ಪ್ರತಿದಿನವೂ ಕಣ್ಣೀರು ಹಾಕ್ತೇನೆ, ಇದು ಮುಗಿಯೋದು ಮೇಲೆ ಹೋದಮೇಲಷ್ಟೆ ಎಂದು ಸ್ಯಾಂಡಲ್ವುಡ್ ನಟಿ ಶುಭಾ ಪೂಂಜಾ ನೋವು ತೋಡಿಕೊಂಡಿದ್ದಾರೆ. ಅಷ್ಟಕ್ಕೂ ಅವರು ಹೀಗೆ ಹೇಳಿದ್ಯಾಕೆ?
ಸ್ಯಾಂಡಲ್‌ವುಡ್‌ನ ನಟಿ ಶುಭಾ ಪೂಂಜಾ ಮದುವೆಯಾಗಿ ಐದು ವರ್ಷಗಳಾಗಿದ್ದು, ಸದ್ಯ ವೈವಾಹಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಇದರ ಜೊತೆಗೆ ಸಿನಿಮಾದಲ್ಲಿಯೂ ಬಿಜಿ ಆಗಿದ್ದಾರೆ. 2020ರಲ್ಲಿ ಲಾಕ್‌ಡೌನ್‌ನಲ್ಲಿ ಇವರ ಮದುವೆ ದಿಢೀರ್ ನಡೆದಿತ್ತು. ಕೊನೆಗೆ ಈ ವಿಷಯವನ್ನು ರಿವೀಲ್ ಮಾಡಿದ್ದ ನಟಿ ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಅಂದಹಾಗೆ ಇವರ ಮದುವೆ ಸುಮಂತ್ (Sumanth) ಎನ್ನುವವರ ಜೊತೆ ನಡೆದಿದೆ. ಮಂಗಳೂರಿನಲ್ಲಿ ಲಾಕ್ಡೌನ್ ಸಮಯದಲ್ಲಿ ಸರಳವಾಗಿ ನಡೆದಿದೆ. ಈ ಹಿಂದೆ ಪ್ರೇಮಿಗಳ ದಿನದಂದು ತಮ್ಮ ಮದುವೆಯ ಬಗ್ಗೆ ಅಪ್ಡೇಟ್ ನೀಡಿದ್ದರು ಶುಭಾ. ಅದಾಗಲೇ ಬಿಗ್ಬಾಸ್ ಮನೆಗೂ ಹೋಗಿದ್ದ ನಟಿ, ಅಲ್ಲಿಂದ ಬಂದ ಬಳಿಕ ಮದುವೆಗೆ ಮನೆಯವರು ತುಂಬಾ ಒತ್ತಾಯ ಮಾಡುತ್ತಿದ್ದರು. ಎರಡು ದಿನಗಳ ಮುನ್ನ ಮದುವೆ ಪ್ಲ್ಯಾನ್ ಮಾಡಲಾಗಿತ್ತು. ಅದಕ್ಕೇ ತುಂಬಾ ಜನರಿಗೆ ಕರೆಯದೇ ಮದ್ವೆ ಮಾಡಿಕೊಂಡ್ವಿ ಎಂದಿದ್ದರು.
ಇದೀಗ ಶುಭಾ ಅವರು ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಬದುಕಿನ ಹಲವು ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಶುಭಾ ಅವರ ತಾಯಿ ನಿಧನರಾದರು. ಇವರ ಬಗ್ಗೆ ಕೇಳಿದ ಪ್ರಶ್ನೆಗೆ ಶುಭಾ ಅವರು ಪ್ರತಿ ದಿನ ಅಮ್ಮ ನೆನಪಾಗ್ತಾರೆ. ಪ್ರತಿದಿನವೂ ಅಳುತ್ತೇನೆ. ಸಾಮಾನ್ಯವಾಗಿ ಯಾರಾದರೂ ನಿಧನರಾದರೆ ಒಂದಷ್ಟು ದಿನದಲ್ಲಿ ಸರಿಹೋಗುತ್ತೆ ಎನ್ನುತ್ತಾರೆ. ಆದರೆ ನನ್ನ ವಿಷಯದಲ್ಲಿ ಹಾಗಲ್ಲ. ಇದು ನಿಲ್ಲಬೇಕು ಎಂದರೆ ನಾನೂ ಮೇಲೆ ಹೋಗಬೇಕು ಅಷ್ಟೇ ಎಂದು ಅಮ್ಮನನ್ನು ನೆನೆದು ದುಃಖಿತರಾಗಿದ್ದಾರೆ.
