Wife Demands Money from Husband After First Night ಬೆಂಗಳೂರಿನಲ್ಲಿ, ಮದುವೆಯಾದ ಮೊದಲ ರಾತ್ರಿ ಲೈಂಗಿಕ ಕ್ರಿಯೆ ನಡೆಸದ ಕಾರಣಕ್ಕೆ ಪತಿಯಿಂದ ಪತ್ನಿ ಹಾಗೂ ಆಕೆಯ ಕುಟುಂಬದವರು 2 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ.
ಬೆಂಗಳೂರು (ಸೆ.23): ಮದುವೆಯಾದ ಬಳಿಕ ಮೊದಲ ರಾತ್ರಿಯಂದು ಲೈಂಗಿಕ ಕ್ರಿಯೆ ನಡೆಸದ ಗಂಡನಿಂದ ಪತ್ನಿ ಹಾಗೂ ಆಕೆಯ ಕುಟುಂಬದವರು ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ನೊಂದ ಪತಿ ಪ್ರವೀಣ್‌ನಿಂದ ಪತ್ನಿ ಹಾಗೂ ಸಂಬಂಧಿಕರ ವಿರುದ್ಧ ದೂರು ನೀಡಿದ್ದಾರೆ. ಫಸ್ಟ್ ನೈಟ್ ನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗದಿದ್ದಕ್ಕೆ ಪತ್ನಿ ಹಾಗೂ ಕುಟುಂಬದವರಿಂದ ಭಾರೀ ಮೊತ್ತದ ಹಣ ಡಿಮಾಂಡ್ ಮಾಡಲಾಗಿದೆ. ಜೀವನಾಂಶದ ರೀತಿಯಲ್ಲಿ ಪತ್ನಿ ಬರೋಬ್ಬರಿ ಎರಡು ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿದೆ.
ಗಂಡ ನಪುಂಸಕ ಎಂದ ಪತ್ನಿ
ಮದುವೆ ಆದ ಗಂಡ ನಪುಂಸಕ ಎಂದು ಪತ್ನಿ ಭಾರೀ ಗಲಾಟೆ ಮಾಡಿದ್ದಾಳೆ. ಚಿಕ್ಕಮಗಳೂರು ಮೂಲದ ಯುವತಿಯನ್ನು ಮೇ5 ರಂದು ಪ್ರವೀಣ್ ಮದುವೆಯಾಗಿದ್ದ. ಚಿಕ್ಕಮಗಳರಿನ ತರೀಕೆರೆಯಲ್ಲಿ ಮದುವೆ ನಡೆದಿತ್ತು. ಆದರೆ, ಮದುವೆಯ ನಂತರದ ಮೊದಲ ರಾತ್ರಿಯ ವೇಳೆ ಪ್ರವೀಣ್ ಪತ್ನಿಯನ್ನು ಮುಟ್ಟಲು ಹಿಂದೇಟು ಹಾಕಿದ್ದಾನೆ.
ಈ ವೇಳೆ ಪತ್ನಿಗೆ ಗಂಡನ ಬಗ್ಗೆ ಅನುಮಾನ ಬಂದಿದೆ. ಇದನ್ನು ಮನೆಯವರಿಗೆ ತಿಳಿಸಿದಾಗ ಪತ್ನಿಯ ಕುಟುಂಬಸ್ಥರು ಪ್ರವೀಣ್‌ನ ವೈದ್ಯಕೀಯ ಪರೀಕ್ಷೆಗೆ ಒತ್ತಾಯಿಸಿದ್ದರು. ಪರೀಕ್ಷೆಯಲ್ಲಿ ಲೈಂಗಿಕ ಕ್ರಿಯೆ ನಡೆಸಲು ಪ್ರವೀಣ್ ಸಮರ್ಥನಾಗಿದ್ದಾನೆಂದು ವೈದ್ಯರು ತಿಳಿಸಿದ್ದರು. ಆದರೆ, ಮಾನಸಿಕ ಒತ್ತಡದಿಂದ ಸ್ಬಲ್ಪ ಹಿಂದೇಟು ಹಾಕುತ್ತಿದ್ದಾರೆ. ಸ್ವಲ್ಪ ತಾಳ್ಮೆಯಿಂದಿರುವಂತೆ ವೈದ್ಯರು ಪತ್ನಿಗೆ ಸೂಚಿಸಿದ್ದರು.

