ಚಿನ್ನ ಕಳ್ಳ ಸಾಗಣೆ ಆರೋಪದ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರನ್ಯಾ ರಾವ್ ಸೇರಿ ಮೂವರು ಆರೋಪಿಗಳು ಕನಿಷ್ಠ ಒಂದು ವರ್ಷ ಜೈಲಿನಲ್ಲೇ ಇರುವುದು ಖಚಿತವಾಗಿದೆ.
ಬೆಂಗಳೂರು (ಜು.17): ಚಿನ್ನ ಕಳ್ಳ ಸಾಗಣೆ ಆರೋಪದ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರನ್ಯಾ ರಾವ್ ಸೇರಿ ಮೂವರು ಆರೋಪಿಗಳು ಕನಿಷ್ಠ ಒಂದು ವರ್ಷ ಜೈಲಿನಲ್ಲೇ ಇರುವುದು ಖಚಿತವಾಗಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯದ( ಡಿಆರ್‌ಐ) ಅಧಿಕಾರಿಗಳು ಈ ಪ್ರಕರಣದಲ್ಲಿ ರನ್ಯಾ ರಾವ್ ಹಾಗೂ ಆಕೆಯ ಸಹಚರರಾದ ತರುಣ್ ಮತ್ತು ಸಾಹಿಲ್ ಸಕಾರಿಯಾ ಜೈನ್‌ನನ್ನು ಕಾಫಿಪೋಸಾ ಕಾಯ್ದೆ (ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳ ಸಾಗಣೆ ಚಟುವಟಿಕೆಗಳ ತಡೆ) ಅಡಿ ಬಂಧಿಸಿದ್ದರು.
ಈ ಬಂಧನವನ್ನು ಕಾಫಿಪೋಸಾ ಸಲಹಾ ಮಂಡಳಿ ಅನುಮೋದಿಸಿದೆ. ಹೀಗಾಗಿ ಮೂವರು ಆರೋಪಿಗಳಿಗೆ ಕನಿಷ್ಠ ಒಂದು ವರ್ಷದ ಜಾಮೀನು ಸಿಗುವುದಿಲ್ಲ. ಆರೋಪಿಗಳು ಭವಿಷ್ಯದಲ್ಲಿ ಮತ್ತೆ ಚಿನ್ನ ಕಳ್ಳ ಸಾಗಣೆಯಲ್ಲಿ ತೊಡಗಬಾರದು ಎಂಬ ಕಾರಣದಿಂದ ಡಿಆರ್‌ಐ ಅಧಿಕಾರಿಗಳು ಕಾಫಿಪೋಸಾ ಕಾಯ್ದೆ ಜಾರಿಗೊಳಿಸಿದ್ದರು. ಈ ಕಾಯ್ದೆಯನ್ನು ಏಕೆ ಜಾರಿಗೊಳಿಸಲಾಗಿದೆ ಎಂಬುದಕ್ಕೆ ಪೂರಕವಾಗಿ ದಾಖಲೆಗಳನ್ನು ಕಾಪಿಫೋಸಾ ಸಲಹಾ ಮಂಡಳಿಗೆ ಸಲ್ಲಿಸಿದ್ದರು.
ಪರಿಶೀಲನೆ ಮಾಡಿರುವ ಸಲಹಾ ಮಂಡಳಿಯು ಈ ಮೂವರು ಆರೋಪಿಗಳನ್ನು ಡಿಆರ್‌ಐ ಅಧಿಕಾರಿಗಳು ಕಾಫಿಪೋಸಾ ಕಾಯ್ದೆಯಡಿ ಬಂಧಿಸಿರುವುದನ್ನು ಅನುಮೋದಿಸಿದೆ. ಹೀಗಾಗಿ ಮೂವರು ಆರೋಪಿಗಳು ಕನಿಷ್ಠ ಒಂದು ವರ್ಷ ಜೈಲಿನಲ್ಲೇ ಇರುವುದು ಖಚಿತವಾಗಿದೆ. ಗಂಭೀರ ಪ್ರಕರಣಗಳಲ್ಲಿ ಆರೋಪಿಗಳ ಈ ಜೈಲುವಾಸವನ್ನು ಮತ್ತೆ ಒಂದು ವರ್ಷ ವಿಸ್ತರಿಸಲು ಕಾಯ್ದೆಯಲ್ಲಿ ಅವಕಾಶವಿದೆ.
ಪ್ರಕರಣದ ಹಿನ್ನೆಲೆ: ನಟಿ ರನ್ಯಾ ರಾವ್ ಕಳೆದ ಮಾರ್ಚ್ 3ರಂದು ವಿದೇಶದಿಂದ ಚಿನ್ನ ಕಳ್ಳ ಸಾಗಣೆ ಮಾಡಿಕೊಂಡು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾಗ ಕಂದಾಯ ಗುಪ್ತಚರ ನಿರ್ದೇಶನಾಲಯದ(ಡಿಆರ್‌ಐ) ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ಆಕೆಯನ್ನು ಬಂಧಿಸಿದ್ದರು. ಆಕೆಯಿಂದ ಬರೋಬ್ಬರಿ 12.56 ಕೋಟಿ ರು. ಮೌಲ್ಯದ 14 ಕೆ.ಜಿ. 213 ಗ್ರಾಂ ಚಿನ್ನವನ್ನು ಜಪ್ತಿ ಮಾಡಿದ್ದರು.
ಬಳಿಕ ಆಕೆಯ ನಿವಾಸದ ಮೇಲೆ ದಾಳಿ ಮಾಡಿ 2.67 ಕೋಟಿ ರು. ದಾಖಲೆ ಇಲ್ಲದ ನಗದು ಮತ್ತು 2.06 ಕೋಟಿ ರು. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದ ಆಕೆಯ ಸ್ನೇಹಿತರಾದ ತರುಣ್ ಮತ್ತು ಸಾಹಿಲ್ ಸಕಾರಿಯಾ ಜೈನ್‌ನನ್ನು ಬಂಧಿಸಿದ್ದರು. ಗಂಭೀರ ಪ್ರಕರಣವಾದ್ದರಿಂದ ಮೂವರು ಆರೋಪಿಗಳ ವಿರುದ್ಧ ಕಾಫಿಪೋಸಾ ಕಾಯ್ದೆ ಜಾರಿಗೊಳಿಸಿದ್ದರು. ಹೀಗಾಗಿ ಕಳೆದ ನಾಲ್ಕು ತಿಂಗಳಿಂದ ಈ ಮೂವರು ಆರೋಪಿಗಳು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದಾರೆ.


