ಹಿರಿಯೂರು ಬಳಿ ನಡೆದ ಭೀಕರ ಬಸ್ ಅಪಘಾತದಲ್ಲಿ 9 ಮಂದಿ ಸಜೀವ ದಹನವಾಗಿದ್ದರು. ಇದೇ ಬಸ್‌ನಲ್ಲಿದ್ದ ಭಟ್ಕಳ ಮೂಲದ ರಶ್ಮಿ ಮಹಾಲೆ ಕೂಡ ಸಾವು ಕಂಡಿದ್ದಾರೆ ಎಂದು ಚಿತ್ರದುರ್ಗ ಎಸ್‌ಪಿ ಮಾಹಿತಿ ನೀಡಿದ್ದಾರೆ.
ಕಾರವಾರ (ಡಿ.25): ಖಾಸಗಿ ಬಸ್ ಹಾಗೂ ಕಂಟೇನರ್ ನಡುವೆ ಹಿರಿಯೂರು ಸಮೀಪ ಜವನಗೊಂಡನಹಳ್ಳಿಯ ಗೊರ್ಲತ್ತು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಮಂದಿ ಸಜೀವ ದಹನವಾಗಿದ್ದಾರೆ. ಈ ಘಟನೆಯಲ್ಲಿ ಸ್ನೇಹಿತರ ಜೊತೆ ಪ್ರಯಾಣ ಮಾಡುತ್ತಿದ್ದ ರಶ್ಮಿ ಮಹಾಲೆ ಎನ್ನುವ ಯುವತಿಯ ಮಾಹಿತಿ ಲಭ್ಯವಾಗದ ಕಾರಣ ಕುಟುಂಬದ ಆತಂಕಕ್ಕೆ ಕಾರಣವಾಗಿತ್ತು. ಗಗನ, ರಕ್ಷಿತಾ ಹಾಗೂ ರಶ್ಮಿ ಬೆಂಗಳೂರಿನಿಂದ ಗೋಕರ್ಣಕ್ಕೆ ಪ್ರಯಾಣ ಮಾಡುತ್ತಿದ್ದರು. ಘಟನೆಯ ಬಳಿಕ ಗಗನಾ ಹಾಗೂ ರಕ್ಷಿತಾ ಸೇಫ್ ಆಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಸದ್ಯ ಭಟ್ಕಳ ಮೂಲದ ರಶ್ಮಿ ಮಹಾಲೆ ಕೂಡ ಸೇಫ್ ಆಗಿರುವ ಮಾಹಿತಿ ಕುಟುಂಬಕ್ಕೆ ಸಿಕ್ಕಿದೆ ಎನ್ನಲಾಗಿತ್ತು. ಆದರೆ, ಮೃತದೇಹದ ಗುರುತು ಪತ್ತೆಯಾದ ಬಳಿಕ ರಶ್ಮಿ ಕೂಡ ಈ ದುರಂತದಲ್ಲಿ ಸಾವು ಕಂಡಿದ್ದಾರೆ ಎನ್ನಲಾಗಿದೆ.
(UPDATE: ಚಿತ್ರದುರ್ಗ ಎಸ್‌ಪಿ ನೀಡಿರುವ ಮಾಹಿತಿಯ ಪ್ರಕಾರ, ರಶ್ಮಿ ಕೂಡ ದುರಂತದಲ್ಲಿ ಸಾವು ಕಂಡಿದ್ದಾರೆ)
ಗೊರ್ಲತ್ತು ಬಳಿ ಭೀಕರ ಅಪಘಾತ ಪ್ರಕರಣದಲ್ಲಿ ಭಟ್ಕಳ ಶಿರಾಲಿ ಮೂಲದ ರಶ್ಮೀ ಮಹಾಲೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೊದಲು ವರದಿಯಾಗಿತ್ತು. ಸಂಬಂಧಿಕರ ಜೊತೆ ರಶ್ಮಿ ಮಹಾಲೆ ಮಾತನಾಡಿದ್ದಾರೆ ಎನ್ನುವ ವರದಿಗಳು ಇದ್ದರು. ಕ್ರಿಸ್ ಮಸ್ ಹಾಗೂ ಇಯರ್ ಎಂಡ್ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ, ಬೆಂಗಳೂರು ಸ್ನೇಹಿತರನ್ನು ರಶ್ಮಿ ಗೋಕರ್ಣಕ್ಕೆ ಕರೆದುಕೊಂಡು ಬರುತ್ತಿದ್ದರು.
