ಚೆನ್ನೈ ಮೂಲದ ಸಾಫ್ಟ್ವೇರ್ ವೃತ್ತಿಪರರಾದ ವನತಿ ಎಸ್, ₹30 ಲಕ್ಷ ಸಂಬಳದ ಕಾರ್ಪೊರೇಟ್ ಉದ್ಯೋಗವನ್ನು ತ್ಯಜಿಸಿದ್ದಾರೆ. ಕಾರ್ಪೊರೇಟ್ ಒತ್ತಡ ಮತ್ತು ದಣಿವಿನಿಂದಾಗಿ ಈ ನಿರ್ಧಾರ ಕೈಗೊಂಡ ಅವರು, ಇದೀಗ ಪೂರ್ಣಕಾಲಿಕ ಕಂಟೆಂಟ್ ಕ್ರಿಯೇಟರ್ ಆಗಿ ತೃಪ್ತಿಕರ ಜೀವನ ನಡೆಸುತ್ತಿದ್ದಾರೆ.
ಚೆನ್ನೈ: ಚೆನ್ನೈ ಮೂಲದ ಸಾಫ್ಟ್ವೇರ್ ವೃತ್ತಿಪರರೊಬ್ಬರು ಬರೋಬ್ಬರಿ 30 ಲಕ್ಷ ಸಂಬಳದ ಕಾರ್ಪೊರೇಟ್ ಉದ್ಯೋಗವನ್ನು ತ್ಯಜಿಸಿದ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ವರ್ಷಗಳ ಕಾಲ ನಡೆಸಿದ ಮೀಟಿಂಗ್ಗಳು, ನಿರಂತರ ಕೋಡಿಂಗ್ ಗಳು ಮತ್ತು ಟಾರ್ಗೆಟ್ ಒತ್ತಡಗಳಿಂದ ಉಂಟಾದ ಮಾನಸಿಕ ಮತ್ತು ದೈಹಿಕ ದಣಿವಿನಿಂದ ಕೆಲಸ ತ್ಯಜಿಸಿದ ಬಗ್ಗೆ ಮಾತನಾಡಿದ್ದಾರೆ, ಈ ನಿರ್ಧಾರ, ಕೆಲಸದ ಅನುಭವ ಅನೇಕ ಮಂದಿಯ ಗಮನ ಸೆಳೆದಿದೆ.
ಒರಾಕಲ್ ಕಂಪನಿಯಲ್ಲಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ವನತಿ ಎಸ್, ವಾರ್ಷಿಕ ಸುಮಾರು ₹30 ಲಕ್ಷ ಸಂಬಳದ ಹುದ್ದೆಯನ್ನು ತ್ಯಜಿಸಿ ಪೂರ್ಣಕಾಲಿಕವಾಗಿ ಕಂಟೆಂಟ್ ಕ್ರಿಯೇಟರ್ ಆಗಿ ಬದಲಾದರು. ಅದು ತನ್ನ ಜೀವನದ ಅತ್ಯಂತ ತೃಪ್ತಿಕರ ನಿರ್ಧಾರಗಳಲ್ಲಿ ಒಂದಾಗಿದೆ ಎಂದು ಇತ್ತೀಚೆಗೆ ಅವರು ಖುಷಿಯಿಂದ ಹಂಚಿಕೊಂಡಿದ್ದಾರೆ.
ಒಂದು ದಶಕಕ್ಕೂ ಹೆಚ್ಚು ಕಾಲ ಐಟಿ ಕ್ಷೇತ್ರದಲ್ಲಿ ಕೆಲಸ
ವನತಿ ಒಂದು ದಶಕಕ್ಕೂ ಹೆಚ್ಚು ಕಾಲ ಐಟಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದರು. ವಾರದ ದಿನಗಳಲ್ಲಿ 9 ರಿಂದ 5ರ ತನಕ ಸಾಫ್ಟ್ವೇರ್ ಡೆವಲಪರ್ ಆಗಿ ಕೆಲಸ ಮಾಡುತ್ತಾ, ವಾರಾಂತ್ಯಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತನ್ನದೇ ಆದ ಗುರುತನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದರು. ಕಾಲಕ್ರಮೇಣ, ಗಡುವುಗಳನ್ನು ಪೂರೈಸುವ ಒತ್ತಡ, ನಿರಂತರ ಕಾರ್ಯಕ್ಷಮತೆಯ ನಿರೀಕ್ಷೆ ಮತ್ತು ಕಾರ್ಪೊರೇಟ್ ವ್ಯವಸ್ಥೆಯೊಳಗಿನ ಬೆಳವಣಿಗೆಯ ಒತ್ತಡಗಳು ಅವರ ಮೇಲೆ ಗಂಭೀರ ಪರಿಣಾಮ ಬೀಳಲು ಪ್ರಾರಂಭಿಸಿದವು.
