೨೦೩೦ರ ಕಾಮನ್ವೆಲ್ತ್ ಗೇಮ್ಸ್ ಆಯೋಜಿಸಲು ಭಾರತ ಬಿಡ್ ಸಲ್ಲಿಸಲಿದೆ. ಐಒಎ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಹಮದಾಬಾದ್, ದೆಹಲಿ ಮತ್ತು ಭುವನೇಶ್ವರ ನಡುವೆ ಆತಿಥ್ಯ ನಗರದ ಆಯ್ಕೆ ನಡೆಯಲಿದೆ.

ನವದೆಹಲಿ: 2030ರ ಕಾಮನ್‌ವೆಲ್ತ್ ಗೇಮ್ಸ್ ಆಯೋಜನೆಗೆ ಭಾರತ ಬಿಡ್ ಸಲ್ಲಿಸಲು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಒಪ್ಪಿಗೆ ಸೂಚಿಸಿದೆ.

ಐಒಎ ವಿಶೇಷ ಸಭೆ ಬುಧವಾರ ನಡೆಯಿತು. ಈಗಾಗಲೇ 2030ರ ಗೇಮ್ ಆತಿಥ್ಯಕ್ಕೆ ಆಸಕ್ತಿ ತೋರಿ ಪತ್ರ ಸಲ್ಲಿಸಿದ್ದ ಭಾರತ, ಶೀಘ್ರದಲ್ಲೇ ಅಧಿಕೃತವಾಗಿ ಬಿಡ್ ಸಲ್ಲಿಸಲಿದೆ. ಬಿಡ್ ಸಲ್ಲಿಕೆಗೆ ಆ.31 ಕಡೆಯ ದಿನ. ರೇಸ್‌ನಲ್ಲಿದ್ದ ಕೆನಡಾ ಸ್ಪರ್ಧೆಯಿಂದ ಹಿಂದೆ ಸರಿದಿರುವುದರಿಂದ ಭಾರತಕ್ಕೆ ಆಯೋಜನೆ ಸಿಗುವ ಸಾಧ್ಯತೆ ಹೆಚ್ಚಿದೆ. ಗೇಮ್ ಅಹಮದಾಬಾದ್‌ನಲ್ಲಿ ಆಯೋಜಿಸುವ ಬಗ್ಗೆ ಐಒಎ ಚಿಂತನೆ ನಡೆಸುತ್ತಿದೆ. ಅದರ ಜೊತೆಗೆ ದೆಹಲಿ ಮತ್ತು ಒಡಿಶಾದ ರಾಜಧಾನಿ ಭುವನೇಶ್ವರ ಕೂಡ ರೇಸ್‌ನಲ್ಲಿದೆ.

ಈ ಬಗ್ಗೆ ಐಒಎ ಅಧ್ಯಕ್ಷೆ ಪಿ.ಟಿ. ಉಷಾ ಮಾತನಾಡಿದ್ದು, ಅಹಮದಾಬಾದ್‌ ಜೊತೆಗೆ ದೆಹಲಿ, ಭುವನೇಶ್ವರದಲ್ಲಿಯೂ ಆಯೋಜನೆ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. 2026ರ ಗ್ಲಾಸ್ಗೋ ಗೇಮ್ಸ್‌ನಿಂದ ಕೆಲ ಕ್ರೀಡೆಗಳನ್ನು ಕಡಿತಗೊಳಿಸಲಾಗಿದೆ. ಆದರೆ 2030ರ ಕಾಮನ್‌ವೆಲ್ತ್ ಗೇಮ್ಸ್ 2010ರ ರೀತಿಯೇ ಇರಲಿದೆ' ಎಂದರು. ಇನ್ನು, ಆರ್ಥಿಕ ಹೊರೆ ತಗ್ಗಿಸುವ ಕಾರಣಕ್ಕೆ 2026ರ ಗ್ಲಾಸ್ಟೋ ಕಾಮನ್‌ವೆಲ್ತ್ ನಿಂದ ಕೈಬಿಡಲಾಗಿರುವ ಕ್ರಿಕೆಟ್, ಕಬಡ್ಡಿ, ಬ್ಯಾಡ್ಮಿಂಟನ್, ಬಾಕ್ಸಿಂಗ್, ವೇಟ್ ಲಿಫ್ಟಿಂಗ್, ಕುಸ್ತಿ, ಶೂಟಿಂಗ್ ಸೇರಿ ಹಲವು ಕ್ರೀಡೆಗಳನ್ನು 2030ರಲ್ಲಿ ಮರು ಸೇರ್ಪಡೆ ಗೊಳಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಕಬಡ್ಡಿ, ಯೋಗ, ಖೋ ಖೋ ಕ್ರೀಡೆ ಆಡಿಸುವ ಬಗ್ಗೆ ಚರ್ಚೆ ನಡೆಯಿತು.

