ರೌಡಿಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ ವಿರುದ್ಧ ಎಫ್‌ಐಆರ್ ದಾಖಲು. ಮೃತನ ತಾಯಿ ಶಾಸಕರ ವಿರುದ್ಧ ಕೊಲೆಗೆ ಕುಮ್ಮಕ್ಕು ನೀಡಿದ ಆರೋಪ ಮಾಡಿದ್ದಾರೆ. ಬೈರತಿ ಬಸವರಾಜ್ ಆರೋಪವನ್ನು ತಳ್ಳಿಹಾಕಿದ್ದಾರೆ.
ಬೆಂಗಳೂರು (ಜು.16): ನಿನ್ನೆ ರಾತ್ರಿ ನಡೆದ ರೌಡಿಶೀಟರ್ ಬಿಕ್ಲು ಶಿವು (ಶಿವಪ್ರಕಾಶ್) ಕೊಲೆ ಪ್ರಕರಣದಲ್ಲಿ ಮಹದೇವಪುರ ಕ್ಷೇತ್ರದ ಶಾಸಕ ಮತ್ತು ಮಾಜಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಎಫ್ಐಆರ್‌ನಲ್ಲೇ ಎ-5 ಆರೋಪಿ ಎಂದು ಉಲ್ಲೇಖಗೊಂಡಿರುವುದು ಭಾರಿ ರಾಜಕೀಯ ಬೆಳವಣಿಗೆಯಾಗಿದೆ. ಈ ಕುರಿತ ಎಫ್ಐಆರ್ ಪ್ರತಿ 'ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.
ಬೈರತಿ ಬಸವರಾಜ್ ವಿರುದ್ಧ ಗಂಭೀರ ಆರೋಪ
ಮೃತನ ತಾಯಿ ವಿಜಯಲಕ್ಷ್ಮಿ ಕೊಟ್ಟಿರುವ ದೂರಿನಲ್ಲಿ, ' ನನ್ನ ಮಗ ಶಿವನ ಕೊಲೆಗೆ ಮಾಜಿ ಸಚಿವ ಬಸವರಾಜ್ ಮತ್ತು ಇನ್ನಿತರರು ನೇರವಾಗಿ ಕುಮ್ಮಕ್ಕು ನೀಡಿದ್ದಾರೆ' ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈರತಿ ಬಸವರಾಜ್‌ರನ್ನು ಐದನೇ ಆರೋಪಿ ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ. ನನ್ನ ಮಗ ಶಿವಪ್ರಕಾಶ್ ಕಿತಕ್ನೂರಿನಲ್ಲಿ 2023ರಲ್ಲಿ ಒಂದು ಸೈಟ್ ತೆಗೆದುಕೊಂಡು ಅದನ್ನು ಜಿಪಿಎ ಮಾಡಿಸಿಕೊಂಡಿದ್ದನು. ಈ ನಿವೇಶನದ ಕಾವಲಿಗೆ ಇಬ್ಬರು ಮಹಿಳೆಯರನ್ನು ನೇಮಕ ಮಾಡಿದ್ದನು. ಆದರೆ, ಈ ಸ್ಥಳಕ್ಕೆ ಕಿರಣ್ ಮತ್ತು ಜಗದೀಶ್ ಎನ್ನುವವರು ಫೆಬ್ರವರಿ ತಿಂಗಳಲ್ಲಿ ಬಂದು ಭದ್ರತಾ ಸಿಬ್ಬಂದಿಯನ್ನು ಹೊಡೆದು ಅಲ್ಲಿಂದ ಕಳಿಸಿದ್ದಾರೆ. ನಂತರ ನನ್ನ ಮಗನಿಗೆ ಕರೆ ಮಾಡಿ ಈ ನಿವೇಶನವನ್ನು ತಮ್ಮ ಹೆಸರಿಗೆ ಬರೆದುಕೊಡುವಂತೆ ಬೆದರಿಕೆ ಹಾಕಿದ್ದಾರೆ.
