ರಿಷಬ್ ಶೆಟ್ಟಿ ನಟನೆ, ನಿರ್ದೇಶನದ 'ಕಾಂತಾರ ಚಾಪ್ಟರ್ 1' ಚಿತ್ರಕ್ಕೆ ಐಎನ್ಸಿಎ ಪ್ರಶಸ್ತಿ ಲಭಿಸಿದೆ. ಆದರೆ, ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ರಿಷಬ್ ಅವರು ನಿರ್ಮಾಪಕರಾದ ಹೊಂಬಾಳೆ ಫಿಲಂಸ್ ಹೆಸರನ್ನು ಉಲ್ಲೇಖಿಸದೇ ಇರುವುದು, ಇಬ್ಬರ ನಡುವಿನ ಭಿನ್ನಾಭಿಪ್ರಾಯದ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಕನ್ನಡಪ್ರಭ ಸಿನಿವಾರ್ತೆ, ಬೆಂಗಳೂರು (ಏ.18): ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ ಚಾಪ್ಟರ್ 1’ ಸಿನಿಮಾಕ್ಕೆ ರಾಷ್ಟ್ರಮಟ್ಟದ ಐಎನ್ಸಿಎ ಪ್ರಶಸ್ತಿ ಲಭಿಸಿದೆ. ರಿಷಬ್ ಅವರಿಗೆ ಅತ್ಯುತ್ತಮ ನಟ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಮತ್ತು ‘ಕಾಂತಾರ 1’ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಬಾಚಿಕೊಂಡಿದೆ. ನಾಯಕಿ ರುಕ್ಮಿಣಿ ವಸಂತ್ ಅವರಿಗೂ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ.
ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಅವರು ಸಿನಿಮಾದ ತಂತ್ರಜ್ಞರಿಗೆ, ಚಿತ್ರತಂಡದವರಿಗೆ ಕೃತಜ್ಞತೆ ಸಲ್ಲಿಸಿದರೂ ಅಪ್ಪಿತಪ್ಪಿಯೂ ನಿರ್ಮಾಪಕರ ಹೆಸರನ್ನಾಗಲೀ, ನಿರ್ಮಾಣ ಸಂಸ್ಥೆಯ ಹೆಸರನ್ನಾಗಲೀ ಹೇಳಲಿಲ್ಲ. ಹೊಂಬಾಳೆ ಫಿಲಂಸ್ ಹಾಗೂ ರಿಷಬ್ ಶೆಟ್ಟಿ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವದಂತಿಗೆ ರಿಷಬ್ ಅವರ ಈ ನಡೆ ಇನ್ನಷ್ಟು ಪುಷ್ಠಿ ಒದಗಿಸಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಿಷಬ್, ‘ಕಾಂತಾರ ಎರಡೂ ಸಿನಿಮಾಗಳು ನಮ್ಮೆಲ್ಲರ ನಾಲ್ಕು ವರ್ಷಗಳ ಪರಿಶ್ರಮದ ಫಲ. ಪ್ರಗತಿ ಶೆಟ್ಟಿ ನನ್ನ ಶಕ್ತಿಯಾಗಿ ನಿಂತು ಈ ಸಿನಿಮಾ ಮಾಡಲು ಸ್ಫೂರ್ತಿಯಾಗಿದ್ದಾರೆ. ಈ ಸಿನಿಮಾವನ್ನು ಕನ್ನಡ ಪ್ರೇಕ್ಷಕರು ಮತ್ತು ನಾನು ನಂಬುವ ದೈವಕ್ಕೆ ಅರ್ಪಣೆ ಮಾಡುವೆ’ ಎಂದರು.
ಮೂರು ಬಾರಿ ವೇದಿಕೆ ಏರಿದರೂ ಬರಲಿಲ್ಲ 'ಹೊಂಬಾಳೆ' ಹೆಸರು!
