ಕನ್ನಡ ಮತ್ತು ಇತರ ದ್ರಾವಿಡ ನುಡಿಗಳ ಶಬ್ದಕೋಶ ಮತ್ತು ವ್ಯಾಕರಣಗಳ ಮೇಲೆ ಸಂಸ್ಕೃತದ ಪ್ರಭಾವವಿದೆ ಎಂಬುದು ನಿಜ. ಅಂದಮಾತ್ರಕ್ಕೆ ಕನ್ನಡ ಹುಟ್ಟಿದ್ದು ಸಂಸ್ಕೃತದಿಂದ ಅಲ್ಲ.

-ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ.

ಕನ್ನಡ ಮತ್ತು ಇತರ ದ್ರಾವಿಡ ನುಡಿಗಳ ಶಬ್ದಕೋಶ ಮತ್ತು ವ್ಯಾಕರಣಗಳ ಮೇಲೆ ಸಂಸ್ಕೃತದ ಪ್ರಭಾವವಿದೆ ಎಂಬುದು ನಿಜ. ಅಂದಮಾತ್ರಕ್ಕೆ ಕನ್ನಡ ಹುಟ್ಟಿದ್ದು ಸಂಸ್ಕೃತದಿಂದ ಅಲ್ಲ. ಕನ್ನಡ ನುಡಿ ಬೆಳೆದು ಹೆಮ್ಮರವಾದ ಮೇಲೆಯೇ ಸಂಸ್ಕೃತದ ಪದಗಳು ಕನ್ನಡದ ಒಳಗೆ ನುಸುಳಿಕೊಂಡಿದ್ದು. ಇದಕ್ಕೆ ಆಯಾ ಕಾಲದಲ್ಲಿ ಕನ್ನಡ ಸಾಹಿತ್ಯವನ್ನು ಬರೆದವರ ಮೇಲೆ ಇದ್ದ ಸಂಸ್ಕೃತದ ಪ್ರಭಾವ ಕಾರಣವಿರಬಹುದು.

ಚಲನಚಿತ್ರ ನಟ,‌ ರಾಜಕಾರಣಿ ಕಮಲ್‌ ಹಾಸನ್ ತಮ್ಮ ಥಗ್‌ ಲೈಫ್‌ ಎನ್ನುವ ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ, ಕನ್ನಡವು ತಮಿಳಿನಿಂದ ಹುಟ್ಟಿದ ನುಡಿ ಎಂದು ಅತ್ಯಂತ ಬೇಜಾವ್ದಾರಿಯಿಂದ ಹೇಳಿದ್ದಾರೆ. ಇದೊಂದು ಬಗೆಯ ಬಾಯಿ ಚಪಲದ ಹೇಳಿಕೆ. ಕನ್ನಡವು ತಮಿಳಿನಿಂದ ಹುಟ್ಟಿದೆ ಎಂಬುದಕ್ಕೆ ಕಮಲ್‌ ಹಾಸನ್‌ ಅವರ ಬಳಿ ಯಾವ ಸಾಕ್ಷ್ಯ ಇದೆ ಎಂಬುದನ್ನು ಅವರು ಹೇಳಿಲ್ಲ. ಇದನ್ನು ಅವರಿಗೆ ಹೇಳಿದವರು ಯಾರು ಎನ್ನುವುದೂ ಸಹ ಗೊತ್ತಿಲ್ಲ. ಕಮಲ್‌ ಹಾಸನ್‌ ರಂಥ ಸಿನಿಮಾ ನಟರು ಇಂಥ ಅಜ್ಞಾನದ ಹೇಳಿಕೆ ನೀಡಿ ಬೌದ್ಧಿಕವಾಗಿ ಬೆತ್ತಲಾಗುವುದನ್ನು ನೋಡಿದಾಗ ಬೇಸರವಾಗುತ್ತದೆ.

