ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರು 2014ರಲ್ಲಿ ಇಂಗ್ಲೆಂಡ್‌ನ ಟ್ರಕ್ ಚಾಲಕರೊಬ್ಬರಿಗೆ ಅವರ 50ನೇ ಹುಟ್ಟುಹಬ್ಬದಂದು ಟೀಂ ಇಂಡಿಯಾ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದರು.
ಸಿನಿಮಾ ತಾರೆಯರು, ಕ್ರಿಕೆಟಿಗರು ಸೇರಿದಂತೆ ಕ್ರೀಡಾ ತಾರೆಯರಿಗೆ ಭಾರಿ ಅಭಿಮಾನಿಗಳಿರುತ್ತಾರೆ. ಈ ಅಭಿಮಾನಿಗಳು ತಮ್ಮ ನೆಚ್ಚಿನ ವ್ಯಕ್ತಿಯ ಭೇಟಿಗಾಗಿ ಹಲವು ಸಾಹಸಗಳನ್ನು ಮಾಡುತ್ತಾರೆ. ಒಂದು ವೇಳೆ ಅವರು ಸಿಕ್ಕರೆ ಅವರ ಖುಷಿಗೆ ಪಾರವೇ ಇರುವುದಿಲ್ಲ, ಇನ್ನೇನು ಅಭಿಮಾನಿಗಾಗಿ ಈ ಸೆಲೆಬ್ರಿಟಿಗಳು ಗಿಫ್ಟ್ ಕೊಟ್ರೆ ಮುಗಿದೆ ಹೋಯ್ತು. ಜೀವ ಹೋಗುವವರೆಗೂ ಆ ಕ್ಷಣವನ್ನು ಅವರು ಮರೆಯುವುದೇ ಇಲ್ಲ. ಅದೇ ರೀತಿ ಇಲ್ಲೊಬ್ಬರು ಕ್ರಿಕೆಟ್ ಅಭಿಮಾನಿ ತಮ್ಮ ನೆಚ್ಚಿನ ನಾಯಕ ತಮ್ಮ ಹುಟ್ಟುಹಬ್ಬಕ್ಕೆ ನೀಡಿದ ಉಡುಗೊರೆಯನ್ನು ತಮ್ಮ 62ರ ಹರೆಯದಲ್ಲೂ ನೆನಪಿಟ್ಟುಕೊಂಡು ಖುಷಿ ಪಡುತ್ತಿದ್ದಾರೆ. ಅಂದ ಹಾಗೆ ಅವರಿಗೆ ಈ ಅಮೂಲ್ಯ ಗಿಫ್ಟ್ ನೀಡಿದ್ದು ಬೇರೆ ಯಾರು ಅಲ್ಲ, ಅವರ ನೆಚ್ಚಿನ ಕ್ರಿಕೆಟಿಗ, ಟೀಮ್ ಇಂಡಿಯಾದ ಮಾಜಿ ನಾಯಕ ವಿಕೆಟ್ ಕೀಪರ್ ಅಭಿಮಾನಿಗಳ ನೆಚ್ಚಿನ ತಲೈವಾ ಮಹೇಂದ್ರ ಸಿಂಗ್ ಧೋನಿ...
ಹೌದು ಭಾರತದ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಅವರಿಗೆ ವಿಶ್ವದೆಲ್ಲೆಡೆ ಕೋಟ್ಯಾಂತರ ಜನ ಅಭಿಮಾನಿಗಳಿದ್ದಾರೆ. ತಮ್ಮ ಸಿಂಪ್ಲಿಸಿಟಿಯಿಂದ ಹೆಸರು ಮಾಡಿರುವ ಧೋನಿ ಇತ್ತೀಚೆಗೆ ತಮ್ಮ ಪ್ರೀತಿಯ ಗೆಳೆಯನ ಹುಟ್ಟುಹಬ್ಬದಲ್ಲಿ ಭಾಗಿಯಾಗುವ ಮೂಲಕ ಸಾಕಷ್ಟು ಸುದ್ದಿಯಾಗಿದ್ದರು. ಇಂತಹ ಧೋನಿ ಇಂಗ್ಲೆಂಡ್‌ನ ಟ್ರಕ್ ಚಾಲಕರೊಬ್ಬರಿಗೆ ಅವರ 50ನೇ ಹುಟ್ಟುಹಬ್ಬದಲ್ಲಿ ಟೀಂ ಇಂಡಿಯಾದ ಜರ್ಸಿಯನ್ನು ನೀಡುವ ಮೂಲಕ ಅವರ ಹುಟ್ಟುಹಬ್ಬವನ್ನು ಅವಿಸ್ಮರಣೀಯವಾಗಿಸಿದ್ದರು.
