ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 60 ಸಾವಿರ ಶಿಕ್ಷಕರ ಹುದ್ದೆಗಳನ್ನು ಆದ್ಯತೆ ಮೇರೆಗೆ ಶೀಘ್ರ ಭರ್ತಿ ಮಾಡದಿದ್ದಲ್ಲಿ ಶಾಲೆಗಳು ಅಧೋಗತಿಗೆ ತಲುಪಲಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು : ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 60 ಸಾವಿರ ಶಿಕ್ಷಕರ ಹುದ್ದೆಗಳನ್ನು ಆದ್ಯತೆ ಮೇರೆಗೆ ಶೀಘ್ರ ಭರ್ತಿ ಮಾಡದಿದ್ದಲ್ಲಿ ಶಾಲೆಗಳು ಅಧೋಗತಿಗೆ ತಲುಪಲಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಶಾಲೆಗಳು ಈಗಾಗಲೇ ಇಳಿಮುಖವಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಿಂದ ದುಸ್ಥಿತಿಗೆ ತಲುಪಿವೆ. ಸಾರ್ವಜನಿಕರ ಆಗ್ರಹಕ್ಕೆ ಮಣಿದು ಸಾವಿರಾರು ಕನ್ನಡ ಶಾಲೆಗಳನ್ನು ಆಂಗ್ಲ ಮಾಧ್ಯಮದ ಶಾಲೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ತಾಯ್ನುಡಿಯ ಶಿಕ್ಷಣದ ವೈಜ್ಞಾನಿಕ ಅವಶ್ಯಕತೆಯನ್ನು ಹಿನ್ನೆಲೆಗೆ ಸರಿಸಲಾಗುತ್ತಿದೆ. ಇದು ಭವಿಷ್ಯದಲ್ಲಿ ಕನ್ನಡವನ್ನು ದುಸ್ಥಿತಿಗೆ ತಳ್ಳಲಿದೆ ಎಂದು ಶುಕ್ರವಾರ ಪತ್ರಿಕಾ ಹೇಳಿಕೆಯಲ್ಲಿ ಬಿಳಿಮಲೆ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಕೊಪ್ಪಳ: ಆರ್ಎಸ್ಎಸ್ ಬಗ್ಗೆ ಪುರುಷೋತ್ತಮ ಬಿಳಿಮಲೆ ಟೀಕೆ, ಸಾಹಿತ್ಯಾಸಕ್ತರ ವಿರೋಧ
ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ 60 ಸಾವಿರ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ಕಳೆದ ಸಾಲಿನಲ್ಲಿ ಕೇವಲ 43 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಇದು ಬೋಧನಾ ವ್ಯವಸ್ಥೆಯನ್ನು ಇನ್ನಷ್ಟು ಸಂಕೀರ್ಣವಾಗಿಸಿದೆ. ಅತಿಥಿ ಶಿಕ್ಷಕರಿಗೆ ನೀಡುವ ಗೌರವಧನವು ನರೇಗಾ ದಿನಗೂಲಿ ಮೊತ್ತಕ್ಕಿಂತ ಕಡಿಮೆ ಇದೆ. ಅವರುಗಳ ಸೇವಾ ಭದ್ರತೆ ಸೇರಿದಂತೆ ಕನಿಷ್ಠ ಅವಕಶ್ಯಕತೆಗಳನ್ನು ಈಡೇರಿಸದಿದ್ದರೆ ಅವರಿಂದ ಬದ್ಧತೆಯ ಕೆಲಸ ನಿರೀಕ್ಷಿಸುವುದು ಕಷ್ಟಸಾಧ್ಯ ಎಂದಿದ್ದಾರೆ.
ಇದನ್ನೂ ಓದಿ: ಕರ್ಮ ಸಿದ್ಧಾಂತ ಶತಮಾನಗಳಿಂದ ನಮ್ಮನ್ನು ಕೊಲ್ಲುತ್ತಿದೆ; ಮೋದಿ ಸರ್ಕಾರ ಬಂದ ಮೇಲೆ ದ್ವಿಗುಣಗೊಂಡಿದೆ: ಡಾ ಪುರುಷೋತ್ತಮ ಬಿಳಿಮಲೆ
ಶತಮಾನ ಕಂಡ ಶಾಲೆಗಳಿಗೆ ಕಾಯಕಲ್ಪ:
ರಾಜ್ಯದಲ್ಲಿ ಶತಮಾನ ಕಂಡ 3500ಕ್ಕೂ ಅಧಿಕ ಸರ್ಕಾರಿ ಶಾಲೆಗಳಿದ್ದು ಇವುಗಳ ಕಾಯಕಲ್ಪಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವರದಿ ಸಿದ್ಧಪಡಿಸುತ್ತಿದ್ದು, ಅದನ್ನು ಶೀಘ್ರ ಸರ್ಕಾರಕ್ಕೆ ಸಲ್ಲಿಸಲಿದೆ. ಶಿಕ್ಷಣ ಇಲಾಖೆಯು ಪ್ರಾಧಿಕಾರಕ್ಕೆ ಸಲ್ಲಿಸಿರುವ ವರದಿಯನ್ನು ಶಿಕ್ಷಣ ತಜ್ಞರ ಮೂಲಕ ಅಧ್ಯಯಿಸಲಾಗುತ್ತಿದ್ದು, ಈಗಾಗಲೇ ಪಾರಂಪರಿಕ ಶಾಲೆಗಳೆಂದು ಹೆಚ್ಚಿನ ಅನುದಾನವನ್ನು ಪಡೆದಿರುವ 143 ಶತಮಾನ ಕಂಡ ಸರ್ಕಾರಿ ಶಾಲೆಗಳ ಸ್ಥಿತಿಗತಿ, ಅನುದಾನದ ಸದುಪಯೋಗ, ಪರ್ಯಾಯ ಕ್ರಮಗಳ ಅಧ್ಯಯನ ಸೇರಿದಂತೆ ಎಲ್ಲ 3500 ಶತಮಾನ ಕಂಡ ಶಾಲೆಗಳ ಸಮಗ್ರ ಚಿತ್ರಣವನ್ನು ಈ ವರದಿಯು ಕಟ್ಟಿಕೊಡಲಿದೆ ಎಂದಿದ್ದಾರೆ.


