ಬೆಂಗಳೂರಿಗೆ 2ನೇ ವಿಮಾನನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕನಕಪುರ ರಸ್ತೆಯಿಂದ ಮೈಸೂರು ರಸ್ತೆ ನಡುವಿನ ಚೂಡಹಳ್ಳಿ, ಕನಕಪುರ ರಸ್ತೆಯ ಸೋಮನಹಳ್ಳಿ ಮತ್ತು ನೆಲಮಂಗಲ ಬಳಿಯಲ್ಲಿ ಜಾಗಗಳನ್ನು ಗುರುತಿಸಲಾಗಿತ್ತು.

ಗಿರೀಶ್‌ ಗರಗ

ಬೆಂಗಳೂರು (ಡಿ.24): ಬೆಂಗಳೂರಿಗೆ 2ನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸಂಬಂಧಿಸಿದಂತೆ ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ (ಎಎಐ) ಸೂಕ್ತ ಸ್ಥಳ ಆಯ್ಕೆ ಮಾಡಿಲ್ಲ. ಹೀಗಾಗಿ ಈಗಾಗಲೇ ಗುರುತಿಸಲಾಗಿರುವ 3 ಸ್ಥಳಗಳ ಪೈಕಿ ಯಾವುದು ವಿಮಾನನಿಲ್ದಾಣ ನಿರ್ಮಾಣಕ್ಕೆ ಸೂಕ್ತ ಎಂದು ಕಂಡುಕೊಳ್ಳಲು ಕಾರ್ಯತಂತ್ರ ಮತ್ತು ತಾಂತ್ರಿಕ ಕಾರ್ಯಸಾಧ್ಯತಾ ಅಧ್ಯಯನ ವರದಿ ಸಿದ್ಧಪಡಿಸಲು ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ) ಮುಂದಾಗಿದೆ. ಬೆಂಗಳೂರಿಗೆ 2ನೇ ವಿಮಾನನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕನಕಪುರ ರಸ್ತೆಯಿಂದ ಮೈಸೂರು ರಸ್ತೆ ನಡುವಿನ ಚೂಡಹಳ್ಳಿ, ಕನಕಪುರ ರಸ್ತೆಯ ಸೋಮನಹಳ್ಳಿ (ಬನ್ನೇರುಘಟ್ಟ ಸಮೀಪ) ಮತ್ತು ನೆಲಮಂಗಲ ಬಳಿಯಲ್ಲಿ ಜಾಗಗಳನ್ನು ಗುರುತಿಸಲಾಗಿತ್ತು. ಕಳೆದ ಕೆಲ ತಿಂಗಳ ಹಿಂದೆ ಎಎಐ ತಂಡ ಆ ಜಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೂಲಂಕುಷ ವರದಿಯನ್ನು ನೀಡಿತ್ತು.

ಅದಾದ ನಂತರ ಎಎಐ ನೀಡಿದ ವರದಿಯಲ್ಲಿ ಮೂರು ಜಾಗಗಳಲ್ಲಿ ವಿಮಾನನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಿಷ್ಟ ನಿರ್ಧಾರವನ್ನು ಎಎಐ ತಿಳಿಸಿರಲಿಲ್ಲ. ಬದಲಿಗೆ ಆ ಜಾಗಗಳಲ್ಲಿನ ಲೋಪದೋಷಗಳನ್ನು ಮಾತ್ರ ತಿಳಿಸಲಾಗಿತ್ತು. ಅದರ ಆಧಾರದಲ್ಲಿ ರಾಜ್ಯ ಸರ್ಕಾರ ಕಾರ್ಯತಂತ್ರ ಮತ್ತು ತಾಂತ್ರಿಕ ಕಾರ್ಯಸಾಧ್ಯತೆ ಅಧ್ಯಯನಕ್ಕೆ ಮುಂದಾಗಿದೆ. ಅದಕ್ಕಾಗಿ ಕೆಎಸ್‌ಐಐಡಿಸಿ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಅದರ ಮೂಲಕ ಕಾರ್ಯತಂತ್ರ ಮತ್ತು ತಾಂತ್ರಿಕ ಕಾರ್ಯಸಾಧ್ಯತಾ ಅಧ್ಯಯನ ನಡೆಸಿ ವರದಿ ನೀಡಲು ಖಾಸಗಿ ಸಂಸ್ಥೆ ಆಯ್ಕೆ ಮಾಡಲು ನಿರ್ಧರಿಸಲಾಗಿದೆ.

