'ಕಾಂತಾರ' ಚಿತ್ರದ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್ ತಂಡವು ಮಂಗಳೂರಿನ ದೈವಸ್ಥಾನದಲ್ಲಿ ಹರಕೆ ನೇಮೋತ್ಸವವನ್ನು ನೆರವೇರಿಸಿದರು. ಈ ಹಿಂದೆ ದೈವವು ನೀಡಿದ್ದ ಸೂಚನೆಯಂತೆ ದೈವದ ಆಶೀರ್ವಾದವನ್ನು ಪಡೆದುಕೊಂಡಿದೆ.

ಮಂಗಳೂರು: ‘ಕಾಂತಾರ ಚಾಪ್ಟರ್ 1’ ಚಿತ್ರದ ಭರ್ಜರಿ ಯಶಸ್ಸಿನ ನಂತರ, ನಟ–ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಚಿತ್ರತಂಡ ಮಂಗಳೂರಿನ ಬಾರೆಬೈಲು ವರಾಹ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಇಂದು ಹರಕೆ ನೇಮೋತ್ಸವಕ್ಕೆ ಆಗಮಿಸಿದರು. ಕಾಂತಾರ ಚಿತ್ರ ಯಶಸ್ಸು ಕಂಡ ಹಿನ್ನೆಲೆಯಲ್ಲಿ, ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಚಿತ್ರತಂಡ ದೈವಕ್ಕೆ ಕಟ್ಟಿಕೊಂಡಿದ್ದ ಹರಕೆಯನ್ನು ಈಡೇರಿಸುವ ಉದ್ದೇಶದಿಂದ ಬಂದರು.

ಕುಟುಂಬದೊಂದಿಗೆ ದೈವಸ್ಥಾನಕ್ಕೆ ಆಗಮಿಸಿದ ರಿಷಬ್ ಶೆಟ್ಟಿ

ಪತ್ನಿ ಮತ್ತು ಮಕ್ಕಳೊಂದಿಗೆ ರಿಷಬ್ ಶೆಟ್ಟಿ ನೇಮೋತ್ಸವಕ್ಕೆ ಆಗಮಿಸಲು, ದೈವಸ್ಥಾನದ ಪರಿಸರದಲ್ಲಿ ಭಕ್ತರ ವಿಶೇಷ ಕುತೂಹಲ ಏರಿಕೆಯಾಗಿತ್ತು. ನಿರ್ಮಾಪಕ ವಿಜಯ್ ಕಿರಂಗದೂರು, ನಿರ್ದೇಶಕ ಸಂತೋಷ್ ಆನಂದರಾಮ್, ಮತ್ತು ಚಿತ್ರರಂಗದ ಇನ್ನಿತರ ಹಲವು ಗಣ್ಯರು ಈ ನೇಮೋತ್ಸವದಲ್ಲಿ ಭಾಗವಹಿಸಿದರು. ಚಿತ್ರತಂಡದವರು ಗಗ್ಗರ ಸೇವೆ, ಅನ್ನಸಂತರ್ಪಣೆ ಸೇರಿದಂತೆ ಅನೇಕ ಸೇವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೈವಕ್ಕೆ ಕೃತಜ್ಞತೆ ಸಲ್ಲಿಸಿದರು.

ಕಳೆದ ಏಪ್ರಿಲ್‌ನಲ್ಲಿ ದೈವದ ಸೂಚನೆ

ಕಳೆದ ಏಪ್ರಿಲ್‌ನಲ್ಲಿ ಇದೇ ದೈವಸ್ಥಾನದಲ್ಲಿ ನೇಮೋತ್ಸವಕ್ಕೆ ಹಾಜರಾಗಿದ್ದ ಸಂದರ್ಭದಲ್ಲಿ ದೈವದಿಂದ ಕೆಲವು ವಿಶಿಷ್ಟ ಸೂಚನೆಗಳು ದೊರಕಿದ್ದವು. ‘ಸಂಸಾರ’ ಸಿನಿಮಾದಲ್ಲೂ ಈ ಘಟನೆಯನ್ನು ಪ್ರಸ್ತಾಪಿಸಲಾಗಿತ್ತು. ಸಿನಿಮಾ ಕ್ಷೇತ್ರದಲ್ಲಿ ಶತ್ರುಗಳು ಇರಬಹುದು, ಜಾಗರೂಕತೆಯಿಂದಿರು. ಕಟ್ಟಿಕೊಂಡಿರುವ ಹರಕೆ ಇದ್ದರೆ ತೀರಿಸಿ ಎಂದು ದೈವವು ಆಗ ರಿಷಬ್ ಶೆಟ್ಟಿಗೆ ಹೇಳಿತ್ತು.

ಯಶಸ್ಸಿನ ನಂತರ ಹರಕೆ ತೀರಿಸಿದ ಚಿತ್ರತಂಡ

‘ಕಾಂತಾರ’ ಚಿತ್ರವು ದೇಶವ್ಯಾಪಿ ಸಂಚಲನ ಸೃಷ್ಟಿಸಿ, ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸಿದ ಬೆನ್ನಲ್ಲೇ, ರಿಷಬ್ ಶೆಟ್ಟಿ ಅದೇ ದೈವಸ್ಥಾನದಲ್ಲಿ ಹರಕೆಯನ್ನು ಸಲ್ಲಿಸಿದ್ದಾರೆ. ದೈವಸ್ಥಾನದ ನೇಮದಲ್ಲಿ ಭಾಗವಹಿಸುತ್ತಾ ಚಿತ್ರತಂಡ ದೈವದ ಆಶೀರ್ವಾದ ಪಡೆದಿದ್ದಾರೆ.

ಮುಂದಿನ ಹಂತಕ್ಕೂ ಕಾಂತಾರ ತಂಡಕ್ಕೆ ದೈವದ ಆಶೀರ್ವಾದ?

‘ಕಾಂತಾರ ಚಾಪ್ಟರ್ – 1’ ನಂತರ ಮುಂದಿನ ಭಾಗಗಳ ಕುರಿತು ಅಭಿಮಾನಿಗಳಲ್ಲಿ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನೇಮೋತ್ಸವದ ನಂತರ ರಿಷಬ್ ಶೆಟ್ಟಿ ಮತ್ತು ತಂಡ ಮುಂದಿನ ಕಾರ್ಯಗಳಿಗೆ ದೈವದ ಆಶೀರ್ವಾದ ಪಡೆದುಕೊಂಡಿದ್ದಾರೆ ಎಂಬ ಭಾವನೆ ಅಭಿಮಾನಿಗಳಲ್ಲಿ ಮೂಡಿದೆ.