ಈ ರೀತಿಯ ಹೇಳಿಕೆಗಳನ್ನು ನಾವು ಹಿಂದೆಯೂ ಗಮನಿಸಿದ್ದೇವೆ. ಕೆಲವು ಸಾಹಿತಿಗಳು, ರಾಜಕಾರಣಿಗಳು ʻಸಂಸ್ಕೃತವು ಎಲ್ಲ ಭಾರತೀಯ ನುಡಿಗಳ ತಾಯಿʼ ಎಂದು ಘೋಷಿಸಿದ್ದರು. ಹೀಗೆ ಮಾತನಾಡುವವರು ತಮ್ಮ ಮಾತುಗಳಿಗೆ ಯಾವುದೇ ಆಧಾರವನ್ನು ನೀಡುವುದಿಲ್ಲ. ಇದ್ದಕ್ಕಿದ್ದಂತೆ ಕನ್ನಡ ನುಡಿಗೆ ಒಬ್ಬ ತಾಯಿಯನ್ನೋ, ತಂದೆಯನ್ನೋ ದಿಢೀರನೆ ಹುಟ್ಟಿಸಿಬಿಡುತ್ತಾರೆ. ಇದನ್ನು ಹುಚ್ಚಾಟವೆನ್ನದೆ ಬೇರೆ ದಾರಿಯಿಲ್ಲ. ಇವರ ಉದ್ದೇಶ ಸ್ಪಷ್ಟ, ಎಲ್ಲ ಭಾರತೀಯ ನುಡಿಗಳನ್ನೂ ಸಂಸ್ಕೃತದ ಎದುರು ನಿಲ್ಲಿಸಿ ಅಪಮಾನಿಸುವುದು, ಆ ನುಡಿಗಳನ್ನಾಡುವ ಜನರಲ್ಲಿ ಕೀಳರಿಮೆ ಹುಟ್ಟಿಸುವುದು.

ಮೊದಲು ಸಂಸ್ಖೃತವನ್ನು ಅಮ್ಮ ಎನ್ನುವವರ ವಾದಗಳ ಕುರಿತು ಒಂದಷ್ಟು ಚರ್ಚಿಸೋಣ. ಇದುವರೆಗೆ ಸಾಬೀತಾಗಿರುವ, ಎಲ್ಲರಿಗೂ ಒಪ್ಪಿತವಾಗಿರುವ ಅಧ್ಯಯನಗಳ ಪ್ರಕಾರ ಕನ್ನಡ ಭಾಷೆಯು ಪ್ರೋಟೋ-ದ್ರಾವಿಡ ಭಾಷಾ ಕುಟುಂಬದಿಂದ ಹುಟ್ಟಿದೆ ಎಂಬುದು ಸ್ಪಷ್ಟ. ಇದನ್ನು ಸುಳ್ಳು ಎಂದು ಹೇಳುವ ಯಾವುದೇ ಸ್ವರೂಪದ ಸಂಶೋಧನೆಯೂ ಇದುವರೆಗೆ ನಡೆದಿಲ್ಲ. ಬಹುಶಃ ಅದು ಸಾಧ್ಯವೂ ಇಲ್ಲ.