ಯಾವೆಲ್ಲ ಅಂಶಗಳ ಅಧ್ಯಯನ: ಕಾರ್ಯತಂತ್ರ ಮತ್ತು ತಾಂತ್ರಿಕ ಕಾರ್ಯಸಾಧ್ಯತಾ ಅಧ್ಯಯನ ನಡೆಸಲು ನೇಮಿಸಲಾಗುವ ಖಾಸಗಿ ಸಂಸ್ಥೆಯು ಎಎಐ ನೀಡಿರುವ ವರದಿಯ ಮೌಲ್ಯಮಾಪನ ಮಾಡಬೇಕಿದೆ. ಅದರ ನಂತರ ರಾಜ್ಯ ಸರ್ಕಾರ ಗುರುತಿಸಿರುವ 3 ಸ್ಥಳಗಳ ಸ್ಥಳ ಪರಿಶೀಲನೆ ನಡೆಸಿ ಮೌಲ್ಯಮಾಪನ ಮಾಡಬೇಕಿದೆ. ಹಾಗೆಯೇ, ಆ ಸ್ಥಳಗಳ ಭೌತಿಕ ಗುಣಲಕ್ಷಣಗಳು, ಮಳೆ ಸೇರಿದಂತೆ ಹವಾಮಾನ ದೃಷ್ಟಿಕೋನವನ್ನು ಅಧ್ಯಯನ ನಡೆಸಬೇಕು. ವಿದ್ಯುತ್‌, ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ, ತ್ಯಾಜ್ಯ ವಿಲೇವಾರಿ ಸೇರಿದಂತೆ ಅಗತ್ಯ ಮೂಲಸೌಕರ್ಯದ ಲಭ್ಯತೆ ಬಗ್ಗೆ ಕಾರ್ಯತಂತ್ರ ಮತ್ತು ತಾಂತ್ರಿಕ ಕಾರ್ಯಸಾಧ್ಯತಾ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಬೇಕು ಎಂದು ಕೆಎಸ್‌ಐಐಡಿಸಿ ಟೆಂಡರ್ ದಾಖಲೆಯಲ್ಲಿ ಉಲ್ಲೇಖಿಸಿದೆ.

ಅದರೊಂದಿಗೆ ಬಾಹ್ಯರೇಖೆ ಸಮೀಕ್ಷೆ, ಸ್ಥಳಾಕೃತಿ ಸಮೀಕ್ಷೆ, ಭೂತಾಂತ್ರಿಕ ಸಮೀಕ್ಷೆ, ಮಣ್ಣಿನ ಗುಣಲಕ್ಷಣಗಳು, ಮಣ್ಣಿನ ಸಂಸ್ಕರಣೆ ಅಥವಾ ಸುಧಾರಣಾ ಅವಶ್ಯಕತೆಗಳು, ಜಲವಿಜ್ಞಾನ ಸಮೀಕ್ಷೆ, ಕಾಲುವೆಗಳ ಮಾರ್ಗ ಬದಲಾವಣೆ ಮತ್ತು ಸುತ್ತಮುತ್ತಲಿನ ಜಲಮೂಲಗಳ ಸಂಪರ್ಕ, ವಿಮಾನನಿಲ್ದಾಣಕ್ಕಿರುವ ರಸ್ತೆ ಸೇರಿದಂತೆ ಮತ್ತಿತರ ಸಂಪರ್ಕದ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಬೇಕಿದೆ. ಮುಖ್ಯವಾಗಿ ವಿಮಾನನಿಲ್ದಾಣ ನಿರ್ಮಾಣ ಪ್ರದೇಶದ ಸುತ್ತಲಿನ ನೈಸರ್ಗಿ ಉದ್ಯಾನ, ವನ್ಯಜೀವಿ ಅಭಯಾರಣ್ಯಗಳಿವೆಯೇ, ವಿಮಾನನಿಲ್ದಾಣ ನಿರ್ಮಾಣದಿಂದ ಅವುಗಳ ಮೇಲಾಗುವ ಪರಿಣಾಮ ಹಾಗೂ ಅರಣ್ಯ ಮರುಹೊಂದಿಸುವ ಕುರಿತಂತೆಯೂ ವರದಿಯಲ್ಲಿ ಶಿಫಾರಸು ಮಾಡಬೇಕು ಎಂದು ತಿಳಿಸಲಾಗುತ್ತಿದೆ.

