ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್, ಅವರ ಪುತ್ರ ಮೊಹಮ್ಮದ್ ನಲಪಾಡ್ ಸೇರಿದಂತೆ ಹಲವರ ಮನೆಗಳ ಮೇಲೆ ದಾಳಿ ನಡೆಸಿದೆ. ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜೊತೆ ನಂಟೇನು?
ಬೆಂಗಳೂರು (ಏ.21): ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಬಿಟ್ ಕಾಯಿನ್ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಸೋಮವಾರ ಕಾಂಗ್ರೆಸ್ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್, ಅವರ ಪುತ್ರ ಮೊಹ್ಮಮದ್ ನಲಪಾಡ್, ಮಾಜಿ ಕೇಂದ್ರ ಸಚಿವ ಕೆ.ರೆಹಮಾನ್ ಖಾನ್ ಮೊಮ್ಮಗ ಹಕೀಬ್ ಖಾನ್ ಮತ್ತು ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮನೆ, ಕಚೇರಿಗಳು ಹಾಗೂ ಕೆಲ ಕಂಪನಿಗಳ ಕಚೇರಿಗಳು ಸೇರಿ ನಗರದ 12ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಬೆಳಗ್ಗೆ ಸುಮಾರು 6 ಗಂಟೆಗೆ ಸಿಆರ್ಪಿಎಫ್ ಪೊಲೀಸರ ಭದ್ರತೆಯಲ್ಲಿ ದಾಳಿ ನಡೆಸಿದ ಇ.ಡಿ. ಅಧಿಕಾರಿಗಳು, ತಡರಾತ್ರಿವರೆಗೂ ಶೋಧ ಕಾರ್ಯ ಮುಂದುವರಿಸಿದ್ದರು. ತಪಾಸಣೆ ವೇಳೆ ಕೆಲ ದಾಖಲೆಗಳು, ಡಿಜಿಟಲ್ ಉಪಕರಣಗಳು, ಕಡತಗಳು, ಬ್ಯಾಂಕ್ ವಹಿವಾಟುಗಳನ್ನು ಪರಿಶೀಲಿಸಿದ್ದಾರೆ. ದಾಳಿ ವೇಳೆ ಹ್ಯಾರಿಸ್, ಅವರ ಪುತ್ರ ಮೊಹಮ್ಮದ್ ನಲಪಾಡ್ ಮನೆಯಲ್ಲೇ ಇದ್ದರು. ಅಧಿಕಾರಿಗಳು ಕೆಲ ದಾಖಲೆಗಳನ್ನು ಮುಂದಿಟ್ಟು ಇಬ್ಬರನ್ನೂ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.
ಹಣಕಾಸು ವ್ಯವಹಾರದ ಹಿನ್ನೆಲೆ ದಾಳಿ:
ಹ್ಯಾಕರ್ ಶ್ರೀಕಿ ಪ್ರಮುಖ ಆರೋಪಿಯಾಗಿರುವ ಈ ಬಿಟ್ ಕಾಯಿನ್ ಹಗರಣದ ಸಂಬಂಧ ಎಸ್ಐಟಿಯಲ್ಲಿ 5 ಪ್ರಕರಣಗಳು ದಾಖಲಾಗಿವೆ. ಈ ಬಿಟ್ ಕಾಯಿನ್ ಹ್ಯಾಕಿಂಗ್, ಕ್ರಿಪ್ಟೋ ಕರೆನ್ಸಿ ವಂಚನೆಗಳ ಹಿಂದೆ ಈ ಶ್ರೀಕಿ ಗ್ಯಾಂಗ್ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿತ್ತು. ಈ ಪ್ರಕರಣಗಳಲ್ಲಿ ನಲಪಾಡ್, ಹಕೀಬ್ ಖಾನ್ ಸೇರಿ ಕೆಲವರೊಂದಿಗೆ ಶ್ರೀಕಿ ಸಂಪರ್ಕ ಹೊಂದಿರುವುದು ಬಯಲಾಗಿತ್ತು. ಅಂತೆಯೇ ಹಣಕಾಸು ವಹಿವಾಟು ನಡೆದಿರುವುದು ಬೆಳಕಿಗೆ ಬಂದಿತ್ತು.
