ಮತ ಕಳವು ಯತ್ನ ಪ್ರಕರಣದಲ್ಲಿ 22 ಸಾವಿರ ಪುಟಗಳ ಆರೋಪ ಪಟ್ಟಿಯನ್ನು ಎಸ್‌ಐಟಿ ಸಲ್ಲಿಸಿದೆ. ಇದರಲ್ಲಿ ಶಾಸಕ ಬಿ.ಆರ್‌.ಪಾಟೀಲ್‌, ಸ್ಥಳೀಯ ಚುನಾವಣಾಧಿಕಾರಿ, ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಅವರ ಪುತ್ರ ಹರ್ಷಾನಂದ ಗುತ್ತೇದಾರ್, ಕಾಲ್ ಸೆಂಟರ್ ಮುಖ್ಯಸ್ಥ ಪಾಷ ಮತ್ತು ಆತನ ನಾಲ್ವರು ಸಹಚರರ ಹೇಳಿಕೆ ಸಹ ಉಲ್ಲೇಖಿಸಲಾಗಿದೆ. ಇದರ ಜತೆಗೆ ಪಾಷ ಮತ್ತು ಮಾಜಿ ಶಾಸಕರ ಮನೆಯಲ್ಲಿ ಸಿಕ್ಕಿದ್ದ ಲ್ಯಾಪ್‌ಟಾಪ್‌ಗಳು ಹಾಗೂ ಮೊಬೈಲ್‌ಗಳ ಕುರಿತ ಎಫ್‌ಎಸ್‌ಎಲ್ ವರದಿಗಳನ್ನು ಸಹ ಎಸ್‌ಐಟಿ ಆರೋಪಪಟ್ಟಿ ಜತೆಗೆ ನೀಡಿದೆ ಎಂದು ತಿಳಿದು ಬಂದಿದೆ.

- 2023ರ ವಿಧಾನಸಭೆ ಚುನಾವಣೆ ವೇಳೆ ಮತಗಳವು ಯತ್ನ ನಡೆದಿದೆ ಎಂದು ಆರೋಪಿಸಿದ್ದ ಶಾಸಕ ಬಿ.ಆರ್‌.ಪಾಟೀಲ್‌

- ಈ ಸಂಬಂಧ ಅಧಿಕಾರಿಗಳಿಂದ ಆಳಂದ ಪೊಲೀಸ್‌ ಠಾಣೆಯಲ್ಲಿ ದೂರು. ಈ ಬಗ್ಗೆ ರಾಹುಲ್‌ ಗಾಂಧಿಯಿಂದಲೂ ಆರೋಪ

- ರಾಜ್ಯ ಸರ್ಕಾರದಿಂದ ಎಸ್‌ಐಟಿ ರಚನೆ. ಬಿ.ಕೆ.ಸಿಂಗ್‌ ನೇತೃತ್ವ. ಇದೀಗ ಎಸ್‌ಐಟಿಯಿಂದ ಆರೋಪಪಟ್ಟಿ ಸಲ್ಲಿಕೆ

- ಬಿ.ಆರ್. ಪಾಟೀಲ್‌ ಅವರ ಎದುರಾಳಿಯಾಗಿದ್ದ ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್‌, ಪುತ್ರನ ವಿರುದ್ಧ ಆರೋಪ

- ಬಂಧನ ಭೀತಿಯ ಹಿನ್ನೆಲೆಯಲ್ಲಿ ಈಗಾಗಲೇ ನಿರೀಕ್ಷಣಾ ಜಾಮೀನು ಪಡೆದಿರುವ ಗುತ್ತೇದಾರ್ ಹಾಗೂ ಪುತ್ರ