ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ನಿಯಂತ್ರಣವಿಲ್ಲದೆ ವ್ಯಕ್ತಿಗತ ನಿಂದನೆ, ಚಾರಿತ್ರ್ಯಹರಣ, ತೇಜೋವಧೆ, ಪ್ರಚೋದನೆ, ಕೊಲೆಗಳಿಗೆ ಪ್ರಚೋದನೆ, ಹಿಂಸೆಗಳಿಗೆ ಪ್ರಚೋದನೆ, ಶಾಂತಿಗೆ ದಕ್ಕೆ ಪ್ರಕರಣಗಳನ್ನು ನಿರಂತರವಾಗಿ ಕಾಣುತ್ತಿದ್ದೇವೆ.
- ರಮೇಶ್ ಬಾಬು, ವಿಧಾನ ಪರಿಷತ್ ಸದಸ್ಯರು
ದ್ವೇಷ ಭಾಷಣದ ಪ್ರಸಾರ, ಪ್ರಕಟಣೆ ಅಥವಾ ಪ್ರಚಾರ, ನಿರ್ದಿಷ್ಟ ವ್ಯಕ್ತಿ ಅಥವಾ ವ್ಯಕ್ತಿಗಳ ಸಮೂಹ ಅಥವಾ ಸಂಸ್ಥೆಗಳ ವಿರುದ್ಧ ಅಸಾಮರಸ್ಯ ದ್ವೇಷ ಹುಟ್ಟಿಸುವಂಥ ಅಪರಾಧಗಳನ್ನು ಪ್ರತಿಬಂಧಿಸಲು ಮತ್ತು ತಡೆಗಟ್ಟಲು ಹಾಗೂ ಅಂಥ ಅಪರಾಧಗಳಿಗೆ ದಂಡನೆ ವಿಧಿಸಲು, ಸಂತ್ರಸ್ತರಿಗೆ ಪರಿಹಾರ ಒದಗಿಸಲು ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕಕ್ಕೆ ಕರ್ನಾಟಕ ವಿಧಾನ ಮಂಡಲದಲ್ಲಿ ಅನುಮೋದಿಸಲಾಗಿದೆ. ಈ ವಿಧೇಯಕದ ಪ್ರಕಾರ ದ್ವೇಷ ಭಾಷಣ, ಪೂರ್ವಕಲ್ಪಿತ ಹಿತಾಸಕ್ತಿ, ದ್ವೇಷ ಅಪರಾಧ, ಸಂವಹನ ಇತ್ಯಾದಿಗಳ ಪರಿಭಾಷೆಯ ವಿಶ್ಲೇಷಣೆ ಮಾಡಲಾಗಿದೆ. ದ್ವೇಷ ಅಪರಾಧಕ್ಕಾಗಿ ಅಧಿನಿಯಮದಡಿ ಈ ಅಪರಾಧಗಳು ಸಂಜ್ಞೆಯ (cognizable) ಅಪರಾಧವಾಗಿದ್ದು, ಜಾಮೀನು ರಹಿತವಾಗಿರುತ್ತದೆ.
ಪ್ರಥಮ ದರ್ಜೆ ನ್ಯಾಯಾಧೀಶರ ಮುಖಾಂತರ ಅಪರಾಧಗಳು ವಿಚಾರಣೆಗೆ ಒಳಗಾಗುತ್ತವೆ. ವಿದ್ಯುನ್ಮಾನ ಅಥವಾ ಯಾವುದೇ ರೂಪದಲ್ಲಿರುವ ಪುಸ್ತಕ, ಕರಪತ್ರ, ಕಾಗದ ಬರಹ, ರೇಖಾಚಿತ್ರ, ವರ್ಣಚಿತ್ರ ರೂಪಕ ಅಥವಾ ಚಿತ್ರಗಳ ಪ್ರಕಟಣೆ, ವಿಜ್ಞಾನ, ಸಾಹಿತ್ಯ, ಕಲೆ ಅಥವಾ ಕಲಿಕೆ ಅಥವಾ ಸಾಮಾನ್ಯ ವಿಷಯಕ್ಕೆ ಸಂಬಂಧಿಸಿದ ಉದ್ದೇಶಗಳ ಹಿತಾಸಕ್ತಿ ಆಧಾರದ ಮೇಲೆ ಅಪರಾಧಗಳನ್ನು ವ್ಯಾಖ್ಯಾನಿಸಲಾಗಿರುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಆಡಳಿತ ವ್ಯವಸ್ಥೆ ತೆಗೆದುಕೊಳ್ಳಬೇಕಾದ ಪ್ರತಿಬಂಧಕ ಕ್ರಮಗಳಿಗೆ ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿರುತ್ತದೆ.
