ಖ್ಯಾತ ನಟ ಸಾಯಿಕುಮಾರ್ ಅವರ ಸೂಪರ್ ಹಿಟ್ ಚಿತ್ರಗಳಾದ ಪೊಲೀಸ್ ಸ್ಟೋರಿ ಮತ್ತು ಅಗ್ನಿ ಐಪಿಎಸ್ ಚಿತ್ರಗಳಿಗೆ ಕಥೆ ಬರೆದ ನಿರ್ದೇಶಕ ಎಸ್.ಎಸ್. ಡೇವಿಡ್ ಇನ್ನಿಲ್ಲ. ಹೃದಯಾಘಾತದಿಂದ ನಿಧನರಾದ ಅವರ ಅಂತ್ಯಕ್ರಿಯೆಗೆ ಕುಟುಂಬಸ್ಥರು ಬಾರದೆ ಮೃತದೇಹವನ್ನು ಆಸ್ಪತ್ರೆಯಲ್ಲಿಯೇ ಇಡಲಾಗಿದೆ.
ಬೆಂಗಳೂರು (ಸೆ.1): ನಟ ಸಾಯಿಕುಮಾರ್ (sai Kumar) ತಮ್ಮದೇ ಆದ ಸ್ಟೈಲ್‌ನಲ್ಲಿ ಖಡಕ್ ಆಗಿ ಹೇಳುವ ಪೊಲೀಸ್ ಸ್ಟೋರಿ (Police Story), ಅಗ್ನಿ ಐಪಿಎಸ್ (Agni IPS) ಸಿನಿಮಾದ ಡೈಲಾಗ್‌ಗಳು ಇಂದಿಗೂ ಮೀಮ್ ಪೇಜ್‌ಗಳ ಮೂಲಕ ವೈರಲ್ ಆಗುತ್ತಲೇ ಇರುತ್ತದೆ. ಆದರೆ, ಸಾಯಿಕುಮಾರ್ ನಟನೆಯ ಅವರ ಚಿತ್ರ ಜೀವನದ ಸೂಪರ್‌ಡೂಪರ್ ಸಿನಿಮಾಗಳಿಗೆ ಕಥೆ ಬರೆದಿದ್ದ ಕನ್ನಡದ ನಿರ್ದೇಶಕ ಎಸ್‌ಎಸ್ ಡೇವಿಡ್ (SS David) ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆದರೆ, ಇವರ ದೇಹವನ್ನು ಮಣ್ಣು ಮಾಡಲು ಕೂಡ ತನ್ನವರು ಅಂತಾ ಯಾರೂ ಇಲ್ಲದಂತಾಗಿದೆ. ಸಾಯಿಕುಮಾರ್ ಅಲ್ಲದೆ, ದರ್ಶನ್ ನಟನೆಯ ಮಂಡ್ಯ, ಸುದೀಪ್ ನಟನೆಯ ತಿರುಪತಿ ಚಿತ್ರಗಳಿಗೆ ಡೇವಿಡ್ ಸಂಭಾಷಣೆ ಬರೆದಿದ್ದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತದೇಹ
ಪೊಲೀಸ್ ಸ್ಟೋರಿ ಹಾಗೂ ಅಗ್ನಿ ಐಪಿಎಸ್ ಸಿನಿಮಾಗಳಿಗೆ ಕಥೆ ಬರೆದಿದ್ದ ಎಸ್‌ಎಸ್ ಡೇವಿಡ್ ಬಳಿಕ ಧೈರ್ಯ ಹಾಗೂ ಹಾಯ್ ಬೆಂಗಳೂರು ಹೆಸರಿನ ಸಿನಿಮಾಗಳ ನಿರ್ದೇಶನವನ್ನೂ ಮಾಡಿದ್ದರು. ಇದರ ನಡುವೆ ಅವರು ಬಿಗ್ ಬಜೆಟ್‌ನ ಸಿನಿಮಾ ಮಾಡುವ ಕನಸು ಕಂಡು ಮುಂಬೈನಿಂದ ರೈಟರ್‌ಗಳನ್ನು ಕರೆಸುವ ಇರಾದೆಯಲ್ಲಿದ್ದರು. ಆದರೆ, ಆಗಸ್ಟ್ 31 ರಂದು ಹೃದಯಾಘಾತದಿಂದ ಅವರು ಸಾವು ಕಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತದೇಹವಿದೆ. ಅವರ ಕುಟುಂಬದವರು ಬರದೇ ಮೃತದೇಹವನ್ನು ನೀಡಲು ಸಾಧ್ಯವಿಲ್ಲ ಎಂದು ಅಲ್ಲಿನ ಸಿಬ್ಬಂದಿ ಹೇಳಿದ್ದಾರೆ.