ಈ ಹಿನ್ನೆಲೆಯಲ್ಲಿ ಇ.ಡಿ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಪ್ರಕರಣದ ತನಿಖೆಯ ಭಾಗವಾಗಿಯೇ ಮೊಹಮ್ಮದ್ ನಲಪಾಡ್, ಹಕೀಬ್ ಖಾನ್ ಸೇರಿ ಕೆಲವರ ಮನೆ-ಕಚೇರಿಗಳ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಮಹಿಳೆಗೆ ವಂಚನೆ:
ಯಶೋದಾದೇವಿ ಎಂಬುವವರು 2020ರಲ್ಲಿ ಅಶೋಕನಗರ ಪೊಲೀಸ್ ಠಾಣೆಗೆ ವಂಚನೆ ಆರೋಪದಡಿ ದೂರು ನೀಡಿದ್ದರು. ಬಿಟ್ ಕಾಯಿನ್ ಹಗರಣದ ಸೂತ್ರಧಾರ ಶ್ರೀಕಿ, ರಾಬಿನ್ ಖಂಡೇವಾಲ, ಅಜಿತ್ ಖಂಡೇವಾಲ ಅವರು ಯಶೋದಾ ದೇವಿಗೆ ಬಿಟ್ ಕಾಯಿನ್ನಲ್ಲಿ 28 ಲಕ್ಷ ರು. ಹೂಡಿಕೆ ಮಾಡಿದರೆ 45 ಲಕ್ಷ ರು. ಲಾಭ ಗಳಿಸಬಹುದು ಎಂದು ನಂಬಿಸಿದ್ದರು. ಈ ವೇಳೆ ಯಶೋದಾ ದೇವಿ ಅವರು ಅಜಿತ್ ಖಂಡೇವಾಲ ಬ್ಯಾಂಕ್ ಖಾತೆಗೆ 28 ಲಕ್ಷ ರು. ಜಮೆ ಮಾಡಿದ್ದರು. ಬಳಿಕ ಅಸಲು ಅಥವಾ ಲಾಭ ಯಾವುದನ್ನೂ ನೀಡದೆ ವಂಚಿಸಿದ ಆರೋಪ ಕೇಳಿ ಬಂದಿತ್ತು.
ನಂತರ ಈ ಪ್ರಕರಣವನ್ನು ಎಸ್ಐಟಿಗೆ ವಹಿಸಲಾಗಿತ್ತು. ಈ ಪ್ರಕರಣದಲ್ಲಿ ನಡೆದ ಹಣದ ವಹಿವಾಟಿನಲ್ಲಿ ಮೊಹಮ್ಮದ್ ನಲಪಾಡ್ ಹೆಸರು ಕೇಳಿ ಬಂದಿತ್ತು. ಈ ಎಲ್ಲದರ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಹ್ಯಾಕರ್ ಶ್ರೀಕಿಗೆ ಸ್ನೇಹಿತರು
ಕುಖ್ಯಾತ ಹ್ಯಾಕರ್ ಶ್ರೀಕಿಗೆ ಮೊಹಮ್ಮದ್ ನಲಪಾಡ್, ಆತನ ಸಹೋದರ ಓಮರ್ ನಲಪಾಡ್, ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಮೊಮ್ಮಗ ಹಕೀಬ್ ಖಾನ್ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದಾರೆ. ಇವರು ನಗರದ ಹಲವು ಪ್ರತಿಷ್ಠಿತ ಹೋಟೆಲ್ಗಳಲ್ಲಿ ಪಾರ್ಟಿ ಮಾಡಿದ್ದಾರೆ. ಇವರ ನಡುವೆ ಕೋಟ್ಯಂತರ ರು. ಹಣಕಾಸು ಮತ್ತು ಬಿಟ್ ಕಾಯಿನ್ ವ್ಯವಹಾರವೂ ನಡೆದಿದೆ. ಈ ಬಗ್ಗೆ ಇ.ಡಿ.ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಎಸ್ಐಟಿಯಿಂದ ಐದಾರು ಬಾರಿ ವಿಚಾರಣೆ
ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಹ್ಯಾಕರ್ ಶ್ರೀಕಿ ಜೊತೆಗೆ ಮೊಹಮ್ಮದ್ ನಲಪಾಡ್ ಹಣಕಾಸು ವ್ಯವಹಾರ ಹೊಂದಿರುವುದು ಎಸ್ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಸಂಬಂಧ ಸಿಐಡಿ ಎಸ್ಐಟಿ ಅಧಿಕಾರಿಗಳು ಐದಾರು ಬಾರಿ ನೋಟಿಸ್ ಜಾರಿಗೊಳಿಸಿ ಮೊಹಮ್ಮದ್ ನಲಪಾಡ್ ಅವರನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ಶ್ರೀಕಿ ನನಗೆ ಪರಿಚಿತನಾಗಿದ್ದು, ಆತನೊಂದಿಗೆ ಬಿಟ್ ಕಾಯಿನ್ ಸಂಬಂಧ ಯಾವುದೇ ಹಣ ಪಡೆದಿಲ್ಲ ಎಂದು ನಲಪಾಡ್ ಹೇಳಿಕೆ ನೀಡಿದ್ದರು.
