ಸಿನಿಮಾದ ಹಿನ್ನೆಲೆ ಗಾಯನಕ್ಕಿಂತ ಕಾನ್ಸರ್ಟ್‌ಗಳಲ್ಲೇ ಇವರು ಬ್ಯುಸಿ. ಹಣ, ಪ್ರಸಿದ್ಧಿ ಎರಡೂ ಇಲ್ಲಿ ಸಮೃದ್ಧ. ಅಂದಹಾಗೆ ಬೆಂಗಳೂರಿನಲ್ಲಿ ಮುಂದಿನ ವಾರ ಇರುವ ಇವರ ಕಾನ್ಸರ್ಟ್‌ಗೆ 900 ರು.ನಿಂದ 3000 ರು.ತನಕ ಟಿಕೆಟ್‌ ದರ ಇದೆ.

- ಪ್ರಿಯಾ ಕೆರ್ವಾಶೆ

‘ಎ ಸೂಪರ್‌ ಸ್ಪೆಷಲ್‌ ಗಿಗ್‌ - ನೋ ಫಿಲಂ ಸಾಂಗ್ಸ್‌, ನೋ ಸೇಫ್ಟಿ ನೆಟ್‌’. ಕನ್ನಡದ ಖ್ಯಾತ ಗಾಯಕ, ಸಂಗೀತ ನಿರ್ದೇಶಕರೊಬ್ಬರ ಮುಂದಿನ ವಾರದ ಕಾನ್ಸರ್ಟ್‌ನ ಟ್ಯಾಗ್‌ಲೈನ್‌ ಇದು. ಈ ವರ್ಷವಿಡೀ ವಿಶ್ವಾದ್ಯಂತ ಇವರ ಕಾನ್ಸರ್ಟ್‌ ಬುಕ್‌ ಆಗಿದೆ. ಏಪ್ರಿಲ್‌ ಮೇ ತಿಂಗಳಲ್ಲಿ ಬೆಂಗಳೂರು, ದೆಹಲಿ ಸೇರಿ ದೇಶದೊಳಗೆ ಸಂಗೀತದ ರಸರಾತ್ರಿಗಳು ನಡೆದರೆ , ಜೂನ್‌ ಜುಲೈ ನಂತರ ಯುನೈಟೆಡ್‌ ಕಿಂಗ್‌ಡಮ್‌ನ ಹಲವೆಡೆ ‘ನಿನ್ನ ಪೂಜೆಗೆ ಬಂದೆ ಮಾದೇಶ್ವರಾ..’ ಹಾಡು ಅನುರಣಿಸಲಿವೆ.

ಸದ್ಯಕ್ಕೆ ಸಿನಿಮಾದ ಹಿನ್ನೆಲೆ ಗಾಯನಕ್ಕಿಂತ ಕಾನ್ಸರ್ಟ್‌ಗಳಲ್ಲೇ ಇವರು ಬ್ಯುಸಿ. ಹಣ, ಪ್ರಸಿದ್ಧಿ ಎರಡೂ ಇಲ್ಲಿ ಸಮೃದ್ಧ. ಅಂದಹಾಗೆ ಬೆಂಗಳೂರಿನಲ್ಲಿ ಮುಂದಿನ ವಾರ ಇರುವ ಇವರ ಕಾನ್ಸರ್ಟ್‌ಗೆ 900 ರು.ನಿಂದ 3000 ರು.ತನಕ ಟಿಕೆಟ್‌ ದರ ಇದೆ. ವಾರಕ್ಕೂ ಮೊದಲೇ ಟಿಕೆಟ್‌ಗಳು ಖಾಲಿಯಾಗುತ್ತಿವೆ. ಅಲ್ಲಿಗೆ ಒಂದು ಕಾಲದಲ್ಲಿ ಹಣ, ಪ್ರಸಿದ್ಧಿಗೆ ಸಿನಿಮಾ ಹಿನ್ನೆಲೆ ಗಾಯನವನ್ನೇ ನೆಚ್ಚಿಕೊಂಡಿದ್ದ ಗಾಯಕರ ಬ್ಯುಸಿನೆಸ್‌ ಡೈನಾಮಿಕ್ಸ್‌ ಇಂದು ಬದಲಾಗಿದೆ. ನಷ್ಟದಲ್ಲಿರುವ ಸಿನಿಮಾರಂಗಕ್ಕಿಂತಲೂ ಹೆಚ್ಚಿನ ಲಾಭ ಪ್ರೇಕ್ಷಕರೊಂದಿಗೆ ಮುಖಾಮುಖಿಯಾಗಿ ಲೈವ್‌ನಲ್ಲಿ ಹಾಡುವುದರಿಂದ ಅವರಿಗೆ ಸಿಗುತ್ತಿದೆ.

