Dharmasthala case: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಬಂಧಿತನಾಗಿದ್ದ ಬುರುಡೆ ಚಿನ್ನಯ್ಯ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಲಿದ್ದಾರೆ. ಅವರ ಪತ್ನಿ ಶ್ಯೂರಿಟಿ ಬಾಂಡ್ ಸಲ್ಲಿಸಿದ ನಂತರ, ನ್ಯಾಯಾಲಯವು ಬಿಡುಗಡೆಗೆ ಅನುಮತಿ ನೀಡಿದ್ದು, ಆದೇಶವು ಇ-ಮೇಲ್ ಮೂಲಕ ಜೈಲು ಅಧಿಕಾರಿಗಳಿಗೆ ತಲುಪಿದೆ.
ಶಿವಮೊಗ್ಗ(ಡಿ.18): ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಬುರುಡೆ ಚಿನ್ನಯ್ಯ ಇಂದು ಬೆಳಿಗ್ಗೆ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಲಿದ್ದಾರೆ.
ಬೆಳಿಗ್ಗೆ 7:30ಕ್ಕೆ ಜೈಲಿನಿಂದ ಚಿನ್ನಯ್ಯ ಬಿಡುಗಡೆ?
ನ್ಯಾಯಾಲಯದ ಆದೇಶದನ್ವಯ ಇಂದು ಬೆಳಿಗ್ಗೆ ಸರಿಯಾಗಿ 7:30ಕ್ಕೆ ಜೈಲಾಧಿಕಾರಿಗಳು ಬುರುಡೆ ಚಿನ್ನಯ್ಯನನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಜೈಲಿನ ನಿಯಮಾವಳಿಗಳ ಪ್ರಕಾರ ಪ್ರಕ್ರಿಯೆಗಳು ಮುಗಿದ ತಕ್ಷಣ ಅವರು ಹೊರಬರಲಿದ್ದಾರೆ.
ಪತ್ನಿಯಿಂದ ಶ್ಯೂರಿಟಿ ಬಾಂಡ್ ