ಬಳ್ಳಾರಿ ನಗರದಲ್ಲಿ ಪೊಲೀಸರು ಅಕ್ರಮ ದಂಧೆಗಳ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಕಳೆದ ಒಂದು ತಿಂಗಳಲ್ಲಿ ಮಟ್ಕಾ, ಜೂಜಾಟ ಸೇರಿದಂತೆ 127 ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಪೊಲೀಸ್ ದಾಳಿಯಿಂದಾಗಿ ಅನೇಕ ದಂಧೆಕೋರರು ಊರು ಬಿಟ್ಟು ತಲೆಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ.
ಬಳ್ಳಾರಿ (ಫೆ.12) ನಗರದಲ್ಲಿ ನಿರಾತಂಕವಾಗಿ ನಡೆಯುತ್ತಿದ್ದ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಪೊಲೀಸರು, ಕಳೆದ ಒಂದು ತಿಂಗಳ ಅವಧಿಯಲ್ಲಿ 127 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಮಟ್ಕಾ, ಇಸ್ಪೀಟ್ ಜೂಜಾಟ ಮತ್ತಿತರ ದಂಧೆಯಲ್ಲಿ ತೊಡಗಿಸಿಕೊಂಡಿರುವ ಆರೋಪಿಗಳನ್ನು ಸೆರೆ ಹಿಡಿಯುವ ಕೆಲಸ ಮುಂದುವರಿಸಿದ್ದಾರೆ.
ಮಟ್ಕಾ ಜೂಜಾಟದ ಕಿಂಗ್‌ಪಿನ್‌ಗಳ ಮನೆಗಳ ಮೇಲೆ ದಾಳಿ ನಡೆಸುತ್ತಿರುವ ಪೊಲೀಸರು, ಮನೆಯಲ್ಲಿದ್ದ ಜೂಜಾಟಕ್ಕೆ ಸಂಬಂಧಿತ ಸಾಮಗ್ರಿಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ದಾಳಿ ಪ್ರಕ್ರಿಯೆ ವೇಗ ಪಡೆದುಕೊಳ್ಳುತ್ತಿದ್ದಂತೆಯೇ ಅನೇಕ ಅಕ್ರಮ ದಂಧೆಕೋರರು ಊರು ಬಿಟ್ಟು ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಇಸ್ಪೀಟ್ ಜೂಜಾಟ, ಮಟ್ಕಾ, ಅಕ್ರಮ ಮದ್ಯ ಮಾರಾಟ, ಅಕ್ರಮ ಅಕ್ಕಿ ಸಾಗಣೆ ಮಾಡುವ ಸುಮಾರು 100ಕ್ಕೂ ಹೆಚ್ಚು ತಂಡಗಳು ಸಕ್ರಿಯವಾಗಿವೆ ಎಂದು ಹೇಳಲಾಗುತ್ತಿದ್ದು, ಠಾಣಾ ವ್ಯಾಪ್ತಿಯಲ್ಲಿರುವ ವಿವಿಧ ಪ್ರಕರಣಗಳ ಆರೋಪಿಗಳ ವಿಚಾರಣೆ ಮೂಲಕ ಜೂಜುಕೋರ ಕಿಂಗ್‌ಪಿನ್‌ಗಳು ಹಾಗೂ ಬುಕ್ಕಿಗಳನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆಯೇ ಮಾಹಿತಿ ನೀಡಿರುವಂತೆ ಕಳೆದ ಒಂದು ತಿಂಗಳಲ್ಲಿ 47 ಮಟ್ಕಾ ಪ್ರಕರಣ, 24 ಗ್ಯಾಬ್ಲಿಂಗ್, 19 ಅಕ್ರಮ ಮರಳು ಸಾಗಣೆ, 25 ಅಕ್ರಮ ಮದ್ಯ ಮಾರಾಟ ಹಾಗೂ 13 ಪ್ರಕರಣಗಳಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಣೆ ಮಾಡುವ ದಂಧೆ ಕೋರರನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.
ಬಳ್ಳಾರಿ ವಲಯ ಐಜಿಪಿ ಡಾ.ಪಿ.ಎಸ್. ಹರ್ಷ ಹಾಗೂ ಜಿಲ್ಲಾ ಎಸ್ಪಿ ಡಾ.ಸುಮನ್ ಪನ್ನೇಕರ್ ಅವರು ಬಳ್ಳಾರಿಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಅಕ್ರಮ ದಂಧೆಗೆ ಕಡಿವಾಣ ಬೀಳುತ್ತಿದ್ದು, ಇನ್ನೂ ನೂರಾರು ಜನರ ಬಂಧನದ ಸುಳಿವನ್ನು ಪೊಲೀಸರು ನೀಡಿದ್ದಾರೆ.
