ಕೊರೋನಾದಿಂದ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡ ಕಾರಣ ಕರ್ನಾಟಕ ಟೇಬಲ್ ಟೆನಿಸ್ ಕೋಚ್ ಗುರುಮೂರ್ತಿ ಕೆಲಸ ಕಳೆದುಕೊಂಡರು. ಜೀವನ ಸಾಗಿಸಲು ಬೆಂಗಳೂರಿನಲ್ಲಿ ಆಟೋ ಚಾಲಕರಾಗಿದ್ದಾರೆ. ಆಟೋ ಚಲಾಯಿಸುತ್ತಲೇ, ಟೇಬಲ್ ಟೆನಿಸ್ ತರಬೇತಿ ನೀಡಲು ಸಿದ್ಧರಿದ್ದಾರೆ. ಆಸಕ್ತರು 7899210897 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಆಟೋದಲ್ಲಿ ಬರೆದುಕೊಂಡಿದ್ದಾರೆ.

ಬೆಂಗಳೂರು: ಕೊರೋನಾ ಹೆಮ್ಮಾರಿ ಮಾಡಿದ ಅವಾಂತರ ಒಂದೆರಡಲ್ಲ. ಕೋವಿಡ್ 19 ವೈರಲ್ ಜಗತ್ತಿನ ಲಕ್ಷಾಂತರ ಜನರ ಜೀವ ತೆಗೆದಿದ್ದು ಒಂದು ಕಡೆಯಾದರೇ, ಕೋಟ್ಯಾಂತರ ಮಂದಿಯ ಬದುಕನ್ನೇ ಮುಳುಗಿಸಿದೆ. ಇದಕ್ಕೆ ಮತ್ತೊಂದು ಉದಾಹರಣೆ ಕರ್ನಾಟಕ ಟೇಬಲ್ ಟೆನಿಸ್ ಕೋಚ್ ಆಗಿದ್ದ ವ್ಯಕ್ತಿ ಇದೀಗ ಜೀವನ ನಿರ್ವಹಣೆಗಾಗಿ ಬೆಂಗಳೂರಿನಲ್ಲಿ ಆಟೋ ಚಾಲಕರಾಗಿ ದಿನ ದೂಡುತ್ತಿದ್ದಾರೆ. 

ಬೆಂಗಳೂರು ಒಂದು ರೀತಿ ಅವಕಾಶಗಳ ಆಗರ. ಇಲ್ಲಿ ದುಡಿಯುವ ಮನಸ್ಸಿದ್ದವರಿಗೆ ಒಂದಲ್ಲ ಒಂದು ಕೆಲಸ ಸಿಕ್ಕೇ ಸಿಗುತ್ತದೆ. ಒಂದು ಕಾಲದಲ್ಲಿ ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ತಂಡದ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗುರುಮೂರ್ತಿ ಎನ್ ಎನ್ನುವವರು ಇದೀಗ ಬೆಂಗಳೂರಿನಲ್ಲಿ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.

ಬದುಕು ಕಸಿದ ಕೊರೋನಾ: 

ಕೊರೋನಾ ವಕ್ಕರಿಸುವ ಮುನ್ನ ಗುರುಮೂರ್ತಿ ಎನ್‌ ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ತಂಡದ ಪೂರ್ಣಾವಧಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಕೊರೋನಾ ವಕ್ಕರಿಸಿದ ಬಳಿಕ ಹಲವರ ಬದುಕು ಚೆಲ್ಲಾಪಿಲ್ಲಿಯಾಯಿತು. ಅದಕ್ಕೆ ಗುರುಮೂರ್ತಿಯವರು ಹೊರತಾಗಲಿಲ್ಲ. ಕೋವಿಡ್‌ನಿಂದಾಗಿ ಎಲ್ಲಾ ಕ್ರೀಡಾ ಚಟುವಟಿಕೆಗಳು ಸ್ಥಗಿತವಾದವು. ಅದೇ ರೀತಿ ಗುರುಮೂರ್ತಿಯವರು ಕೆಲಸ ಕಳೆದುಕೊಂಡರು. ಆದರೆ ಜೀವನ ನಿರ್ವಹಣೆ ಮಾಡುವುದಕ್ಕಾಗಿ ಅವರು ಆರಿಸಿಕೊಂಡಿದ್ದು ಆಟೋ ಚಾಲಕನ ಕೆಲಸ.

ಕೋಚ್ ಆಗಲು ರೆಡಿ ಇದ್ದಾರೆ ಗುರುಮೂರ್ತಿ: 

ಗುರುಮೂರ್ತಿ ಇದೀಗ ಆಟೋ ಚಾಲನೆ ಮಾಡುವುದರ ಜತೆಗೆ ಈಗಲೂ ಕೋಚ್ ಆಗಲು ತಯಾರಿದ್ದಾರೆ. ಈ ಕುರಿತಂತೆ ಆಟೋ ಚಾಲಕನ ಸೀಟ್ ಹಿಂಬದಿಯಲ್ಲಿ ತಮ್ಮ ಕಾಂಟ್ಯಾಕ್ಟ್ ನಂಬರ್ 7899210897 ಜತೆಗೆ ಬೆಂಗಳೂರಿನಲ್ಲಿ ಯಾರಾದರೂ ಟೇಬಲ್ ಟೆನಿಸ್ ಕಲಿಯಲು ಆಸಕ್ತರಿದ್ದರೇ, ಕ್ಲಬ್‌ನವರು, ಸ್ಕೂಲ್‌ನಲ್ಲಿ, ಅಪಾರ್ಟ್‌ಮೆಂಟ್‌ನಲ್ಲಿ ಟೇಬಲ್ ಟೆನಿಸ್ ಕೋಚ್ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