ಕನ್ನಡ ಭಾಷೆಯ ಉಗಮ: ಪ್ರೋಟೋ-ದ್ರಾವಿಡ ಭಾಷಾ ಕುಟುಂಬ ಕನ್ನಡ ಭಾಷೆಯು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದೆ, ಕನ್ನಡ ಮಾತ್ರವಲ್ಲ, ತಮಿಳು, ತೆಲುಗು, ಮಲಯಾಳಂ, ತುಳು ಮುಂತಾದ ದಕ್ಷಿಣ ಭಾರತೀಯ ನುಡಿಗಳು ಇದೇ ಭಾಷಾ ಕುಟುಂಬಕ್ಕೆ ಸೇರಿವೆ. 19ನೇ ಶತಮಾನದ ಖ್ಯಾತ ಭಾಷಾಶಾಸ್ತ್ರಜ್ಞ ರಾಬರ್ಟ್ ಕಾಲ್ಡ್ವೆಲ್ ತಮ್ಮ ಕೃತಿ ‘A Comparative Grammar of the Dravidian or South-Indian Family of Languages’ (1856)ನಲ್ಲಿ ದ್ರಾವಿಡ ಭಾಷೆಗಳಾದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸಂಪೂರ್ಣ ಭಿನ್ನವಾದ ಭಾಷಾ ಕುಟುಂಬಕ್ಕೆ ಸೇರಿವೆ, ಸಂಸ್ಕೃತ ನುಡಿಯ ಇಂಡೋ-ಆರ್ಯನ್ ಭಾಷಾ ಕುಟುಂಬದಿಂದ ಸಂಪೂರ್ಣವಾಗಿ ಸ್ವತಂತ್ರವಾಗಿವೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಪ್ರೋಟೋ-ದ್ರಾವಿಡ ಭಾಷೆಯು ಕ್ರಿ.ಪೂ. 4ನೇ ಸಹಸ್ರಮಾನದಿಂದ ಭಾರತದ ವಿವಿಧ ಭಾಗಗಳಲ್ಲಿ ಮಾತನಾಡಲ್ಪಟ್ಟಿತು ಎಂದು ಭಾಷಾಶಾಸ್ತ್ರಜ್ಞ ಭದ್ರಿರಾಜು ಕೃಷ್ಣಮೂರ್ತಿಯವರ ‘Dravidian Languages’ (2003) ಕೃತಿಯಲ್ಲಿ ತಿಳಿಸಲಾಗಿದೆ. ಈ ಭಾಷೆಯು ಕ್ರಿ.ಪೂ. 3ನೇ ಸಹಸ್ರಮಾನದಲ್ಲಿ ಉತ್ತರ, ಮಧ್ಯ ಮತ್ತು ದಕ್ಷಿಣ ದ್ರಾವಿಡ ಶಾಖೆಗಳಾಗಿ ವಿಭಾಗವಾಯಿತು. ಕನ್ನಡವು ದಕ್ಷಿಣ ದ್ರಾವಿಡ ಶಾಖೆಗೆ ಸೇರಿದೆ. ತಮಿಳು ಸಹ ಇದೇ ದಕ್ಷಿಣ ದ್ರಾವಿಡ ಶಾಖೆಗೆ ಸೇರಿದೆ. ಇದನ್ನು ಭಾಷಾಶಾಸ್ತ್ರಜ್ಞರು ‘ಪ್ರೋಟೋ-ತಮಿಳು-ಕನ್ನಡ’ (Proto-Tamil-Kannada) ಎಂದು ಕರೆಯುತ್ತಾರೆ. ಈ ಸಾಮಾನ್ಯತೆಯು ಕನ್ನಡ ಮತ್ತು ತಮಿಳು ಭಾಷೆಗಳ ಸಮಾನಾಂತರ ವಿಕಾಸವನ್ನು ಸೂಚಿಸುತ್ತದೆ.