ಆದರೆ, ನನ್ನ ಮಗ ನಿಮಗೆ ಕೊಡುವುದಿಲ್ಲವೆಂದು ಹೇಳಿ ಕರೆ ಕಟ್ ಮಾಡಿದ್ದಾನೆ. ಇದಾದ ಮೇಲೆ ಆತನಿಗೆ ಪದೇ ಪದೆ ಕರ ಮಾಡಿ ನೀವೇಶನ ನಮ್ಮ ಹೆಸರಿಗೆ ಮಾಡಿಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದನ್ನು ನನ್ನ ಮಗ ಮನೆಯಲ್ಲಿಯೂ ಹೇಳಿಕೊಂಡಿದ್ದನು. ಆಗ ಸ್ವತಃ ಅವನೇ ಹೋಗಿ ಪೊಲೀಸ್ ಠಾಣೆಯಲ್ಲಿ ಜಗದೀಶ್, ಕಿರಣ್ ಹಾಗೂ ಶಾಸಕ ಬೈರತಿ ಬಸವರಾಜ್ ಅವರಿಂದ ಜೀವಕ್ಕೆ ಅಪಾಯವಿದೆ ಎಂದು ದೂರು ನೀಡಿದ್ದಾನೆ. ಆದರೂ ಪೊಲೀಸರು ರಕ್ಷಣೆಗೆ ಬಂದಿಲ್ಲ. ನಿನ್ನೆ ಡ್ರೈವರ್ ಮತ್ತು ಇನ್ನೊಬ್ಬ ಸ್ನೇಹಿತನೊಂದಿಗೆ ರಾತ್ರಿ 8 ಗಂಟೆ ಸುಮಾರಿಗೆ ನನ್ನ ಮಗ ಮನೆಯಿಂದ ಹೊರಗೆ ಮಾತನಾಡುತ್ತಿರುವಾಗ 8 ಜನ ಗೂಂಡಾಗಳು ಬಂದು ನನ್ನ ಮಗನನ್ನು ಭೀಕರವಾಗಿ ಮಚ್ಚು ಸೇರಿದಂತೆ ವಿವಿಧ ಆಯುಧಗಳಿಂದ ಕೊಚ್ಚಿ ಕೊಲೆ ಮಾಡುತ್ತಿರುವ ದೃಶ್ಯ ಕಂಡುಬಂದಿದೆ. ಕೂಡಲೇ ಸಹಾಯಕ್ಕೆ ಕೂಗಿಕೊಂಡಾಗ ಜನರು ಬಂದು ಸೇರುವಷ್ಟರಲ್ಲಿ ನನ್ನ ಮಗನನ್ನು ಕೊಲೆ ಮಾಡಿ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಮತ್ತು ಬೈಕ್‌ನಲ್ಲಿ ಕೊಲೆಪಾತಕರು ಪಾರಾರಿ ಆಗಿದ್ದಾರೆ.
ಕಿತಕ್ನೂರಿನಲ್ಲಿನ ಆಸ್ತಿಯ ವಿಚಾರವಾಗಿ ಜಗದೀಶ್, ಕಿರಣ್, ವಿಮಲ, ಅನಿಲ್ ಮತ್ತು ಇತರರು ಸೇರಿ ಶಾಸಕ ಬೈರತಿ ಬಸವರಾಜ್ ಅವರ ಕುಮ್ಮಕ್ಕಿನ ಮೇರೆಗೆ ನನ್ನ ಮಗನನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಿ ಹೋಗಿದ್ದಾರೆ. ಈ ಎಲ್ಲ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೃತನ ತಾಯಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಶಾಸಕ ಬಸವರಾಜ್ ಪ್ರತಿಕ್ರಿಯೆ: ರಾಜಕೀಯ ಪಿತೂರಿ
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬೈರತಿ ಬಸವರಾಜ್, 'ನಾನು ಯಾವುದೇ ರೀತಿಯಲ್ಲಿ ಈ ಪ್ರಕರಣಕ್ಕೆ ಸಂಬಂಧಪಟ್ಟಿಲ್ಲ. ನಾನು ಈ ವಿಷಯವನ್ನು ಮಾಧ್ಯಮಗಳಿಂದ ತಿಳಿದು ಅಚ್ಚರಿಯಾಯಿತು ಮತ್ತು ನೋವಾಯ್ತು. ನಾನು ನನ್ನ ಕ್ಷೇತ್ರದ ಜನ ಸಮಸ್ಯೆಗಳ ಪರಿಹಾರಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಜಮೀನು ವ್ಯವಹಾರಗಳ ಬಗ್ಗೆ ನನ್ನ ಯಾವುದೇ ಸಂಪರ್ಕವಿಲ್ಲ. ಯಾರೋ ಸುಳ್ಳು ಆರೋಪ ಮಾಡಿ ನನ್ನನ್ನು ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ. 'ಈ ಜಮೀನು ಮಹದೇವಪುರ ಕ್ಷೇತ್ರದಲ್ಲಿದೆ. ಕೆ.ಆರ್.ಪುರ ಕ್ಷೇತ್ರಕ್ಕೆ ಯಾವುದೇ ಸಂಬಂಧವಿಲ್ಲ. ಈ ಪ್ರಕರಣ ರಾಜಕೀಯ ದುರುದ್ದೇಶದಿಂದ ನಡೆದಿದೆ. ನಿಷ್ಠಾವಂತ ರಾಜಕಾರಣಿಯ ಮೇಲಿನ ಆರ್ಭಟ ಮಾತ್ರವಿದು' ಎಂದು ಹೇಳಿದರು.
ಪೊಲೀಸ್ ತನಿಖೆ ಮಹತ್ವಪೂರ್ಣ ಹಂತಕ್ಕೆ
ಈ ಕೊಲೆ ಪ್ರಕರಣದ ತನಿಖೆ ಈಗ ಮಹತ್ವಪೂರ್ಣ ಹಂತಕ್ಕೆ ತಲುಪಿದ್ದು, ಬೆನ್ನುಹತ್ತಿದ ಪೊಲೀಸರು ಶೀಘ್ರದಲ್ಲೇ ಇತರ ಆರೋಪಿಗಳ ಬಂಧನದತ್ತ ಮುಂದಾಗುತ್ತಿದ್ದಾರೆ. ಮಾಜಿ ಸಚಿವರ ಹೆಸರು ಎಫ್‌ಐಆರ್‌ನಲ್ಲಿ ಇರಿರುವುದು ಪ್ರಕರಣವನ್ನು ರಾಜಕೀಯವಾಗಿ ಮತ್ತಷ್ಟು ಭಾರೀ ಮಾಡಲಿದೆ.


