ಇತ್ತೀಚಿನ ದಿನಗಳಲ್ಲಿ ಒಂದೇ ಲಿಂಗದವರನ್ನು ಮದುವೆಯಾಗುತ್ತಿರುವ ಸುದ್ದಿ ಹೊಸತೇನಲ್ಲ. ಆದರೆ ಇದೀಗ ಖ್ಯಾತ ನಟಿಯೊಬ್ಬರು ಸ್ನೇಹಿತೆಯನ್ನೇ ಮದುವೆಯಾಗಿರುವುದಾಗಿ ವಿಡಿಯೋ ಹಂಚಿಕೊಂಡು ಶಾಕ್​ ನೀಡಿದ್ದಾರೆ. ಏನಿದು ವಿಷ್ಯ? 

ಇತ್ತೀಚಿನ ದಿನಗಳಲ್ಲಿ ಗಂಡು ಗಂಡನ್ನು ಮತ್ತು ಹೆಣ್ಣು ಹೆಣ್ಣನ್ನು ಮದುವೆಯಾಗುವುದು ನಡೆದೇ ಇದೆ. ಕೆಲವು ಮದುವೆಗಳು ಅವರ ದೇಹ ಪ್ರಕೃತಿಯಿಂದಾಗಿ ನಡೆದರೆ, ಮತ್ತೆ ಕೆಲವರು ರಾತ್ರೋ ರಾತ್ರಿ ದಿಢೀರ್​ ಫೇಮಸ್​​ ಆಗುವ ಹಿನ್ನೆಲೆಯಲ್ಲಿ ಇಂಥ ಮದುವೆಯಾಗುತ್ತಿದ್ದಾರೆ. ಇನ್ನು ನಿಜವಾಗಿಯೂ ತಮ್ಮದೇ ಲಿಂಗದವರನ್ನು ಮದುವೆಯಾಗುವುದು ಕೂಡ ಪ್ರಕೃತಿಯ ಒಂದು ವಿಚಿತ್ರ ಲೀಲೇಯೇ ಎಂದು ಬಣ್ಣಿಸಲಾಗುತ್ತದೆ. ಏಕೆಂದರೆ ಒಂದು ಗಂಡಿಗೆ ಒಂದು ಹೆಣ್ಣು ಎನ್ನುವುದು ಪ್ರಕೃತಿಯ ನಿಯಮ ಎಂದೇ ಹೇಳಲಾದರೂ, ಇದೇ ಪ್ರಕೃತಿ ಗಂಡಿಗೆ ಗಂಡಿನ ಮೇಲೆ ಹೆಣ್ಣಿಗೆ ಹೆಣ್ಣಿನ ಮೇಲೆ ವ್ಯಾಮೋಹ ಬರುವಂತೆಯೂ ಮಾಡಿಬಿಡುತ್ತದೆ. ಅದು ದೈವಲೀಲೆ. ಯಾವುದೂ ಮನುಷ್ಯನ ಕೈಯಲ್ಲಿ ಇಲ್ಲವೇ ಇಲ್ಲ. ಹುಟ್ಟುತ್ತಲೇ ಕಟ್ಟಿಕೊಂಡು ಬಂದಿರುವ ಆ ಲೀಲೆಯ ಮುಂದೆ ಎಲ್ಲವೂ ಗೌಣ. ಹೊರಗಡೆ ಹೆಣ್ಣೆಂದು ಕಂಡರೆ ಆಕೆಯಲ್ಲಿ ಒಳಗಡೆ ಗಂಡಿನ ಭಾವನೆ ಇದ್ದಿರಬಹುದು, ಗಂಡೆಂದು ತೋರುವವನಿಗೆ ಹೆಣ್ಣಿನ ಅಂಶ ಬಂದಿರಬಹುದು. ಇದು ಅವರ ತಪ್ಪಲ್ಲ. ಆದರೆ ಇದನ್ನು ಸಮಾಜ ಒಪ್ಪುವುದಿಲ್ಲ ಎನ್ನುವುದು ಮಾತ್ರ ಸತ್ಯ. ಅವರನ್ನು ನೋಡುವ ದೃಷ್ಟಿಯೇ ಬದಲಾಗುವ ಕಾರಣದಿಂದಲೇ ಇಂದು ತೃತೀಯ ಲಿಂಗಿಯರು ಇನ್ನಿಲ್ಲದಂತ ನೋವನ್ನು ಅನುಭವಿಸುವ ಪರಿಸ್ಥಿತಿ ಬಂದಿದೆ.

