ಹೊಸಪೇಟೆಯ ಹಂಪಿಯಲ್ಲಿ ಮೂರು ದಿನಗಳ ಹಂಪಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ವೇಳೆ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಶ್ವಿನಿ ಪುನೀತ್​ ರಾಜ್​ಕುಮಾರ್ ಅವರನ್ನು ಗುರುತಿಸಲು ವಿಫಲರಾಗಿ 'ಇವರು ಯಾರು' ಎಂದು ಪ್ರಶ್ನಿಸಿದ್ದು, ಇದು ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ನಾಡಿನ ಭವ್ಯ ಇತಿಹಾಸ, ಸುವರ್ಣ ಆಡಳಿತದ ಪ್ರತಿಧ್ವನಿಯಂತಿರುವ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಐತಿಹಾಸಿಕ ಹಂಪಿಯಲ್ಲಿ ಸರ್ಕಾರ ಹಮ್ಮಿಕೊಂಡಿರುವ ಮೂರು ದಿನಗಳ ಸಾಂಸ್ಕೃತಿಕ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಗಾರಿ ಬಾರಿಸುವ ಮೂಲಕ ನಿನ್ನೆಯಷ್ಟೇ ಚಾಲನೆ ನೀಡಿದರು. ಕಲೆ, ಸಾಹಿತ್ಯ, ಸಂಗೀತ ಸಂಗಮವಾಗಿದ್ದ ವಿಜಯನಗರ ಸಾಮ್ರಾಜ್ಯದ ಭವ್ಯತೆಯನ್ನು ಸ್ಮರಿಸಿಕೊಳ್ಳುವ ಹಾಗೂ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಜತನದಿಂದ ಮುಂದುವರಿಸುವ ಉದ್ದೇಶದಿಂದ ಜರುಗುತ್ತಿರುವ ಹಂಪಿ ಉತ್ಸವದಲ್ಲಿ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆಯಿದೆ.

ಅಶ್ವಿನಿ ಪುನೀತ್​ರಾಜ್​ಕುಮಾರ್​ರನ್ನೇ ಮರೆತ ಸಿಎಂ!

ಆದರೆ, ಇದರ ನಡುವೆಯೇ ನಡೆದ ಘಟನೆಯೊಂದು ಇದೀಗ ಭಾರಿ ವೈರಲ್​ ಆಗುತ್ತಿದೆ. ಅದೇನೆಂದರೆ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಪುನೀತ್​ ರಾಜ್​ಕುಮಾರ್​ ಅವರ ಪತ್ನಿ ಅಶ್ವಿನಿ ಅವರನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮರೆತಿರುವುದು! ಈ ಕಾರ್ಯಕ್ರಮಕ್ಕೆ ಶಿವರಾಜ್​ಕುಮಾರ್​, ಅಶ್ವಿನಿ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು. ಮುಖ್ಯಮಂತ್ರಿಗಳು ಆಗಮಿಸಿದ ಬಳಿಕ, ಸಹಜವಾಗಿ ಅಶ್ವಿನಿ ಅವರು ಸಿದ್ದರಾಮಯ್ಯ ಅವರಿಗೆ ನಮಸ್ಕರಿಸಿದರು. ಆಗ ಅವರು ಯಾರು ಎಂದು ಮರೆತ ಸಿದ್ದರಾಮಯ್ಯ ಪಕ್ಕಕ್ಕೆ ನೋಡಿ ಇವರು.... ಎಂದು ಪ್ರಶ್ನಿಸಿದರು. ಬಳಿಕ ಪಕ್ಕದಲ್ಲಿ ಇದ್ದವರು ಇವರು ಪುನೀತ್​ ರಾಜ್​ಕುಮಾರ್​ ಅವರ ಪತ್ನಿ ಎಂದು ಹೇಳಿದಾಗ, ಅಶ್ವಿನಿ ಅವರೇ ಇರಲಿ ಬಿಡಿ, ನೋಡಿ ತುಂಬಾ ದಿನವಾಯ್ತಲ್ಲ ಎಂದರು. 

ಅಪ್ಪು ಫ್ಯಾನ್ಸ್​ ಗರಂ

ಇದು ಅಪ್ಪು ಫ್ಯಾನ್ಸ್​ಗೆ ಸಿಕ್ಕಾಪಟ್ಟೆ ಕೋಪ ತರಿಸಿದೆ. ಅಶ್ವಿನಿ ಮೇಡಂ ಅವರನ್ನೇ ಹೇಗೆ ಸಿದ್ದರಾಮಯ್ಯನವರು ಮರೆಯಲು ಸಾಧ್ಯ ಎಂದು ಪ್ರಶ್ನಿಸುತ್ತಿದ್ದಾರೆ. ಪುನೀತ್​ ರಾಜ್​ ಅವರು ಈ ರಾಜ್ಯದ ಜನತೆಗೆ ಮಾಡಿರುವ ಸೇವೆ ಅಪಾರವಾದದ್ದು. ಅಷ್ಟೇ ಅಲ್ಲದೇ ಅಶ್ವಿನಿ ಅವರು ಕೂಡ ಸಾಕಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಲೇ ಇದ್ದಾರೆ. ಅವರನ್ನೇ ನೀವ್ಯಾರು ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿರೋದು ಅಸಹಜವಾದದ್ದು ಎಂದು ಅಪ್ಪು ಫ್ಯಾನ್ಸ್​ ಕಮೆಂಟ್​ಗಳಲ್ಲಿ ತಿಳಿಸುತ್ತಿದ್ದಾರೆ. ಮತ್ತೆ ಕೆಲವರು ತೀವ್ರವಾಗಿ ಕೋಪಿಸಿಕೊಂಡಿದ್ದು, ನಿಮಗೆ ಬಿಡಿ ಹಿಂದೂಗಳು ಯಾರೂ ನೆನಪೇ ಇರುವುದಿಲ್ಲ ಎಂದಿದ್ದಾರೆ.

ಹಂಪಿ ಉತ್ಸವದ ಕುರಿತು

ಇನ್ನು ಹಂಪಿ ಉತ್ಸವದ ಕುರಿತು ಹೇಳುವುದಾದರೆ, ನಿನ್ನೆ ನಡೆದ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಈ ಕಾರ್ಯಕ್ರಮವು ಅಂತರರಾಷ್ಟ್ರೀಯ ಮಟ್ಟದ ಒಲಿಂಪಿಕ್ ಟಾರ್ಚ್ ಮಾದರಿಯಲ್ಲಿ ಹಂಪಿಯ ವಿಶಿಷ್ಟ ಸಂದೇಶವನ್ನು ವಿಶ್ವಕ್ಕೆ ಸಾರಲಿದೆ. ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಟಾರ್ಚ್‌ಗಳನ್ನು ಆನ್ ಮಾಡುವ ಮೂಲಕ ಬೆಳಕಿನ ಉದ್ಘಾಟನೆಯಲ್ಲಿ ಭಾಗಿಯಾಗುವಂತೆ ಕೋರಲಾಯಿತು. ಈ ಉತ್ಸವವು ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಮರುಕಳಿಸುವ ಮತ್ತು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಕರ್ನಾಟಕದ ಪ್ರಗತಿಯನ್ನು ದೇಶಾದ್ಯಂತ ಸಾರುವ ಉದ್ದೇಶವನ್ನು ಹೊಂದಿದೆ.