ಕ್ಷೇತ್ರ ಪುನರ್ ವಿಂಗಡಣೆ ಜನಸಂಖ್ಯೆ ನಿಯಂತ್ರಿಸಿದ ಕರ್ನಾಟಕದಂತಹ ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯ ಕುಗ್ಗಿಸುವ ಅಪಾಯ ಒಡ್ಡಿದೆ. ಇದು ದಕ್ಷಿಣದ ರಾಜ್ಯಗಳು ತಮ್ಮ ಯಶಸ್ವಿ ಜನಸಂಖ್ಯಾ ನೀತಿಗಾಗಿ ಶಿಕ್ಷೆ ಅನುಭವಿಸಿದಂತೆ ಆಗಲಿದ್ದು, ತೆರಿಗೆ ಹಂಚಿಕೆಯಲ್ಲಿ ಅನ್ಯಾಯವನ್ನು ಮತ್ತಷ್ಟು ಹೆಚ್ಚಿಸಲಿದೆ.
ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
ನಾವು ಕನ್ನಡಿಗರು ಅದೇನು ಪಾಪ ಮಾಡಿದ್ದೇವೋ ಎಂಬುದು ಅರ್ಥವಾಗುತ್ತಿಲ್ಲ. ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ನಾವು ಹೋರಾಡಿದೆವು. ಆ ಬಂಧನದಿಂದ ಬಿಡುಗಡೆಯಾದಾಗ ಅತ್ಯಂತ ಸಂತೋಷದಿಂದ ಭಾರತ ಒಕ್ಕೂಟವನ್ನು ಸೇರಿಕೊಂಡೆವು. ರಾಷ್ಟ್ರೀಯ ಮನೋಭಾವವನ್ನು ಬೆಳೆಸಿಕೊಂಡೆವು. ಭಾರತ ಸರ್ಕಾರದ ಕೆಲವು ನಿಲುವುಗಳು ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿದ್ದರೂ ನಾವು ಇದೇ ರಾಷ್ಟ್ರೀಯ ಮನೋಭಾವದಿಂದ ಶಿರಬಾಗಿ ಪಾಲಿಸಿದೆವು. ಆದರೆ ನಮಗೆ ಸಿಕ್ಕಿದ್ದೇನು? ಅನ್ಯಾಯಗಳ ಮೇಲೆ ಅನ್ಯಾಯ, ಮಾಡದ ತಪ್ಪಿಗಾಗಿ ಶಿಕ್ಷೆಗಳು.
ಈಗ ಕ್ಷೇತ್ರ ಪುನರ್ ವಿಂಗಡಣೆಯ ತೂಗುಗತ್ತಿ ನಮ್ಮ ಮೇಲೆ ತೂಗುತ್ತಿದೆ. ಈ ಕತ್ತಿ ನೇರವಾಗಿ ನಮ್ಮ ಅಸ್ಮಿತೆಯನ್ನೇ ಸೀಳಿ ಹಾಕಲಿದೆ. ನಮ್ಮ ಧ್ವನಿಯನ್ನು ಕ್ಷೀಣವಾಗುವಂತೆ ಮಾಡಲಿದೆ. ನಮ್ಮ ಸಂಕಟಗಳನ್ನು ಹೆಚ್ಚಿಸುತ್ತಾ ಹೋಗಲಿದೆ. ನಮ್ಮ ಪಾಲಿನ ಹಕ್ಕನ್ನು ನಗಣ್ಯಗೊಳಿಸಲಿದೆ. ನಮ್ಮನ್ನು ಈ ದೇಶದ ಎರಡನೇ ದರ್ಜೆ ನಾಗರಿಕರನ್ನಾಗಿ ಮಾಡಲಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ನಮ್ಮ ಹಿತಾಸಕ್ತಿಗೆ ವಿರುದ್ಧವಾಗಿ ಇನ್ನಷ್ಟು ಅಮಾನವೀಯ ಶಾಸನಗಳನ್ನು ರೂಪಿಸಲು ಅವಕಾಶವನ್ನು ಕೊಡಲಿದೆ.
ನಾವು ಏಕೆ ಸಹಿಸಿಕೊಳ್ಳಬೇಕು?
ಕೊನೆಯ ಬಾರಿ 1971ರ ಜನಗಣತಿ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆ ಮಾಡಲಾಯಿತು. ಅದರ ನಂತರ 1976ರಲ್ಲಿ ಜನಸಂಖ್ಯಾ ನಿಯಂತ್ರಣಕ್ಕಾಗಿ ಸೀಟುಗಳ ಸಂಖ್ಯೆಯನ್ನು ಸ್ಥಗಿತಗೊಳಿಸಲಾಯಿತು (ಫ್ರೀಜ್). ಈಗ 2026ರ ಜನಗಣತಿ ನಂತರ ಈ ಫ್ರೀಜ್ ತೆಗೆದುಹಾಕಿ ಹೊಸದಾಗಿ ವಿಂಗಡಣೆ ಮಾಡುವ ಯೋಜನೆಯನ್ನು ರೂಪಿಸಲಾಗುತ್ತಿದೆ. ಈಗ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗಿದೆ. ಇಲ್ಲಿ ಮಹಿಳಾ ಮೀಸಲಾತಿ ಮತ್ತು ಡಿಲಿಮಿಟೇಶನ್ ಮಸೂದೆಗಳನ್ನು ಚರ್ಚಿಸಲಾಗುತ್ತಿದೆ. ಸರ್ಕಾರ ಲೋಕಸಭಾ ಸದಸ್ಯ ಸ್ಥಾನಗಳನ್ನು 543ರಿಂದ ಸುಮಾರು 850ಕ್ಕೆ ಏರಿಸುವ ಪ್ರಸ್ತಾವವನ್ನು ಮಂಡಿಸಿದೆ.
ಮೊಟ್ಟ ಮೊದಲನೆಯದಾಗಿ ಈ ಕ್ಷೇತ್ರ ಪುನರ್ ವಿಂಗಡಣೆ ಜಾರಿಗೆ ಬಂದರೆ ನಮ್ಮ ರಾಜ್ಯದ ಲೋಕಸಭಾ ಸದಸ್ಯರ ಸಂಖ್ಯೆ ಅಲ್ಪಪ್ರಮಾಣದಲ್ಲಿ ಹೆಚ್ಚಬಹುದು. ಆದರೆ ಇತರ ಉತ್ತರ ರಾಜ್ಯಗಳ ಹೋಲಿಕೆಯಲ್ಲಿ ನಮ್ಮ ಪ್ರಾತಿನಿಧ್ಯದ ಪ್ರಮಾಣ ಗಂಭೀರ ಸ್ವರೂಪದಲ್ಲಿ ಕಡಿಮೆಯಾಗಲಿದೆ. ಇದನ್ನು ನಮ್ಮ ಕೆಲವು ಅರೆಬೆಂದ ರಾಜಕಾರಣಿಗಳು, ಹೈಕಮಾಂಡ್ ಗುಲಾಮಗಿರಿಯ ರೋಗದಿಂದ ಬಳಲುತ್ತಿರುವ ನಾಯಕರು ತಪ್ಪುತಪ್ಪಾಗಿ ವ್ಯಾಖ್ಯಾನ ಮಾಡುತ್ತಾರೆ. ಕರ್ನಾಟಕದ ಲೋಕಸಭಾ ಸದಸ್ಯರ ಸಂಖ್ಯೆ ಹೆಚ್ಚುತ್ತದೆಯಲ್ಲ, ಏನು ಸಮಸ್ಯೆ ಎಂದು ಪ್ರಶ್ನಿಸುತ್ತಾರೆ. ಆದರೆ ನಮ್ಮ ಪಾಲು (ರಿಲೇಟಿವ್ ಶೇರ್) ಕುಗ್ಗುತ್ತದೆ ಎಂಬುದನ್ನು ಅವರು ಮರೆಮಾಚುತ್ತಾರೆ.
ದಕ್ಷಿಣಕ್ಕೆ ‘ಶಿಕ್ಷೆ’ ತಪ್ಪಿಸಿದ್ದ ಇಂದಿರಾ
ಕ್ಷೇತ್ರ ವಿಂಗಡಣೆಗೆ ಸಂಬಂಧಿಸಿದಂತೆ ಚರ್ಚೆಗಳು ಹಿಂದಿನಿಂದಲೂ ನಡೆದುಕೊಂಡು ಬಂದಿವೆ. ಬಹಳ ಮುಖ್ಯವಾಗಿ ಇಂದಿರಾಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರುಗಳ ಕಾಲಘಟ್ಟದಲ್ಲಿ ಆದ ತೀರ್ಮಾನಗಳನ್ನು ನಾವು ಗಮನಿಸಬೇಕು. ತುರ್ತುಪರಿಸ್ಥಿತಿ ಸಮಯದಲ್ಲಿ ಇಂದಿರಾ ಗಾಂಧಿ ಅವರ ಸರ್ಕಾರ 42ನೇ ಸಂವಿಧಾನ ತಿದ್ದುಪಡಿ ತಂದು ಲೋಕಸಭಾ ಮತ್ತು ರಾಜ್ಯ ವಿಧಾನಸಭೆಗಳ ಸೀಟುಗಳನ್ನು 1971ರ ಜನಗಣತಿ ಆಧಾರದಲ್ಲಿ ಸ್ಥಗಿತ(ಫ್ರೀಜ್)ಗೊಳಿಸಿತು. ಇದು 2001ರ ಜನಗಣತಿಯವರೆಗೆ ಮುಂದುವರಿಯುವಂತೆ ಮಾಡಲಾಯಿತು.
