ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ ಕೇಂದ್ರ ಸರ್ಕಾರದ ಮೌನವನ್ನು ಪ್ರಶ್ನಿಸಿದ್ದಾರೆ. ಕರ್ನಾಟಕದಲ್ಲಿ ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಹಾಕುವಂತೆ ಆಗ್ರಹಿಸಿದ ಅವರು, ಪಾಕಿಸ್ತಾನದೊಂದಿಗಿನ ಟಿ-20 ಕ್ರಿಕೆಟ್ ಪಂದ್ಯವನ್ನು ಬಹಿಷ್ಕರಿಸಲು ಆಗ್ರಹಿಸಿದರು.

ದಾವಣಗೆರೆ (ಫೆ.12): ಬಾಂಗ್ಲಾ ದೇಶದಲ್ಲಿ ನಿತ್ಯವೂ ಹಿಂದೂಗಳ ಕಗ್ಗೊಲೆಯಾಗುತ್ತಿದ್ದರೂ, ಹಿಂದೂ ಉದ್ಯಮಿಯ ಹತ್ಯೆಯಾಗಿದೆ. ಅಂತಹ ದೇಶದ ವಿರುದ್ಧ ಕ್ರಮ ಕೈಗೊಳ್ಳದಿರುವುದು ಕೇಂದ್ರ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಕ್ರೋಶ ಹೊರಹಾಕಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಾಂಗ್ಲಾದಲ್ಲಿ ಹಿಂದೂಗಳ ಮಾರಣಹೋಮವೇ ಆಗುತ್ತಿದೆ. ಈ ಬಗ್ಗೆ ನಮ್ಮ ಪ್ರಧಾನಿ, ಕೇಂದ್ರ ಗೃಹಸಚಿವರು ಮೌನವಾಗಿರುವುದು ಸರಿಯಲ್ಲ. ಯಾವುದೇ ಹೇಳಿಕೆ ನೀಡದೇ, ಬಾಂಗ್ಲಾದೊಂದಿಗೆ ವ್ಯಾಪಾರ ನಡೆಸುತ್ತಿದ್ದಾರೆ ಎಂದರು.

ಸುಮಾರು ಒಂದೂವರೆ ಕೋಟಿಯಷ್ಟು ಹಿಂದೂಗಳು ನರಿ, ನಾಯಿಗಳಂತೆ ಬಾಂಗ್ಲಾದಲ್ಲಿ ದಿನ ಕಳೆಯುತ್ತಿದ್ದಾರೆ. ಪಕ್ಕದಲ್ಲೇ ಬಹುಸಂಖ್ಯಾತ ಹಿಂದೂಗಳ ದೇ‍ಶವಿದ್ದರೂ ನೆರೆ ದೇಶದ ಹಿಂದೂಗಳಿಗೆ ನೆರವು ನೀಡುವುದು, ಅಲ್ಲಿನ ಹಿಂದೂಗಳ ಪರ ಧ್ವನಿ ಎತ್ತಲಾಗುತ್ತಿಲ್ಲವೆಂದರೆ ಏನರ್ಥಎಂದು ಪ್ರಶ್ನಿಸಿದರು.

ಹಿಂದೂಗಳ ರಕ್ಷಣೆ ಮಾಡಲೆಂದೇ ನಿಮ್ಮನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಲಾಗಿದೆ. ಅದನ್ನೇ ಮಾಡಲಾಗದಿದ್ದರೆ ನೀವು ಅಧಿಕಾರದಲ್ಲಿರುವುದಾದರೂ ಯಾಕೆ? ನಾವೇ ಹುಟ್ಟು ಹಾಕಿದ ಬಾಂಗ್ಲಾ ದೇಶಕ್ಕೆ ಉತ್ತರ ಕೊಡಲು ನಿಮ್ಮಿಂದ ಆಗುತ್ತಿಲ್ಲ. ಬಾಂಗ್ಲಾದ ಇಂತಹ ವರ್ತನೆಯಿಂದ ಭಾರತದಲ್ಲಿ ಮತಾಂಧ ಮುಸ್ಲಿಮರು ಎದ್ದು ಕುಣಿಯುತ್ತಿದ್ದಾರೆ ಎಂದು ಆರೋಪಿಸಿದರು.

ಸುಮಾರು 15-20 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರು ಕರ್ನಾಟಕದಲ್ಲಿದ್ದಾರೆಂದು ಗೃಹ ಇಲಾಖೆಯೇ ಹೇಳಿತ್ತು.ಆದರೆ, ಈಗಿನ ಗೃಹ ಸಚಿವರು ಸರ್ವೇ ಮಾಡುವುದಾಗಿ ಹೇಳುತ್ತಿದ್ದಾರೆ. ಇನ್ನೂ ಎಷ್ಟು ಸಲ ಸರ್ವೇಮಾಡುತ್ತೀರಿ? ಇದು ಮುಸ್ಲಿಮರ ಓಟಿಗಾಗಿ ಮಾಡುತ್ತಿರುವ ಓಲೈಕೆ ರಾಜಕಾರಣವಷ್ಟೇ. ಸಚಿವ ಜಮೀರ್ ಅಹಮ್ಮದ್ ಕ್ಷೇತ್ರದಲ್ಲೇ ಸುಮಾರು 25 ಸಾವಿರ ಅಕ್ರಮ ಬಾಂಗ್ಲಾ, ಪಾಕಿಸ್ಥಾನಿಗಳು, ರೋಹಿಂಗ್ಯಾ ಮುಸ್ಲಿಮರಿದ್ದಾರೆ. ಪರಪ್ಪನ ಅಗ್ರಹಾರದ ಪಕ್ಕದಲ್ಲೇ ಅಕ್ರಮ ಬಾಂಗ್ಲಾ ನುಸುಳುಕೋರರಿದ್ದಾರೆ. ದೇಶದ ಸುರಕ್ಷತೆಗಾಗಿ ಬಾಂಗ್ಲಾ ವೈರಸ್‌ಗಳನ್ನು ದೇಶದಿಂದ ಹೊರಗೆ ಹಾಕಿ ಎಂದು ಎಚ್ಚರಿಸಿದರು.