ಉದಾಹರಣೆಗೆ, ಕನ್ನಡದ ‘ಕಾಯಿ’ (ಫಲ) ಮತ್ತು ತಮಿಳಿನ ‘ಕಾಯ್’ ಶಬ್ದಗಳು ಪ್ರೋಟೋ-ದ್ರಾವಿಡ ಶಬ್ದ ‘kāy’ ನಿಂದ ಉಗಮವಾಗಿವೆ, ಇದು ಸಂಸ್ಕೃತದಲ್ಲಿ ಕಂಡುಬರುವುದಿಲ್ಲ. ಹೀಗೆ ಕನ್ನಡ ಮತ್ತು ತಮಿಳು ಒಂದೇ ದ್ರಾವಿಡ ಶಾಖೆಗೆ ಸೇರಿದ್ದರೂ ಒಂದರಿಂದ ಒಂದು ಹುಟ್ಟಿದ್ದಲ್ಲ. ಎರಡೂ ಪ್ರತ್ಯೇಕವಾಗಿ ಬೆಳೆದು ಬಂದವುಗಳು. ಈ ಕನಿಷ್ಠ ತಿಳಿವಳಿಕೆ ಕಮಲ್‌ ಹಾಸನ್‌ ಅವರಿಗೆ ಇದ್ದಂತಿಲ್ಲ. ಸಂಸ್ಕೃತದ ಪ್ರಭಾವ: ಕನ್ನಡ ಮತ್ತು ಇತರ ದ್ರಾವಿಡ ನುಡಿಗಳ ಶಬ್ದಕೋಶ ಮತ್ತು ವ್ಯಾಕರಣಗಳ ಮೇಲೆ ಸಂಸ್ಕೃತದ ಪ್ರಭಾವವಿದೆ ಎಂಬುದು ನಿಜ. ಅಂದಮಾತ್ರಕ್ಕೆ ಕನ್ನಡ ಹುಟ್ಟಿದ್ದು ಸಂಸ್ಕೃತದಿಂದ ಅಲ್ಲ. ಕನ್ನಡ ನುಡಿ ಬೆಳೆದು ಹೆಮ್ಮರವಾದ ಮೇಲೆಯೇ ಸಂಸ್ಕೃತದ ಪದಗಳು ಕನ್ನಡದ ಒಳಗೆ ನುಸುಳಿಕೊಂಡಿದ್ದು. ಇದಕ್ಕೆ ಆಯಾ ಕಾಲದಲ್ಲಿ ಕನ್ನಡ ಸಾಹಿತ್ಯವನ್ನು ಬರೆದವರ ಮೇಲೆ ಇದ್ದ ಸಂಸ್ಕೃತದ ಪ್ರಭಾವ ಕಾರಣವಿರಬಹುದು.

ಸಂಸ್ಕೃತದಿಂದ ಎರವಲು ಪಡೆದ ಶಬ್ದಗಳು ಧಾರ್ಮಿಕ, ಆಡಳಿತಾತ್ಮಕ ಮತ್ತು ಸಾಹಿತ್ಯಿಕ ಕ್ಷೇತ್ರಗಳಿಗೆ ಸೀಮಿತವಾಗಿವೆ. ಇವತ್ತಿಗೂ ಗ್ರಾಮೀಣ ಭಾಗದ ಕನ್ನಡಿಗರ ಸೊಲ್ಲಿನಲ್ಲಿ ಸಂಸ್ಕೃತದ ಪದಗಳು ಕಾಣಿಸುವುದಿಲ್ಲ. ಕನ್ನಡದಲ್ಲಿ ‘ರಾಜ’ (ಸಂಸ್ಕೃತ: ರಾಜನ್), ‘ವಿದ್ಯಾ’ (ಸಂಸ್ಕೃತ: ವಿದ್ಯ) ಮತ್ತು ‘ದೇವ’ (ಸಂಸ್ಕೃತ: ದೇವ) ಶಬ್ದಗಳು ಸಂಸ್ಕೃತದಿಂದ ಎರವಲು ಪಡೆಯಲ್ಪಟ್ಟಿವೆ. ಆದರೆ, ಕನ್ನಡದ ಮೂಲ ಶಬ್ದಕೋಶ, ವ್ಯಾಕರಣ ಮತ್ತು ಸ್ವರವಿನ್ಯಾಸವು ದ್ರಾವಿಡ ಗುಣಲಕ್ಷಣಗಳನ್ನು ಉಳಿಸಿಕೊಂಡಿದೆ. ಕನ್ನಡದ ‘ನೀರ್’ (ನೀರು), ‘ತಿನ್’ (ತಿನ್ನು), ‘ಬೆಂಕಿ’ (ಅಗ್ನಿ) ಮುಂತಾದ ಶಬ್ದಗಳು ಪ್ರೋಟೋ-ದ್ರಾವಿಡ ಮೂಲದಿಂದ ಬಂದವು, ಇವು ಸಂಸ್ಕೃತದಿಂದ ಸ್ವತಂತ್ರವಾಗಿವೆ.

