ತಮಗೆ ಮದುವೆಯಾಗಿ ವಿಚ್ಛೇದನವಾಗಿದ್ದರೂ ಕೆಲವು ಪುರುಷರರಿಗೆ ಮರುಮದುವೆಗೆ ಇನ್ನೂ ಮದುವೆಯಾಗದ ಕನ್ಯೆಯಾಗಿರುವ ಹುಡುಗಿಯೇ ಬೇಕಂತೆ. ಇದನ್ನು ನಾನು ಹೇಳಿರೋದಲ್ಲ, ಒಂದು ಆನ್‌ಲೈನ್ ವಿವಾಹ ವೇದಿಕೆಯ ಸಿಇಒ ಒಬ್ಬರು ಈ ವಿಚಾರವನ್ನು ಆನ್‌ಲೈನ್‌ನಲ್ಲಿ ಹೇಳಿಕೊಂಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಮರುಮದುವೆಗೂ ಕನ್ಯೆಯಾಗಿರುವ ವಧುವೇ ಬೇಕು

ವಿವಾಹಕ್ಕೆ ಸಂಬಂಧಿಸಿದಂತೆ ಹೆಣ್ಣಿಗೊಂದು ರೂಲ್ಸ್ ಗಂಡಿಗೊಂದು ರೂಲ್ಸ್ ಇದೆ. ವಿವಾಹವಾಗುವ ಗಂಡು ಮದುವೆಗೂ ಮೊದಲು ಏನು ಬೇಕಾದರೂ ಮಾಡಬಹುದು. ಆದರೆ ಹೆಣ್ಣು ಮಾತ್ರ ಕನ್ಯೆಯಾಗಿಯೇ ಇರಬೇಕು. ಈ ಅಲಿಖಿತವಾಗಿರುವ ಈ ನಿಯಮ ಅನಾದಿ ಕಾಲದಿಂದಲೂ ಜಾರಿಯಲ್ಲಿದೆ. ಕಾಲ ಬದಲಾಗಿದ್ದರೂ ಅನೇಕ ಪುರುಷರು (ಎಲ್ಲರಲ್ಲ) ಇನ್ನೂ ಅದೇ ನಿಯಮಕ್ಕೆ ಜೋತು ಬಿದ್ದಿದ್ದಾರೆ. ಇನ್ನೂ ಮದುವೆಯಾಗದ ಹೆಣ್ಣುಮಗಳೊಬ್ಬಳು ವಿವಾಹವಾಗಿ ಒಬ್ಬರೋ ಇಬ್ಬರೋ ಮಕ್ಕಳಿರುವ ಪುರುಷರನ್ನು ಮದುವೆಯಾಗಿ ಜೀವನ ನಡೆಸುತ್ತಿರುವ ಹಲವು ನಿದರ್ಶನಗಳಿವೆ. ಇಂತಹ ಪುರುಷರು ಕೂಡ ಇದ್ದಾರೆ. ಆದರೆ ಮಹಿಳೆಯರಿಗೆ ಹೋಲಿಸಿದರೆ ಅಂತಹ ವ್ಯಕ್ತಿಗಳ ಸಂಖ್ಯೆ ಬಹಳ ಕಡಿಮೆ. ಇನ್ನಷ್ಟೇ ಮೊದಲ ಮದುವೆಗೆ ಸಿದ್ಧರಾಗುವ ಅವಿವಾಹಿತ ಯುವತಿಯರಿಗೆ ವಿಚ್ಛೇದಿತರ ವಿವಾಹದ ಪ್ರಪೋಸಲ್‌ಗಳು ಬರುವುದು ಸಾಮಾನ್ಯವಾಗಿದೆ. ಹಾಗೆಯೇ ಕೆಲವು ಪುರುಷರ ಮನಸ್ಥಿತಿಗಳು ಕೂಡ ಇಂದಿಗೂ ಅನಾದಿಕಾಲದಂತೆ ಹಾಗೆಯೇ ಇದೆ. ತಮಗೆ ಮದುವೆಯಾಗಿ ವಿಚ್ಛೇದನವಾಗಿದ್ದರೂ ಅವರಿಗೆ ಇನ್ನೂ ಮದುವೆಯಾಗದ ಕನ್ಯೆಯಾಗಿರುವ ಹುಡುಗಿಯೇ ಬೇಕಂತೆ. ಇದನ್ನು ನಾನು ಹೇಳಿರೋದಲ್ಲ, ಒಂದು ಆನ್‌ಲೈನ್ ವಿವಾಹ ವೇದಿಕೆಯ ಸಿಇಒ ಒಬ್ಬರು ಈ ವಿಚಾರವನ್ನು ಆನ್‌ಲೈನ್‌ನಲ್ಲಿ ಹೇಳಿಕೊಂಡಿರುವುದು ಈ ವಿಚಾರ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ವಿಚ್ಛೇದಿತ ಐಐಟಿಯನ್ ಬೇಡಿಕೆಗೆ ಗರಂ ಆದ ಮ್ಯಾಚ್ ಮೇಕರ್

ಇವರ ಪೋಸ್ಟ್ ನೋಡಿದ ಅನೇಕ ಯುವತಿಯರು ಮಹಿಳೆಯರು ತಮಗೇ ವಿವಾಹದ ಸಮಯದಲ್ಲಿ ಮದುವೆಗೆ ಗಂಡು ಹುಡುಕುವ ವೇಳೆ ಆದ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. ಹಾಗಿದ್ದಾರೆ ಡೇಟಿಂಗ್ ಕೋಚ್ ಆಗಿರುವ ಹಾಗೂ ಮ್ಯಾಚ್ ಮೇಕಿಂಗ್ ಕೆಲಸ ಮಾಡುತ್ತಿರುವ ಒಂದ್ರಿಲಾ ಕಪೂರ್ ಅವರು ತಮ್ಮ ಪೋಸ್ಟ್‌ನಲ್ಲಿ ಹೇಳಿರೋದೆನು?

ಒಂಡ್ರಿಲಾ ಕಪೂರ್ ಅವರು ವಿವಾಹಕ್ಕೆ ಸಂಬಂಧಿಸಿದಂತೆ ಕೆಲ ಪುರುಷರ (ಎಲ್ಲರಲ್ಲ) ಮನಸ್ಥಿತಿ ಈಗಲೂ ಹೇಗಿದೆ ಎಂಬುದನ್ನು ಉದಾಹರಣೆ ಸಹಿತ ಹೇಳಿಕೊಂಡಿದ್ದಾರೆ. ಅವರ ವಿವಾಹ ವೇದಿಕೆಗೆ 2ನೇ ಮದುವೆಗೆ ವಧುವನ್ನು ಆರಸಿ 37 ವರ್ಷದ ವಿಚ್ಛೇದಿತ ವ್ಯಕ್ತಿಯೊಬ್ಬರ ಪ್ರಪೋಷಲ್ ಬಂದಿತ್ತು. ಐಐಟಿ ಗ್ರಾಜುಯೇಟ್ ಆಗಿದ್ದ ಆ ವ್ಯಕ್ತಿಯ ಬೇಡಿಕೆ ಆಗಷ್ಟೇ ಮೊದಲ ಮದುವೆ ಆಗುವವರು ಇಡುವ ಬೇಡಿಕೆಗಿಂತಲೂ ತೀವ್ರವಾಗಿತ್ತು. ಆತ ಸ್ವತಃ ವಿಚ್ಛೇದಿತನಾಗಿದ್ದರೂ ಆತನಿಗೆ 2ನೇ ಮದುವೆ ಆಗುವುದಕ್ಕೆ 30 ವರ್ಷದೊಳಗಿನ ಯುವತಿ ಬೇಕಿತ್ತು. ಆಕೆ ಈ ಹಿಂದೆ ಯಾವುದೇ ಸಂಬಂಧದಲ್ಲಿ ಇರಬಾರದು ಹಾಗೂ ಆಕೆ ಕನ್ಯೆ ಆಗಿರಬೇಕು ಎಂಬ ಬೇಡಿಕೆ ಅವರದಾಗಿತ್ತು.

ಇದನ್ನೂ ಓದಿ: 9ನೇ ತಿಂಗಳಲ್ಲಿ ಅಮೆರಿಕಾಗೆ ಬಂದು ಮಗು ಹೆರುತ್ತಾರೆ: ಭಾರತ, ಚೀನಾ ವಿರುದ್ಧ ಟ್ರಂಪ್ ಮತ್ತೆ ಆಕ್ರೋಶ

ಒಂಡ್ರಿಲಾ ಕಪೂರ್ ಅವರ ಪ್ರಕಾರ, ಆ ವ್ಯಕ್ತಿ ತನ್ನನ್ನು ತಾನು ಒಬ್ಬ ಅತ್ಯಂತ ನಿಪುಣ ಉದ್ಯೋಗಸ್ಥ ಎಂದು ಬಿಂಬಿಸಿಕೊಂಡಿದ್ದರು, ಶತಕೋಟಿ ಡಾಲರ್ ಮೌಲ್ಯದ ಕಂಪನಿಯಲ್ಲಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಆದರೆ ವಿವಾಹದ ವಿಚಾರದಲ್ಲಿ ಅವರ ನಿರೀಕ್ಷೆಗಳು ಬೇಗನೆ ಹುಸಿಯಾದವು. ಅವನಿಗೆ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ, ಎಂದಿಗೂ ಮದುವೆಯಾಗದ, ಎಂದಿಗೂ ಸಂಬಂಧದಲ್ಲಿರದ, ಮತ್ತು ಮೇಲಾಗಿ ಕನ್ಯೆ ಬೇಕಿತ್ತು ಎಂದು ಅವರು ಹೇಳಿಕೊಂಡರು.

ಅಂತಹ ಬೇಡಿಕೆಗಳ ವಾಸ್ತವತೆ ಹಾಗೂ ನ್ಯಾಯಸಮ್ಮತತೆಯನ್ನು ಅವರು ಪ್ರಶ್ನಿಸಿದಾಗ ಸಂಪೂರ್ಣವಾಗಿ ಗಂಭೀರವಾಗಿಯೇ ಇದ್ದ ಅವರು ಅವುಗಳ ಹಿಂದೆ ಕಾರಣವಿದೆ ಎಂದು ಹೇಳಿದರು. ಹೆಚ್ಚಿನ ಸಂಗಾತಿಗಳನ್ನು ಹೊಂದಿರುವ ಮಹಿಳೆಯರು ಹೆಚ್ಚು ವಿಶ್ವಾಸದ್ರೋಹಿಗಳಾಗಿರುತ್ತಾರೆ ಎಂಬ ಅಧ್ಯಯನ ವರದಿ ಇರುವುದಾಗಿ ಅವರು ತಮ್ಮ ಬೇಡಿಕೆಯನ್ನು ಸಮರ್ಥಿಸಿಕೊಂಡರು. ಇದೇ ರೀತಿಯ ಲಾಜಿಕ್ ವಿಚ್ಛೇದಿತ ಪುರುಷನಿಗೆ ಅನ್ವಯವಾಗುವುದಿಲ್ಲವೇ ಎಂದು ಪ್ರಶ್ನಿಸಿದಾಗ ಅವರು ಇಲ್ಲ ಇದು ನ್ಯಾಯಯುತ ಹೋಲಿಕೆ ಅಲ್ಲ ಎಂದು ವಾದಿಸಿದರು. ಅಲ್ಲದೇ ಈ ಬಗ್ಗೆ ಹೆಚ್ಚಿನ ಚರ್ಚೆಯಾದಾಗ ಅವರು, ನಾನು ಪುರುಷ ಎಂದು ಹೇಳಿದರು ಎಂದು ಕಪೂರ್ ಅವರು ಹೇಳಿಕೊಂಡಿದ್ದಾರೆ. ಅಲ್ಲದೇ ಅವರನ್ನು ತಮ್ಮ ಈ ಮ್ಯಾಚ್ ಮೇಕಿಂಗ್ ಸೈಟ್‌ನಿಂದ ತಿರಸ್ಕರಿಸಿದ್ದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಮನೆಯಲ್ಲೇ ಕುಸಿದು ಬಿದ್ದು ಖ್ಯಾತ ನಟಿ ದಿವ್ಯಾಂಕ ಸಾವು

ಆ ವ್ಯಕ್ತಿಗೆ 2ನೇ ಮದುವೆಯಲ್ಲಾದರೂ ತುಸು ಹೊಂದಾಣಿಕೆ ಮಾಡಿಕೊಂಡು ಹೋಗುವ ಮನಸ್ಥಿತಿ ಇರಲಿಲ್ಲ, ಆತ ತಾನು ಪುರುಷ ಎಂದು ಹೇಳುತ್ತಾ ಸಂಗಾತಿಯ ಗತಕಾಲದ ಮೇಲೂ ನಿಯಂತ್ರಣವಿಡುವುದಕ್ಕೆ ಬಯಸಿದ್ದ ಎಂದು ಅವರು ಹೇಳಿಕೊಂಡಿದ್ದಾರೆ. ಈ ಪೋಸ್ಟ್ ಸ್ವಲ್ಪ ಹೊತ್ತಿನಲ್ಲೇ ಸಾಕಷ್ಟು ವೈರಲ್ ಆಗಿದ್ದು, ಅನೇಕರು ಆತನ ವರ್ತನೆಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಈತನಿಗೆ ಏಕೆ ವಿಚ್ಛೇದನ ಆಗಿರಬಹುದು ಎಂಬುದನ್ನು ಊಹಿಸಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ವಿಚ್ಚೇದಿತರು ಬೇರೆ ವಿಚ್ಛೇದಿತರನ್ನು ಹುಡುಕಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಮಗೂ ಡೇಟ್ ಬಾರ್ ಆಗಿರುವ ಪುರುಷ ಬೇಡ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಆದರೆ ಅನೇಕ ಪುರುಷರು ಆತನ ನಿರೀಕ್ಷೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆತನದ್ದು ತಪ್ಪಿಲ್ಲ ಎಂದು ಹೇಳುವ ಮೂಲಕ ನಾವು ಕೂಡ ಅಂತಹವರೇ ಎನ್ನುವ ಸಂದೇಶ ನೀಡಿದ್ದಾರೆ.

ಒಟ್ಟಿನಲ್ಲಿ ವಿವಾಹದ ನಂತರದ ದಾಂಪತ್ಯ ಜೀವನ ನಡೆಯುವುದು ಪರಸ್ಪರರ ಹೊಂದಾಣಿಕೆ, ತಪ್ಪು ಸರಿಗಳ ತಿದ್ದುವಿಕೆ, ಅರ್ಥಮಾಡಿಕೊಳ್ಳುವಿಕೆಯ ಮೇಲೆಯೇ ಹೊರತು ಈ ರೀತಿಯ ಮನಸ್ಥಿತಿಗಳಿಂದ ಮಾತ್ರ ಅಲ್ಲ ಅನ್ನೋದು ಅಷ್ಟೇ ನಿಜ.

View post on Instagram