ಸಿನಿಮಾದ ಹಿನ್ನೆಲೆ ಗಾಯಕರನ್ನಿಟ್ಟುಕೊಂಡು ದೊಡ್ಡ ದೊಡ್ಡ ಲೈವ್‌ ಕಾನ್ಸರ್ಟ್‌ಗಳು ಬೆಂಗಳೂರು, ಮುಂಬೈಯಂಥಾ ಮಹಾನಗರಗಳಿಂದ ಹಿಡಿದು ಅಮೆರಿಕಾ, ಯುಕೆಯಂಥಾ ಹೊರದೇಶಗಳಲ್ಲೂ ಜನಪ್ರಿಯವಾಗುತ್ತಿವೆ. ಸಿನಿಮಾಗಳ ಪ್ರಾಜೆಕ್ಟ್‌ಗಳಿಗಿಂತ ಹೆಚ್ಚಿನ ಮೊತ್ತವನ್ನು ಗಾಯಕರು ಒಂದೇ ರಾತ್ರಿಯಲ್ಲಿ ಪಡೆಯುತ್ತಾರೆ. ಮ್ಯೂಸಿಕ್‌ ಕಾನ್ಸರ್ಟ್‌ಗಳ ಕ್ರೇಜ್‌ ಜೋರಾಗುತ್ತಿರುವಂತೆ ನಮ್ಮ ಗಾಯಕರ ಸಂಭಾವನೆಯೂ ಏರುತ್ತಲೇ ಇದೆ. ಒಂದು ರಾತ್ರಿಯ ಮ್ಯೂಸಿಕ್‌ ಕಾನ್ಸರ್ಟ್‌ಗೆ ಕೆಲವು ಲಕ್ಷಗಳಿಂದ ಕೋಟಿಯವರೆಗೆ ಸಂಭಾವನೆ ಪಡೆಯುವ ಗಾಯಕರು ನಮ್ಮಲ್ಲಿದ್ದಾರೆ.

ಸಂಜಿತ್‌ ಹೆಗ್ಡೆ ಸದ್ಯ ಯುಕೆ, ಐರ್ಲೆಂಡ್‌ನಲ್ಲಿ ‘ಮಾಯಾವಿ’ಯ ಮ್ಯಾಜಿಕ್‌ ಮಾಡುತ್ತಿದ್ದಾರೆ. ಈ ಪ್ರತಿಭಾನ್ವಿತ ಗಾಯಕ ಅದೆಷ್ಟು ದೇಶಗಳಲ್ಲಿ ಅದೆಷ್ಟು ಗಲ್ಲಿಗಳಲ್ಲಿ ಅದೆಷ್ಟು ಲಕ್ಷ ಜನರನ್ನು ಕನ್ನಡ ಹಾಡುಗಳ ಮೂಲಕ ಕುಣಿಸಿದ್ದಾರೆ ಅಂತ ಲೆಕ್ಕ ಇಟ್ಟವರ್ಯಾರು. ಈ ಹುಡುಗನಿಗೆ ಇನ್ನೂ 27 ವರ್ಷ. ತನಗೆ ಹೆಸರು ತಂದುಕೊಟ್ಟ ಹಿನ್ನೆಲೆ ಗಾಯನಕ್ಕಿಂತ ಸದ್ಯ ಕಾನ್ಸರ್ಟ್‌ನಲ್ಲೇ ಜಗತ್ತು ತಿರುಗುತ್ತಿದ್ದಾರೆ. ‘ಕರೆಯೋಲೆ’ಯಂಥಾ ಆಲ್ಬಂ ಸೇರಿ ಬೇರೆ ಬೇರೆ ಮ್ಯೂಸಿಕಲ್‌ ಪ್ಲಾಟ್‌ಫಾರ್ಮ್‌ಗಳನ್ನು ಎಕ್ಸ್‌ಪ್ಲೋರ್ ಮಾಡುತ್ತಿದ್ದಾರೆ.

ಚಂದನ್‌ ಶೆಟ್ಟಿ ಕಿಕ್ಕೇರಿಸುವ ಕನ್ನಡದ ಹಿನ್ನೆಲೆ ಗಾಯಕ. ಸಿನಿಮಾ ಹಾಡುಗಳಿಗಿಂತಲೂ ಖ್ಯಾತಿ, ಹಣ, ವಿವಾದ ತಂದುಕೊಟ್ಟದ್ದು ಮ್ಯೂಸಿಕ್‌ ಆಲ್ಬಂ. ಪಾರ್ಟಿಗಳಲ್ಲಿ ಇವತ್ತಿಗೂ ಇವರ ‘ಮೂರೇ ಮೂರು ಪೆಗ್ಗಿಗೆ’ ಹಾಡು ಇರಲೇಬೇಕು. ಸದ್ಯ ‘ಡಯಾನಾಮೈಟ್‌’ ಮುಂದಿನವಾರ ರಿಲೀಸ್‌ ಆಗುತ್ತಿರುವ ಇವರ ಹೊಸ ಇಂಗ್ಲಿಷ್‌ ಆಲ್ಬಂ. ‘ಇಂಡಿಪೆಂಡೆಂಟ್‌ ಗಾಯಕ ಅಂತ ಗುರುತಿಸಿಕೊಳ್ಳಬೇಕಾದ್ರೆ ಸಂಗೀತ, ಗಾಯನ, ಪ್ರಚಾರ, ಸ್ಟೇಜ್‌ ಪರ್ಫಾಮೆನ್ಸ್‌, ಸಾಮಾಜಿಕ ಬದ್ಧತೆ ಬಹಳ ಮುಖ್ಯ’ ಅಂತಾರೆ. ವಿಜಯ ಪ್ರಕಾಶ್‌, ಅಜನೀಶ್‌ ಲೋಕನಾಥ್‌, ಅರ್ಜುನ್‌ ಜನ್ಯಾ, ಗುರುಕಿರಣ್‌ ಸೇರಿ ಸಾಕಷ್ಟು ಮಂದಿ ಸಿನಿಮಾ ಹಿನ್ನೆಲೆ ಗಾಯಕರು ಹಿನ್ನೆಲೆ ಗಾಯನಕ್ಕಿಂತ ಬೇರೆ ಆಯಾಮಗಳಲ್ಲೇ ದುಡಿಮೆ ಕಂಡುಕೊಂಡಿದ್ದಾರೆ.