ವಿಷಯ ಏನೇ ಇದ್ದರೂ ಇದೀಗ ಖ್ಯಾತ ನಟಿಯೊಬ್ಬಳು ತಮ್ಮ ಪ್ರಾಣ ಸ್ನೇಹಿತೆಯನ್ನೇ ಮದುವೆಯಾಗುವ ವಿಡಿಯೋ ಶೇರ್​ ಮಾಡಿಕೊಂಡು ಹಲ್​ಚಲ್​ ಸೃಷ್ಟಿಸಿದ್ದಾರೆ. ವಿಷಕಾರಕ ಸಂಬಂಧಕ್ಕಿಂತಲೂ ಇಂಥ ಉತ್ತಮ ಸ್ನೇಹಿತೆಯ ಜೊತೆ ಮದುವೆಯಾಗುವುದೇ ಭಾಗ್ಯ ಎಂದು ಕ್ಯಾಪ್ಷನ್​ ನೀಡಿರುವ ಮಲಯಾಳದ ಖ್ಯಾತ ನಟಿ ಪ್ರಾರ್ಥನಾ ಕೃಷ್ಣನ್ ನಾಯರ್ ತಮ್ಮ ಆಪ್ತ ಸ್ನೇಹಿತೆಯಾದ ಅನ್ಸಿಯಾ ಜೊತೆ ಮದುವೆಯಾಗಿರುವುದಾಗಿ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಇದರಲ್ಲಿ ಇವರಿಬ್ಬರೂ ಒಂದೇ ರೀತಿಯ ಸೀರೆ ತೊಟ್ಟಿದ್ದಾರೆ. ಪರಸ್ಪರ ಮಂಗಳಸೂತ್ರವನ್ನು ಕಟ್ಟಿ, ಹಾರವನ್ನು ಬದಲಿಸಿಕೊಳ್ಳುವ ಮೂಲಕ ಮದುವೆಯಾಗಿರುವುದಾಗಿ ಹೇಳಿದ್ದಾರೆ.

ಮನಸ್ಸಿನಲ್ಲಿ ವಿಷ ತುಂಬಿದ, ಜನರ ಮುಂದೆ ನಾಟಕವಾಡುವ ಸಂಕುಚಿತ ಮನಸ್ಸುಗಳು ದೂರವಾಗಲಿ ಎಂದೂ ಅವರು ಬರೆದುಕೊಂಡಿದ್ದಾರೆ. ಜೊತೆಗೆ ಅನ್ಸಿಯಾ ಲೆಸ್ಬಿಯನ್.. ಮೈ ಲವ್.. ಡ್ರೀಮ್ ಕಮ್ ಟ್ರೂ ಎಂಬ ಹ್ಯಾಶ್ ಟ್ಯಾಗ್‌ಗಳನ್ನೂ ಶೇರ್​ ಮಾಡಿದ್ದಾರೆ. ಯಾರಾದರೂ ಎಷ್ಟೇ ಸಾಧನೆ ಮಾಡಿದರೂ ಅವರ ಬಗ್ಗೆ ಬೆರಳೆಣಿಕೆ ಜನರಿಗೆ ತಿಳಿಯುವುದೇ ಕಷ್ಟ, ಆದರೆ ಇಂಥ ವಿಷ್ಯಗಳು ಮಾತ್ರ ರಾತ್ರೋರಾತ್ರಿ ದೇಶಾದ್ಯಂತ ಪ್ರಚಾರವಾಗಿಬಿಡುತ್ತದೆ. ಅದೇ ರೀತಿ ಇವರ ಮದುವೆ ಕೂಡ ವೈರಲ್​ ಆಗುತ್ತಿದ್ದು, ಸಾಕಷ್ಟು ಮಂದಿ ನೆಗೆಟಿವ್​ ಕಮೆಂಟ್​ ಮಾಡುತ್ತಿದ್ದಾರೆ. ಕೆಲವರು ಇದೆಲ್ಲ ಪ್ರಚಾರದ ಗಿಮಿಕ್ ಎಂದೂ ಹೇಳುತ್ತಿದ್ದಾರೆ. ಯಾರ ಮನಸ್ಸು ಯಾರ ಕಡೆ ವಾಲುವುದೋ ಹೇಳಲು ಬರುವುದಿಲ್ಲ ಎನ್ನುವ ಮೂಲಕ ಮತ್ತೆ ಕೆಲವರು ಶುಭಾಶಯವನ್ನೂ ಕೋರುತ್ತಿದ್ದಾರೆ.

