ಯತೀಂದ್ರ ಸಿದ್ದರಾಮಯ್ಯ ಅವರ ಅಧಿಕಾರಾವಧಿ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಬೆಳಗಾವಿಯಲ್ಲಿ ಸರಣಿ ಸಭೆ ನಡೆಸಿದರೆ, ಸಿಎಂ ಸಿದ್ದರಾಮಯ್ಯ ಮಾಧ್ಯಮದವರ ಮೇಲೆ ಗರಂ ಆಗಿ, ನಂತರ ಪುತ್ರನೊಂದಿಗೆ ಚರ್ಚಿಸಿ ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದರು.
ಬೆಳಗಾವಿ (ಡಿ.11): ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಅಧಿಕಾರಾವಧಿಯ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೆಳಗಾವಿಯಲ್ಲಿ ಅಲರ್ಟ್ ಆಗಿದ್ದಾರೆ. ಯತೀಂದ್ರ ಹೇಳಿಕೆ ಬೆನ್ನಲ್ಲೇ ಡಿಕೆ ಶಿವಕುಮಾರ್ ಅವರು ಪ್ರಮುಖ ಶಾಸಕರ ಮತ್ತು ಆಪ್ತರೊಂದಿಗೆ ಸರಣಿ ಸಭೆಗಳು ಹಾಗೂ ಚರ್ಚೆಗಳನ್ನು ನಡೆಸಿದರು.
ವಿಧಾನಸಭೆ ಸಭಾಂಗಣದಲ್ಲಿ ಡಿಕೆಶಿ ಮಹತ್ವದ ಚರ್ಚೆ
ವಿಧಾನಸಭೆಯ ಕಲಾಪ ಮುಗಿದ ನಂತರ ಸಭಾಂಗಣದಲ್ಲೇ ಡಿಕೆ ಶಿವಕುಮಾರ್ ಅವರು ಹಲವು ಶಾಸಕರ ಜೊತೆ ಮಹತ್ವದ ಚರ್ಚೆ ನಡೆಸಿದರು. ನೆಲಮಂಗಲ ಶ್ರೀನಿವಾಸ, ರೂಪಾ ಶಶಿಧರ್, ಆನೇಕಲ್ ಶಿವಣ್ಣ, ಹ್ಯಾರೀಶ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವರು ಡಿಸಿಎಂ ಕುರ್ಚಿಯ ಸುತ್ತ ನಿಂತು ಮಾತುಕತೆ ನಡೆಸಿದರು. ಅನಂತರ ಹೊರಗಡೆ ಬಂದ ಬಳಿಕವೂ ಸಚಿವ ರಾಮಲಿಂಗ ರೆಡ್ಡಿ, ದಿನೇಶ್ ಗುಂಡೂರಾವ್, ಮತ್ತು ಶಾಸಕ ರಿಜ್ವಾನ್ ಅರ್ಷದ್ ಅವರ ಜೊತೆಗೂ ಡಿಕೆಶಿ ಪ್ರತ್ಯೇಕವಾಗಿ ಚರ್ಚೆಗಳನ್ನು ಮುಂದುವರಿಸಿದರು. ಈ ಸರಣಿ ಚರ್ಚೆಗಳು ರಾಜ್ಯ ರಾಜಕೀಯದಲ್ಲಿನ ಬದಲಾವಣೆಗಳ ಕುರಿತು ಊಹಾಪೋಹಗಳಿಗೆ ಕಾರಣವಾಗಿದೆ.
