ವಿವಾಹಿತನೊಬ್ಬ ಇನ್​ಸ್ಟಾಗ್ರಾಮ್​ನಲ್ಲಿ ಯುವತಿಯೊಬ್ಬಳನ್ನು ಫ್ರೆಂಡ್​ ಮಾಡಿಕೊಂಡು, ಡ್ರೀಮ್​ಗರ್ಲ್​ ಸಿಕ್ಕಳೆಂದು ಚಾಟ್​ ಮಾಡಿದ್ದೇ ಮಾಡಿದ್ದು... ಆಮೇಲೆ ನೋಡಿದ್ರೆ ಅವಳು.....! ಆಗಿದ್ದೇನು ನೋಡಿ! 

ಮನೆಯಲ್ಲಿಯೇ ಮೃಷ್ಟಾನ್ನಭೋಜನ ಸಿಕ್ಕರೂ, ಮನಸ್ಸು ಮತ್ತೆಲ್ಲೋ ಹೋಗುವುದು ಬಹುತೇಕರ ಮನಸ್ಥಿತಿಯಾಗಿದೆ. ಇದು ಸಂಬಂಧಗಳ ವಿಷಯದಲ್ಲಿ ಸಾಬೀತಾಗುತ್ತಿದೆ. ಮನೆಯಲ್ಲಿ ಒಳ್ಳೆಯ ಹೆಂಡತಿ- ಗಂಡ ಇದ್ದರೂ ಇನ್ನೊಬ್ಬರಿಗಾಗಿ ಮನಸ್ಸು ಹಂಬಲಿಸುವ, ಇದಕ್ಕಾಗಿ ಇಲ್ಲಸಲ್ಲದ ಅಪರಾಧಗಳನ್ನೂ ಮಾಡುವ ಘಟನೆಗಳನ್ನು ಮೇಲಿಂದ ಮೇಲೆ ಕೇಳುತ್ತಲೇ ಇರುತ್ತೇವೆ. ಹಾಗೆಂದು ಅದು ಇಂದು ನಿನ್ನೆಯ ಮಾತಲ್ಲ, ಈ ಅಕ್ರಮ ಸಂಬಂಧ ಎನ್ನುವುದು ತಲೆತಲಾಂತರಗಳಿಂದಲೂ ನಡೆದುಕೊಂಡೇ ಬಂದಿದೆ. ಮನೆಯಲ್ಲಿ ಸುಂದರವಾದ ಪತಿ-ಪತ್ನಿಯಿದ್ದರೂ ಮತ್ತೊಬ್ಬರಿಗಾಗಿ ಹಾತೊರೆದವರು ಹಿಂದೆಯೂ ಇದ್ದರೂ ಈಗಲೂ ಇದ್ದಾರೆ. ಪುರುಷ-ಮಹಿಳೆ ಬೇಧವಿಲ್ಲದೇ ಇದು ಯಾವಾಗಲೂ ನಡೆಯುತ್ತಲೇ ಇರುತ್ತದೆ. ಅದರಲ್ಲಿಯೂ ಇದೀಗ ಸೋಷಿಯಲ್​​ ಮೀಡಿಯಾ ಈ ಪರಿಯಲ್ಲಿ ಬೆಳೆಯುತ್ತಿರುವ ಸಂದರ್ಭದಲ್ಲಿ ಸಂಬಂಧಗಳು ಮಾಡಿಕೊಳ್ಳುವುದು ದೊಡ್ಡ ವಿಷಯವೇ ಅಲ್ಲವಾಗಿಬಿಟ್ಟಿದೆ.

ಸೋಷಿಯಲ್​ ಮೀಡಿಯಾದಲ್ಲಿ ನಕಲಿ ಪ್ರೊಫೈಲ್​ಗಳನ್ನು ಮಾಡಿದವರನ್ನೇ ನಂಬಿಕೊಂಡು ಮೋಸ ಹೋದವರಿಗೆ ಲೆಕ್ಕವೇ ಇಲ್ಲ. ಜಾಲತಾಣದಲ್ಲಿ ಪರಿಚಯವಾದ ಮಾತ್ರಕ್ಕೆ ಹಿಂದೆ- ಮುಂದೆ ಯೋಚನೆ ಮಾಡದೇ ಮನೆಯನ್ನು ಅಷ್ಟೇ ಏಕೆ ದೇಶವನ್ನೇ ಬಿಟ್ಟು ಆ ಕಾಣದ ಪ್ರಿಯತಮ-ಪ್ರೇಯಸಿಯನ್ನು ಹುಡುಕಿ ಹೋಗಿರುವ ಘಟನೆಗಳೂ ನಡೆಯುತ್ತಲೇ ಇವೆ. ಎಷ್ಟೋ ಹೆಣ್ಣುಮಕ್ಕಳು ಇಂಥ ಪ್ರೀತಿಯಲ್ಲಿ ಬಿದ್ದು, ಜೀವನವನ್ನೇ ನರಕ ಮಾಡಿಕೊಂಡಿರುವುದೂ ನಡೆದಿದೆ, ನಡೆಯುತ್ತಲೇ ಇದೆ. ಮತ್ತೆ ಕೆಲವರು ಅತಿಯಾಗಿ ಮುಂದುವರೆಯದಿದ್ದರು ಚಾಟ್​ಗಳನ್ನು ಮಾಡುವ ಮೂಲಕ ತಮ್ಮ ಆಸೆಗಳನ್ನು ತೀರಿಸಿಕೊಳ್ಳುತ್ತಿರುತ್ತಾರೆ.

