ನವಲಗುಂದದಲ್ಲಿ ಶಾಸಕ ಎನ್.ಎಚ್.ಕೋನರಡ್ಡಿ ಆಯೋಜಿಸಿದ್ದ 75 ಜೋಡಿಗಳ ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡರು. ಈ ವೇಳೆ ನವದಂಪತಿಗೆ ಜನಸಂಖ್ಯಾ ನಿಯಂತ್ರಣದ ಬಗ್ಗೆ ಸಲಹೆ ನೀಡಿದ ಅವರು, ಸಮಾಜದಲ್ಲಿ ಸಮಾನತೆಗಾಗಿ ಅಂತರ್ಜಾತಿ ವಿವಾಹಗಳು ಹೆಚ್ಚಾಗಬೇಕು ಎಂದರು. 

ನವಲಗುಂದ (ಡಿ.8): ‘ನಿಮಗೆ ಜಾಸ್ತಿ ಮಕ್ಕಳು ಬೇಡ, ನೀವು ಎರಡೇ ಮಕ್ಕಳನ್ನು ಮಾಡಿಕೊಳ್ಳಿ. ಏಕೆಂದರೆ, ಭಾರತದಲ್ಲಿ ಜನಸಂಖ್ಯೆ ಅತಿಯಾಗಿ ಹೆಚ್ಚಾಗುತ್ತಿದೆ. ಜನಸಂಖ್ಯೆ ನಿಯಂತ್ರಣ ಇಂದಿನ ಅಗತ್ಯ’. ಇದು ನೂತನ ದಂಪತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಸಲಹೆ.

ಅಂತರ್ಜಾತಿ ವಿವಾಹದಿಂದ ಸಮಾನತೆ:

ಧಾರವಾಡ ಜಿಲ್ಲೆ ನವಲಗುಂದ ಪಟ್ಟಣದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಶಾಸಕ ಎನ್.ಎಚ್.ಕೋನರಡ್ಡಿಯವರು ತಮ್ಮ ಪುತ್ರ ನವೀನಕುಮಾರ ಅವರ ಆರತಕ್ಷತೆ ಅಂಗವಾಗಿ ಆಯೋಜಿಸಿದ್ದ 75 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನೂತನ ವಧು-ವರರಿಗೆ ಶುಭಾಶಯ ಕೋರಿದ ಸಿಎಂ, ಸರಳ, ಸಾಮೂಹಿಕ ಮತ್ತು ಅಂತರ್ಜಾತಿ ವಿವಾಹಗಳು ಸಮಾಜದಲ್ಲಿ ಸಮಾನತೆ ತರಲು ಸಹಕಾರಿ ಎಂದರು. ‘ಇಲ್ಲಿ ಮದುವೆಯಾದ ನೂತನ ದಂಪತಿಗಳು ಎರಡೇ ಮಕ್ಕಳನ್ನು ಮಾಡಿಕೊಳ್ಳಬೇಕು. ಏಕೆಂದರೆ, ಭಾರತದಲ್ಲಿ ಜನಸಂಖ್ಯೆ ಅತಿ ಹೆಚ್ಚಾಗುತ್ತಾ ಹೋಗುತ್ತಿದೆ’ ಎಂದು ಸಲಹೆ ನೀಡಿದರು.

ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ...ಎಲ್ಲರೂ ಮನುಷ್ಯರೇ

ಇಲ್ಲಿ ನಡೆದ 75 ಜೋಡಿಗಳ ಸಾಮೂಹಿಕ ವಿವಾಹದಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮಾಜದವರೂ ಮದುವೆಯಾಗುತ್ತಿರುವುದು ಸಂತೋಷದ ಕ್ಷಣ. ಸಮಾಜದಲ್ಲಿನ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ...ಎಲ್ಲರೂ ಮನುಷ್ಯರೇ. ಎಲ್ಲರೂ ಸಹಬಾಳ್ವೆಯಿಂದ ಬದುಕು ನಡೆಸಬೇಕು. ಸಮಾಜದಲ್ಲಿ ಜಾತಿ ವ್ಯವಸ್ಥೆ ಹೋಗಬೇಕು. ಜಾತಿ ವ್ಯವಸ್ಥೆ ಹೋಗಬೇಕೆಂದರೆ ಅಂತರ್ಜಾತಿಯ ವಿವಾಹಗಳು ಹೆಚ್ಚೆಚ್ಚು ಆಗಬೇಕು ಎಂದು ಅಭಿಪ್ರಾಯಪಟ್ಟರು.

ಬಸವಣ್ಣನವರು ಕೆಳಜಾತಿಯವರೊಂದಿಗೆ ಮೇಲ್ಜಾತಿಯವರ ಮದುವೆ ಮಾಡಿಸಿ, ಅಂದೇ ಸಮಾಜದಲ್ಲಿ ಸಮಾನತೆ ತರಲು ಮುನ್ನುಡಿ ಬರೆದರು. ಸರ್ವ ಧರ್ಮಗಳ ವಧು-ವರರು ಸಾಮೂಹಿಕ ವಿವಾಹ ಆಗುವುದರೊಂದಿಗೆ ಸಮಾಜದಲ್ಲಿ ಅಂತರ್ಜಾತಿ ಮದುವೆಗಳು ಆಗಬೇಕು. ಇದರಿಂದ ಸಮಾಜದ ಸರ್ವರಲ್ಲಿ ಸಮಾನತೆ ತರಲು ಸಹಾಯವಾಗುತ್ತದೆ ಎಂದು ಹೇಳಿದರು.

ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ,ಶಿವಕುಮಾರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಕೆ.ಜೆ.ಜಾರ್ಜ್, ಎಚ್.ಸಿ.ಮಹದೇವಪ್ಪ, ಕೃಷ್ಣ ಬೈರೇಗೌಡ, ರಾಮಲಿಂಗಾರಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕರಾದ ಬಸವರಾಜ ರಾಯರೆಡ್ಡಿ ಮತ್ತಿತರ ಗಣ್ಯರು ಭಾಗಿಯಾಗಿ, ನೂತನ ವಧು-ವರರಿಗೆ ಶುಭ ಕೋರಿದರು.

ಸಿದ್ದು ಮತ್ತು ಡಿಕೆಶಿಯವರು ಹುಬ್ಬಳ್ಳಿವರೆಗೆ ಒಂದೇ ಹೆಲಿಕಾಪ್ಟರ್‌ನಲ್ಲಿ ಬಂದು ನಂತರ, ಬೇರೆ, ಬೇರೆ ಕಾರಲ್ಲಿ ತೆರಳಿ, ವಿವಾಹ ಸಮಾರಂಭದಲ್ಲಿ ಪಾಲ್ಗೊಂಡರು.