ಹೀಗೆ ಫ್ರೀಜ್ ಮಾಡುವುದರ ಹಿಂದಿನ ಉದ್ದೇಶ ಸ್ಪಷ್ಟವಾಗಿತ್ತು. ಜನಸಂಖ್ಯಾ ನಿಯಂತ್ರಣ (ಫ್ಯಾಮಿಲಿ ಪ್ಲಾನಿಂಗ್) ಕಾರ್ಯಕ್ರಮಗಳನ್ನು ರಾಜ್ಯಗಳು ಯಶಸ್ವಿಯಾಗಿ ಅನುಸರಿಸುವಂತೆ ಪ್ರೋತ್ಸಾಹಿಸುವುದಾಗಿತ್ತು. ದಕ್ಷಿಣ ಭಾರತದ ರಾಜ್ಯಗಳು ರಾಷ್ಟ್ರೀಯ ಜನಸಂಖ್ಯಾ ನೀತಿಯನ್ನು ಚೆನ್ನಾಗಿ ಅನುಸರಿಸಿ ಜನಸಂಖ್ಯೆ ನಿಯಂತ್ರಿಸಿದ್ದವು. ಅವುಗಳ ಲೋಕಸಭಾ ಸದಸ್ಯ ಸ್ಥಾನಗಳು ಕಡಿಮೆಯಾಗುವುದು ಅನ್ಯಾಯ ಎಂದು ಭಾವಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಉತ್ತರ ಭಾರತದಲ್ಲಿ ಅಲ್ಪ ಪ್ರಮಾಣದಲ್ಲಿ ಜನಸಂಖ್ಯಾ ನಿಯಂತ್ರಣ ಕಡಿಮೆಯಾಗಿದ್ದರೂ, ದಕ್ಷಿಣದ ಯಶಸ್ಸನ್ನು ಶಿಕ್ಷಿಸಬಾರದು ಎಂಬುದು ಗುರಿಯಾಗಿತ್ತು.
ವಾಜಪೇಯಿ ವಿವೇಕಯುತ ನಡೆ
2001ರಲ್ಲಿ ಫ್ರೀಜ್ ಅವಧಿ ಮುಗಿಯುವ ಸಮಯ ಬಂದಾಗ, ವಾಜಪೇಯಿ ಅವರ ಎನ್ಡಿಎ ಸರ್ಕಾರ 84ನೇ ಸಂವಿಧಾನ ತಿದ್ದುಪಡಿ ತಂದು ಈ ಸ್ಥಗಿತವನ್ನು 2026ರ ನಂತರದ ಮೊದಲ ಜನಗಣತಿಯವರೆಗೆ ವಿಸ್ತರಿಸಿತು. ಅಂದು ಕಾನೂನು ಸಚಿವ ಅರುಣ್ ಜೇಟ್ಲಿ ಅವರು ಸಂಸತ್ತಿನಲ್ಲಿ ಬಹಳ ಸ್ಪಷ್ಟವಾಗಿ ಹೀಗೆ ಹೇಳಿದ್ದರು: “ಕೆಲವು ರಾಜ್ಯಗಳು ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮವನ್ನು ಬಹಳ ಯಶಸ್ವಿಯಾಗಿ ಅನುಸರಿಸಿವೆ, ಕೆಲವು ಅನುಸರಿಸಿಲ್ಲ. ರಾಷ್ಟ್ರೀಯ ಜನಸಂಖ್ಯಾ ನೀತಿ 2026ರಲ್ಲಿ ಜನಸಂಖ್ಯೆ ಸ್ಥಿರೀಕರಣವನ್ನು ಗುರಿಯಾಗಿಟ್ಟುಕೊಂಡಿದೆ. ಆದ್ದರಿಂದ ಮತ್ತೆ 25 ವರ್ಷಗಳ ಕಾಲ ಫ್ರೀಜ್ ಮುಂದುವರಿಸುತ್ತೇವೆ.ʼʼ ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರವೂ ಅತ್ಯಂತ ವಿವೇಕಯುತವಾಗಿ ನಡೆದುಕೊಂಡು ದಕ್ಷಿಣದ ರಾಜ್ಯಗಳಿಗೆ ಆಗಬಹುದಾಗಿದ್ದ ಅನ್ಯಾಯವನ್ನು ತಪ್ಪಿಸಿತ್ತು. ಈ ಎರಡು ಐತಿಹಾಸಿಕ ನಿರ್ಧಾರಗಳು ದಕ್ಷಿಣ ಭಾರತದ ಜನರು ಮತ್ತು ನಾಯಕರು ಮಾಡಿದ ತ್ಯಾಗವನ್ನು ಗೌರವಿಸುವಂತಿದ್ದವು.