ತಮ್ಮ ಜೀವನ ಪಯಣವನ್ನು ವಿವರಿಸುತ್ತಾ, ಶಿಕ್ಷಣ ಪೂರ್ಣಗೊಳಿಸುವುದು, ಸ್ಥಿರ ಉದ್ಯೋಗ ಪಡೆಯುವುದು, ಮದುವೆಯಾಗುವುದು, ಹೆತ್ತವರನ್ನು ಬೆಂಬಲಿಸುವುದು, ಹಣವನ್ನು ಉಳಿಸುವುದು ಹಾಗೂ ಮನೆ ಕಟ್ಟುವುದು. ಸಮಾಜ ನನ್ನಿಂದ ನಿರೀಕ್ಷಿಸಿದ್ದ ಎಲ್ಲವನ್ನೂ ನಾನು ಮಾಡಿದ್ದೇನೆ. ಆದರೆ ಇಷ್ಟೆಲ್ಲ ಸಾಧನೆಗಳ ನಡುವೆಯೂ, ನನಗೆ ನನ್ನದೇ ಆದ ಸಂತೋಷ ಇರಲಿಲ್ಲ ಎಂದು ವನತಿ ತಿಳಿಸಿದ್ದಾರೆ.
ಲಿಂಕ್ಡ್ಇನ್ ಪ್ರೊಫೈಲ್ ಪ್ರಕಾರ, ಒರಾಕಲ್ನಲ್ಲಿ ಅವರ ಕೊನೆಯ ಹುದ್ದೆ ಪ್ರಿನ್ಸಿಪಲ್ ಮೆಂಬರ್ ಆಫ್ ಟೆಕ್ನಿಕಲ್ ಸ್ಟಾಫ್ ಆಗಿದ್ದು, ಅನೇಕ ವೃತ್ತಿಪರರು ತಲುಪಲು ಕನಸು ಕಾಣುವಂತಹ ಹಿರಿಯ ಸ್ಥಾನವಾಗಿದೆ. ಆದರೂ, ಕಾರ್ಪೊರೇಟ್ ಏಣಿಯನ್ನು ಮತ್ತಷ್ಟು ಏರುವ ಉತ್ಸಾಹವು ನಿಧಾನವಾಗಿ ಕುಂಠಿತವಾಯಿತು ಎಂದು ಅವರು ಹೇಳಿದ್ದಾರೆ. ಸತತ ಸಭೆಗಳು, ಒಂದರ ಹಿಂದೆ ಒಂದಾಗಿ ನಡೆಯುವ ಸ್ಪ್ರಿಂಟ್ಗಳು ಮತ್ತು ಪದೇ ಪದೇ ಒಂದೇ ರೀತಿಯ ಕೋಡ್ ಬರೆಯುವ ಕೆಲಸಗಳು ಅಂತ್ಯವಿಲ್ಲದ ಚಕ್ರದಂತೆಯೇ ಅನುಭವವಾಗುತ್ತಿತ್ತು ಎಂದು ವನತಿ ವಿವರಿಸಿದ್ದಾರೆ.
ಎರಡು ವಿಭಿನ್ನ ಜೀವನ ಶೈಲಿ
ಇದೇ ವೇಳೆ, ಎರಡು ವಿಭಿನ್ನ ಜೀವನಶೈಲಿಗಳನ್ನು ಒಂದೇ ಸಮಯದಲ್ಲಿ ನಿರ್ವಹಿಸುವುದು ಅವರಿಗೆ ಬಹಳ ಕಷ್ಟಕರವಾಗಿತ್ತು. ವಾರದ ದಿನಗಳು ಸಂಪೂರ್ಣವಾಗಿ ಕಚೇರಿ ಕೆಲಸಕ್ಕೆ ಮೀಸಲಾಗಿದ್ದರೆ, ವಾರಾಂತ್ಯಗಳು ಪ್ರಯಾಣ, ಚಾರಣ, ಚಿತ್ರೀಕರಣ ಮತ್ತು ವೀಡಿಯೊ ಸಂಪಾದನೆಗಳಲ್ಲಿ ಕಳೆದುಹೋಗುತ್ತಿತ್ತು. ಈ ನಿರಂತರ ಓಡಾಟವು ಮಾನಸಿಕ ಮತ್ತು ದೈಹಿಕವಾಗಿ ಅವರನ್ನು ಸಂಪೂರ್ಣವಾಗಿ ದಣಿವಿಗೆ ತಳ್ಳಿತು. ಇದರ ಪರಿಣಾಮವಾಗಿ ಆರೋಗ್ಯ ಸಮಸ್ಯೆಗಳೂ ಕಾಣಿಸಿಕೊಳ್ಳಲು ಆರಂಭವಾದವು ಎಂದು ಅವರು ಒಪ್ಪಿಕೊಂಡಿದ್ದಾರೆ.