ಹಿಂದೆ ಅಮ್ಮ ತೀರಿಕೊಂಡ ಸಂದರ್ಭದಲ್ಲಿ ಶುಭಾ ಅವರು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಕ ಗರ್ಲ್ಸ್ ವರ್ಸಸ್ ಬಾಯ್ಸ್ ರಿಯಾಲಿಟಿ ಶೋನಲ್ಲಿ ಶುಭಾ ಪೂಂಜಾ ಲೇಡಿಸ್ ಗ್ಯಾಂಗ್ ಲೀಡರ್ ಆಗಿ ಷೋನಲ್ಲಿ ಭಾಗವಹಿಸಿದ್ದರು. ತಾಯಿ ಅಗಲಿ ನಾಲ್ಕು ದಿನಕ್ಕೇನೇ ಅವರು ಚಿತ್ರೀಕರಣಕ್ಕೆ ಆಗಮಿಸಿದ್ದರು. ಇದನ್ನು ನೋಡಿ ಸೆಟ್‌ನಲ್ಲಿದ್ದ ಪ್ರತಿಯೊಬ್ಬರು ಶಾಕ್ ಆಗಿದ್ದರು. 'ತಾಯಿ ಅಗಲಿ ನಾಲ್ಕು ದಿನ ಆಗಿದೆ ಅಷ್ಟೇ' ಎಂದು ನಿರೂಪಕಿ ಅನುಪಮಾ ಗೌಡ ಕೇಳಿದಾಗ, ಶುಭಾ ಅವರು, 'ಅಮ್ಮ ಸಾಯುವ ಹಿಂದಿನ ದಿನ ನಾನು ಅವರ ಕೈ ಬಿಟ್ಟಿಲ್ಲ. ಬಿಗಿಯಾಗಿ ಹಿಡಿದುಕೊಂಡೇ ಇದ್ದೆ. ರಾತ್ರಿ ಇಡೀ ಉಸಿರಾಡಲು ಕಷ್ಟ ಪಡುತ್ತಿದ್ದರು. ಅಮ್ಮನ ಬಿಟ್ಟು ಹೇಗಿರುವುದು ಅಂತಲೇ ಗೊತ್ತಾಗುತ್ತಿಲ್ಲ. I am not okay'ಎಂದು ಕಣ್ಣೀರಿಟ್ಟಿದ್ದರು.
'ಅಮ್ಮ ನನ್ನ ನೀನು ಯಾಕೆ ಬಿಟ್ಟು ಹೋದೆ ನೀನು ಇಲ್ಲದೆ ನನಗೆ ಜೀವನವಿಲ್ಲ ನಿನ್ನ ಬಿಟ್ಟು ನನಗೆ ಬದುಕಕ್ಕೆ ಬರೋದು ಇಲ್ಲ 24 ಗಂಟೆ ನಿನ್ನ ಜೊತೇನೆ ಇರುತ್ತಿದ್ದೆ ಈಗ ನಾನು ಏನು ಮಾಡಲಿ ಎಲ್ಲಿ ಹೋಗಲಿ ಯಾರಿಗೋಸ್ಕರ ವಾಪಸ್ ಮನೆಗೆ ಬರಲಿ ನೀನು ನನ್ನ ಯಾಕೆ ಬಿಟ್ಟು ಹೋದೆ ನನ್ನ ಇಡೀ ಜೀವನಕ್ಕೆ ಅರ್ಥವಿಲ್ಲದೆ ಆಯ್ತು ನನ್ನ ಇಡೀ ಜೀವನವೇ ನೀನಾಗಿದ್ದೆ ನನ್ನ ಯಾಕೆ ಬಿಟ್ಟು ಹೋದೆ' ಎಂದು ಶುಭಾ ಆ ಸಮಯದಲ್ಲಿ ಬರೆದುಕೊಂಡಿದ್ದರು.