ಸಿಸಿಟಿಯಲ್ಲಿ ದಾಖಲಾದ ಹಲ್ಲೆಯ ದೃಶ್ಯ
ಆದರೆ, ತಾಳ್ಮೆ ಕಳೆದುಕೊಂಡ ಪತ್ನಿ ಹಾಗೂ ಕುಟುಂಬಸ್ಥರಿಂದ ಪ್ರವೀಣ್ ಮೇಲೆ ಹಲ್ಲೆ ನಡೆಸಲಾಗಿದೆ. ಆಗಸ್ಟ್ 17 ರಂದು ಪ್ರವೀಣ್ ಮನೆಗೆ ನುಗ್ಗಿ ಪತ್ನಿ ಕುಟುಂಬಸ್ಥರಿಂದ ಹಲ್ಲೆ ನಡೆದಿದೆ. ಗೋವಿಂದರಾಜನಗರದಲ್ಲಿರುವ ಪ್ರವೀಣ್ ಮನೆಗೆ ನುಗ್ಗಿ ಪತ್ನಿಯ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ. ಪತಿ ಮತ್ತವನ ಕುಟುಂಬದವರ ಮೇಲೆ ಹಲ್ಲೆ ನಡೆಸಲಾಗಿದೆ. ಮನೆಗೆ ಬಂದು ಗಲಾಟೆ ಮಾಡಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬಗ್ಗೆ ದೂರು ಹಾಗೂ ಪ್ರತಿದೂರು ದಾಖಲಾಗುವ ಸಾಧ್ಯತೆಯೂ ಇದೆ.
ಎಫ್‌ಐಆರ್‌ನಲ್ಲಿ ಇರೋದೇನು?
ಪ್ರವೀಣ್ ಕೆಎಂ ಅವರ ತಂದೆತಾಯಿ 2025ರ ಆರಂಭದಲ್ಲಿ ಮಗನಿಗೆ ಮದುವೆ ಮಾಡಲು ಸೂಕ್ತ ವಧುವನ್ನು ಹುಡುಕುತ್ತಿದ್ದರು. ಸ್ನೇಹಿತರೊಬ್ಬರ ಸಲಹೆಯ ಮೇರೆಗೆ ಚಂದನಾ ಅಶೋಕ್ ಅವರ ಕುಟುಂಬವನ್ನು ಭೇಟಿಯಾಗಿದ್ದರು. ನಂತರ ಉಭಯ ಕುಟುಂಬಗಳು ಅಗತ್ಯ ಮಾತುಕತೆ ನಡೆಸಿ, ವಧುವಿನ ಕುಟುಂಬದ ಎಲ್ಲಾ ಬೇಡಿಕೆಯನ್ನು ಈಡೇರಿಸಿ ಹಿಂದೂ ಪದ್ಧತಿಗಳ ಪ್ರಕಾರ ಮೇ 5 ರಂದು ವಿವಾಹ ಮಾಡಿಕೊಳ್ಳಲಾಗಿತ್ತು.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ವಿವಾಹ ನಡೆದಿತ್ತು. ಇದರ ಖರ್ಚನ್ನು ಎರಡೂ ಮನೆಯವರು ಭರಿಸಿದ್ದರು. ಅದೇ ದಿನ ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡ್ ರಸ್ತೆಯ ಸಪ್ತಗಿರಿ ಪ್ಯಾಲೇಸ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಇದರ ಸಂಪೂರ್ಣ ವೆಚ್ಚವನ್ನು ಪ್ರವೀಣ್ ಅವರ ಕುಟುಂಬವೇ ಭರಿಸಿದೆ.
