ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಬೇಕೆಂದು ಮನವಿ ಮಾಡಿದ್ದ ಪವಿತ್ರಾ ಗೌಡರ ಅರ್ಜಿ ವಜಾಗಿದೆ.
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಜಾ ಆಗಿದೆ. ಈ ಹಿಂದೆಯೇ ಅವರು ಮಗಳಿಗೆ ಪರೀಕ್ಷೆ ಇದೆ, ಜಾಮೀನು ಅರ್ಜಿ ವಜಾ ಮಾಡಬೇಡಿ ಎಂದು ಮನವಿ ಮಾಡಿದ್ದರು. ಆದರೆ ಈಗ ಮತ್ತೆ ಅರ್ಜಿ ವಜಾ ಆಗಿದೆ.
ಪವಿತ್ರಾ ಗೌಡ ಅವರು ಜಾಮೀನು ಬೇಕು ಎಂದು ಮನವಿ ಮಾಡಿದ್ದರು. ಈ ಮನವಿ ಈಗ ವಜಾ ಆಗಿದ್ದು, ಪರಪ್ಪನ ಅಗ್ರಹಾರದಲ್ಲಿಯೇ ಅವರು ಇರಬೇಕಾಗಿದೆ. ಜಾಮೀನು ಸಿಕ್ಕ ಬಳಿಕ ಪವಿತ್ರಾ ಗೌಡ ಅವರು ತಮ್ಮ ‘ರೆಡ್ ಕಾರ್ಪೆಟ್ ಸ್ಟುಡಿಯೋ’ ಶಾಪ್‌ನ್ನು ರೀ ಲಾಂಚ್ ಮಾಡಿದ್ದರು, ಆನ್‌ಲೈನ್ ಡೆಲಿವರಿ ಕೊಡಲು ತಯಾರಿ ನಡೆಸಿದ್ದರು. ಒಂದಷ್ಟು ಫೋಟೋಶೂಟ್ ಕೂಡ ಮಾಡಿಸಿಕೊಂಡು, ಉದ್ಯಮವನ್ನು ದೊಡ್ಡ ಮಟ್ಟಕ್ಕೆ ಒಯ್ಯಲು ಪ್ರಯತ್ನಪಡುತ್ತಿದ್ದರು. ಅಷ್ಟೇ ಅಲ್ಲದೆ ಮಗಳ ಜೊತೆ ಸಮಯ ಕಳೆಯುತ್ತ, ದೇವಸ್ಥಾನಗಳಿಗೂ ಭೇಟಿ ನೀಡಿದ್ದರು.
ಅಂದಹಾಗೆ ದರ್ಶನ್ ತೂಗುದೀಪ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಬೇಕು ಎಂದು ಸರ್ಕಾರಿ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ಇಂದು ಆಗಲಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗೋ ಸಾಧ್ಯತೆ ಜಾಸ್ತಿ ಇದೆ.
ಆರಂಭದಲ್ಲಿ ದರ್ಶನ್ ಅವರು ಜೈಲುಪಾಲಾದಾಗ ಅವರಿಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಸಿಕ್ಕಿತ್ತು. ಅಲ್ಲಿ ಅವರು ಇತರ ರೌಡಿಗಳ ಜೊತೆ ಮಾತನಾಡಿರೋ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ರಾಜಾತಿಥ್ಯದ ಬಗ್ಗೆ ಪ್ರಶ್ನೆ ಮಾಡಿದಾಗ, ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಆ ಬಳಿಕ ಅವರಿಗೆ ಜಾಮೀನು ಸಿಕ್ಕಿ ಹೊರಗಡೆ ಬಂದಿದ್ದರು.
ದರ್ಶನ್ ಹಾಗೂ ಇತರ ಆರೋಪಿಗಳಿಗೆ ಹೇಗೆ ಜಾಮೀನು ಸಿಕ್ಕಿತು ಎಂದು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. ದರ್ಶನ್‌ಗೆ ರಾಜಾತಿಥ್ಯ ಸಿಕ್ಕಿರೋದು, ಆಪರೇಶನ್ ಮಾಡಿಸಿಕೊಳ್ಳಬೇಕು ಎಂದು ನೆಪ ಹೇಳಿ ‘ದಿ ಡೆವಿಲ್’ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿರೋದು ಮುಂತಾದ ಕಾರಣಗಳನ್ನು ಇಟ್ಟುಕೊಂಡು ಅವರ ಜಾಮೀನನ್ನು ರದ್ದು ಮಾಡಲಾಗಿತ್ತು. ಹೀಗಾಗಿ ಮತ್ತೆ ಅವರು ಜೈಲು ಪಾಲಾಗಿದ್ದಾರೆ. ದರ್ಶನ್, ನಾಗರಾಜ್, ಲಕ್ಷ್ಮಣ್, ಪ್ರದೂಷ್, ಜಗದೀಶ್ ಸೇರಿದಂತೆ ಐವರು ಆರೋಪಿಗಳನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಇದನ್ನು ಆರೋಪಿಗಳ ಪರ ವಕೀಲರು ವಿರೋಧಿಸಿದ್ದರು. ಅಷ್ಟೇ ಅಲ್ಲದೆ ಯಾಕೆ ಬಳ್ಳಾರಿ ಜೈಲು ಬೇಡ ಅಂತ ಕೂಡ ಆರೋಪಿಗಳು ಸರಿಯಾದ ಕಾರಣವನ್ನು ನೀಡಲು ಸಮಯ ತಗೊಂಡಿದ್ದರು. ಇಂದು ಇದರ ವಿಚಾರಣೆ ಆಗಲಿದೆ.