ಗಗನಾ, ರಕ್ಷಿತಾ ಸೇಫ್ ಆಗಿದ್ದಾರೆ ಎನ್ನುವುದು ಖಚಿತವಾಗಿತ್ತು. ಆದರೆ, ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ರಶ್ಮಿ ಮಹಾಲೆಗಾಗಿ ಹುಡುಕಾಟ ನಡೆದಿತ್ತು. ಮಾಧ್ಯಮಗಳಲ್ಲಿ ವರದಿ ನೋಡಿ ಸಂಬಂಧಿಗಳಿಗೆ ಬದುಕಿರುವ ಮಾಹಿತಿಯನ್ನು ರಶ್ಮಿಯೇ ತಿಳಿಸಿದ್ದಾರೆ ಎನ್ನಲಾಗಿತ್ತು.. ರಶ್ಮಿ ಸೇಫ್ ಆಗಿರುವ ಅನಧಿಕೃತ ಮಾಹಿತಿಯಿಂದ ಪೋಷಕರಿಂದ ನಿಟ್ಟುಸಿರು ಬಿಟ್ಟಿದ್ದರು, ಆಕೆಯೊಂದಿಗೆ ಮಾತನಾಡಲು ಕುಟುಂಬ ಪ್ರಯತ್ನಪಟ್ಟರೂ ಸಾಧ್ಯವಾಗದೇ ಇದ್ದಾಗ ಆಕೆ ಬದುಕಿರುವ ಬಗ್ಗೆ ಅನುಮಾನ ಮೂಡಿತ್ತು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಶ್ಮಿ, ಮೂಲತಃ ಭಟ್ಕಳ ತಾಲೂಕಿನ ಶಿರಾಲಿಯವರು ಎಂದು ಹೇಳಲಾಗಿದೆ.
ಚಿತ್ರದುರ್ಗದ ಕಡೆ ಹೊರಟ ರಶ್ಮಿ ಕುಟುಂಬ
ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿರುವ ರಶ್ಮಿ ಮಹಾಲೆ ಅವರ ಕುಟುಂಬ, 'ರಶ್ಮಿ ಸೇಫ್ ಆಗಿದ್ದಾರೆ ಎಂದು ಹೇಳುತ್ತಿದ್ದಾರೆ. ಅವರು ತನ್ನ ಮೂವರು ಫ್ರೆಂಡ್ಸ್ ಜತೆ ಗೋಕರ್ಣಕ್ಕೆ ಬರುತ್ತಿದ್ದರು. ಆದರೆ, ತಮ್ಮ ಕುಟುಂಬವನ್ನು ಸಂಪರ್ಕ ಮಾಡಿಲ್ಲ ಎಂದು ರಶ್ಮಿ ಕುಟುಂಬ ತಿಳಿಸಿದೆ. ಈವರೆಗೂ ಸಂಪರ್ಕ ಮಾಡಿಲ್ಲ, ಮೊಬೈಲ್ ಸ್ವಿಚ್ ಆಫ್ ಆಗಿದೆ. ಮಗಳ ಜತೆ ಸಂಪರ್ಕ ಸಾಧ್ಯವಾಗುತ್ತಿಲ್ಲ. ಅವರ ಸ್ನೇಹಿತರು ಮಾತ್ರ ಸಂಪರ್ಕ ಮಾಡಿದ್ದಾರೆ ಎಂದು ರಶ್ಮಿ ಪೋಷಕರು ಮಾಹಿತಿ ನೀಡಿದ್ದಾರೆ.
ರಶ್ಮಿ ಮಹಾಲೆ ಕ್ರಿಸ್ ಮಸ್ ನಿಮಿತ್ತ ಗೋಕರ್ಣಕ್ಕೆ ಸ್ನೇಹಿತರೊಂದಿಗೆ ಹೊರಟಿದ್ದರು. ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುವ ಬಸ್ ನಲ್ಲಿ ಪ್ರಯಾಣ ಬೆಳೆಸಿದ್ದರು. ಬಸ್ ನಲ್ಲಿ ಇವರ ಇಬ್ಬರು ಸ್ನೇಹಿತರು ಸುರಕ್ಷಿತವಾಗಿದ್ದು, ಈಕೆಯ ಸಂಪರ್ಕಕ್ಕೆ ಪೋಷಕರು ಕಾಯುತ್ತಿದ್ದಾರೆ. ಸದ್ಯ ಚಿತ್ರದುರ್ಗದ ಕಡೆ ರಶ್ಮಿ ಅವರ ಕುಟುಂಬ ಪ್ರಯಾಣ ಬೆಳೆಸಿದೆ.