ಸುಪ್ರೀಂ ಕೋರ್ಟ್ ಕೂಡ ಹೇಳಿದೆ: ಇತ್ತೀಚೆಗೆ ಭಾರತದ ಸಾಮಾಜಿಕ, ರಾಜಕೀಯ ವಲಯದಲ್ಲಿ ವ್ಯಕ್ತಿನಿಂದಿತ ದ್ವೇಷಪೂರಿತ ಹೇಳಿಕೆಗಳು ಮತ್ತು ಕೀಳು ಪದ ಪ್ರಯೋಗಗಳು, ಕೋಮುದಳ್ಳುರಿಗೆ ಉತ್ತೇಜನ ನೀಡುವಂಥ ಪ್ರಚೋದನಾಕಾರಿ ಹೇಳಿಕೆಗಳು ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಲು ಈ ಕಾಯಿದೆಯ ಅವಶ್ಯಕತೆ ಇದೆ. ಸುಪ್ರೀಂ ಕೋರ್ಟ್ ಕೂಡ ಹಲವು ಪ್ರಕರಣಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದ್ವೇಷ ಪೂರಿತ ಭಾಷಣ ತಡೆಯುವ ಕಾನೂನು ರಚಿಸುವಂತೆ ಹೇಳಿದೆ. ಪೊಲೀಸರು ಇಂಥ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು ಮತ್ತು ಕಟ್ಟುನಿಟ್ಟು ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಪಷ್ಟವಾಗಿ ತಿಳಿಸಿದೆ.
ಸಂವಿಧಾನ ನೀಡಿರುವಂಥ ಅಭಿವ್ಯಕ್ತಿ ಸ್ವಾತಂತ್ರ್ಯ ಉಪಯೋಗಿಸಿಕೊಂಡು ಸಮಾಜದ ಆರೋಗ್ಯ ಕೆಡಿಸುವಂತಹ ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂಥ ಯಾವುದೇ ಪ್ರಯತ್ನವನ್ನು ವ್ಯಕ್ತಿಯಾಗಲಿ ಅಥವಾ ಸಂಘ-ಸಂಸ್ಥೆಗಳಾಗಲಿ ಅಥವಾ ಸಮುದಾಯ, ಸಂಘಟನೆಗಳಾಗಲಿ ಅಥವಾ ಧಾರ್ಮಿಕ ಸಂಘಟನೆಗಳಾಗಲಿ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಆದರೆ ಚುನಾವಣಾ ಸಂದರ್ಭದಲ್ಲಿ, ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭ ಸೇರಿ ಬೇರೆ ಬೇರೆ ಸಂದರ್ಭದಲ್ಲಿ ಪ್ರಚೋದನಕಾರಿ ಹೇಳಿಕೆ, ಪದ ಬಳಕೆ, ಭಾಷೆ ಬಳಕೆ ಮುಖಾಂತರ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.
ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ನಿಯಂತ್ರಣವಿಲ್ಲದೆ ವ್ಯಕ್ತಿಗತ ನಿಂದನೆ, ಚಾರಿತ್ರ್ಯಹರಣ, ತೇಜೋವಧೆ, ಪ್ರಚೋದನೆ, ಕೊಲೆಗಳಿಗೆ ಪ್ರಚೋದನೆ, ಹಿಂಸೆಗಳಿಗೆ ಪ್ರಚೋದನೆ, ಶಾಂತಿಗೆ ದಕ್ಕೆ ಪ್ರಕರಣಗಳನ್ನು ನಿರಂತರವಾಗಿ ಕಾಣುತ್ತಿದ್ದೇವೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲೆಯೇ ಆರೋಪಗಳು ಅಥವಾ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ನಿಯಂತ್ರಣವಿಲ್ಲದೆ ನಡೆಯುತ್ತಿದೆ. ಇವುಗಳಿಂದ ಸಮಾಜದ ಶಾಂತಿ ಸುವ್ಯವಸ್ಥೆಗೆ ತೊಂದರೆಯಾಗುತ್ತಿದ್ದು, ಇವುಗಳನ್ನು ನಿಯಂತ್ರಿಸಲು ಕಾನೂನು ಅವಶ್ಯಕತೆ ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ನ್ಯಾಯಾಲಯದ ಆದೇಶ ಮತ್ತು ತೀರ್ಪುಗಳಿಗೆ ಅನುಗುಣವಾಗಿ ಆರೋಗ್ಯಕರ ಸಮಾಜದ ಪರಿಕಲ್ಪನೆಯಲ್ಲಿ ಕರ್ನಾಟಕದಲ್ಲಿ ಜಾರಿಗೆ ಬಂದಿರುವ ಈ ಮಸೂದೆಯನ್ನು ಬಿಜೆಪಿ ನಾಯಕರು ಯಾವುದೇ ಸೈದ್ಧಾಂತಿಕ ನೆಲೆಗಟ್ಟು ಇಲ್ಲದೆ ವ್ಯಕ್ತಿಗತ ಹಿನ್ನೆಲೆಯಲ್ಲಿ ಟೀಕಿಸಲು ಮುಂದಾಗಿರುವುದು ಅವರ ಪಲಾಯನವಾದವನ್ನು ತೋರಿಸುತ್ತದೆ.
