ಹೈದರಾಬಾದ್‌ನಲ್ಲಿ ನಡೆದ ಪ್ರೈಮ್ ವಾಲಿಬಾಲ್ ಲೀಗ್‌ನ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ, ಬೆಂಗಳೂರು ಟಾರ್ಪಿಡೋಸ್ ತಂಡವು ಮುಂಬೈ ಮೆಟಿಯೋರ್ಸ್ ತಂಡವನ್ನು 15-13, 16-4, 15-13 ನೇರ ಸೆಟ್‌ಗಳಿಂದ ಸೋಲಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.  

ಹೈದರಾಬಾದ್‌: ಇಲ್ಲಿನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹೈವೋಲ್ಟೇಜ್‌ ಫೈನಲ್‌ ಪಂದ್ಯದಲ್ಲಿ ಮುಂಬೈ ಮೆಟಿಯೋರ್ಸ್‌ ತಂಡವನ್ನು 15-13, 16-4, 15-13 ಸೆಟ್‌ಗಳಿಂದ ಸೋಲಿಸಿದ ಬೆಂಗಳೂರು ಟಾರ್ಪಿಡೋಸ್‌ ತಂಡವು ಪ್ರೈಮ್‌ ವಾಲಿಬಾಲ್‌ ಲೀಗ್‌ನ ನಾಲ್ಕನೇ ವೃತ್ತಿಯಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದೆ.

ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿದ ಎರಡೂ ತಂಡಗಳು ಎಚ್ಚರಿಕೆಯಿಂದ ಆಟವನ್ನು ಪ್ರಾರಂಭಿಸಿದವು. ಪೀಟರ್‌ ಆಲ್ಸ್ಟಾಡ್‌ ಅವರು ಓಸ್ಟ್ವಿಕ್‌ ಜೋಯಲ್‌ ಬೆಂಜಮಿನ್‌ ಅವರನ್ನು ತಡೆದರೆ, ಶುಭಂ ಚೌಧರಿ ಮೇಲೆ ಜಿಷ್ಣು ಅವರ ಬ್ಲಾಕ್‌ನೊಂದಿಗೆ ಬೆಂಗಳೂರು ಮತ್ತೆ ಘರ್ಜಿಸಿತು. ಸೇತುವಿನ ಆಕರ್ಷಕ ಸರ್ವಿಸ್‌ನಿಂದ ಬೆಂಗಳೂರು ಮುನ್ನಡೆ ಸಾಧಿಸಿತು. ಈ ಮಧ್ಯೆ, ಮೆಟಿಯೋರ್ಸ್‌ ದಿಟ್ಟ ಪ್ರತಿರೋಧ ನೀಡಿದರೂ ಬೆಂಗಳೂರು ತಂಡದ ನಾಯಕ ಮತ್ತು ಸೆಟ್ಟರ್‌ ಮ್ಯಾಟ್‌ ವೆಸ್ಟ್‌ ಅವರ ಅನುಭವದ ಆಟ ಟಾರ್ಪಿಡೋಸ್‌ಗೆ ಮೊದಲ ಸೆಟ್‌ ಗೆಲ್ಲಲು ಸಹಾಯ ಮಾಡಿತು.

ಸೇತು ಎರಡನೇ ಸೆಟ್‌ ಅನ್ನು ಪಂದ್ಯದ ಮೊದಲ ಸೂಪರ್‌ ಸರ್ವ್‌ನೊಂದಿಗೆ ಪ್ರಾರಂಭಿಸಿದರು. ಮುಂಬೈನ ಸರಣಿ ತಪ್ಪುಗಳು ಬೆಂಗಳೂರು ತಂಡಕ್ಕೆ ಸತತವಾಗಿ ನೆರವಾಯಿತು. ಓಂ ಲಾಡ್‌ ವಸಂತ್‌ ಅದ್ಭುತ ಆಟ ಆಡಿದರೂ ಶುಭಮ್‌ ಮತ್ತು ನಾಯಕ ಅಮಿತ್‌ ಗುಲಿಯಾ ತಮ್ಮ ಹೊಡೆತಗಳನ್ನು ಓವರ್‌ ಹಿಟ್‌ ಮಾಡಿದರು. ಜೋಯಲ್‌ ಅವರ ಸ್ಥಿರ ದಾಳಿಗಳು ಮೆಟಿಯೋರ್ಸ್‌ಗೆ ಎದುರಾಳಿಯನ್ನು ನಿಯಂತ್ರಿಸಲು ಕಷ್ಟಕರವಾಯಿತು. ಈ ನಡುವೆ ಟಾರ್ಪಿಡೋಸ್‌ ತಂಡವು ಜೋಯಲ್‌ ಅವರ ಸೂಪರ್‌ ಸರ್ವ್‌ನೊಂದಿಗೆ ಎರಡು ಸೆಟ್‌ಗಳ ಮುನ್ನಡೆ ಸಾಧಿಸಿತು.

ಮೂರನೇ ಸೆಟ್‌ನಲ್ಲಿ ಜಲೆನ್‌ ಪೆನ್ರೋಸ್‌ ದಾಳಿಗೆ ಸೇರಿಕೊಂಡರು, ಟಾರ್ಪಿಡೋಸ್‌ ತಂಡವು ತಮ್ಮ ಆಕ್ರಮಣಕಾರಿ ರಣತಂತ್ರ ಉಳಿಸಿಕೊಂಡಿದ್ದರಿಂದ ಮಿಂಚಿನ ಆಟ ಕಂಡು ಬಂದಿತು. ಶುಭಮ್‌ ಪ್ರತಿದಾಳಿಯನ್ನು ಮುನ್ನಡೆಸುವುದರೊಂದಿಗೆ ಮುಂಬೈ ಒತ್ತಡವನ್ನು ಮುಂದುವರಿಸಿತು. ತರಬೇತುದಾರ ಡೇವಿಡ್‌ ಲೀ ಅವರ ಅಪಾಯಕಾರಿ ಸೂಪರ್‌ ಪಾಯಿಂಟ್‌ ಕಾಲ್ ಟಾರ್ಪಿಡೋಸ್‌ ತಂಡಕ್ಕೆ ಲಾಭಾಂಶವನ್ನು ತಂದುಕೊಟ್ಟಿತು. ಬೆಂಗಳೂರು ಟಾರ್ಪಿಡೋಸ್‌ ತಂಡ ತಮ್ಮ ಸಂಯಮವನ್ನು ಕಾಯ್ದುಕೊಂಡು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಯಿತು.