ಕೆಜಿ ಹಳ್ಳಿ ಪಿಎಸ್‌ಐ ನಾಗರಾಜ್ ಪತ್ನಿ ಶಾಲಿನಿ ಹೆಚ್‌ಬಿಆರ್ ಲೇಔಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾಂಪತ್ಯ ಕಲಹ ಕಾರಣ ಎನ್ನಲಾಗಿದೆ. ಮೊದಲ ಪತಿಗೆ ವಿಚ್ಛೇದನ ನೀಡಿ ನಾಗರಾಜ್‌ರನ್ನು ವಿವಾಹವಾಗಿದ್ದ ಶಾಲಿನಿ, ನಾಗರಾಜ್ ಮನೆ ಬಿಟ್ಟು ಹೋದ ಬಳಿಕ ನೇಣಿಗೆ ಶರಣಾಗಿದ್ದಾರೆ. ಏಳು ವರ್ಷದ ಮಗುವನ್ನು ಅನಾಥವಾಗಿ ಬಿಟ್ಟು ಹೋಗಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು (ಮೇ 20): ಬೆಂಗಳೂರಿನ ಕೆಜಿ ಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ನಾಗರಾಜ್ ಅವರ ಪತ್ನಿ ಶಾಲಿನಿ ಹೆಚ್ ಬಿಆರ್ ಲೇಔಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆಗೆ ದಾಂಪತ್ಯ ಕಲಹವೇ ಕಾರಣವೆಂದು ಹೇಳಲಾಗುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಇಳಕಲ್ ಮೂಲದ ಶಾಲಿನಿ ಹಾಗೂ ಪಿಎಸ್‌ಐ ನಾಗರಾಜ್ ಅವರು ಚಿಕ್ಕಂದಿನಲ್ಲಿ ಟ್ಯೂಷನ್ ಮೇಟ್ಸ್ ಆಗಿದ್ದರು. ನಂತರ ಶಾಲಿನಿಯವರು ಎಂ.ಎಸ್.ಸಿ ಪದವಿ ಹೊಂದಿದ್ದು, ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗ ಮಾಡಿಕೊಂಡಿದ್ದರು. ನಾಗರಾಜ್ ಅವರು ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಇದ್ದಾಗ ಶಾಲಿನಿ ಆರ್ಥಿಕ ಸಹಾಯ ಸಹ ಮಾಡಿದ್ದರು. ಇನ್ನು ಶಾಲಿಯೊಂದಿಗೆ ನಾಗರಾಜ್ ಪ್ರೀತಿ-ಪ್ರೇಮ-ಪ್ರಣಯವನ್ನು ನಡೆಸಿದ್ದಾರೆ.
ನಾಗರಾಜ್ ಎಸ್‌ಐ ಆಗಿರುವ ಹಿನ್ನೆಲೆಯಲ್ಲಿ ಶಾಲಿನಿ ತನ್ನ ಮೊದಲ ಗಂಡನಿಗೆ ಡಿವೋರ್ಸ್ ನೀಡಿ 2024ರ ಆಗಸ್ಟ್‌ನಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನಾಗರಾಜ್ ಅವರೊಂದಿಗೆ ಮದುವೆಯಾಗಿದ್ದರು. ಮದುವೆಯ ನಂತರ, ದಂಪತಿ ಹೆಚ್ ಬಿಆರ್ ಲೇಔಟ್‌ನಲ್ಲಿ ವಾಸವಿದ್ದರು. ಆದರೆ ಕಳೆದ ಎರಡು ತಿಂಗಳಿನಿಂದ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಶಾಲಿನಿಯವರೊಂದಿಗೆ ಇರುವ ಮನೆ ಬಿಟ್ಟು ಬೇರೆಡೆ ನಾಗರಾಜ್ ವಾಸವಾಗಿದ್ದರು. ಇನ್ನು ನಾಗರಾಜ್ ಮನೆ ಬಿಟ್ಟು ಹೋಗಿದ್ದಕ್ಕೆ ಶಾಲಿನಿ ತೀವ್ರ ಅಸಹನೆ ವ್ಯಕ್ತಪಡಿಸಿದ್ದರು.
ಇದಾದ ನಂತರ ನಿನ್ನೆ ರಾತ್ರಿ ಶಾಲಿನಿಯವರು 'ರೈಲಿಗೆ ಸಿಲುಕಿ ಸಾಯುವುದಾಗಿ ಹೇಳಿ' ಎಂದು ಮನೆಯಿಂದ ಹೊರಟಿದ್ದರು. ಆಗ ರಾತ್ರಿ ಗಸ್ತು ತಿರುಗುತ್ತುದ್ದ ಹೊಯ್ಸಳ ಪೊಲೀಸರೊಬ್ಬರು ಶಾಲಿನಿಯವರನ್ನು ರಕ್ಷಿಸಿ ಮನೆಗೆ ತಂದು ಬಿಟ್ಟು ಹಗಿದ್ದರು. ಆದರೆ ಶಾಲಿನಿ ಮನೆ ತಲುಪಿದ ಕೆಲವೇ ಕ್ಷಣಗಳಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಘಟನೆ ನಡೆದ ಸ್ಥಳಕ್ಕೆ ಗೋವಿಂದಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಿಎಸ್‌ಐ ನಾಗರಾಜ್ ಅವರನ್ನು ಮೇಲಾಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಶಾಲಿನಿಯವರ ಕುಟುಂಬದವರಿಂದ ಲಿಖಿತ ದೂರು ಸಿಕ್ಕ ನಂತರ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಮಹತ್ವದ ವಿಚಾರವೆಂದರೆ, ಶಾಲಿನಿಯವರು ಈ ಹಿಂದೆ ಪತಿ ನಾಗರಾಜ್ ವಿರುದ್ಧ ಕೋಣನಕುಂಟೆ ಠಾಣೆಯಲ್ಲಿ ದೂರು ನೀಡಿದ್ದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಕುರಿತಂತೆ ಇಲಾಖಾ ತನಿಖೆಯೂ ನಡೆದಿತ್ತು. ಇನ್ನು ಮೃತ ಶಾಲಿನಿಯವರಿಗೆ ಈಗಾಗಲೇ ಮೊದಲ ಗಂಡನಿಂದ ಒಬ್ಬ ಏಳು ವರ್ಷದ ಮಗುವೂ ಇದೆ. ಇದೀಗ ಮಗುವಿನ ಸ್ಥಿತಿ ಅನಾಥ ಆಗುವಂತಾಗಿದೆ. ತನ್ನ ಅಪ್ಪನೂ ಇಲ್ಲದೇ, ಮಲತಂದೆಯೂ ಇಲ್ಲದೆ ಹೋದಲ್ಲಿ ಯಾರ ಆಶ್ರಯದಲ್ಲಿ ಬೆಳೆಯುತ್ತದೆ ಎಂಬ ಪರಿಸ್ಥಿತಿ ಮನಕಲಕುವಂತಿದೆ.