ದಕ್ಷಿಣ ಭಾರತದ ರಾಜ್ಯಗಳು (ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ) ದಶಕಗಳಿಂದ ಜನಸಂಖ್ಯಾ ನಿಯಂತ್ರಣದಲ್ಲಿ ಯಶಸ್ಸು ಕಂಡಿವೆ. ಟೋಟಲ್ ಫರ್ಟಿಲಿಟಿ ರೇಟ್ (TFR – ಪ್ರತಿ ಮಹಿಳೆಗೆ ಸರಾಸರಿ ಮಕ್ಕಳ ಸಂಖ್ಯೆ):
- ಕೇರಳ ಮತ್ತು ತಮಿಳುನಾಡು: 1.8
- ಆಂಧ್ರ, ತೆಲಂಗಾಣ, ಕರ್ನಾಟಕ: 1.7ರ ಸುಮಾರು
ಇದು ರಾಷ್ಟ್ರೀಯ ಸರಾಸರಿ 2.0ಕ್ಕಿಂತ ಕಡಿಮೆ.
ಉತ್ತರ ಭಾರತದಲ್ಲಿ: ಬಿಹಾರ 3.0+, ಉತ್ತರ ಪ್ರದೇಶ 2.7! ಇದು ಏನನ್ನು ಹೇಳುತ್ತಿದೆ ಎಂದರೆ ಉತ್ತರದ ಜನಸಂಖ್ಯೆ ಬೆಳೆಯುತ್ತಿದೆ, ದಕ್ಷಿಣ ಭಾರತದಲ್ಲಿ ಸ್ಥಿರವಾಗುತ್ತಿದೆ ಅಥವಾ ಕುಸಿಯುತ್ತಿದೆ. ಜಾಗತಿಕ ಸರಾಸರಿಯ ಮಾನದಂಡವಾದ 2.1 ಸರಾಸರಿಗಿಂತ ಕರ್ನಾಟಕದ (ಕನ್ನಡಿಗರ) ಜನಸಂಖ್ಯೆ ತೀವ್ರ ಪ್ರಮಾಣದಲ್ಲಿ ಕುಸಿಯುತ್ತಿದ್ದು 1.7 ತಲುಪಿದೆ. ಇದೇ ಸಂದರ್ಭದಲ್ಲಿ ಉತ್ತರದ ರಾಜ್ಯಗಳಲ್ಲಿ ಅದು ಅಪಾಯಕಾರಿ ಮಟ್ಟದಲ್ಲಿಯೇ ಇದೆ.
ಕ್ಷೇತ್ರ ಪುನರ್ ವಿಂಗಡಣೆಯ ನಂತರ ಲೋಕಸಭಾ ಸ್ಥಾನಗಳು 543ರಲ್ಲೇ ಉಳಿದರೆ: ದಕ್ಷಿಣ ರಾಜ್ಯಗಳು ಒಟ್ಟು 24-27 ಸೀಟುಗಳನ್ನು ಕಳೆದುಕೊಳ್ಳಬಹುದು (ತಮಿಳುನಾಡು -9, ಕೇರಳ -6, ಕರ್ನಾಟಕ -3, ಆಂಧ್ರ -4, ತೆಲಂಗಾಣ -2). ಒಂದು ವೇಳೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 850ಕ್ಕೆ ಏರಿಸಿದರೆ ಉತ್ತರ ಪ್ರದೇಶ 80ರಿಂದ 120+, ಬಿಹಾರ 40ರಿಂದ 60+ಕ್ಕೆ ಏರಬಹುದು. ದಕ್ಷಿಣದ ಸ್ಥಾನಗಳ ಪಾಲು 24%ರಿಂದ 19%ಕ್ಕೆ ಕುಸಿಯುತ್ತದೆ. ಕರ್ನಾಟಕಕ್ಕೆ ಕೆಲವು ಹೆಚ್ಚಿನ ಸ್ಥಾನಗಳು ಸಿಗಬಹುದು. ಆದರೆ ಲೋಕಸಭೆಯಲ್ಲಿ ಪ್ರಾತಿನಿಧ್ಯದ ಪ್ರಮಾಣ ದೊಡ್ಡಮಟ್ಟದಲ್ಲಿ ಕುಸಿಯುತ್ತದೆ. ಇದು ದಕ್ಷಿಣದ ಇತರ ರಾಜ್ಯಗಳಿಗೂ ಅನ್ವಯಿಸುತ್ತದೆ.
ಇದು ಯಾವ ಸೀಮೆಯ ನ್ಯಾಯ?