ಐತಿಹಾಸಿಕ ಸಾಕ್ಷ್ಯ: ಕನ್ನಡದ ಸ್ವತಂತ್ರ ವಿಕಾಸ ಕನ್ನಡ ಭಾಷೆಯ ಆರಂಭಿಕ ದಾಖಲೆಗಳು ಅದರ ಸ್ವತಂತ್ರ ವಿಕಾಸವನ್ನು ದೃಢೀಕರಿಸುತ್ತವೆ. ಕ್ರಿ.ಶ. 450ರ ಸುಮಾರಿನ ಹಲ್ಮಿಡಿ ಶಾಸನ ಕನ್ನಡದ ಆರಂಭಿಕ ಲಿಖಿತ ರೂಪವನ್ನು ಒದಗಿಸುತ್ತದೆ. ಈ ಶಾಸನವು ಬ್ರಾಹ್ಮಿ ಲಿಪಿಯಿಂದ ವಿಕಸನಗೊಂಡ ಕನ್ನಡ ಲಿಪಿಯನ್ನು ಬಳಸಿದ್ದು, ಕನ್ನಡದ ಸ್ವತಂತ್ರ ಆಡಳಿತಾತ್ಮಕ ಬಳಕೆಯನ್ನು ತೋರಿಸುತ್ತದೆ. ಇದಕ್ಕೂ ಮುಂಚಿನ ಮುದಿಯನೂರು ತಾಮ್ರದ ಫಲಕಗಳು (ಕ್ರಿ.ಶ.338) ಮತ್ತು ತಲಗುಂದದ ಕನ್ನಡ ಸಿಂಹದ ಕಂಬದ ಶಾಸನ (ಕ್ರಿ.ಶ.370) ಕನ್ನಡದ ಸ್ವತಂತ್ರ ಲಿಖಿತ ಸಂಪ್ರದಾಯವನ್ನು ಒತ್ತಿಹೇಳುತ್ತವೆ. ಈ ಶಾಸನಗಳು ಕನ್ನಡವು ಆಡಳಿತ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಬಳಕೆಯಾಗುತ್ತಿತ್ತು ಎಂಬುದನ್ನು ಸಾಬೀತುಪಡಿಸುತ್ತವೆ.

ಅಶೋಕನ ಶಾಸನಗಳಲ್ಲಿ (ಕ್ರಿ.ಪೂ. 3ನೇ ಶತಮಾನ) ಕಂಡುಬರುವ ‘ಇಸಿಲ’ ಎಂಬ ಕನ್ನಡ ಶಬ್ದವು ‘ಬಿಲ್ಲು ಎಸೆಯುವುದು’ ಎಂಬ ಅರ್ಥವನ್ನು ಹೊಂದಿದ್ದು, ಇದು ದ್ರಾವಿಡ ಮೂಲದ ಶಬ್ದವಾಗಿದೆ ಮತ್ತು ಸಂಸ್ಕೃತ ಅಥವಾ ಪ್ರಾಕೃತದಿಂದ ಎರವಲು ಪಡೆದಿಲ್ಲ. ಇದು ಕನ್ನಡ ಭಾಷೆಯ ಆರಂಭಿಕ ಉಪಸ್ಥಿತಿಯನ್ನು ಸೂಚಿಸುತ್ತದೆ. ಇದಲ್ಲದೆ, ಕನ್ನಡ ಸಾಹಿತ್ಯದ ಆರಂಭಿಕ ಕೃತಿಗಳಾದ ಕವಿರಾಜಮಾರ್ಗ (ಕ್ರಿ.ಶ. 850) ಕನ್ನಡದ ಸ್ವತಂತ್ರ ಸಾಹಿತ್ಯಿಕ ಸಂಪ್ರದಾಯವನ್ನು ತೋರಿಸುತ್ತದೆ. ಸಂಸ್ಕೃತಪ್ರಿಯರು ಇದನ್ನು ಒಪ್ಪಿಕೊಳ್ಳಲೇಬೇಕು.