ಹೌದು ಮಧ್ಯ ಇಂಗ್ಲೆಂಡ್‌ನ ಟ್ರೆಂಟ್‌ನಲ್ಲಿರುವ ಕೈಗಾರಿಕಾ ಪಟ್ಟಣವಾದ ಸ್ಟೋಕ್‌ನ ಟ್ರಕ್ ಅಂಡ್ರ್ಯೂ ಸೈಕ್ಸ್ ಎಂಬ ಟ್ರಕ್ ಚಾಲಕ ಒಬ್ಬ ಕ್ರಿಕೆಟ್ ಅಭಿಮಾನಿ ಅವರಿಗೀಗ 62ರ ಹರೆಯ ಆದರೆ ತಮ್ಮ 50ನೇ ಹುಟ್ಟುಹಬ್ಬದಲ್ಲಿ ಕ್ರಿಕೆಟರ್ ಧೋನಿ ಅವರು ನೀಡಿದ ಅಚ್ಚರಿಯ ಗಿಫ್ಟ್ ಅನ್ನು ಅವರಿನ್ನು ಮರೆತಿಲ್ಲ. 2014ರಲ್ಲಿ ಇವರ ಹುಟ್ಟುಹಬ್ಬಕ್ಕೆ ಭಾರತದ ಏಕದಿನ ತಂಡದಲ್ಲಿ ಆಡುತ್ತಿದ್ದ ಧೋನಿ ಇವರಿಗೆ ಜೆರ್ಸಿ ಗಿಫ್ಟ್ ಆಗಿ ನೀಡಿದ್ದರು. 2014ರ ಏಕದಿನ ಸರಣಿಗಾಗಿ ಇಂಗ್ಲೆಂಡ್ ಪ್ರವಾಸದಲ್ಲಿದ್ದ ಧೋನಿ ಇವರ ಹುಟ್ಟುಹಬ್ಬಕ್ಕೆ ಜೆರ್ಸಿಯನ್ನು ನೀಡುವ ಮೂಲಕ ಯಾವತ್ತೂ ಅವರು ತಮ್ಮನ್ನು ನೆನಪು ಮಾಡಿಕೊಳ್ಳುವಂತೆ ಮಾಡಿದ್ದಾರೆ.
ಎಡ್ಜ್‌ಬಾಸ್ಟನ್ ಮೈದಾನ ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಅಲ್ಲಿ ಏಕದಿನ ಪಂದ್ಯದ ಸಮಯದಲ್ಲಿ ಟ್ರಕ್ ಚಾಲಕ ಅಂಡ್ರ್ಯೂ ಸೈಕ್ಸ್ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದರು. ಧೋನಿಯವರ ಈ ಕೊಡುಗೆ ಅವರ ಹುಟ್ಟುಹಬ್ಬವನ್ನು ಮತ್ತಷ್ಟು ವಿಶೇಷವಾಗಿಸಿತ್ತು. ಶನಿವಾರ, ಸೈಕ್ಸ್ ಧೋನಿಯಿಂದ ಸಿಕ್ಕ ಅಮೂಲ್ಯ ಉಡುಗೊರೆಯನ್ನು ಹೆಮ್ಮೆಯಿಂದ ಎಡ್ಜ್‌ಬಾಸ್ಟನ್‌ಗೆ ತಂದರು.
2009 ರಿಂದಲೂ ಮಿಡ್‌ಲ್ಯಾಂಡ್ಸ್ ಪ್ರದೇಶದ ಕ್ರಿಕೆಟ್ ಪಂದ್ಯಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿರುವ ಸೈಕ್ಸ್‌ಗೆ ಈಗ 62 ವರ್ಷ, ಆದರೆ 2014ರ ಹುಟ್ಟುಹಬ್ಬವನ್ನು ಅವರು ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ. ಈ ಸ್ಥಳದಲ್ಲಿ ನಡೆದ ಏಕದಿನ ಪಂದ್ಯದ ಸಂದರ್ಭದಲ್ಲಿ ಧೋನಿ ತಮ್ಮ ತಂಡದ ಸಹ ಆಟಗಾರ ಭುವನೇಶ್ವರ ಕುಮಾರ್ ಅವರ ಜೆರ್ಸಿಯನ್ನು ಸೈಕ್ಸ್ ಅವರಿಗೆ ಹಸ್ತಾಂತರಿಸಿ, ಸ್ವಯಂಸೇವಕರಾಗಿ ಅವರ ಸಮರ್ಪಣೆಯನ್ನು ಗುರುತಿಸಿದರು.
