ಸಿದ್ದರಾಮಯ್ಯ ಅವರೇ 5 ವರ್ಷ ಮುಖ್ಯಮಂತ್ರಿ ಎಂದು ನಾವು ಆಯ್ಕೆ ಮಾಡಿದ್ದೆವು. ನಡುವೆ ಹೈಕಮಾಂಡ್‌ನವರು ಏನಾದರು ತೀರ್ಮಾನ ಮಾಡಿದ್ದರೆ ಅವರಿಗೆ ಬಿಟ್ಟದ್ದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರು (ಅ.29): ‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಅವರೇ 5 ವರ್ಷ ಮುಖ್ಯಮಂತ್ರಿ ಎಂದು ನಾವು ಆಯ್ಕೆ ಮಾಡಿದ್ದೆವು. ನಡುವೆ ಹೈಕಮಾಂಡ್‌ನವರು ಏನಾದರು ತೀರ್ಮಾನ ಮಾಡಿದ್ದರೆ ಅವರಿಗೆ ಬಿಟ್ಟದ್ದು, ಈ ಸಮಸ್ಯೆ ಬಗೆಹರಿಸುವಂತೆ ಸಂದರ್ಭ ಬಂದಾಗ ಹೈಕಮಾಂಡ್‌ಗೆ ಮನವಿ ಮಾಡುತ್ತೇನೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ‘ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ತಲಾ 2.5 ವರ್ಷ ಅಧಿಕಾರದ ಹಂಚಿಕೆ ಆಗಿದೆ’ ಎಂಬ ಗಾಳಿ ಸುದ್ದಿಯ ನಡುವೆಯೇ ಪರಮೇಶ್ವರ್ ನೀಡಿದ ಈ ಹೇಳಿಕೆ ಕುತೂಹಲ ಮೂಡಿಸಿದೆ.
ಸಚಿವರಾದ ಎಚ್.ಸಿ.ಮಹದೇವಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘2023ರಲ್ಲಿ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಸಿಎಲ್‌ಪಿ ನಾಯಕರನ್ನು ಆಯ್ಕೆ ಮಾಡುವಾಗ ಸಿದ್ದರಾಮಯ್ಯ ಎರಡೂವರೆ ವರ್ಷ ಅವಧಿಗೆ ಮಾತ್ರ ಮುಖ್ಯಮಂತ್ರಿ ಎಂದು ಯಾರೂ ಹೇಳಿರಲಿಲ್ಲ. ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಎಂದು ನಾವು ಆಯ್ಕೆ ಮಾಡಿದ್ದೇವೆ. ಮಧ್ಯದಲ್ಲಿ ಹೈಕಮಾಂಡ್ ಏನಾದರು ತೀರ್ಮಾನ ಮಾಡಿದ್ದರೆ ಅವರಿಗೆ ಬಿಟ್ಟದ್ದು. ಅದಕ್ಕೆ ನಾವು ಏನಾದರೂ ಹೇಳಲು ಅಗುತ್ತಾ? ದಿನನಿತ್ಯ ನಾವು ಹೇಳಿಕೆಗಳನ್ನು ಕೊಟ್ಟುಕೊಂಡು ಕೂರುವುದು ಸರಿಯಲ್ಲ. ಈ ಸಮಸ್ಯೆ ಬಗೆಹರಿಸುವಂತೆ ಸಂದರ್ಭ ಬಂದಾಗ ಹೈಕಮಾಂಡ್‌ನವರಿಗೆ ಮನವಿ ಮಾಡುತ್ತೇನೆ’ ಎಂದರು.
ದಲಿತ ಸಮಾವೇಶಕ್ಕೆ ಸಮಸ್ಯೆ ಇಲ್ಲ
ದಲಿತ ಸಮಾವೇಶ ಸಮಾವೇಶ ಮಾಡಲು ಯಾವುದೇ ಸಮಸ್ಯೆ ಇಲ್ಲ. ಈ ಹಿಂದೆ ಹೈಕಮಾಂಡ್ ಬೇರೆ ಕಾರಣಕ್ಕಾಗಿ ಸಮಾವೇಶ ಸ್ಥಗಿತ ಮಾಡುವಂತೆ ಹೇಳಿದ್ದಕ್ಕೆ ಒಪ್ಪಿಕೊಂಡಿದ್ದೆವು. ಪಕ್ಷದ ಹಿತದೃಷ್ಟಿಯಿಂದ, ದಲಿತ ಸಮುದಾಯ ಯಾವತ್ತೂ ಕಾಂಗ್ರೆಸ್ ಜೊತೆಗೆ ಇರುತ್ತದೆ. ನಾವೆಲ್ಲ ಒಟ್ಟಿಗೆ ಇರಬೇಕಾದರೆ ಆಗಾಗ ಸಮಾವೇಶಗಳನ್ನು ಮಾಡಿ, ಸರ್ಕಾರದ ವತಿಯಿಂದ ಏನೆಲ್ಲ ಯೋಜನೆಗಳನ್ನು ದಲಿತ ಸಮುದಾಯಕ್ಕೆ ನೀಡಲಾಗಿದೆ ಎಂಬುದನ್ನು ಹೇಳಬೇಕಾಗುತ್ತದೆ ಎಂದು ಹೇಳಿದರು.
ತುಮಕೂರಿನಲ್ಲಿ ಕೋ-ಆಪರೇಟಿವ್ ಸೊಸೈಟಿಯನ್ನು ಬ್ಯಾಂಕ್ ಮಾಡಬೇಕು ಎಂಬ ಪ್ರಯತ್ನ ಮಾಡಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಸಹಾಯ ಆಗಬಹುದು ಎಂಬ ನಿಟ್ಟಿನಲ್ಲಿ ಎಚ್.ಸಿ.ಮಹದೇವಪ್ಪ ಅವರನ್ನು ಭೇಟಿ ಮಾಡಲು, ಸೊಸೈಟಿ ನಿರ್ದೇಶಕರು ಮತ್ತು ಸದಸ್ಯರು ಸಮಯ ತೆಗೆದುಕೊಂಡಿದ್ದರು. ನಾನು ಕೋ-ಆಪರೇಟಿವ್ ಅಧ್ಯಕ್ಷನಾಗಿ, ಮನವಿ ನೀಡಲು ಬಂದಿದ್ದೆ. ಇದರಲ್ಲಿ ರಾಜಕೀಯ ವಿಶೇಷತೆ ಏನೂ ಇಲ್ಲ ಎಂದರು.