ಬಳ್ಳಾರಿಯಲ್ಲಿ ಜನವರಿ 1 ರಂದು ಜರುಗಿದ ಬ್ಯಾನರ್ ಗಲಭೆ ಪ್ರಕರಣದಲ್ಲಿ ನಗರದಲ್ಲಿ ನಡೆಯುತ್ತಿರುವ ಅಕ್ರಮ ದಂಧೆಯ ಪ್ರಸ್ತಾಪ ಮುನ್ನೆಲೆಗೆ ಬಂತು. ನಗರದಲ್ಲಿ ವ್ಯಾಪಕವಾಗಿ ಅಕ್ರಮ ದಂಧೆಗಳು ನಡೆಯುತ್ತಿದ್ದು, ನಗರ ಶಾಸಕರು ಬೆಂಬಲ ನೀಡುತ್ತಿದ್ದಾರೆ ಎಂದು ಪ್ರತಿಪಕ್ಷದ ಬಿಜೆಪಿ ನಾಯಕರು ಆರೋಪಿಸಿದ್ದರು. ನಗರದಲ್ಲಿ ಜರುಗಿದ ಬಿಜೆಪಿ ಸಮಾವೇಶದಲ್ಲಿ ಬಳ್ಳಾರಿ ನಗರದಲ್ಲಿನ ಅಕ್ರಮ ದಂಧೆಗಳ ಕುರಿತು ಹೆಚ್ಚು ಪ್ರಸ್ತಾಪವಾಯಿತು. ಬಳ್ಳಾರಿಯಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಳ್ಳಾರಿ ವಲಯ ಐಜಿಪಿ ಹಾಗೂ ಎಸ್ಪಿ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ಅಕ್ರಮ ದಂಧೆಕೋರರ ಕಡಿವಾಣಕ್ಕೆ ಜಿಲ್ಲಾ ಪೊಲೀಸ್ ಕ್ರಮ ವಹಿಸಿದೆ.
ಬಳ್ಳಾರಿಯಲ್ಲಿ ಸ್ಪಾ ಸೆಂಟರ್‌ಗಳು ಬಂದ್
ಅಕ್ರಮ ದಂಧೆಗಳ ಕಡಿವಾಣಕ್ಕೆ ಮುಂದಾಗಿರುವ ಪೊಲೀಸರು ಬಳ್ಳಾರಿಯಲ್ಲಿ ನಡೆಯುತ್ತಿದ್ದ ಸುಮಾರು 20ಕ್ಕೂ ಹೆಚ್ಚು ಸ್ಪಾ ಕೇಂದ್ರಗಳನ್ನು ಬಂದ್ ಮಾಡಿಸಿದ್ದಾರೆ.
ಕೆಲವು ಸ್ಪಾ ಕೇಂದ್ರಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಸ್ಪಾ ಕೇಂದ್ರದ ಮಾಲೀಕರೇ ಪುಷ್ಠಿ ನೀಡುತ್ತಿದ್ದಾರೆ. ಅನೇಕ ಸ್ಪಾ ಕೇಂದ್ರಗಳು ಪರವಾನಿಗೆ ಪಡೆಯದೆ ಸ್ಥಳೀಯ ರಾಜಕೀಯ ಪ್ರಭಾವಿಗಳ ಹೆಸರೇಳಿಕೊಂಡು ದಂಧೆ ನಡೆಸುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪನ್ನೇಕರ್ ಅವರು ಸ್ಪಾ ಕೇಂದ್ರಗಳನ್ನು ಮುಚ್ಚುವಂತೆ ಸೂಚನೆ ನೀಡಿದ್ದು, ಈ ಹಿನ್ನಲೆಯಲ್ಲಿ ಬಂದ್ ಮಾಡಲಾಗಿದೆ ಎಂದು ಸ್ಪಾ ಕೇಂದ್ರಗಳ ಮಾಲೀಕರು ತಿಳಿಸಿದ್ದಾರೆ. ಅನೈತಿಕ ಚಟುವಟಿಕೆ ಕಡಿವಾಣ ನೆಪದಲ್ಲಿ ಎಲ್ಲ ಸ್ಪಾ ಕೇಂದ್ರಗಳನ್ನು ಬಂದ್ ಮಾಡುವುದು ಎಷ್ಟು ಸರಿ ? ಎಂಬ ಪ್ರಶ್ನೆಯೂ ಎದುರಾಗಿದ್ದು, ಶೀಘ್ರವೇ ಸ್ಪಾ ಕೇಂದ್ರದ ಮಾಲೀಕರ ಸಭೆ ಕರೆದು ಚರ್ಚಿಸುವುದಾಗಿ ಎಸ್ಪಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ದಂಧೆಯಲ್ಲಿ ಕೇರಳ ನಂಟು ಏಳು ಆರೋಪಿಗಳ ಬಧನ