ದಕ್ಷಿಣವು ದೇಶದ ಜಿಡಿಪಿಗೆ 30-35% ಕೊಡುಗೆ ನೀಡುತ್ತದೆ. ಅತಿ ಹೆಚ್ಚು ತೆರಿಗೆಯನ್ನು ನೀಡುತ್ತದೆ. ಈಗ ಕರ್ನಾಟಕದ ಉದಾಹರಣೆಯನ್ನು ತೆಗೆದುಕೊಳ್ಳೋಣ. ಕರ್ನಾಟಕ ಭಾರತ ಸರ್ಕಾರಕ್ಕೆ ನೀಡುವ ಎಲ್ಲ ಬಗೆಯ ತೆರಿಗೆಗಳು (Direct Tax, GST, Customs, Excise, Cess, Surcharge ಎಲ್ಲವೂ ಸೇರಿ) ಮತ್ತು ಕೇಂದ್ರದಿಂದ ಹಿಂತಿರುಗುವ ಹಣದ ಅನುಪಾತವನ್ನು ಸರಾಸರಿಯಾಗಿ ಹೇಳುವುದಾದರೆ ಕರ್ನಾಟಕ ಪ್ರತಿ ವರ್ಷ ಕೇಂದ್ರಕ್ಕೆ ಸುಮಾರು ₹4.3 ಲಕ್ಷ ಕೋಟಿ ರುಪಾಯಿ (₹4,30,000 ಕೋಟಿ) ತೆರಿಗೆಯ ರೂಪದಲ್ಲಿ ಕೊಡುತ್ತದೆ. ಕೇಂದ್ರದಿಂದ ಕರ್ನಾಟಕಕ್ಕೆ ಹಿಂತಿರುಗುವುದು (Tax Devolution + Grants) ಸುಮಾರು ₹50,000 ಕೋಟಿ ರುಪಾಯಿ ಮಾತ್ರ (ಕೆಲವು ವರ್ಷಗಳಲ್ಲಿ ₹45,000 ರಿಂದ ₹79,000 ಕೋಟಿವರೆಗೆ ಇದೆ). ಸರಾಸರಿ ಅನುಪಾತ ನೋಡುವುದಾದರೆ ಭಾರತ ಸರ್ಕಾರಕ್ಕೆ ನಾವು ₹100 ಕೊಟ್ಟರೆ ಕರ್ನಾಟಕಕ್ಕೆ ಹಿಂದಿರುಗುವುದು ₹12 ರಿಂದ ₹15 ಮಾತ್ರ.
ಇದೇ ಸಂದರ್ಭದಲ್ಲಿ ಕೇಂದ್ರದಿಂದ ತೆರಿಗೆ ಹಂಚಿಕೆ (Tax Devolution)ಯಲ್ಲಿ ಉತ್ತರ ಪ್ರದೇಶ ರಾಜ್ಯವು ಸುಮಾರು 15.8% ಪಾಲು ಪಡೆಯುತ್ತದೆ. ಸರಾಸರಿ ಅನುಪಾತ ನೋಡುವುದಾದರೆ ಭಾರತ ಸರ್ಕಾರಕ್ಕೆ ಉತ್ತರ ಪ್ರದೇಶ ರಾಜ್ಯವು ತೆರಿಗೆ ರೂಪದಲ್ಲಿ ₹100 ಕೊಟ್ಟರೆ ಸುಮಾರು ₹170 ರಿಂದ ₹200 ಅವರಿಗೆ ವಾಪಸ್ ಬರುತ್ತದೆ. ಬಿಹಾರ ರಾಜ್ಯದ ಕತೆಯೂ ಹೀಗೇ ಇದೆ. ಬಿಹಾರ ರಾಜ್ಯವು ಕೇಂದ್ರದಿಂದ ತೆರಿಗೆ ಹಂಚಿಕೆಯಲ್ಲಿ ಸುಮಾರು 9.9% ರಿಂದ 10% ಪಾಲು ಪಡೆಯುತ್ತದೆ. ಸರಾಸರಿ ಅನುಪಾತ ನೋಡುವುದಾದರೆ ಪ್ರತಿ ₹100 ತೆರಿಗೆ ಕೊಟ್ಟರೆ ಸುಮಾರು ₹300 ರಿಂದ ₹700 ಬಿಹಾರಕ್ಕೆ ಹಿಂದಿರುಗುತ್ತದೆ!
ಇದನ್ನು ನಾವು ಯಾವ ಸೀಮೆಯ ನ್ಯಾಯ ಎಂದು ಕರೆಯಬೇಕು? ಜನಸಂಖ್ಯಾ ನಿಯಂತ್ರಣ ಮಾಡಿಕೊಂಡ ನಾವು ಶಿಕ್ಷೆ ಅನುಭವಿಸಬೇಕು, ನಿಯಂತ್ರಣ ಮಾಡಿಕೊಳ್ಳದ ರಾಜ್ಯಗಳು ಬಂಪರ್ ಕೊಡುಗೆಗಳನ್ನು ಪಡೆಯಬೇಕು!