ಮುಂಬೈನಲ್ಲಿ ನಡೆದ ಪ್ರತಿಷ್ಠಿತ INCA ಅವಾರ್ಡ್ಸ್ನಲ್ಲಿ 'ಕಾಂತಾರ-1' ಸಿನಿಮಾ ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ ಹಾಗೂ ಅತ್ಯುತ್ತಮ ಚಿತ್ರ ಪ್ರಶಸ್ತಿಗಳನ್ನು ಬಾಚಿಕೊಂಡಿತು. ರಿಷಬ್ ಶೆಟ್ಟಿ ಮತ್ತು ಪತ್ನಿ ಪ್ರಗತಿ ಶೆಟ್ಟಿ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಸೆಟ್ ಬಾಯ್ಗೆ ಧನ್ಯವಾದ, ಪ್ರೊಡಕ್ಷನ್ ಹೌಸ್ಗೆ ಮೌನ: ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಿಷಬ್, ಚಿತ್ರಕ್ಕಾಗಿ ದುಡಿದ ಸೆಟ್ ಬಾಯ್, ಲೈಟ್ ಬಾಯ್, ತಂತ್ರಜ್ಞರು ಹಾಗೂ ಪತ್ನಿ ಪ್ರಗತಿ ಶೆಟ್ಟಿ ಅವರಿಗೆ ಮನಸಾರೆ ಧನ್ಯವಾದ ತಿಳಿಸಿದರು. ಆದರೆ, ಇಡೀ ಸಿನಿಮಾವನ್ನು ಜಗತ್ತಿಗೆ ತಲುಪಿಸಿದ ಹೊಂಬಾಳೆ ಫಿಲ್ಮ್ಸ್ ಹೆಸರನ್ನು ಒಮ್ಮೆಯೂ ಎತ್ತಲಿಲ್ಲ.
ಅತ್ಯುತ್ತಮ ಚಿತ್ರ ಪ್ರಶಸ್ತಿ: ಸಮಾರಂಭದಲ್ಲಿ ಹೊಂಬಾಳೆ ಸಂಸ್ಥೆಯ ಪ್ರತಿನಿಧಿಗಳು ಯಾರೂ ಇಲ್ಲದ ಕಾರಣ, 'ಅತ್ಯುತ್ತಮ ಚಿತ್ರ' ಪ್ರಶಸ್ತಿಯನ್ನು ಸ್ವೀಕರಿಸಲು ನಿರೂಪಕರು ರಿಷಬ್ ಅವರನ್ನೇ ಕರೆದರು. ಆ ಪ್ರಶಸ್ತಿ ಕೈ ಸೇರಿದಾಗಲೂ "ಆಗ್ಲೇ ಹೇಳಿದ್ದನ್ನೇ ಇಲ್ಲಿ ಸೇರಿಸಿಕೊಳ್ಳಿ" ಎಂದು ನಕ್ಕರೇ ಹೊರತು, ನಿರ್ಮಾಪಕರ ಬಗ್ಗೆ ಒಂದು ಮಾತನ್ನೂ ಆಡಲಿಲ್ಲ.
ರಶ್ಮಿಕಾ ಮಂದಣ್ಣಗೆ ಹೋಲಿಸಿದ ನೆಟ್ಟಿಗರು!
ಈ ಹಿಂದೆ 'ಕಿರಿಕ್ ಪಾರ್ಟಿ' ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಅವರು 'ಪರಂವಃ ಸ್ಟುಡಿಯೋಸ್' ಹೆಸರು ಹೇಳದಿದ್ದಾಗ ಕನ್ನಡಿಗರು ಅವರನ್ನು ತೀವ್ರವಾಗಿ ಟ್ರೋಲ್ ಮಾಡಿದ್ದರು. ಈಗ ರಿಷಬ್ ಶೆಟ್ಟಿ ಕೂಡ ಅದೇ ಹಾದಿ ತುಳಿದಿದ್ದಾರೆಯೇ? ಉಪಕಾರ ಸ್ಮರಣೆಯನ್ನು ಮರೆತರಾ? ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನಿರ್ದೇಶಕ ಕರಣ್ ಜೋಹರ್ ಹಾಗೂ ನಟ ರಾಣಾ ದಗ್ಗುಬಾಟಿ ಅವರ ಒತ್ತಾಯದ ಮೇರೆಗೆ ಮಾತನಾಡಿದ ರಿಷಬ್, "ಮೊದಲು ನಾನು ನಿರ್ದೇಶನ ಮಾತ್ರ ಮಾಡಬೇಕೆಂದುಕೊಂಡಿದ್ದೆ. ಆದರೆ ಪ್ರಗತಿಯೇ ನನ್ನನ್ನು ಶಿವನ ಪಾತ್ರ ಮಾಡಲು ಪ್ರೇರೇಪಿಸಿದಳು. ಆಕೆಯ ನಂಬಿಕೆಯಿಂದಲೇ ಇಂದು 'ಕಾಂತಾರ' ಈ ಮಟ್ಟಕ್ಕೆ ಬೆಳೆದಿದೆ" ಎಂದು ಪತ್ನಿಗೆ ಸಲ್ಲಬೇಕಾದ ಕ್ರೆಡಿಟ್ ನೀಡಿದರು.


