ಬೆಂಗಳೂರಿನ ಅಂಜನಾಪುರದಲ್ಲಿ, ಪ್ರೇಯಸಿ ಜೊತೆಗಿನ ಜಗಳದ ನಂತರ ಕಿರಣ್ ಎಂಬ ಯುವಕ ಆಕೆಯ ಮನೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾನೆ. ಯುವತಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಬ್ಯಾಡರಹಳ್ಳಿ ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಪ್ರೇಯಸಿ ಮನೆಯಲ್ಲೇ ಬೆಂಕಿ ಹಚ್ಚಿಕೊಂಡು ಯುವಕ ಸಾವು
ಬೆಂಗಳೂರು: ಪ್ರೇಯಸಿ ಮನೆಗೆ ಹೋಗಿ ಯುವಕನೋರ್ವ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾದಂತಹ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನಾಪುರದಲ್ಲಿ ಘಟನೆ ನಡೆದಿದ್ದು ಮೃತ ಯುವಕನನ್ನು ಕಿರಣ್ ಎಂದು ಗುರುತಿಸಲಾಗಿದೆ.
ಮೃತ ಕಿರಣ್ ಹಾಗೂ ಯುವತಿ ಒಂದೇ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ಮಧ್ಯೆ ಆರಂಭದಲ್ಲಿ ಸ್ನೇಹವಿತ್ತು. ಸ್ನೇಹ ನಂತರ ಪ್ರೀತಿಗೆ ತಿರುಗಿತ್ತು. ಈ ನಡುವೆ ಇಬ್ಬರ ಮಧ್ಯೆ ಅದೇನಾಯ್ತೋ ಗೊತ್ತಿಲ್ಲ. ಇಂದು ಯುವತಿ ಮನೆಗೆ ಬಂದಿದ್ದ ಯುವಕ ಅಲ್ಲೇ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾನೆ.
ಯುವತಿಯನ್ನೂ ಸಾಯಿಸಲು ಯತ್ನಿಸಿ ತಾನು ಸಾವಿಗೆ ಶರಣಾದ ಕಿರಣ್
ಯುವತಿ ತಾಯಿ ಹಾಗೂ ಅಣ್ಣನ ಜೊತೆ ಅಂಜನಾಪುರದಲ್ಲಿ ವಾಸ ಮಾಡುತ್ತಿದ್ದಳು. ಇಂದು ಯುವತಿ ಮನೆಯಲ್ಲಿ ಅಣ್ಣ ಹಾಗೂ ತಾಯಿ ಇಬ್ಬರೂ ಇರಲಿಲ್ಲ, ಇದನ್ನೇ ನೋಡಿಕೊಂಡು ಯುವತಿ ಜೊತೆ ಮಾತನಾಡಲು ಕಿರಣ್ ಯುವತಿ ಮನೆಗೆ ಬಂದಿದ್ದ. ಪೆಟ್ರೋಲ್ ಸಮೇತ ಮನೆಗೆ ಬಂದಿದ್ದ ಕಿರಣ್‌ಗೂ ಯುವತಿಗೂ ಮಾತುಕತೆ ವೇಳೆ ಗಲಾಟೆ ನಡೆದಿದೆ. ಗಲಾಟೆಯ ಬಳಿಕ ಕಿರಣ್ ಬೆಂಕಿ ಹಚ್ಚಿಕೊಂಡಿದ್ದು, ಯುವತಿಗೂ ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಆದರೆ ಯುವತಿ ಸಣ್ಣಪುಟ್ಟ ಸುಟ್ಟ ಗಾಯಗಳಿಂದ ಪಾರಾಗಿದ್ದಾಳೆ.
ಘಟನೆಗೆ ನಿಜವಾಗಿಯೂ ಏನು ಕಾರಣ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಪ್ರೇಮ ನಿರಾಕರಿಸಿದ ಮಹಿಳೆಯ ಮೇಲೆ ಸೇಡು: 11 ವರ್ಷದ ಮಗುವಿನ ಬರ್ಬರ ಹತ್ಯೆ: ನೀಲಿ ಡ್ರಮ್‌ನಲ್ಲಿ ಶವ ಪತ್ತೆ