ಶ್ರೀಮಂತ ಗಾಯಕ

ಇದೆಲ್ಲ ನಮ್ಮೂರ ಗಾಯಕರ ಕಥೆ ಆಯ್ತು. ‘ಕಾಂತಾರ 2’ ಸಿನಿಮಾ ಬಂದಾಗ ದೊಡ್ಡ ಸೌಂಡ್‌ ಮಾಡಿದ್ದು ದಿಲ್ಜಿತ್‌ ದೋಸಾಂಜ್‌ ಎಂಬ ಅದ್ಭುತ ಗಾಯಕ. ಒಂದು ಲೈವ್‌ ಶೋಗೆ 4 ಕೋಟಿಯಿಂದ 30 ಕೋಟಿವರೆಗೂ ಪಡೆಯುತ್ತಾರೆ. ಪ್ರೈವೇಟ್‌ ಜೆಟ್‌ನಲ್ಲಿ ಓಡಾಡುತ್ತಾರೆ. ದೇಶದ ಅತಿ ಶ್ರೀಮಂತ ಗಾಯಕರಲ್ಲೊಬ್ಬರು. ಪಂಜಾಬ್‌ ಹಾಡುಗಳನ್ನು ವಿಶ್ವಾದ್ಯಂತ ಫೇಮಸ್‌ ಮಾಡಿರೋ ಈ ಗಾಯಕ ಸಿನಿಮಾಕ್ಕಿಂತ ಕಾನ್ಸರ್ಟ್‌ಗಳ ಮೂಲಕವೇ ಜಗತ್ತಿನ ಗಮನ ಸೆಳೆದವರು. ಅದ್ಭುತ ಗಾಯನ, ತನ್ನ ಬೇರುಗಳ ಬಗೆಗಿನ ಅಮಿತ ಪ್ರೀತಿಯನ್ನು ಇಟ್ಟುಕೊಂಡೇ ಅದನ್ನೇ ಬ್ಯುಸಿನೆಸ್‌ ಆಗಿ ಪರಿವರ್ತಿಸಿಕೊಂಡವರು. ಲೈವ್‌ ಕಾನ್ಸರ್ಟ್‌ ಮೂಲಕ ಕೋಟ್ಯಂತರ ದುಡಿಯಬಹುದು ಅನ್ನುವುದನ್ನು ದೇಶಕ್ಕೆ ತೋರಿಸಿಕೊಟ್ಟ ಗಾಯಕ.

ಮೊನ್ನೆ ಮೊನ್ನೆ ಸಿನಿಮಾ ಹಿನ್ನೆಲೆ ಗಾಯನದಿಂದ ಹಿಂದೆ ಸರಿದ ಅರಿಜಿತ್‌ ಸಿಂಗ್‌ ಅವರ ಎರಡೂವರೆ ಗಂಟೆಗಳ ಕಾನ್ಸರ್ಟ್‌ ಸಂಭಾವನೆಯ 14 ಕೋಟಿ ರು.ನಿಂದ ಆರಂಭವಾಗುತ್ತದೆ. ಅದ್ಭುತ ಕಂಠಸಿರಿಯ ಜೊತೆಗೆ ಮಾನವೀಯತೆಯ ಮೂಲಕವೂ ಗಮನಸೆಳೆವ ಈ ಪ್ರಸಿದ್ಧ ಗಾಯಕ ಇದೀಗ ಹಿನ್ನೆಲೆ ಗಾಯನದಿಂದ ಹೊರಬಂದರೂ ತನ್ನ ಜನಪ್ರಿಯತೆ, ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಒಟ್ಟಿನಲ್ಲಿ ಗಾಯನ ಕ್ಷೇತ್ರದ ಟ್ರೆಂಡ್‌ ಬದಲಾಗಿದೆ. ಸೊಗಸಾಗಿ ಹಾಡುವ ಗಾಯಕ, ಗಾಯಕಿಯರು ಸಿನಿಮಾದಿಂದಾಚೆ ಹೊಸ ಜಗತ್ತು ಕಂಡುಕೊಂಡಿದ್ದಾರೆ. ಸದ್ಯಕ್ಕೆ ಅದೇ ಅವರನ್ನು ಪೋಷಿಸುತ್ತಿದೆ.