ಈ ಬಗ್ಗೆ ಐಒಎ ಜಂಟಿ ಕಾರ್ಯದರ್ಶಿ ಕಲ್ಯಾಣ್ ಚೌಬೆ ಸುಳಿವು ನೀಡಿದ್ದು, 'ಕುಸ್ತಿ, ಅರ್ಚರಿ, ಶೂಟಿಂಗ್‌ನಂತಹ ಪದಕ ಗೆಲ್ಲುವ ಕ್ರೀಡೆಗಳ ಜೊತೆಗೆ ನಮ್ಮ ಸಾಂಪ್ರದಾಯಿಕ ಆಟಗಳಾದ ಕಬಡ್ಡಿ, ಖೋ ಖೋ, ಯೋಗ ಕೂಡ ಸೇರಿಸಲಾಗುವುದು' ಎಂದಿದ್ದಾರೆ.

ಭಾರತದ ಹೊಸ ಕೋಚ್ ಖಾಲಿದ್‌ ಅವಧಿ 2 ವರ್ಷ: ಜಮ್ಶೆಡ್‌ಪುರಕ್ಕೆ ಗುಡ್‌ಬೈ

ನವದೆಹಲಿ: ಭಾರತದ ಪುರುಷರ ಫುಟ್ಬಾಲ್ ತಂಡದ ಕೋಚ್‌ ಆಗಿ ಆಯ್ಕೆಯಾಗಿರುವ ಖಾಲಿದ್‌ ಜಮೀಲ್ ಅವರು 2 ವರ್ಷ ಅವಧಿಗೆ, ಪೂರ್ಣ ಪ್ರಮಾಣದ ತರಬೇತುದಾರರಾಗಿ ಕಾರ್ಯನಿರ್ವಹಿಸಲು ಒಪ್ಪಂದ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಖಿಲ ಭಾರತೀಯ ಫುಟ್ಬಾಲ್ ಫೆಡರೇಷನ್(ಎಐಎಫ್‌ಎಫ್) ಮಾಹಿತಿ ನೀಡಿದೆ.

ಭಾರತದ ಕೋಚ್‌ ಆಗಿದ್ದರಿಂದ ಐಎಸ್‌ಎಲ್‌ನ ಜಮ್ಶೆಡ್‌ಪುರ ಕ್ಲಬ್‌ನ ಕೋಚ್‌ ಹುದ್ದೆಯನ್ನು ಜಮೀಲ್‌ ತ್ಯಜಿಸಿದ್ದು, ಭಾರತ ತಂಡದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಸದ್ಯ ಅವರ ಅವಧಿ 2 ವರ್ಷ ಇದ್ದರೂ, ಫಲಿತಾಂಶ ನೋಡಿ 1 ವರ್ಷ ವಿಸ್ತರಿಸುವ ಅವಕಾಶವೂ ಇದೆ. ಜಮೀಲ್ ಆ.15 ರಂದು ಬೆಂಗಳೂರಿನಲ್ಲಿ ಸ್ಪೋರ್ಟ್ಸ್‌ ಎಕ್ಸಲೆನ್ಸ್‌ ಸೆಂಟರ್‌ನಲ್ಲಿ ಅಭ್ಯಾಸ ಶಿಬಿರದ ಮೂಲಕ ಕೋಚ್‌ ಕಾರ್ಯವನ್ನು ಆರಂಭಿಸಲಿದ್ದಾರೆ.

6 ತಿಂಗಳಲ್ಲಿ ಕ್ರೀಡಾ ಬಿಲ್‌ ಜಾರಿ: ಸಚಿವ ಮಾನ್ಸುಖ್‌

ನವದೆಹಲಿ: ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯನ್ನು ಮುಂದಿನ ಆರು ತಿಂಗಳಲ್ಲಿ ಜಾರಿಗೆ ತರಲಾಗುವುದು ಎಂದು ಕ್ರೀಡಾ ಸಚಿವ ಮನ್ಸೂಖ್‌ ಮಾಂಡವೀಯ ಹೇಳಿದ್ದಾರೆ. ಉಭಯ ಸದನಗಳಲ್ಲಿ ಮಸೂದೆ ಅಂಗೀಕಾರದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳಲ್ಲಿ ಮಾತನಾಡಿರುವ ಅವರು, ‘ನಿಯಮಗಳ ಕರಡು ರಚನೆ ಮತ್ತು ಮೂಲಸೌಕರ್ಯಗಳ ಗುರುತಿಸುವಿಕೆಯಂತಹ ಪೂರ್ವ ಸಿದ್ಧತಾ ಕಾರ್ಯಗಳು ಈಗಾಗಲೇ ಆರಂಭವಾಗಿದೆ. ಸಾಧ್ಯವಾದಷ್ಟು ಬೇಗ ಈ ಮಸೂದೆಯನ್ನು ಜಾರಿಗೆ ತರುತ್ತೇವೆ. ಮುಂದಿನ 6 ತಿಂಗಳೊಳಗೆ ಶೇ.100ರಷ್ಟು ಅನುಷ್ಠಾನ ಮಾಡುತ್ತೇವೆ’ ಎಂದರು.

ಈ ಮಸೂದೆ ಅಂಗೀಕಾರ ಮೂಲಕ ಭಾರತ ಕ್ರೀಡಾ ಕಾನೂನು ಹೊಂದಿರುವ 21ನೇ ದೇಶವಾಗಿದ್ದು, ಕ್ರೀಡಾ ಆಡಳಿತದಲ್ಲಿ ಮಹತ್ವದ ಬದಲಾವಣೆ ತರಲಿದೆ.