ಸುಪ್ರೀಂ ಆದೇಶಗಳಿಗೆ ಅನುಗುಣವಾಗಿದೆ
ಕರ್ನಾಟಕದಲ್ಲಿ ಜಾರಿಗೆ ತರುತ್ತಿರುವ ದ್ವೇಷ ಭಾಷಣ ಮಸೂದೆ ಸುಪ್ರೀಂ ಕೋರ್ಟ್ನ ಆದೇಶಗಳಿಗೆ ಅನುಗುಣವಾಗಿದೆ. ಇಂಥ ಕಾಯ್ದೆಯನ್ನು ತಮ್ಮ ಚಪಲಕ್ಕಾಗಿ ಟೀಕಿಸುತ್ತಿರುವ ಬಿಜೆಪಿ ಯಾವುದೇ ಮೂಲಭೂತ ಪ್ರಶ್ನೆಗಳನ್ನು ಜನರ ಮುಂದೆ ಇಡಲು ವಿಫಲವಾಗಿರುತ್ತದೆ. ತುರ್ತು ಪರಿಸ್ಥಿತಿ ಸಂದರ್ಭ ನೆಪ ಮಾಡಿಕೊಂಡು ಬಿಜೆಪಿ ಪದೇ ಪದೆ ಕಾಂಗ್ರೆಸ್ ಮೇಲೆ ಆರೋಪ ಮಾಡುವ ವ್ಯರ್ಥ ಪ್ರಯತ್ನ ಮಾಡುತ್ತದೆ. ಆದರೆ ದೇಶದಲ್ಲಿ ಇಂದು ಅಘೋಷಿತ ತುರ್ತು ಪರಿಸ್ಥಿತಿ ವಾತಾವರಣ ನಿರ್ಮಾಣವಾಗಿರುವ ಟೀಕೆಗಳಿಗೆ ಉತ್ತರಿಸದೆ ಪಲಾಯನ ಮಾಡುತ್ತದೆ.
ದೇಶದ ಮೂಲಭೂತ ಆಶಯಗಳಿಗೆ ಅನುಗುಣವಾಗಿ ಇಲ್ಲಿನ ಸಂಸ್ಕೃತಿ, ಸಂವಿಧಾನದ ಬೇರುಗಳನ್ನು ರಕ್ಷಿಸಲು ದ್ವೇಷ ಭಾಷಣ ಕಾಯ್ದೆಯ ಅನಿವಾರ್ಯತೆಯನ್ನು ಸುಪ್ರೀಂ ಕೋರ್ಟ್ ಸಾರಿರುವಾಗ ಅದನ್ನು ಟೀಕಿಸಲು ಬಿಜೆಪಿಗೆ ಯಾವುದೇ ನೈತಿಕತೆ ಇಲ್ಲ. ಬೆಳಗಾವಿ ಅಧಿವೇಶನದಲ್ಲಿ ಮಸೂದೆಗಳ ಮೇಲೆ ಕನಿಷ್ಠ ಆರೋಗ್ಯಕರ ಚರ್ಚೆಗೆ ಅವಕಾಶ ನೀಡದ ಬಿಜೆಪಿ, ತುರ್ತು ಪರಿಸ್ಥಿತಿ ಹೆಸರಿನಲ್ಲಿ ಮಾಧ್ಯಮಗಳ ಮುಂದೆ ಮಸೂದೆ ಟೀಕಿಸುವ ವ್ಯರ್ಥ ಯತ್ನ ಮಾಡಿದೆ. ಈ ಕಾಯ್ದೆ ಜನಪರವಾಗಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಪ್ರತಿಪಾದಿಸುವ ಮತ್ತು ಅದರ ದುರುಪಯೋಗವನ್ನು ತಡೆಯುವ ಉತ್ತಮ ಕಾಯಿದೆ. ಉದ್ದೇಶಿತ ಮಸೂದೆ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ (NBDSA) ದ್ವೇಷ ಭಾಷಣ ತಡೆಗಟ್ಟಲು ನೀಡಿರುವ ನಿಯಮಾವಳಿಗಳಿಗೆ ಪೂರಕವಾಗಿದೆ.