ಕನ್ನಡವು ಸಂಸ್ಕೃತದಿಂದ ಉಗಮವಾಯಿತು ಅಥವಾ ತಮಿಳಿನಿಂದ ಹುಟ್ಟಿತು ಎಂಬ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿವೆಯೇ ಹೊರತು ಐತಿಹಾಸಿಕ ಸತ್ಯಗಳನ್ನು ಒಳಗೊಂಡಿಲ್ಲ. ಈ ಹೇಳಿಕೆಗಳು ಕನ್ನಡಿಗರ ನುಡಿ ಪರಂಪರೆ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಕೆಡಿಸುವ ಉದ್ದೇಶವನ್ನು ಹೊಂದಿದೆ. ಬಹಳಷ್ಟು ಮಂದಿ ಸಂಸ್ಕೃತವನ್ನು ‘ಎಲ್ಲಾ ಭಾಷೆಗಳ ತಾಯಿ‘ ಎಂದು ಘೋಷಿಸಿ, ದ್ರಾವಿಡ ಭಾಷೆಗಳ ಸ್ವತಂತ್ರ ಅಸ್ತಿತ್ವವನ್ನು ಅಲ್ಲಗೆಳೆಯಲು ಯತ್ನಿಸುತ್ತಾರೆ. ಕಮಲ್‌ ಹಾಸನ್‌ ರಂತವರು ಅಗ್ಗದ ಪ್ರಚಾರಕ್ಕೆ ಕನ್ನಡವು ತಮಿಳಿನಿಂದ ಹುಟ್ಟಿದೆ ಎಂದು ಕುಚೇಷ್ಟೆಯ ಹೇಳಿಕೆ ನೀಡುತ್ತಾರೆ. ಭಾರತೀಯತೆಯಲ್ಲಿ ಹಾಸುಹೊಕ್ಕಾಗಿರುವ ಪ್ರಾದೇಶಿಕ ಭಿನ್ನತೆಯನ್ನು, ಸಾಂಸ್ಕೃತಿಕ ಬಹುತ್ವವನ್ನು ಹೊಡೆದುಹಾಕಲು ಈ ಸಾಂಸ್ಕೃತಿಕ ರಾಜಕಾರಣವನ್ನು ನಡೆಸಲಾಗುತ್ತದೆ. ಇದು ನಮ್ಮ ಪರಂಪರೆಗಳ ಮೇಲಿನ ದಾಳಿ. ಇದನ್ನು ಸಹಿಸಿಕೊಳ್ಳಬಾರದು.

ಖ್ಯಾತ ಭಾಷಾಶಾಸ್ತ್ರಜ್ಞ ಮತ್ತು ಸಾಹಿತಿಗಳಾದ ಎ.ಕೆ.ರಾಮಾನುಜನ್ ಮತ್ತು ಪ್ರೊ. ಎಂ.ಚಿದಾನಂದಮೂರ್ತಿಯವರು ಬಹಳ ಹಿಂದೆಯೇ ಕನ್ನಡದ ಅಮ್ಮ ಸಂಸ್ಕೃತ ಅಲ್ಲ ಎಂದು ಹೇಳಿದ್ದರು. ಚಿದಾನಂದಮೂರ್ತಿಯವರು ಕನ್ನಡ ಮತ್ತು ತಮಿಳು ಭಾಷೆಗಳು ಸಮಾನಾಂತರವಾಗಿ ವಿಕಸನಗೊಂಡಿವೆ ಎಂದು ಸ್ಪಷ್ಟವಾಗಿ ಹೇಳಿದ್ದರು. ಇದಕ್ಕೆ ಪೂರಕವಾಗಿ, ಭಾಷಾಶಾಸ್ತ್ರಜ್ಞ ಇರಾವತಂ ಮಹಾದೇವನ್ ತಮ್ಮ ತಮಿಳು-ಬ್ರಾಹ್ಮಿ ಶಾಸನಗಳ ಅಧ್ಯಯನದಲ್ಲಿ ದ್ರಾವಿಡ ಭಾಷೆಗಳ ಆರಂಭಿಕ ಲಿಖಿತ ರೂಪಗಳಿಗೂ ಸಂಸ್ಕೃತಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ನಿರೂಪಿಸಿದ್ದಾರೆ.