ವಂದೇ ಮಾತರಂಗೆ ವಿರೋಧ ಬೇಡ:

ಸ್ವಾತಂತ್ರ್ಯ ಪೂರ್ವದಲ್ಲಿ ವಂದೇ ಮಾತರಂ ಗೀತೆಯನ್ನು ಕಾಂಗ್ರೆಸ್ ಸಮಾವೇಶಗಳಲ್ಲಿ ಪೂರ್ತಿಯಾಗಿ ಹಾಡುತ್ತಿದ್ದರು. ಆದರೆ, ಅದರಲ್ಲಿ ದುರ್ಗೆ, ಸರಸ್ವತಿ ಆರಾಧನೆ, ಮೂರ್ತಿ ಪೂಜೆಯ ವರ್ಣನೆಯಿದೆಯೆಂದು ಮುಸ್ಲಿಮರು ವಿರೋಧಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ವಂದೇ ಮಾತರಂ ಭಾರತಾಂಬೆಯ ಆರಾಧನೆಯೆಂಬುದನ್ನು ಅರ್ಥವಾಗುವಂತೆ ಹೇಳದೇ, ಓಲೈಕೆ ಮಾಡಿಕೊಂಡು ಬಂದಿದ್ದಕ್ಕೆ ಇಂದು ವಂದೇ ಮಾತರಂ ಗೀತೆಗೆ ಮುಸ್ಲಿಮರು ವಿರೋಧಿಸುವ ಪರಿಸ್ಥಿತಿ ಬಂದಿದೆ ಎಂದರು.

ವಂದೇ ಮಾತರಂ ಗೀತೆಯಲ್ಲಿ ದೇಶದ ವರ್ಣನೆ ಇದ್ದು, ಇದೊಂದು ತ್ಯಾಗದ ಗೀತೆಯಾಗಿದೆ. ಕಾಂಗ್ರೆಸ್ಸಿಗರು ವಂತೇ ಮಾತರಂ ಗೀತೆಯನ್ನೇ ತುಂಡು ಮಾಡಿ, ಕಡೆಗಣಿಸಿದ್ದರು. ಮುಸ್ಲಿಂ ತುಷ್ಟೀಕರಣವೇ ಇದಕ್ಕೆಲ್ಲಾ ಕಾರಣವಾಗಿತ್ತು. ಜನಗಣಮನ ಹಾಗೂ ವಂದೇ ಮಾತರಂ ಗೀತೆ ಎರಡೂ ಗೀತೆಗಳಿಗೂ ಸಮಾನ ಸ್ಥಾನಮಾನವಿದೆ ಎಂದರು.

ಪಾಕ್ ವಿರುದ್ಧದ ಪಂದ್ಯ ಭಾರತ ಬಹಿಷ್ಕರಿಸಲಿ:

ಭಾರತವು ಟಿ-20 ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯ ಪಾಕಿಸ್ಥಾನದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲಿ ಎಂದು ಒತ್ತಾಯಿಸಿದರು.

ಪಾಕಿಸ್ತಾನದ ಕೆಟ್ಟ ಬುದ್ಧಿ ಇನ್ನೂ ಆರಿಲ್ಲ. ಭಯೋತ್ಪಾದಕ ಚಟುವಟಿಕೆ ಬಗ್ಗೆ ಇನ್ನೂ ಪಾಕಿಸ್ತಾನ ಮಾತನಾಡುತ್ತಿದ್ದು, ಇನ್ನೂ ಪೆಹಲ್ಗಾಮ್‌ ಕಣ್ಣೀರೇ ಆರಿಲ್ಲ. ಕೇವಲ ದುಡ್ಡಿಗಾಗಿ ಪಾಕಿಸ್ತಾನದ ಜತೆಗೆ ಕ್ರಿಕೆಟ್ ಆಡುತ್ತೀರಾ ಎಂದು ಭಾರತೀಯ ಕ್ರಿಕೆಟ್ ಸಂಸ್ಥೆಗೆ ಪ್ರಶ್ನಿಸಿದರು.

ಭಾರತ-ಪಾಕ್ ಪಂದ್ಯ ಒಂದು ವೇಳೆ ನಡೆದರೆ, ಆ ಪಂದ್ಯದ ಸಮಯದಲ್ಲಿ ಟೀವಿಯನ್ನು ಪ್ರತಿಯೊಬ್ಬ ಭಾರತೀಯರು, ಕ್ರಿಕೆಟ್ ಪ್ರೇಮಿಗಳು ಆಫ್ ಮಾಡಬೇಕು. ಭಾರತವು ಪಾಕಿಸ್ತಾನದ ವಿರುದ್ಧ ಪಂದ್ಯವಾಡಿದರೆ ಒಂದೇ ಪಂದ್ಯದಿಂದ ಪಾಕಿಸ್ತಾನಕ್ಕೆ ಸಾವಿರಾರು ಕೋಟಿ ರು. ಹೋಗುತ್ತದೆ ಎಂದರು. 

YouTube video player