ಜಿಲ್ಲೆಯಲ್ಲಿ ಇತ್ತೀಚೆಗೆ ಪತ್ತೆಯಾದ ಬೃಹತ್ ಪ್ರಮಾಣದ ಅಕ್ರಮ ಯೂರಿಯಾ ಗೊಬ್ಬರ ಜಾಲಕ್ಕೆ ಈಗ ಅಂತರರಾಜ್ಯ ನಂಟು ಇರುವುದು ದೃಢಪಟ್ಟಿದೆ. ಕಳೆದ ಶುಕ್ರವಾರ ಬಳ್ಳಾರಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಪೊಲೀಸರು ದಾಳಿ ನಡೆಸಿ 3,575 ಚೀಲ ಯೂರಿಯಾವನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಈಗ ಕೇರಳ ಮೂಲದ ವಿಪಿನ್ ಅಲಿಯಾಸ್ ಕಾರ್ತಿಕ್ ಎಂಬಾತನನ್ನು ಬಂಧಿಸಿದ್ದಾರೆ. ಇದರೊಂದಿಗೆ ಈ ಅಕ್ರಮ ದಂಧೆಯ ಹಿಂದೆ ಕೇರಳದ ಪ್ರಬಲ ಜಾಲವಿರುವುದು ಸಾಬೀತಾಗಿದ್ದು, 'ಸುವರ್ಣ ನ್ಯೂಸ್' ಈ ಮೊದಲೇ ಬಿತ್ತರಿಸಿದ್ದ ವರದಿ ಈಗ ನಿಜವಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಇಬ್ಬರು ಫರ್ಟಿಲೈಸರ್ ಟ್ರೇಡರ್ಸ್ ಸೇರಿದಂತೆ ಒಟ್ಟು ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ದಂಧೆಕೋರರು ಸರ್ಕಾರದಿಂದ ಸಬ್ಸಿಡಿ ದರದಲ್ಲಿ ರೈತರಿಗೆ ಬರುವ ಯೂರಿಯಾವನ್ನು ಅಕ್ರಮವಾಗಿ ಸಂಗ್ರಹಿಸುತ್ತಿದ್ದರು. ನಂತರ ಆ ಚೀಲಗಳನ್ನು ಬದಲಿಸಿ, ಅವುಗಳ ಮೇಲೆ 'ಟೆಕ್ನಿಕಲ್ ಗ್ರೇಡ್ ಯೂರಿಯಾ, ಇಂಡಸ್ಟ್ರೀಸ್ ಬಳಕೆಗೆ ಮಾತ್ರ' ಎಂಬ ಸುಳ್ಳು ಲೇಬಲ್ ಅಂಟಿಸುತ್ತಿದ್ದರು. ಈ ಮೂಲಕ ಕೃಷಿ ಬಳಕೆಯ ಗೊಬ್ಬರವನ್ನು ಖಾಸಗಿ ಕಾರ್ಖಾನೆಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ದೋಚುತ್ತಿದ್ದರು ಎಂಬ ಸ್ಫೋಟಕ ಮಾಹಿತಿ ಹೊರಬಂದಿದೆ.
ಕೇವಲ ಅನ್ಯ ರಾಜ್ಯಗಳಿಗೆ ಮಾತ್ರವಲ್ಲದೆ, ಈ ಗೊಬ್ಬರವನ್ನು ಕೇರಳ ಮತ್ತು ತಮಿಳುನಾಡಿನ ಮೂಲಕ ಶ್ರೀಲಂಕಾಗೂ ಕಳ್ಳಸಾಗಾಟ ಮಾಡಲಾಗುತ್ತಿತ್ತು ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಬಿತ್ತನೆ ಸಮಯದಲ್ಲಿ ರೈತರು ಯೂರಿಯಾ ಸಿಗದೆ ಪರದಾಡುತ್ತಿದ್ದರೆ, ಇತ್ತ ದಂಧೆಕೋರರು ಕೃತಕ ಅಭಾವ ಸೃಷ್ಟಿಸಿ ಲಾಭ ಮಾಡಿಕೊಳ್ಳುತ್ತಿದ್ದರು. ಈ ಅಕ್ರಮದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ಆ ದಿಕ್ಕಿನಲ್ಲಿಯೂ ತನಿಖೆ ಮುಂದುವರಿದಿದೆ.