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ದಕ್ಷಿಣ ಭಾರತದ ಶಾಂತಿಯನ್ನು ಕದಡಬೇಡಿ, ಇಲ್ಲಿ ಕ್ಷೋಭೆಯನ್ನು ಹೊತ್ತಿಸಬೇಡಿ ಎಂದು ಎಚ್ಚರಿಸಿದ್ದಾರೆ. ಎಲ್ಲ ದಕ್ಷಿಣ ರಾಜ್ಯಗಳೊಂದಿಗೆ ಜಂಟಿ ಕ್ರಿಯಾ ಸಮಿತಿ (ಜೆಎಸಿ) ರಚಿಸಿ ಪ್ರತಿಭಟನೆ ಮಾಡುವುದಾಗಿ ಹೇಳುತ್ತಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಹ ಡಿಲಿಮಿಟೇಶನ್ ಎಂಬುದು ದಕ್ಷಿಣ ಭಾರತದ ಮೇಲೆ ಡಾಮೋಕ್ಲೀಸ್ ಕತ್ತಿಯಂತೆ ಹೇರಲಾಗುತ್ತಿದೆ. ರಾಷ್ಟ್ರೀಯ ಜನಸಂಖ್ಯಾ ನೀತಿಯನ್ನು ಅನುಸರಿಸಿದ್ದಕ್ಕೆ ನಮಗೆ ಶಿಕ್ಷೆ ಸಿಗುತ್ತಿದೆ ಎಂದು ಹೇಳುತ್ತಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ: ಇದು ನರೇಂದ್ರ ಮೋದಿ ಸರ್ಕಾರ ದಕ್ಷಿಣ ರಾಜ್ಯಗಳ ವಿರುದ್ಧ ನಡೆಸುತ್ತಿರುವ ಸಂಚು. ಜನಸಂಖ್ಯೆ ನಿಯಂತ್ರಿಸಿದ್ದಕ್ಕೆ ನಾವು ಪಡೆದುಕೊಳ್ಳುತ್ತಿರುವ ಶಿಕ್ಷೆ ಎಂದು ಹೇಳುತ್ತಿದ್ದಾರೆ.
ಆದರೆ ಪ್ರಧಾನಿ ಮೋದಿ ಅವರು, ಕ್ಷೇತ್ರ ಪುನರ್ ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳು ತಮ್ಮ ಸ್ಥಾನಗಳನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದು ಮೋಸದ ಮಾತು. ಸೀಟು ಕಳೆದುಕೊಳ್ಳುತ್ತೇವೆ ಎಂಬ ಆತಂಕ ನಮಗಿಲ್ಲ, ನಮಗಿರುವ ಆತಂಕ ನಮ್ಮ ಸ್ಥಾನಗಳ ಪ್ರಮಾಣ ಕುಸಿಯುತ್ತದೆ ಎಂಬುದು. ಅದು ಮೋದಿಯವರಿಗೆ ಗೊತ್ತಿಲ್ಲದ ವಿಷಯವೇನಲ್ಲ.
ಉತ್ತರ- ದಕ್ಷಿಣ ವಿಭಜನೆ ಇನ್ನಷ್ಟು ಆಳ
ಕ್ಷೇತ್ರ ಪುನರ್ ವಿಂಗಡಣೆ ಜಾರಿಯಾದರೆ ಅದರ ಪರಿಣಾಮ ಏನಾಗುತ್ತದೆ ಎಂಬುದನ್ನು ಊಹಿಸಲು ಕಷ್ಟವೇನೂ ಆಗದು. ನಿಸ್ಸಂಶಯವಾಗಿ ಲೋಕಸಭೆಯಲ್ಲಿ ದಕ್ಷಿಣದ ಧ್ವನಿ ಕ್ಷೀಣವಾಗುತ್ತದೆ. ದೇಶದ ಭವಿಷ್ಯವನ್ನು ರೂಪಿಸುವ ಕಾನೂನು, ಬಜೆಟ್, ಯೋಜನೆಗಳು ಉತ್ತರದ ಪ್ರಭಾವಕ್ಕೆ ಒಳಗಾಗುತ್ತವೆ. ಉತ್ತರದ ರಾಜ್ಯಗಳು ಈಗಾಗಲೇ ಸಿಂಹಪಾಲನ್ನು ಪಡೆಯುತ್ತಿವೆ. ಅದು ದುಪ್ಪಟ್ಟಾಗುತ್ತದೆ. ದಕ್ಷಿಣದ ಕೃಷಿ, ಉದ್ಯಮ, ನೀರಾವರಿ, ತಂತ್ರಜ್ಞಾನ, ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ ಎಲ್ಲ ಯೋಜನೆಗಳು ನಿರ್ಲಕ್ಷಕ್ಕೆ ಒಳಗಾಗುತ್ತವೆ.
