2036ರ ಒಲಿಂಪಿಕ್ಸ್ ಬಿಡ್ ಜೊತೆಗೆ, ಭಾರತ 2030ರ ಕಾಮನ್ವೆಲ್ತ್ ಗೇಮ್ಸ್ ಆತಿಥ್ಯಕ್ಕೂ ಆಸಕ್ತಿ ತೋರಿದೆ. ಅಹಮದಾಬಾದ್ ಅಥವಾ ಭುವನೇಶ್ವರದಲ್ಲಿ ಆಯೋಜನೆಗೆ ಚರ್ಚೆ ನಡೆದಿದ್ದು, ಸಿಜೆಎಫ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮಾರ್ಚ್ 31ರೊಳಗೆ ಬಿಡ್ ಸಲ್ಲಿಸಲಾಗುವುದು. ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಅನನ್ಯ ಯೋಗಾಸನದಲ್ಲಿ ಕಂಚು ಗೆದ್ದಿದ್ದಾರೆ.
ನವದೆಹಲಿ: 2036ರ ಒಲಿಂಪಿಕ್ಸ್ ಆತಿಥ್ಯ ವಹಿಸಲು ಬಿಡ್ ಸಲ್ಲಿಸಿರುವ ಭಾರತ, 2030ರ ಕಾಮನ್‌ವೆಲ್ತ್ ಗೇಮ್ಸ್‌ಗೂ ಆತಿಥ್ಯ ವಹಿಸಲು ಆಸಕ್ತಿ ತೋರಿದೆ. ಭಾರತ ಪ್ರವಾಸದಲ್ಲಿರುವ ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್(ಸಿಜೆಎಫ್) ಅಧಿಕಾರಿಗಳ ಜೊತೆ ಕೇಂದ್ರ ಸರ್ಕಾರದ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ಕ್ರೀಡಾಕೂಟವನ್ನು ಅಹಮದಾಬಾದ್ ಅಥವಾ ಭುವನೇಶ್ವರದಲ್ಲಿ ಆಯೋಜಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲದೆ ಸಿಜೆಎಫ್ ಅಧಿಕಾರಿಗಳು ಈ ಎರಡೂ ನಗರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೀಘ್ರದಲ್ಲೇ ಭಾರತ ಕ್ರೀಡಾಕೂಟದ ಆತಿಥ್ಯಕ್ಕೆ ಬಿಡ್ ಸಲ್ಲಿಸಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಬಿಡ್ ಸಲ್ಲಿಕೆಗೆ ಮಾ.31 ಕೊನೆ ದಿನಾಂಕ.
ಈ ಹಿಂದೆ 2010ರಲ್ಲಿ ಭಾರತದಲ್ಲಿ ಕೊನೆ ಬಾರಿ ಕಾಮನ್‌ವೆಲ್ತ್ ಗೇಮ್ಸ್ ಆಯೋಜಿಸಲಾಗಿತ್ತು. ಆದರೆ ಕ್ರೀಡಾಕೂಟ ಆಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿತ್ತು.
ಯೋಗಾಸನದಲ್ಲಿ ಕಂಚು ಗೆದ್ದ ಕರ್ನಾಟಕದ ಅನನ್ಯ
ಡೆಹ್ರಾಡೂನ್/ಹಲ್ದ್ವಾನಿ: 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಪದಕ ಬೇಟೆ ಮುಂದುವರಿದಿದೆ. ಬುಧವಾರ ರಾಜ್ಯದ ಕ್ರೀಡಾಪಟುಗಳು 2 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರೊಂದಿಗೆ ರಾಜ್ಯದ ಪದಕ ಗಳಿಕೆ 54ಕ್ಕೆ ಏರಿಕೆಯಾಗಿದೆ. ಕರ್ನಾಟಕ 28 ಚಿನ್ನ, 11 ಬೆಳ್ಳಿ ಹಾಗೂ 15 ಕಂಚಿನ ಪದಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಮಹಿಳೆಯರ ಸಾಂಪ್ರದಾಯಿಕ ಯೋಗಾಸನದಲ್ಲಿ ಅನನ್ಯ ಸಂಬಯ್ಯ ಹಿರೇಮಠ ಕಂಚಿನ ಪದಕ ಜಯಿಸಿದರು. ಪುರುಷರ ಕೆನೋಯ್ ಹಾಗೂ ಕಯಾಕಿಂಗ್‌ನ ಸ್ಲಾಲೊಮ್ ಸಿ1 ವಿಭಾಗದಲ್ಲಿ ದಾದಾಫೀರ್ 3ನೇ ಸ್ಥಾನಿಯಾಗಿ ಕಂಚಿಗೆ ಕೊರಳೊಡ್ಡಿದರು.
ಇದೇ ವೇಳೆ ಪುರುಷರ ತಂಡ ವಿಭಾಗದ ಟೆನಿಸ್ ಕ್ವಾರ್ಟರ್ ಫೈನಲ್‌ನಲ್ಲಿ ತೆಲಂಗಾಣ ವಿರುದ್ಧ ಕರ್ನಾಟಕ 2-0 ಗೆಲುವು ಸಾಧಿಸಿತು. ಆದರೆ ಮಹಿಳಾ ಹಾಕಿ ಗುಂಪು ಹಂತದಲ್ಲಿ ಕರ್ನಾಟಕ ತಂಡ ಹರ್ಯಾಣ ವಿರುದ್ಧ 0-4 ಗೋಲುಗಳಿಂದ ಸೋಲನುಭವಿಸಿತು.