ದಾಳಿ ಬಗ್ಗೆ ಸುಳಿವೇ ಇರಲಿಲ್ಲ
ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್, ಮೊಹಮ್ಮದ್ ನಲಪಾಡ್ ಸೇರಿ ಇತರರ ಮನೆಗಳ ಮೇಲೆ ದಾಳಿ ನಡೆಸುವ ಬಗ್ಗೆ ಇ.ಡಿ. ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಸಿಆರ್ಪಿಎಫ್ ಪೊಲೀಸರ ಭದ್ರತೆಯೊಂದಿಗೆ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಇ.ಡಿ. ದಾಳಿ ಬಗ್ಗೆ ಸಣ್ಣ ಸುಳಿವು ಸಹ ಇರಲಿಲ್ಲ ಎನ್ನಲಾಗಿದೆ.
- - ಅಂತಾರಾಷ್ಟ್ರೀಯ ಹ್ಯಾಕರ್ ಆಗಿದ್ದ ಶ್ರೀಕಿ ಗ್ಯಾಂಗ್ನಿಂದ ಯಶೋದಾ ದೇವಿ ಎಂಬವರಿಗೆ ವಂಚನೆ
- - 28 ಲಕ್ಷ ರು. ಹೂಡಿಕೆ ಮಾಡಿದರೆ 45 ಲಕ್ಷ ರು. ಲಾಭ ಗಳಿಸಬಹುದು ಎಂದು ನಂಬಿಸಿದ್ದ ತಂಡ
- - 28 ಲಕ್ಷ ರು. ಪಾವತಿಸಿದ್ದ ಮಹಿಳೆಗೆ ಅಸಲು, ಬಡ್ಡಿ ಕೊಡದೆ ವಂಚನೆ. ಪೊಲೀಸರಿಗೆ ದೂರು
- - ಪ್ರಕರಣ ಎಸ್ಐಟಿಗೆ ಹಸ್ತಾಂತರ. ಆ ಕೇಸ್ನಲ್ಲಿನ ಹಣದ ವಹಿವಾಟಿನಲ್ಲಿ ನಲಪಾಡ್ ಹೆಸರು
- - ಶ್ರೀಕಿ, ನಲಪಾಡ್, ರೆಹಮಾನ್ ಖಾನ್ ಮೊಮ್ಮಗನಿಗೆ ನಂಟು ಇರುವುದು ತನಿಖೆಯಲ್ಲಿ ಪತ್ತೆ
- - ಈ ಬಗ್ಗೆ ಐದಾರು ಬಾರಿ ನೋಟಿಸ್ ಕೊಟ್ಟು ವಿಚಾರಣೆ ನಡೆಸಿದ್ದ ಎಸ್ಐಟಿ ಅಧಿಕಾರಿಗಳು
- - ಈಗ ಅದೇ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದಿಂದ ದಾಳಿ ನಡೆದಿರುವ ಬಗ್ಗೆ ಚರ್ಚೆ
- ಹೊಡೆದಾಟದಿಂದ ಸುದ್ದಿ ಆಗಿದ್ದ ನಲಪಾಡ್, ಶ್ರೀಕಿ
2018ರ ಫೆಬ್ರವರಿಯಲ್ಲಿ ಬೆಂಗಳೂರಿನ ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ಕಾಲು ತಗುಲಿದ ವಿಚಾರಕ್ಕೆ ವಿದ್ವತ್ ಎಂಬ ಯುವಕನ ಮೇಲೆ ಮೊಹಮ್ಮದ್ ನಲಪಾಡ್ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಸಂಬಂಧ ಮೊಹಮ್ಮದ್ ನಲಪಾಡ್ನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಆ ಘಟನೆ ದಿನ ಮೊಹಮ್ಮದ್ ನಲಪಾಡ್ ಜೊತೆ ಕುಖ್ಯಾತ ಹ್ಯಾಕರ್ ಶ್ರೀಕಿ ಸಹ ಇದ್ದ. ಪೊಲೀಸರು ಬಂಧಿಸುವ ಮುನ್ನವೇ ನಿರೀಕ್ಷಣಾ ಜಾಮೀನು ಪಡೆದು ಜೈಲು ಸೇರುವುದರಿಂದ ತಪ್ಪಿಸಿಕೊಂಡಿದ್ದ. ಈ ಘಟನೆ ನಂತರವೇ ಶ್ರೀಕಿ ಒಬ್ಬ ಅಂತಾರಾಷ್ಟ್ರೀಯ ಹ್ಯಾಕರ್ ಎಂಬುದು ಬೆಳಕಿಗೆ ಬಂದಿತ್ತು.