ಇಷ್ಟೆಲ್ಲಾ ಪ್ರಚಾರ ಆದ ಮೇಲೆ ನಟಿ ಪ್ರಾರ್ಥನಾ ಈಗ ಸ್ಪಷ್ಟನೆಯೊಂದನ್ನು ಕೊಟ್ಟಿದ್ದಾರೆ. ಇದು ಕೇವಲ ಒಂದು ಮೋಜಿನ ಪೋಸ್ಟ್ ಆಗಿತ್ತು ಮತ್ತು ಅದು ನಿಜವಾದ ಮದುವೆ ಅಲ್ಲ ಎಂದಿದ್ದಾರೆ. ಇತರ ಉದ್ಯಮಗಳ ನಟಿಯರು ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಿದ ಟ್ರೆಂಡ್ ಅನ್ನು ನಾವು ಅನುಸರಿಸಿದ್ದೇವೆ. ಆಕೆ ನನ್ನ ಆತ್ಮೀಯ ಸ್ನೇಹಿತೆ. ಆಕೆಗೆ ಮದುವೆಯಾಗಿದೆ. ಒಬ್ಬ ಮಗನೂ ಇದ್ದಾನೆ ಎಂದಿದ್ದಾರೆ. ಬಹುಶಃ ವಿಡಿಯೋದಲ್ಲಿ ಕಾಣಿಸಿರುವ ಅವರದ್ದೇ ಮಗ ಇದ್ದಿರಬಹುದು ಎನ್ನಲಾಗಿದೆ. ಆದರೆ, ಸ್ಪಷ್ಟನೆ ಕೊಟ್ಟ ಮೇಲೆ ನಟಿಯ ವಿರುದ್ಧ ನೆಟ್ಟಿಗರು ಇನ್ನಷ್ಟು ಗರಂ ಆಗಿದ್ದಾರೆ. ಮದುವೆಯೆನ್ನುವ ಪವಿತ್ರ ಸಂಬಂಧವನ್ನು ಈ ರೀತಿ ಪ್ರಚಾರಕ್ಕೆ ಬಳಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಆದರೆ ಇದರ ಸತ್ಯಾಸತ್ಯತೆ ಬೇರೆಯದ್ದೇ ಇದ್ದಿರಬಹುದು ಎಂದೂ ಊಹಿಸಲಾಗುತ್ತಿದೆ. ಇನ್ನು ನಟಿ ಪ್ರಾರ್ಥನಾ ಕುರಿತು ಹೇಳುವುದಾದರೆ ಇವರು 'ಕೊಡೆಯಿಡ' ಧಾರಾವಾಹಿಯನ್ನು ಹೊರತು ಪಡಿಸಿದರೆ ರಾಕ್ಕುಯಿಲ್, ಮನಿಮುತ್ತು ಸೇರಿ ಕೆಲ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಸಾಕಷ್ಟು ಹೆಸರು ಮಾಡಿದ್ದಾರೆ. ಇವರು ಮದುವೆಯಾಗಿರುವುದಾಗಿ ಹೇಳಿಕೊಂಡಿರುವ ಸ್ನೇಹಿತೆ ಅನ್ಸಿಯಾ ಕೂಡ ಮಾಡೆಲ್​.

View post on Instagram