ಸಿಎಂ ಸೀಟಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಟಕವಾಡುತ್ತಿದ್ದು, ಜನಾದೇಶ ಧಿಕ್ಕರಿಸಿದ್ದಾರೆ. ಜನಾದೇಶಕ್ಕೆ ಬೆಲೆ ಕೊಡದ ಇವರಿಗೆ ನೈತಿಕತೆಯೇ ಇಲ್ಲ ಎಂದು ವಿ.ಸೋಮಣ್ಣ ವಾಗ್ದಾಳಿ ನಡೆಸಿದರು.
ಬಾಳೆಹೊನ್ನೂರು (ನ.28): ಸಿಎಂ ಸೀಟಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಟಕವಾಡುತ್ತಿದ್ದು, ಜನಾದೇಶ ಧಿಕ್ಕರಿಸಿದ್ದಾರೆ. ಜನಾದೇಶಕ್ಕೆ ಬೆಲೆ ಕೊಡದ ಇವರಿಗೆ ನೈತಿಕತೆಯೇ ಇಲ್ಲ. ಇದೊಂದು ಭ್ರಷ್ಟ, ಲಜ್ಜೆಗೆಟ್ಟ, ಮರ್ಯಾದೆಯಿಲ್ಲದ ಸರ್ಕಾರ ಎಂದು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದರು. ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ್ದ ಸಚಿವರು, ಸುದ್ದಿಗಾರರ ಜೊತೆ ಮಾತನಾಡಿದರು. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ. ಹಿಂದೆ ಬಿಜೆಪಿ ಮೇಲೆ 40 ಪರ್ಸೆಂಟ್ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು. ಆದರೀಗ ರಾಜ್ಯದಲ್ಲಿ ಶೇ.60-70ರಷ್ಟು ಭ್ರಷ್ಟಾಚಾರ ನಡೆಯುತ್ತಿದ್ದು, ಸಾರ್ವಜನಿಕರ ಹಣವನ್ನು ತಿಂದು ತೇಗುತ್ತಿದ್ದಾರೆ.
ಇನ್ನು ಜಾಸ್ತಿ ದಿನ ಕಾಯುವುದು ಬೇಡ, ಕೆಲವೇ ದಿನಗಳಲ್ಲಿ ಸರ್ಕಾರ ಪತನವಾಗಲಿದೆ. ಇವರ ಪಾಪದ ಕೊಡ ತುಂಬಿ ಹೋಗಿದ್ದು, ಅದಕ್ಕೆ ಪ್ರಾಯಶ್ಚಿತವೂ ಆಗಬೇಕಿದೆ ಎಂದರು. ಡಿಕೆಶಿ ಮುಖ್ಯಮಂತ್ರಿಯಾದರೆ ಬಿಜೆಪಿಯವರು ಕೈಜೋಡಿಸುತ್ತಾರಾ ಎಂಬ ಪ್ರಶ್ನೆಗೆ, ನಮಗೆ ಏನಕ್ಕೆ ಬೇಕು ಇದೆಲ್ಲ. ಅವರನ್ನು ಕಟ್ಟಿಕೊಂಡು ನಾವು ಏನು ಮಾಡೋಣ?. ಅವರಿಗೆ ಧೈರ್ಯವಿದ್ದರೆ ಸರ್ಕಾರ ವಿಸರ್ಜನೆ ಮಾಡಲಿ. ಚುನಾವಣೆಗೆ ಹೋಗೋಣ. ಬಿಜೆಪಿ ಬಲಾಢ್ಯವಾಗಿದ್ದು, ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ನಾಯಕತ್ವದ ಮೇಲೆ ನಿಂತಿದೆ. ರಾಷ್ಟ್ರಕ್ಕೆ, ರಾಜ್ಯಕ್ಕೆ ಒಳ್ಳೆಯದಾಗಬೇಕು ಎಂಬುದು ನಮ್ಮ ಆಶಯ ಎಂದರು.