ಅಂಥದ್ದೇ ಒಂದು ಕುತೂಹಲದ ಘಟನೆ ದೆಹಲಿಯಲ್ಲಿ ನಡೆದಿದೆ. ನಕಲಿ ಪ್ರೊಫೈಲ್​ ನಂಬಿ ವಯಸ್ಸಾದವರನ್ನು ಯುವಕ-ಯುವತಿ ಎಂದು ನಂಬಿ ಲವ್​ ಮಾಡಿದವರ ಬಗ್ಗೆ ಇದಾಗಲೇ ಸಾಕಷ್ಟು ಸುದ್ದಿಗಳು ಬಂದಿವೆ. ಡಿಪಿಯಲ್ಲಿ ಸುಂದರ ಯುವಕ- ಯುವತಿಯ ಫೋಟೋ ಹಾಕಿ ಕೊನೆಗೆ ಅಸಲಿ ಬಣ್ಣವನ್ನು ಬಯಲು ಮಾಡಿದಾಗ ಬೇಸ್ತಾದವರು ಇದ್ದಾರೆ. ಆದರೆ ಇದಕ್ಕಿಂತ ತುಸು ಭಿನ್ನ ಸ್ಟೋರಿ ಇದು. ಇಲ್ಲೊಬ್ಬ ವಿವಾಹಿತ ಇನ್​ಸ್ಟಾಗ್ರಾಮ್​ನಲ್ಲಿ ಕನಸಿನ ಕನ್ಯೆಯನ್ನು ಫ್ರೆಂಡ್​ ಮಾಡಿಕೊಂಡು ದಿನವೂ ಚಾಟ್​ ಮಾಡುತ್ತಿದ್ದ. ಆ ಯುವತಿ ಕೂಡ ಈತನ ಜೊತೆ ಅಷ್ಟೇ ಚೆನ್ನಾಗಿ ಚಾಟ್​ ಮಾಡುತ್ತಿದ್ದಳು. ಕೆಲವೇ ದಿನಗಳಲ್ಲಿ ಇಬ್ಬರೂ ತುಂಬಾ ಕ್ಲೋಸ್​ ಆದರು. ಈತ ತನಗೆ ಮದುವೆಯಾಗಿಲ್ಲ ಎಂದು ಪೋಸ್​ ಕೊಟ್ಟು ಅವಳ ಜೊತೆ ಮಾತನಾಡಿದ್ದರೆ, ಆ ಯುವತಿ ಕೂಡ ಅಷ್ಟೇ ಚೆನ್ನಾಗಿ ಮಾತನಾಡುತ್ತಿದ್ದಳು.

ಹೀಗೆ ಮಾತುಕತೆ ಮುಂದುವರೆದಾಗ ಅದೊಂದು ದಿನ ಈ ಪತಿ ಮಹಾಶಯನಿಗೆ ಆಕಾಶವೇ ಕಳಚಿಬಿದ್ದ ಅನುಭವವಾಯ್ತು. ಏಕೆಂದ್ರೆ ಯಾರನ್ನು ತನ್ನ ಕನಸಿನ ಕನ್ಯೆಯಿಂದ ದಿನನಿತ್ಯವೂ ಜಾಲತಾಣದಲ್ಲಿ ಮಾತನಾಡುತ್ತಾ ಟೈಮ್​ಪಾಸ್​ ಮಾಡುತ್ತಿದ್ದನೋ, ಆಕೆ ಬೇರೆ ಯಾರೂ ಅಲ್ಲ, ತನ್ನ ಧರ್ಮಪತ್ನಿ ಎಂದು ತಿಳಿಯಿತು! ಆಕೆ ಕೂಡ ನಕಲಿ ಪ್ರೊಫೈಲ್​ ಮಾಡಿಕೊಂಡು ಈತನ ಜೊತೆ ಮಾತನಾಡುತ್ತಿದ್ದಳು. ಆದರೆ ಆಕೆಗೆ ಈ ವಿಷಯ ಗೊತ್ತಿತ್ತೋ ಅಥ್ವಾ ಅವಳೂ ಯಾರನ್ನೋ ತನ್ನಡ್ರೀಮ್​ಬಾಯ್​ ಎಂದುಕೊಂಡು ಚಾಟ್​ ಮಾಡುತ್ತಿದ್ದಳೋ ಗೊತ್ತಿಲ್ಲ. ಒಂದು ವೇಳೆ ಆಕೆ ತನ್ನ ಗಂಡನನ್ನು ಪರೀಕ್ಷೆ ಮಾಡಲು ಆತನ ಜೊತೆ ಮಾತನಾಡುತ್ತಿದ್ದರೆ ಮಾತ್ರ ಅವನ ಭವಿಷ್ಯ ಬೇರೆ ಹೇಳೋದು ಬೇಡ ಬಿಡಿ. ಹಾಗೆ ಆಗದಿರಲಿ ದೇವರೇ ಎಂದು ಗಂಡನ ಪರವಾಗಿ ಹಲವು ಪುರುಷರು ಸೋಷಿಯಲ್​ ಮೀಡಿಯಾದಲ್ಲಿ ಪ್ರಾರ್ಥಿಸುತ್ತಿದ್ದಾರೆ!