ಪ್ರಯಾಣಿಕರ ಸಂಖ್ಯೆಗೂ ಒತ್ತು: ವಿಮಾನನಿಲ್ದಾಣ ನಿರ್ಮಾಣಕ್ಕೆ ಸೂಕ್ತ ಸ್ಥಳ ಗುರುತಿಸುವುದರ ಜತೆಗೆ, ವಿಮಾನನಿಲ್ದಾಣ ನಿರ್ಮಾಣದ ನಂತರ ಆ ಭಾಗದಲ್ಲಿ ಪ್ರಯಾಣಿಕರ ಸಂಖ್ಯೆ ಎಷ್ಟಾಗಲಿದೆ ಎಂಬ ಬಗ್ಗೆಯೂ ಅಧ್ಯಯನ ವರದಿ ಮೂಲಕ ತಿಳಿದುಕೊಳ್ಳಲು ಕೆಎಸ್‌ಐಐಡಿಸಿ ನಿರ್ಧರಿಸಿದೆ. ಅದಕ್ಕಾಗಿ ಕಾರ್ಯತಂತ್ರ ಮತ್ತು ತಾಂತ್ರಿಕ ಕಾರ್ಯಸಾಧ್ಯತಾ ಅಧ್ಯಯನ ಕಾರ್ಯ ಪಡೆಯುವ ಸಂಸ್ಥೆಯು ಮುಂದಿನ 30 ವರ್ಷಗಳಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ಪ್ರಯಾಣಿಕರ ಸಂಖ್ಯೆ ಎಷ್ಟು ಹೆಚ್ಚಳವಾಗಲಿದೆ, ಕಾರ್ಗೋ (ಸರಕು) ಸಾಗಣೆ ಪ್ರಮಾಣ ಎಷ್ಟಾಗಲಿದೆ ಎಂಬುದರ ಬಗ್ಗೆಯೂ ವರದಿಯಲ್ಲಿ ವಿವರಿಸಬೇಕು ಎಂದು ಟೆಂಡರ್‌ ದಾಖಲೆಯಲ್ಲಿ ಕೆಎಸ್‌ಐಐಡಿಸಿ ತಿಳಿಸಿದೆ. ಜತೆಗೆ ಮೂರು ಸ್ಥಳಗಳಲ್ಲಿ ವಿಮಾನನಿಲ್ದಾಣ ನಿರ್ಮಾಣ ಮಾಡಬೇಕೆಂದರೆ ಎಷ್ಟು ವೆಚ್ಚವಾಗಲಿದೆ ಎಂಬುದನ್ನೂ ಕೂಡ ಅಧ್ಯಯನ ವರದಿಯಲ್ಲಿ ತಿಳಿಸಬೇಕು ಎಂದು ನಿರ್ದೇಶಿಸಲಾಗುತ್ತಿದೆ.

ರಾಜ್ಯ ಸರ್ಕಾರ ಗುರುತಿಸಿರುವ ಜಾಗದ ವಿವರ: ಚೂಡಹಳ್ಳಿ: 4,655.75 ಎಕರೆ, ಸೋಮನಹಳ್ಳಿ (ಬನ್ನೇರುಘಟ್ಟ ಸಮೀಪ): 4,376.65 ಎಕರೆ, ನೆಲಮಂಗಲ ಬಳಿ: 4,695.75 ಎಕರೆ

ಎಎಐ ವರದಿಯಲ್ಲೇನಿತ್ತು

ಎಎಐ ತಂಡ ನೀಡಿದ್ದ ವರದಿಯಲ್ಲಿ 3 ಜಾಗಗಳೂ ಸಮತಟ್ಟಿನಿಂದ ಕೂಡಿರದೇ ಏರುಪೇರಿನಿಂದ ಕೂಡಿದ್ದು, ಸರಾಸರಿ 60 ಮೀ.ನಿಂದ 90 ಮೀ.ವರೆಗೆ ಸಮತಟ್ಟು ಮಾಡಿಕೊಳ್ಳಬೇಕಾಗುತ್ತದೆ. ಇದು ಯೋಜನಾ ವೆಚ್ಚವನ್ನು ಹೆಚ್ಚಿಸಲಿದೆ. ಚೂಡಹಳ್ಳಿ ಹಾಗೂ ಸೋಮನಹಳ್ಳಿ ಭಾಗದ ಪ್ರದೇಶಗಳು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಸಮೀಪದಲ್ಲಿದ್ದು, ಇದು ವೈಮಾನಿಕ ಚಟುವಟಿಕೆಗಳಿಂದ ವನ್ಯಜೀವಿಗಳ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿಸಲಾಗಿತ್ತು. ನೆಲಮಂಗಲ ಬಳಿಯ ಜಾಗದಲ್ಲಿ ಬೆಟ್ಟಗುಡ್ಡಗಳು ಹೆಚ್ಚಾಗಿದೆ. ನೆಲಮಂಗಲದ ಜಾಗವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ, ಯಲಹಂಕದ ವಾಯುನೆಲೆ, ಎಚ್ಎಎಲ್‌ನ 20 ನಾಟಿಕಲ್‌ ಮೈಲ್‌ ವ್ಯಾಪ್ತಿಯಲ್ಲಿ ಬರುತ್ತದೆ. ಇದರಿಂದಾಗಿ ವೈಮಾನಿಕ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಬಹುದು ಎಂದು ಎಎಐ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.