ಡಿಕೆಶಿ ಆಪ್ತರಿಂದ 'ಲಂಚ್ ಮೀಟಿಂಗ್'
ಡಿಸಿಎಂ ಡಿಕೆ ಶಿವಕುಮಾರ್ ಅವರ ಆಪ್ತ ಶಾಸಕರು ಮತ್ತು ನಾಯಕರು ಮಧ್ಯಾಹ್ನ ಭೋಜನಕ್ಕೆ ಒಟ್ಟಿಗೆ ಸೇರಿ 'ಲಂಚ್ ಮೀಟಿಂಗ್' ನಡೆಸಿದರು. ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ನಡೆದ ಈ ಸಭೆಯಲ್ಲಿ ಸಚಿವ ಚೆಲುವರಾಯಸ್ವಾಮಿ, ಶಾಸಕರಾದ ಸಿಪಿ ಯೋಗೇಶ್ವರ್, ಇಕ್ಬಾಲ್ ಹುಸೇನ್, ಕುಣಿಗಲ್ ರಂಗನಾಥ್, ಉದಯ್ ಕದಲೂರು ಮತ್ತು ಮಾಗಡಿ ಬಾಲಕೃಷ್ಣ ಸೇರಿದಂತೆ ಹಲವು ಆಪ್ತರು ಭಾಗವಹಿಸಿದ್ದರು. ಯತೀಂದ್ರ ಹೇಳಿಕೆ ನೀಡಿದ ಬೆನ್ನಲ್ಲೇ ನಡೆದ ಈ ಸಭೆಯು ಮಹತ್ವ ಪಡೆದುಕೊಂಡಿದ್ದು, ಇದು ರಾಜ್ಯ ರಾಜಕೀಯದ ಬೆಳವಣಿಗೆಗಳ ಕುರಿತು ಚರ್ಚಿಸಲು ನಡೆಸಿದ ಅನೌಪಚಾರಿಕ ಸಭೆ ಎನ್ನಲಾಗಿದೆ.
ಯತೀಂದ್ರ ಹೇಳಿಕೆ ಪ್ರಶ್ನಿಸಿದ ಮಾಧ್ಯಮದವರ ಮೇಲೆ ಸಿಎಂ ಗರಂ:
ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದ ಅಧಿಕಾರಾವಧಿಯ ಬಗ್ಗೆ ಹೇಳಿಕೆ ನೀಡಿದ ವಿಚಾರವಾಗಿ ಮಾಧ್ಯಮದವರು ಪ್ರಶ್ನಿಸಿದಾಗ, ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮದವರ ಮೇಲೆ ಗರಂ ಆದರು. 'ಏನು ಹೇಳಿದ್ದಾನೆ ಯತೀಂದ್ರ? ಏನು ಹೇಳಿದ್ದಾನಮ್ಮ? ಹೈಕಮಾಂಡ್ ಹೇಳಿದ್ರೆ ಮಾತ್ರ. ಹೈಕಮಾಂಡ್ ಏನು ಹೇಳ್ತಾರೆ ಅದೇ ಕೇಳೋದು ನಾವು ಅಂತ ಹೇಳಿದ್ದೇನೆ ಅಲ್ವ ನಾನು? ಮತ್ತೆ ಯಾಕೆ ಅದನ್ನೇ ಕೇಳುತ್ತಿಯಾ?' ಎಂದು ಸಿಎಂ ಅವರು ಸಿಟ್ಟಿನಿಂದಲೇ ಉತ್ತರಿಸಿದರು.
ಇದೇ ವೇಳೆ, ಯತೀಂದ್ರ ಸಿದ್ದರಾಮಯ್ಯ ನೀಡಿದ ಹೇಳಿಕೆಗಳು ವಿವಾದದ ರೂಪ ಪಡೆಯುತ್ತಿದ್ದಂತೆ, ಸಿಎಂ ಸಿದ್ದರಾಮಯ್ಯ ಅವರು ಮಗನನ್ನ ಕರೆಸಿ ಮಾತುಕತೆ ನಡೆಸಿದರು. ಬೆಳಗಾವಿಯ ಸರ್ಕಿಟ್ ಹೌಸ್ನಲ್ಲಿ ಮುಖ್ಯಮಂತ್ರಿ ಮತ್ತು ಯತೀಂದ್ರ ನಡುವೆ ಪ್ರತ್ಯೇಕ ಸಭೆ ನಡೆಯಿತು. ಈ ಮೂಲಕ ಪುತ್ರನ ಹೇಳಿಕೆಗಳಿಂದ ಉಂಟಾದ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನವನ್ನು ಸಿಎಂ ಮಾಡಿದ್ದಾರೆ ಎನ್ನಲಾಗಿದೆ.