ಕನ್ನಡ ನುಡಿಯು ತನ್ನದೇ ಆದ ಸ್ವತಂತ್ರ ಲಿಪಿ, ವ್ಯಾಕರಣ ಮತ್ತು ಸಾಹಿತ್ಯ ಸಂಪ್ರದಾಯವನ್ನು ಹೊಂದಿದ್ದು, ಇದು ಸಂಸ್ಕೃತದಿಂದ ಉಗಮವಾಗಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ಕನ್ನಡದ ಸಾಂಸ್ಕೃತಿಕ ಮತ್ತು ಭಾಷಿಕ ಹೆಮ್ಮೆ ಕನ್ನಡ ಭಾಷೆಯು ಕೇವಲ ಭಾಷೆಯಷ್ಟೇ ಅಲ್ಲ, ಇದು ಕನ್ನಡಿಗರ ಸಾಂಸ್ಕೃತಿಕ ಗುರುತಿನ ಪ್ರತಿಬಿಂಬವಾಗಿದೆ.

ತಮಿಳು ಕನ್ನಡಕ್ಕಿಂತ ಹಳೆಯದಲ್ಲ: ತಮಿಳು ಕನ್ನಡಕ್ಕಿಂತ ಹಳೆಯದೆಂದು ಯಾವುದೇ ಸಾಕ್ಷ್ಯವಿಲ್ಲ. ತಮಿಳಿನಲ್ಲಿ ಆರಂಭಿಕ ಸಾಹಿತ್ಯ ಕೃತಿಗಳು (ಉದಾಹರಣೆಗೆ, ಸಂಗಮ ಸಾಹಿತ್ಯ, ಕ್ರಿ.ಪೂ.300–ಕ್ರಿ.ಶ.300) ಇದ್ದರೂ, ಕನ್ನಡದ ಶಾಸನಾತ್ಮಕ ಸಾಕ್ಷ್ಯ (ಉದಾಹರಣೆಗೆ, ಹಲ್ಮಿಡಿ) ಮತ್ತು ಮೌಖಿಕ ಸಂಪ್ರದಾಯಗಳು ತುಲನಾತ್ಮಕ ಪ್ರಾಚೀನತೆಯನ್ನು ಸೂಚಿಸುತ್ತವೆ. ಇದೆಲ್ಲವನ್ನೂ ಗಮನಿಸಿದರೆ ಕನ್ನಡ ಭಾಷೆಯು ಪ್ರೋಟೋ-ದ್ರಾವಿಡ ಭಾಷಾ ಕುಟುಂಬದಿಂದ ಉಗಮವಾಗಿರುವುದು ಸ್ಪಷ್ಟ, ಸಂಸ್ಕೃತ ಇಂಡೋ ಆರ್ಯನ್‌ ನುಡಿ ಕುಟುಂಬಕ್ಕೆ ಸೇರಿದ್ದು ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಕನ್ನಡದಲ್ಲಿ ಆಧುನಿಕ ಕಾಲಘಟ್ಟದಲ್ಲಿ ಹೇರಳವಾಗಿ ಸಂಸ್ಕೃತ ಪದಗಳು ಸೇರಿಕೊಂಡಿವೆ ಎಂಬುದು ನಿಜ. ಆದರೆ ಕನ್ನಡದ ಹುಟ್ಟಿಗೂ ಸಂಸ್ಕೃತಕ್ಕೂ ಸಂಬಂಧವಿಲ್ಲ. ಭಾಷಾಶಾಸ್ತ್ರೀಯ ಸಾಕ್ಷ್ಯಗಳು, ಐತಿಹಾಸಿಕ ಶಾಸನಗಳು ಮತ್ತು ಸಾಹಿತ್ಯಿಕ ಕೃತಿಗಳು ಈ ಸತ್ಯವನ್ನು ದೃಢೀಕರಿಸುತ್ತವೆ.

