ಧರ್ಮಸ್ಥಳದಲ್ಲಿ ನಡೆದ ಅಸಹಜ ಸಾವುಗಳ ತನಿಖೆಯ ಹೆಸರಿನಲ್ಲಿ ಹಿಂದೂ ಧರ್ಮದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಂದು ಶಾಸಕ ಸುನೀಲ್ ಕುಮಾರ್ ಆರೋಪಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿರುವ ಅಪಪ್ರಚಾರ ಬಗ್ಗೆ ತನಿಖೆ ನಡೆಸಬೇಕು ಮತ್ತು ಜನರ ಅಸಹನೆ ಕಟ್ಟೆ ಒಡೆಯುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು.

ದಕ್ಷಿಣ ಕನ್ನಡ (ಆ.07): ಧರ್ಮಸ್ಥಳದ ಸುತ್ತಮುತ್ತಲ ಪ್ರದೇಶದಲ್ಲಿ ನಡೆದಿರುವ ಅಸಹಜ ಸಾವುಗಳ ತನಿಖೆಯನ್ನು ಪೊಲೀಸರು ಮಾಡುತ್ತಿಲ್ಲ, ಇದರ ಬದಲಾಗಿ ಹಿಂದೂ ಧರ್ಮದ ಪವಿತ್ರ ಸ್ಥಳದ ಬಗ್ಗೆ ಅವಹೇಳನ ಮಾಡುತ್ತಾ ಸೋಶಿಯಲ್ ಮೀಡಿಯಾಗಳು ತನಿಖೆ ಮಾಡುತ್ತಿವೆ. ಹೀಗೆಯೇ ಧಾರ್ಮಿಕ ಅಪಪ್ರಚಾರ ಮಾಡುವ ಮೊದಲು ಜನರ ಅಸಹನೆ ಕಟ್ಟೆ ಒಡೆಯುವ ಮೊದಲು ಎಚ್ಚೆತ್ತುಕೊಳ್ಳಿ ಎಂದು ಶಾಸಕ ಸುನೀಲ್ ಕುಮಾರ್ ಎಚ್ಚರಿಕೆ ನೀಡಿದರು.

ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಧರ್ಮಸ್ಥಳದಲ್ಲಿ ಅಸಹಜ ಸಾವುಗಳ ತನಿಖೆ ಹೆಸರಲ್ಲಿ ಹಿಂದೂ ಧರ್ಮದ ಬಗ್ಗೆ ನಡೆಯುತ್ತಿರುವ ಅಪಪ್ರಚಾರವನ್ನು ನಾವು ಸಹಿಸುವುದಿಲ್ಲ. ಸರ್ಕಾರ ತನಿಖೆಯ ಹೆಸರಿನಲ್ಲಿ ಹಿಂದೂ ಶ್ರದ್ಧಾ ಕೇಂದ್ರ ಮತ್ತು ಹಿಂದೂ ಧರ್ಮವನ್ನು ಅವಹೇಳನ ಮಾಡುವುದು ಸರಿಯಲ್ಲ. ಇಲ್ಲಿಯವರೆಗೂ ನಾವು ಮಾತನಾಡಬೇಕಾದ ಅನಿವಾರ್ಯತೆ ಇರಲಿಲ್ಲ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಲವರು ಸ್ವಾತಂತ್ರ್ಯ ಹರಣ ಮಾಡುತ್ತಿದ್ದಾರೆ. ತನಿಖೆ ಸರಿಯಾಗಿ ನಡೆಯುತ್ತಿಲ್ಲ, ತೀರ್ಪು ಹೀಗೆ ಇರಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವುದು ತಪ್ಪು' ಎಂದರು.

ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಲಿ:

ಶವ ಹೂಳಿದ ಕೇಸ್ ತನಿಖೆಗೆ ಸರ್ಕಾರದಿಂದ ರಚಿಸಲಾದ ವಿಶೇಷ ತನಿಖಾ ದಳದ (SIT) ಬಗ್ಗೆ ತಮ್ಮ ವಿರೋಧವಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳ ಮೂಲಕ ಧರ್ಮಸ್ಥಳ ಮತ್ತು ಹಿಂದೂ ಧರ್ಮದ ಬಗ್ಗೆ ಹರಡಲಾಗುತ್ತಿರುವ ಅಪಪ್ರಚಾರದ ಬಗ್ಗೆಯೂ ತನಿಖೆ ನಡೆಸಬೇಕು. ಧಾರ್ಮಿಕ ಅಪಪ್ರಚಾರ ಮಾಡಿದರು ಎಂದು ನೂರಾರು ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಸ್ವಯಂಪ್ರೇರಿತ (ಸುವೊಮೊಟೊ) ಪ್ರಕರಣಗಳನ್ನು ದಾಖಲಿಸಿದ್ದರು. ಆದರೆ ಧರ್ಮಸ್ಥಳದ ಈ ವಿಚಾರದಲ್ಲಿ ನಡೆಯುತ್ತಿರುವ ಅಪಪ್ರಚಾರದ ಬಗ್ಗೆ ಏಕೆ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿಕೊಂಡಿಲ್ಲ? ಸರ್ಕಾರವೇ ಈ ಅಪಪ್ರಚಾರಕ್ಕೆ ದಾರಿ ಮಾಡಿಕೊಡುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಧರ್ಮಸ್ಥಳದಲ್ಲಿ ತನಿಖೆ ಮುಗಿದು ಸಂಜೆ ಆಗುತ್ತಿದ್ದಂತೆ 'ಹೆಣ್ಣು ಮಗುವಿನ ಅಸ್ಥಿಪಂಜರ ಸಿಕ್ಕಿತು, ಯುವಕನ ಅಸ್ಥಿಪಂಜರ ಸಿಕ್ಕಿತು' ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವುದು ಸರಿಯಲ್ಲ. ಈ ಎಲ್ಲಾ ಅಪಪ್ರಚಾರಕ್ಕೆ ಎಸ್ಐಟಿ ತೆರೆ ಎಳೆಯಬೇಕು. ಮುಂಬರುವ ವಿಧಾನ ಸಭಾ ಅಧಿವೇಶನಕ್ಕೂ ಮೊದಲು ಮಧ್ಯಂತರ ವರದಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ಜನರ ಅಸಹನೆ ಕಟ್ಟೆ ಒಡೆಯುವ ಮೊದಲು ಎಚ್ಚೆತ್ತುಕೊಳ್ಳಿ

ಪೊಲೀಸರು ತನಿಖೆ ಮಾಡುವುದನ್ನು ಬಿಟ್ಟು ಸಾಮಾಜಿಕ ಜಾಲತಾಣಗಳು ತನಿಖೆ ಮಾಡುತ್ತಿರುವಂತಿದೆ ಎಂದು ಸುನಿಲ್ ಕುಮಾರ್ ವ್ಯಂಗ್ಯವಾಡಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿಗಳ ಮೇಲಿನ ಅಪವಾದಗಳು ಸರಿಯಲ್ಲ. ಜನರ ಅಸಹನೆ ಕಟ್ಟೆ ಒಡೆಯುವ ಮುನ್ನ ಸರ್ಕಾರ ಮತ್ತು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ತನಿಖೆ ಸರಿಯಾದ ದಾರಿಯಲ್ಲಿ ಸಾಗಲಿ ಎಂದು ಸುನಿಲ್ ಕುಮಾರ್ ಆಗ್ರಹಿಸಿದರು.