ಈ ಬಗ್ಗೆ ಪಿಟಿಐ ಜೊತೆ ತಮ್ಮ ಅನುಭವವನ್ನು ವಿವರಿಸಿದ ಸೈಕ್ಸ್ , ಡ್ರೆಸ್ಸಿಂಗ್ ಕೋಣೆಯ ಹೊರಗೆ ನನ್ನನ್ನು ಕರೆದು ಈ ಭಾರತೀಯ ಜೆರ್ಸಿ ಗಿಫ್ಟ್ ನೀಡಿದ್ದರ ಹಿಂದೆ ಧೋನಿಯವರ ವಿಶೇಷ ಆಸಕ್ತಿ ಇತ್ತು ಎಂದಿದ್ದಾರೆ. ಪ್ರಸ್ತುತ ಸೈಕ್ಸ್ ಈಗ ಟ್ರಕ್‌ಗಳನ್ನು ಓಡಿಸುವುದಕ್ಕಿಂತ ಕ್ರಿಕೆಟ್ ಮೈದಾನದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ.
ಹಿಂದಿನ ODI ನಾಟಿಂಗ್‌ಹ್ಯಾಮ್‌ನಲ್ಲಿತ್ತು ಮತ್ತು ಮಳೆಯಿಂದಾಗಿ, ಟ್ರೆಂಟ್ ಬ್ರಿಡ್ಜ್‌ನಲ್ಲಿ ನೀರು ನಿಂತು ಆಟಕ್ಕೆ ಅಡ್ಡಿಯಾಯಿತು. ಹವಾಮಾನದ ಕಾರಣದಿಂದಾಗಿ, ಆಟಗಾರರಿಗೆ ಹೆಚ್ಚಿನ ಕೆಲಸವಿರಲಿಲ್ಲ ಮತ್ತು ಆಟಗಾರರಿಗೆ ಆಹಾರದ ವ್ಯವಸ್ಥೆ ಮಾಡುವ ಕೆಲಸವನ್ನು ನಮಗೆ ವಹಿಸಲಾಯಿತು. ಬಿಸಿಸಿಐ ಅಧಿಕಾರಿಯೊಬ್ಬರು ನನ್ನೊಂದಿಗಿದ್ದರು ಮತ್ತು ನನ್ನ 50 ನೇ ಹುಟ್ಟುಹಬ್ಬ ಸಮೀಪಿಸುತ್ತಿದೆ ಮತ್ತು ಮುಂದಿನ ಪಂದ್ಯ ಎಡ್ಜ್‌ಬಾಸ್ಟನ್‌ನಲ್ಲಿ ಎಂದು ಅವರಿಗೆ ತಿಳಿಯಿತು. ಆದರೆ ಈ ಮೈದಾನದಲ್ಲಿ ಮುಂದಿನ ಪಂದ್ಯದಲ್ಲಿ ನನ್ನನ್ನು ಡ್ರೆಸ್ಸಿಂಗ್ ಕೋಣೆಗೆ ಕರೆದು ಜೆರ್ಸಿಯನ್ನು ನೀಡಲಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ ಎಂದು ಸೈಕ್ಸ್ ನೆನಪಿಸಿಕೊಂಡಿದ್ದಾರೆ. 2019ರಲ್ಲಿ ನ್ಯೂಜಿಲೆಂಡ್-ಪಾಕಿಸ್ತಾನ ಪಂದ್ಯಕ್ಕೂ ಮೊದಲು ವಿಶ್ವಕಪ್ ಟ್ರೋಫಿಯನ್ನು ಮೈದಾನಕ್ಕೆ ಹೆಮ್ಮೆಯಿಂದ ಕೊಂಡೊಯ್ದವರು ಕೂಡ ಆಗಿದ್ದಾರೆ.