ಸಂಸ್ಕೃತದಿಂದ ಎರವಲು ಪಡೆದ ಶಬ್ದಗಳು ಮತ್ತು ವ್ಯಾಕರಣದ ಕೆಲವು ಅಂಶಗಳು ಕನ್ನಡದ ಮೇಲೆ ಪ್ರಭಾವ ಬೀರಿವೆ. ಸಂಸ್ಕೃತ ಮಾತ್ರವಲ್ಲ ಕನ್ನಡವು ಇಂಗ್ಲಿಷ್‌, ಪಾರ್ಸಿ, ಉರ್ದು ಸೇರಿದಂತೆ ಹಲವಾರು ನುಡಿಗಳಿಂದ ಪದಗಳನ್ನು ಪಡೆದು ಬೆಳೆಯುತ್ತ ಬಂದಿದೆ. ಒಂದು ಭಾಷೆಯ ಬೆಳವಣಿಗೆಯಲ್ಲಿ ಇದೆಲ್ಲವೂ ಸಾಮಾನ್ಯ. ಕನ್ನಡ ಸಾಹಿತ್ಯದಲ್ಲಿ ಸಂಸ್ಕೃತ ಪದಗಳು ಬಂದು ಸೇರಿದ್ದಕ್ಕೆ ಸಾಮಾಜಿಕ ಕಾರಣಗಳೂ ಇವೆ. ಅಕ್ಷರ ಯಾವ ಸ್ವತ್ತಾಗಿತ್ತೋ ಅವರು ಸಂಸ್ಕೃತದ ಹಿರಿಮೆ ವಕ್ತಾರರಾಗಿದ್ದರು. ಅವರಿಂದಲೇ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಸಂಸ್ಕೃತದ ಪದಗಳನ್ನು ತುಂಬುತ್ತ ಬರಲಾಯಿತು. ಕನ್ನಡ ನುಡಿಯ ತಂದೆ-ತಾಯಿ ಸಂಸ್ಕೃತವೂ ಅಲ್ಲ, ತಮಿಳೂ ಅಲ್ಲ. ಹೀಗೆ ಹೇಳುವವರ ಹಿಂದೆ ಒಂದು ಹಿಡನ್‌ ಅಜೆಂಡಾ ಇರುತ್ತದೆ ಎಂಬುದನ್ನು ನಾವು ಗುರುತಿಸದೇ ಹೋದರೆ ಈ ಸಾಂಸ್ಕೃತಿಕ ಭಯೋತ್ಪಾದನೆ ನಡೆಯುತ್ತಲೇ ಇರುತ್ತದೆ. ಕನ್ನಡಿಗರು ಇಂಥ ಮಾತುಗಳಿಂದ ಕೀಳರಿಮೆ ಅನುಭವಿಸುವ ಅಗತ್ಯವಿಲ್ಲ. ನಮಗೆ ನಮ್ಮ ನುಡಿಯೇ ಶ್ರೇಷ್ಠ. ಸೂರ್ಯ ಚಂದ್ರ ಇರುವವರೆಗೆ ಈ ಮಾತು ಸತ್ಯ. ಅದನ್ನು ಬದಲಿಸಲು ಸಾಧ್ಯವಿಲ್ಲ.