ಬ್ಯಾಚುಲರ್ ಆಗಿಯೇ ಬದುಕಿದ್ದ ಎಸ್‌ಎಸ್ ಡೇವಿಡ್
ಎಸ್‌ಎಸ್ ಡೇವಿಡ್ ಅವರು ಮದುವೆ ಆಗಿಲ್ಲ. ಬ್ಯಾಚುಲರ್ ಆಗಿಯೇ ಜೀವಿಸಿದ್ದು, ತಮ್ಮ ಮನೆಯಲ್ಲಿ ಎರಡು ನಾಯಿಗಳನ್ನು ಸಾಕಿಕೊಂಡಿದ್ದಾರೆ. ಅವುಗಳನ್ನೇ ತಮ್ಮ ಸರ್ವಸ್ವ ಎನ್ನುವ ರೀತಿಯಲ್ಲಿ ಸಾಕಿದ್ದರು. ಇರೋದು ಒಬ್ಬರೇ ಅಕ್ಕ. ಅವರು ಉಡುಪಿಯಲ್ಲಿ ವಾಸವಿದ್ದಾರೆ. ಎಸ್‌ಎಸ್ ಡೇವಿಡ್ ಅವರ ಸಾವಿನ ಸುದ್ದಿ ತಿಳಿಸಿದ ತಕ್ಷಣ, ನಮಗೆ ಬೆಂಗಳೂರಿಗೆ ಬರೋಕೆ ಆಗೋದಿಲ್ಲ. ಬೆಂಗಳೂರಿನಲ್ಲಿಯೇ ಎಲ್ಲಾ ಕಾರ್ಯವನ್ನು ಮಾಡಿ ಎಂದು ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ. ಇನ್ನು ಎಸ್‌ಎಸ್ ಡೇವಿಡ್ ಅವರ ಕುಟುಂಬದವರು ಇದ್ದಾರೆ. ಹಾಗಾಗಿ ಅವರು ಬಂದಲ್ಲಿ ಮಾತ್ರವೇ ಮೃತದೇಹ ಹಸ್ತಾಂತರ ಮಾಡಲಾಗುತ್ತದೆ ಎಂದು ಸಿಬ್ಬಂದಿ ತಿಳಿಸಿದ್ದು, ಪಾರ್ಥೀವ ಶರೀರವನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿಯೇ ಇಡಲಾಗಿದೆ.
ಎಸ್‌ಎಸ್ ಡೇವಿಡ್‌ಗೆ ಆಗಿದ್ದೇನು?
ಆಗಸ್ಟ್ 31ರ ಸಂಜೆ ಮೆಡಿಕಲ್ ಶಾಪ್‌ಗೆ ತೆರಳಿದ್ದ ಎಸ್‌ಎಸ್ ಡೇವಿಡ್, ವಾಪಾಸ್ ಬರುವಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅವರನ್ನು ತಕ್ಷಣವೇ ಆರ್‌ಆರ್ ನಗರದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಹೃದಯಾಘತಕ್ಕೆ ಒಳಗಾಗಿದ್ದ ಅವರು 7.30ರ ವೇಳೆಗೆ ಸಾವು ಕಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದರು.
ಸಂಪರ್ಕಕ್ಕೆ ಸಿಗ್ತಾ ಇರ್ಲಿಲ್ಲ ಎಂದ ಥ್ರಿಲ್ಲರ್ ಮಂಜು
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕನ್ನಡದ ಹಿರಿಯ ಸ್ಟಂಟ್ ಮಾಸ್ಟರ್ ಥ್ರಿಲ್ಲರ್ ಮಂಜು "ಸದ್ಯ ನಾವು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇದ್ದೀವಿ. ಡೇವಿಡ್ ಅವರ ಫ್ಯಾಮಿಲಿ ಅವರು ಯಾರು ಇಲ್ಲ. ಮದುವೆ ಆಗಿರಲಿಲ್ಲ. ಚಿಕ್ಕಮ್ಮನ ಮಗಳು ಮಾತ್ರ ಕಾಪುವಿನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ಡೇವಿಡ್ ಒಬ್ಬರೇ ನೆಲೆಸಿದ್ದರು" ಎಂದು ಹೇಳಿದ್ದಾರೆ.