ಮೇ 16 ರಂದು ಚಂದನಾ ಅವರ ಮನೆಯಲ್ಲಿ ಮೊದಲ ರಾತ್ರಿಯ ಕಾರ್ಯಕ್ರಮ ಏರ್ಪಾಡು ಮಾಡಲಾಗಿತ್ತು. ಆದರೆ, ಕೆಲವು ಅಡಚಣೆಗಳ ಕಾರಣಕ್ಕಾಗಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿರೋದಿಲ್ಲ. ಆ ಬಳಿಕ ಮೇ 17 ಹಾಗೂ 18 ರಂದು ಇದೇ ಕಾರಣಕ್ಕಾಗಿ ಲೈಂಗಿಕ ಸಂಪರ್ಕ ನಡೆದಿರೋದಿಲ್ಲ. ಈ ವಿಚಾರವಾಗಿ ಚಂದನಾ, ಪ್ರವೀಣ್‌ರನ್ನು ಕೀಟಲೆ ಮಾಡಿದ್ದಾಳೆ. ಪ್ರವೀಣ್‌ನ್ನು ಹೀಯಾಳಿಸಿ, ಷಂಡ ಎಂದು ಬೈದಿದ್ದಾರೆ. ಅದಲ್ಲದೆ, ಆಕೆಯ ಕುಟುಂಬದ ಎದುರು ಇದನ್ನು ಅಪಪ್ರಚಾರ ಮಾಡಿ ಸಮಸ್ಯೆ ಸೃಷ್ಟಿಸಿದ್ದಾರೆ. ಮೇ 24 ರಂದು ಅಪೋಲೋ ಆಸ್ಪತ್ರೆಯಲ್ಲಿ ಪ್ರವೀಣ್ ಅವರ ಪರೀಕ್ಷೆಯೂ ನಡೆದಿದೆ. ಈ ವೇಳೆ ವೈದ್ಯರು ಲೈಂಗಿಕವಾಗಿ ಇವರು ಸಮರ್ಥರಾಗಿದ್ದು, ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸ್ವಲ್ಪ ಸಮಯ ನೀಡಿ ತಾಳ್ಮೆ ವಹಿಸುವಂತೆ ಸೂಚನೆ ನೀಡಿದ್ದರು.
ಇದರಿಂದ ತೃಪ್ತರಾಗದ ಚಂದನಾ ಕುಟುಂಬ ಜೂನ್ 6 ರಂದು ಪ್ರವೀಣ್ ಅವರ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಪ್ರವೀಣ್ ಹಾಗೂ ಆತನ ಕುಟುಂಬದವರಿಗೆ ಬೆದರಿಕೆ ಹಾಕಿದ್ದು, 2 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಚಂದನಾ ಹೆಸರಿಗೆ ವರ್ಗಾವಣೆ ಮಾಡಿಸುವಂತೆ ಬೇಡಿಕೆ ಇಟ್ಟಿದ್ದರು. ಜೂನ್ 19 ರಂದು ಚಂದನಾ ಮನೆ ಬಿಟ್ಟು ಅಪ್ಪನ ಮನೆ ಸೇರಿಕೊಂಡಿದ್ದಳು. ಆ ಬಳಿಕ ಆಗಸ್ಟ್ 17 ರಂದು ಚಂದನಾ ಅವರ ಕುಟುಂಬಸ್ಥರು ಪ್ರವೀಣ್ ಅವರ ಮನೆಗೆ ನುಗ್ಗಿ, ಆಯುಧಗಳಿಂದ ಹಲ್ಲೆ ಮಾಡಿ ಮಾರಣಾಂತಿಕವಾಗಿ ಗಾಯ ಮಾಡಿರುತ್ತಾರೆ. ಮನೆಯ ಬೆಲೆಬಾಳುವ ವಸ್ತುಗಳನ್ನು ನಾಶ ಮಾಡಿದ್ದಾರೆ. ಪ್ರವೀಣ್ ಮೇಲೆ ಹಲ್ಲೆ ಆಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದು, 2 ಕೋಟಿಯ ಆಸ್ತಿಯನ್ನು ಚಂದನಾ ಹೆಸರಗೆ ವರ್ಗಾವಣೆ ಮಾಡುವಂತೆ ಮತ್ತೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