ಕ್ಷೇತ್ರ ಪುನರ್ ವಿಂಗಡಣೆ ಜಾರಿಯಾದರೆ ಪ್ರಾದೇಶಿಕ ಅಸಮಾನತೆ ಇನ್ನಷ್ಟು ಹೆಚ್ಚುತ್ತದೆ. ದಕ್ಷಿಣವು ಹೆಚ್ಚು ತೆರಿಗೆ ಕೊಡುತ್ತದೆ, ಆದರೆ ಪ್ರಾತಿನಿಧ್ಯ ಕಡಿಮೆಯಾದರೆ ಕೇಂದ್ರ ನೆರವು ಇನ್ನಷ್ಟು ಕಡಿಮೆಯಾಗುತ್ತದೆ. ಇದು ಆರ್ಥಿಕ ಅಸಮತೋಲನಕ್ಕೆ ಕಾರಣವಾಗುತ್ತದೆ.
ಮತ್ತೊಂದು ಬಹಳ ಮುಖ್ಯವಾದ ಅಂಶವೆಂದರೆ ಭಾರತದ ಒಕ್ಕೂಟ ವ್ಯವಸ್ಥೆ ದುರ್ಬಲವಾಗುತ್ತದೆ. ಎಲ್ಲ ರಾಜ್ಯಗಳಿಗೆ ಸಮಾನ ಗೌರವ ಬೇಕು ಎಂಬ ನೀತಿ ಮೂಲೆಗೆ ಸೇರುತ್ತದೆ. ಅಷ್ಟೇ ಅಲ್ಲ ಉತ್ತರ-ದಕ್ಷಿಣ ವಿಭಜನೆಯನ್ನು ಇನ್ನಷ್ಟು ಆಳವಾಗಿಸುತ್ತದೆ.
ನಾವು ಅತ್ಯಂತ ಗಂಭೀರವಾಗಿ ಚಿಂತಿಸಬೇಕಾದ ಮತ್ತೊಂದು ಆಯಾಮವೂ ಇದೆ. ಇದು ದೇಶದ ಏಕತೆಗೆ ಧಕ್ಕೆ ತರುತ್ತದೆ. ದಕ್ಷಿಣದ ಜನರು ಈ ಅನ್ಯಾಯಗಳ ವಿರುದ್ಧ ಸಿಡಿದು ನಿಂತರೆ ಅದು ದೇಶದ ಒಗ್ಗಟ್ಟಿಗೆ ಮಾರಕವಾಗಲಿದೆ.
ಇದಕ್ಕೆಲ್ಲಾ ಪರಿಹಾರ ಏನು?
ಹಾಗಿದ್ದರೆ ಇದಕ್ಕೆ ಪರಿಹಾರವೇನು ಎಂದು ಹಲವರು ಪ್ರಶ್ನಿಸಬಹುದು. ಜನಸಂಖ್ಯಾ ನಿಯಂತ್ರಣದಲ್ಲಿ ಎಲ್ಲ ಭಾಗದಲ್ಲೂ ಸ್ಥಿರತೆಯನ್ನು ಕಾಪಾಡಿಕೊಳ್ಳುವವರೆಗೆ ಕ್ಷೇತ್ರ ಪುನರ್ ವಿಂಗಡಣೆಯನ್ನು ಮುಂದೂಡಬೇಕಾಗುತ್ತದೆ. ಉತ್ತರದ ರಾಜ್ಯಗಳಿಗೆ ಇನ್ನೂ ಎಪ್ಪತ್ತೈದು ವರ್ಷಗಳ ಕಾಲಾವಧಿಯನ್ನು ನೀಡಿ, 2100ರವರೆಗೆ ಈಗಿನ ಲೋಕಸಭಾ ಸದಸ್ಯ ಸ್ಥಾನಗಳನ್ನು ಫ್ರೀಜ್ ಮಾಡುವುದು ಉತ್ತಮ. ಅದನ್ನು ಹೊರತಾಗಿ ಇನ್ಯಾವ ಪರಿಹಾರವೂ ಇಲ್ಲ ಎಂಬುದು ಸ್ಪಷ್ಟ. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆಯನ್ನು ಯಾಕೆ ಅನುಭವಿಸಬೇಕು?
ದಕ್ಷಿಣ ಭಾರತವು ಈಗಾಗಲೇ ದೇಶದ ಹಿತಕ್ಕಾಗಿ ಸಾಕಷ್ಟು ತ್ಯಾಗಗಳನ್ನು ಮಾಡಿವೆ. ನಮ್ಮ ತೆರಿಗೆ ಹಣವು ಉತ್ತರದ ರಾಜ್ಯಗಳಿಗೆ ಹಂಚಿಕೆಯಾದರೂ ದೇಶದ ಒಗ್ಗಟ್ಟಿಗೆ ಧಕ್ಕೆಯಾಗಬಾರದೆಂದು ನಾವು ಹಲ್ಲು ಕಚ್ಚಿ ಸಹಿಸಿಕೊಂಡಿದ್ದೇವೆ. ನಾವು ದೇಶದ ಪ್ರಗತಿಗೆ ಯಾವತ್ತಿಗೂ ಮುಂಚೂಣಿಯಲ್ಲಿ ನಿಂತಿದ್ದೇವೆ. ಜಿಡಿಪಿಯನ್ನು ಹೆಚ್ಚಿಸಿದ್ದೇವೆ, ತಲಾದಾಯವನ್ನು ಹೆಚ್ಚಿಸಿದ್ದೇವೆ. ಜನಸಂಖ್ಯಾ ನಿಯಂತ್ರಣ ಆಗಬೇಕು ಎಂದು ಭಾರತ ಸರ್ಕಾರ ಹೇಳಿದಾಗಿನಿಂದ ಅದನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಜನಸಂಖ್ಯೆಯನ್ನು ಕಡಿಮೆ ಮಾಡಿಕೊಂಡಿದ್ದೇವೆ. ಇಷ್ಟಾದ ಮೇಲೂ ನಾವು ಇನ್ನೇನು ತ್ಯಾಗ ಮಾಡಬೇಕು?
