2028ರ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದು ವಸತಿ, ವಕ್ಫ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮ್ಮದ್ ಖಾನ್ ಭವಿಷ್ಯ ನುಡಿದರು.
ಬಾಗೇಪಲ್ಲಿ (ಅ.30): 2028ರ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದು ವಸತಿ, ವಕ್ಫ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮ್ಮದ್ ಖಾನ್ ಭವಿಷ್ಯ ನುಡಿದರು. ತಾಲೂಕಿನ ಪರಗೋಡು ಗ್ರಾಮದ ಬಳಿ 16 ಕೋಟಿ ರು. ವೆಚ್ಚದಲ್ಲಿ ಅಲ್ಪಸಂಖ್ಯಾತರ ವಸತಿ ನಿಲಯ ಸೇರಿ ಸುಮಾರು 30 ಕೋಟಿ ರು. ವಿವಿಧ ಕಾಮಗಾರಿಕೆಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಪಟ್ಟಣದ ಶಾದಿಮಹಲ್ ಆವರಣದಲ್ಲಿ ಆಯೋಜಿಸಲಾಗಿದ್ದ ವೇದೆಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಬಡವರಿಗೆ ನಿವೇಶನ ಹಕ್ಕುಪತ್ರ ನೀಡಲಾಗಿತ್ತು. ಆದರೆ ನಂತರ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರ ಹಾಗೂ ಬಿಜೆಪಿ ಸರ್ಕಾರ ಒಂದೇ ಒಂದು ಹಕ್ಕುಪತ್ರ ಕೊಟ್ಟಿಲ್ಲ. ರಾಜ್ಯದಲ್ಲಿ ಸರ್ವೆ ನಡೆಸಿ 54,690 ಹಕ್ಕು ಪತ್ರಗಳನ್ನು ಎಲ್ಲಾ ರಾಜ್ಯದ ಎಲ್ಲಾ ತಾಲೂಕಿನಲ್ಲಿಯೂ ನೀಡಲು ನಮ್ಮ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಸಾಂಕೇತಿಕವಾಗಿ ಇಂದು ಬಾಗೇಪಲ್ಲಿಯಲ್ಲಿ 554 ಹಕ್ಕುಪತ್ರಗಳನ್ನು ಅರ್ಹಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ವೋಟು ನೀಡಿರುವ ಕ್ಷೇತ್ರದ ಜನರ ಋಣ ತೀರಿಸುವಂತಹ ಕೆಲಸದಲ್ಲಿ ನಿರತರಾಗಿದ್ದಾರೆ. ಮುಂದಿನ ಸಚಿವ ಸಂಪುಟದಲ್ಲಿ ಸುಬ್ಬಾರೆಡ್ಡಿಗೆ ಮಂತ್ರಿ ಸ್ಥಾನ ಸಿಗುವುದಲ್ಲಿ ಯಾವುದೇ ಅನುಮಾನವಿಲ್ಲ ಎಂದರು. ರಾಜ್ಯದಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ 43,354 ಮನೆ ನೀಡುವ ಮೂಲಕ 6ನೇ ಗ್ಯಾರೆಂಟಿಯಾಗಿ ಘೋಷಣೆ ಮಾಡಲಾಗುವುದು. ಮುಂದಿನ ವರ್ಷ ಹಂತ ಹಂತವಾಗಿ ಬಾಗೇಪಲ್ಲಿಗೆ 5 ಸಾವಿರ ಮನೆ ನೀಡುವುದಾಗಿ ಭರವಸೆ ನೀಡಿದರು.
ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, 16 ಕೋಟಿ ರು. ವೆಚ್ಚದಲ್ಲಿ ಅಲ್ಪಸಂಖ್ಯಾತರ ವಸತಿ ನಿಲಯ ಸೇರಿ 30 ಕೋಟಿ ರು. ವೆಚ್ಚದ ವಿವಿಧ ಕಾಮಗಾರಿಗಳಿಗೆ ಸಚಿವರು ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ನನ್ನ ಅಧಿಕಾರದ ಅವಧಿಯಲ್ಲಿಯೇ ಕ್ಷೇತ್ರದ ಎಲ್ಲ ನಿವೇಶನ ರಹಿತರಿಗೆ ನಿವೇಶನ ಮಂಜೂರು ಮಾಡಿಸಿ ಹಕ್ಕುಪತ್ರವನ್ನು ನೀಡುವುದಾಗಿ ಭರವಸೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮ್ಮದ್, ಉನ್ನತ ಶಿಕ್ಷಣ ಸಚಿವ ಹಾಗೂ ಚಿಕ್ಕಬಳ್ಳಾಪುರ ಉತ್ಸವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಜಿಲ್ಲಾಧಿಕಾರಿ ರವೀಂದ್ರ ಸೇರಿ ಜನಪ್ರತಿನಿಧಿಗಳು, ಮುಸ್ಲಿಂ ಸಮುದಾಯ ಮುಖಂಡರು, ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದರು.