ಶೃಂಗೇರಿ-ಬಾಳೆಹೊನ್ನೂರು ಹೊಸ ರೈಲು ಮಾರ್ಗ ಸರ್ವೆಗೆ ಯೋಜನೆ
ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗದ 332 ಕಿಮೀ ಯೋಜನೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿ ಶೃಂಗೇರಿ-ಬಾಳೆಹೊನ್ನೂರು ಹೊಸ ಮಾರ್ಗ ಮಾಡಲು ಸರ್ವೆಗೆ ಯೋಜಿಸಲಾಗಿದೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು. ರಂಭಾಪುರಿ ಪೀಠದಲ್ಲಿ ಗುರುವಾರ ನಡೆದ ಶ್ರೀಮದ್ ರಂಭಾಪುರಿ ಲಿಂಗೈಕ್ಯ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರ ಪೀಠಾರೋಹಣ ಶತಮಾನೋತ್ಸವದಲ್ಲಿ ಮಾತನಾಡಿ, ಶೃಂಗೇರಿ-ಬಾಳೆಹೊನ್ನೂರು ಮೂಲಕ ರೈಲು ಹಾದು ಹೋಗುವ ಯೋಜನೆ ಮಾಡಲು ಶ್ರೀಗಳು ಹೇಳಿದ್ದು, ಲೋಕಸಭಾ ಅಧಿವೇಶನ ಮುಗಿದ ನಂತರ ಬಾಳೆಹೊನ್ನೂರು ಮಠಕ್ಕೆ ತಾನು ಅಧಿಕಾರಿಗಳೊಂದಿಗೆ ಬಂದು ಶೃಂಗೇರಿ-ಬಾಳೆಹೊನ್ನೂರು ಹೊಸ ರೈಲು ಮಾರ್ಗದ ಬಗ್ಗೆ ಸ್ವಾಮೀಜಿಗಳೊಂದಿಗೆ ಮತ್ತು ಪರಿಸರ ಇಲಾಖೆ ಅನುಮತಿ ಸಮಸ್ಯೆಬಗ್ಗೆಯೂ ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.
ಈ ಮಾರ್ಗ ಇಲ್ಲಿರುವ ರೈತರು, ಸಾರ್ವಜನಿಕರು ಹಾಗೂ ಭಕ್ತರಿಗೂ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. 2014ರವರೆಗೆ ರಾಜ್ಯದಲ್ಲಿ ರೈಲು ಯೋಜನೆ ಏನು ಇರಲಿಲ್ಲ. ಆನಂತರ ರಾಜ್ಯದಲ್ಲಿ ₹49 ಸಾವಿರ ಕೋಟಿ ಖರ್ಚು ಮಾಡಿದ್ದು, ನಾನೇ ಉದ್ಘಾಟನೆ ಮಾಡುತ್ತಿದ್ದೇನೆ. ಕಡೂರು-ಚಿಕ್ಕಮಗಳೂರು ಮಾರ್ಗದ ಕಾಮಗಾರಿ ಈಗಾಗಲೇ ಮುಗಿಯುತ್ತಿದ್ದು, ಸುಮಾರು ₹535 ಕೋಟಿ ಖರ್ಚು ಮಾಡಲಾಗಿದೆ. ಸ್ವಲ್ಪ ದಿನಗಳಲ್ಲಿ ರೈಲು ಚಾಲನೆಯಾಗಲಿದೆ ಎಂದರು. ಬೀರೂರು-ಶಿವಮೊಗ್ಗ ಡಬಲ್ ರೈಲು ಯೋಜನೆ ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಈ ಹಿಂದೆ ಚಿಕ್ಕಮಗಳೂರು-ಬೇಲೂರಿಗೆ, ಬೇಲೂರಿನಿಂದ ಹಾಸನಕ್ಕೆ ರೈಲು ಕನಸು ಕಂಡಿರಲಿಲ್ಲ. ಇವೆಲ್ಲವನ್ನೂ ಎರಡೂವರೆ ವರ್ಷದಲ್ಲಿ ಮಾಡಿದ್ದೇವೆ. ಅಮೃತ್ ಭಾರತ್ ಯೋಜನೆಯಡಿ ಚಿಕ್ಕಮಗಳೂರಿನಲ್ಲಿ ₹27 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಯಾಗುತ್ತಿದೆ. ಸಕಲೇಶಪುರದ ರೈಲ್ವೇ ನಿಲ್ದಾಣಕ್ಕೆ ₹22 ಕೋಟಿ. ಅರಸೀಕೆರೆ-ತುಮಕೂರು ಡಬಲ್ ರೈಲ್ವೇಗೆ ₹750 ಕೋಟಿ ಖರ್ಚು ಮಾಡಿ ಮಾಡಲಾಗಿದೆ. ಇದೆಲ್ಲಕ್ಕೂ ಕೇಂದ್ರ ಸರ್ಕಾರ ಹಣ ನೀಡಿದ್ದು, ರಾಜ್ಯ ಸರ್ಕಾರ ಒಂದು ಪೈಸೆಯೂ ನೀಡಿಲ್ಲ ಎಂದರು.