ಉತ್ತರದ ರಾಜ್ಯಗಳ ಜನಸಂಖ್ಯಾ ಸ್ಫೋಟದಿಂದಾಗಿ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಅಲ್ಲಿಂದ ಮಹಾವಲಸೆ ಅಬಾಧಿತವಾಗಿ ನಡೆಯುತ್ತಿದೆ. ಈ ವಲಸೆ ಇದೇ ಪ್ರಮಾಣದಲ್ಲಿ ನಡೆದರೆ ಮುಂದಿನ ಐವತ್ತು ವರ್ಷಗಳಲ್ಲಿ ಕನಿಷ್ಠ ಇಪ್ಪತ್ತು ಕೋಟಿ ಉತ್ತರ ಭಾರತೀಯರನ್ನು ದಕ್ಷಿಣ ಭಾರತಕ್ಕೆ ಕಳುಹಿಸುವ ಸಾಧ್ಯತೆ ಇದೆ. ಈ ಮಹಾವಲಸೆಯು ಈಗಾಗಲೇ ನಮ್ಮ ಅಸ್ಮಿತೆಯನ್ನು ನಾಶಮಾಡುತ್ತಿದೆ. ಇದು ಇನ್ನಷ್ಟು ತೀವ್ರವಾಗುತ್ತ ಹೋಗಲಿದೆ. ಇದರ ನಡುವೆ ಕ್ಷೇತ್ರ ಪುನರ್ ವಿಂಗಡಣೆಯ ಹೆಸರಿನಲ್ಲಿ ಭಾರತ ಸರ್ಕಾರ ನಮ್ಮ ಕುತ್ತಿಗೆಯ ಮೇಲೆ ಕಾಲಿಟ್ಟಿದೆ. ಈಗ ನಾವೇನು ಮಾಡಬೇಕು? ಯಾರ ಮೊರೆ ಹೋಗಬೇಕು?
ನಿಜ, ಭಾರತ ಮಾತೆಯನ್ನು ನಾವು ತಾಯಿ ಎಂದು ಆರಾಧಿಸಿದೆವು. ಆದರೆ ತಾಯ ಮೊಲೆ ಹಾಲು ನಂಜಾಗಿ ಹೋದರೆ ಏನು ಮಾಡುವುದು?
ಆದರೆ ಜನಸಾಮಾನ್ಯರ ಸಿಟ್ಟು ರಟ್ಟೆಗೆ ಬಂದರೆ ಅದನ್ನು ತಡೆಹಿಡಿಯುವವರು ಯಾರು? ದಕ್ಷಿಣ ಭಾರತ ಒಂದೇ ಬಾರಿಗೆ ಸಿಡಿದೆದ್ದು ನಿಂತರೆ ಅದರ ಹೊಡೆತವನ್ನು ನರೇಂದ್ರ ಮೋದಿಯವರ ಸರ್ಕಾರ ತಡೆದುಕೊಳ್ಳುವುದೇ? ಅಥವಾ ನಮ್ಮ ಮೇಲೂ ಮಿಲಿಟರಿಯನ್ನು ಬಿಟ್ಟು ನಮ್ಮ ಧ್ವನಿಯನ್ನು ಹತ್ತಿಕ್ಕುವುದೇ?
ಸನ್ನಿವೇಶ ನಿಜಕ್ಕೂ ಗಂಭೀರವಾಗಿದೆ. ನಮ್ಮನ್ನು ಆಳುವ ಜನರಿಗೆ ಆ ದೇವರು ಸದ್ಬುದ್ಧಿಯನ್ನು ಕೊಡಲಿ. ಇಂದಿರಾಗಾಂಧಿ, ವಾಜಪೇಯಿ ಅವರು ತೋರಿದ ವಿವೇಕವನ್ನು ನರೇಂದ್ರ ಮೋದಿಯವರೂ ತೋರುವಂತಾಗಲಿ ಎಂದು ಆಶಿಸುತ್ತೇನೆ.