ಕಳೆದ ವರ್ಷ ಕೊನೆಗೂ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಾಗ, ತಮ್ಮ ಮನಸ್ಸಿನಲ್ಲಿ ಮಿಶ್ರ ಭಾವನೆಗಳು ಉಂಟಾಗಿದ್ದವು ಅನಿರೀಕ್ಷಿತ ಶಾಂತಿ, ನಿರಾಳತೆ ಮತ್ತು ಅದೇ ವೇಳೆ ಭಯ, ಈ ಎಲ್ಲ ಭಾವನೆಗಳೂ ಒಂದೇ ಸಮಯದಲ್ಲಿ ನನ್ನನ್ನು ಆವರಿಸಿತ್ತು. ಸ್ಥಿರವಾದ, ಹೆಚ್ಚಿನ ಸಂಬಳದ ಉದ್ಯೋಗವನ್ನು ಬಿಡುವುದು ಸುಲಭವಲ್ಲ. ಆದರೆ ನನ್ನ ಶಕ್ತಿಯನ್ನು ಮರಳಿ ಪಡೆಯಲು ಮತ್ತು ನನಗೆ ನಿಜವಾಗಿ ಉತ್ಸಾಹ ನೀಡುವ ವಿಷಯದ ಮೇಲೆ ಗಮನಹರಿಸುವುದು ಅಗತ್ಯವೆನಿಸಿತು ಎಂದು ಅವರು ಹೇಳಿದ್ದಾರೆ.
ಇಂದು, ವನತಿ ಪೂರ್ಣಕಾಲಿಕ ಪ್ರಯಾಣ ವಿಷಯ ರಚನೆಕಾರರಾಗಿದ್ದು, ಇನ್ಸ್ಟಾಗ್ರಾಮ್ನಲ್ಲಿ 1.6 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಭವಿಷ್ಯ ಅನಿಶ್ಚಿತವಾಗಿದೆ ಎಂಬುದನ್ನು ಅವರು ಒಪ್ಪಿಕೊಂಡರೂ, ತಮ್ಮ ಆದ್ಯತೆಗಳ ಬಗ್ಗೆ ಈಗ ಅವರು ಸಂಪೂರ್ಣ ಸ್ಪಷ್ಟತೆಯನ್ನು ಹೊಂದಿದ್ದಾರೆ. ಉದ್ಯೋಗಗಳು ಮತ್ತು ಹುದ್ದೆಗಳನ್ನು ಮತ್ತೆ ಕಟ್ಟಿಕೊಳ್ಳಬಹುದು. ಆದರೆ ಜಗತ್ತನ್ನು ಅನ್ವೇಷಿಸಲು ಬೇಕಾದ ಸಮಯ, ಉತ್ಸಾಹ ಮತ್ತು ಸ್ವಾತಂತ್ರ್ಯವನ್ನು ಒಮ್ಮೆ ಕಳೆದುಕೊಂಡರೆ ಅದನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂಬುದು ಅವರ ನಂಬಿಕೆ.
ವನತಿಯ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಜನರ ಮನಸ್ಸನ್ನು ಸ್ಪರ್ಶಿಸಿದ್ದು, ಬಳಕೆದಾರರು ಅವರ ಧೈರ್ಯ, ಪ್ರಾಮಾಣಿಕತೆ ಮತ್ತು ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಹಲವರು ತಮ್ಮದೇ ಅನುಭವಗಳನ್ನು ಕಾಮೆಂಟ್ಗಳಲ್ಲಿ ಹಂಚಿಕೊಂಡಿದ್ದು, ಅವರ ಹೆಜ್ಜೆಯನ್ನು ಸ್ಪೂರ್ತಿದಾಯಕವೆಂದು ಕರೆದಿದ್ದಾರೆ. ಕಾರ್ಪೊರೇಟ್ ಜೀವನದ ಆಚೆ ಇರುವ ಸಾಧ್ಯತೆಗಳತ್ತ ಗಮನ ಸೆಳೆಯುವ ಈ ಕಥೆ, ಅನೇಕ ವೃತ್ತಿಪರರಿಗೆ ಹೊಸ ಚಿಂತನೆಗೆ ದಾರಿ ಮಾಡಿಕೊಡುತ್ತಿದೆ. ವನತಿಗೆ, ಕನಿಷ್ಠ ಈಗಿನ ಹಂತದಲ್ಲಿ, ಭವಿಷ್ಯದ ಭದ್ರತೆಗಿಂತ ಉತ್ಸಾಹ ಮತ್ತು ಸ್ವಾತಂತ್ರ್ಯವನ್ನು ಆಯ್ಕೆ ಮಾಡುವುದು ಉತ್ತಮ ನಿರ್ಧಾರ ಎಂದು ತೋರುತ್ತದೆ.