ನನ್ನ ಸಾಕಷ್ಟು ಸಿನಿಮಾದಲ್ಲಿ ಡೇವಿಡ್ ಕೆಲಸ ಮಾಡಿದ್ದಾರೆ. 'ಪೊಲೀಸ್ ಸ್ಟೋರಿ' ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದಿದ್ದರು. 'ಅಗ್ನಿ ಐಪಿಎಸ್' ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ರು. 'ಓಂ ನಮಃ ಶಿವಾಯ' ಚಿತ್ರದಲ್ಲಿ ಆಕ್ಟಿಂಗ್ ಮಾಡಿದ್ರು. ಕಥೆ ಮಾಡಿದ್ರು. ಅವರ ನಿರ್ದೇಶನದಲ್ಲಿ 'ಪೊಲೀಸ್ ಡಾಗ್', 'ಸುಪಾರಿ' ಚಿತ್ರಗಳಲ್ಲಿ ನಾನು ನಟಿಸಿದ್ದೆ. 'ಪೊಲೀಸ್ ಸ್ಟೋರಿ- 2' ಚಿತ್ರಕ್ಕೂ ಕಥೆ ಬರೆದಿದ್ದರು. ಬಳಿಕ ಬಹಳ ವರ್ಷ ಗ್ಯಾಪ್ ಆಗಿತ್ತು. 2010ರ ಬಳಿಕ ಅವರ ಸಂಪರ್ಕ ಇದ್ದಿರಲಿಲ್ಲ. 3 ವರ್ಷದ ಹಿಂದೆ ಒಮ್ಮೆ ಭೇಟಿ ಆಗಿದ್ದೆ' ಎಂದು ಹೇಳಿದ್ದಾರೆ.
ಪದೇ ಪದೇ ಅವರು ತಮ್ಮ ಫೋನ್ ನಂಬರ್ ಬದಲಿಸುತ್ತಿದ್ದ ಕಾರಣಕ್ಕೆ ಅವರನ್ನು ಸಂಪರ್ಕಿಸೋದೇ ಕಷ್ಟವಾಗುತ್ತಿತ್ತು. ಡೇವಿಡ್ ಅವರ ಸಹೋದರಿ ಒಂದು ವಿಡಿಯೋವನ್ನು ಪೊಲೀಸರಿಗೆ ಕಳಿಸಿದ್ದು, ತಾವು ಉಡುಪಿಯಿಂದ ಬರೋಕೆ ಸಾಧ್ಯವಿಲ್ಲ ಎಂದಿದ್ದಾರೆ. ಈಗಾಗಲೇ ಕೆಲವರಿಗೆ ಇದರ ಬಗ್ಗೆ ಮಾಹಿತಿ ನೀಡಿದ್ದೇನೆ. ಅಂತಿಮ ವಿಧಿವಿಧಾನ ನೋಡಿಕೊಳ್ಳುತ್ತಾರೆ ಎಂದಿದ್ದಾರೆ. ಕಾನೂನು ಪ್ರಕ್ರಿಯೆ ಬಳಿಕ ಪಾರ್ಥೀವ ಶರೀರ ಸಿಗುತ್ತದೆ. ಕ್ರಿಶ್ಚಿಯನ್ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಬಹುದು" ಎಂದು ಮಾಹಿತಿ ನೀಡಿದ್ದಾರೆ.
ಅಕ್ಕ ಬರೋದಿಲ್ಲ ಅಂದಿದ್ದು ಯಾಕೆ?
ಎಸ್ ಎಸ್ ಡೇವಿಡ್ ಅವರ ತಾಯಿ ಇದ್ದರು. ಕೆಲವು ವರ್ಷಗಳ ಹಿಂದೆ ಅವರು ಸಾವೂ ಕಂಡಿದ್ದಾರೆ. ಇದ್ದವರೊಬ್ಬರು ಅಕ್ಕ ಮಾತ್ರ. ಅವರು ಎದ್ದು ಓಡಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಹಾಗಾಗಿ ಬರೋಕೆ ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ ಎಂದು ಥ್ರಿಲ್ಲರ್ ಮಂಜು ಹೇಳಿದ್ದಾರೆ.


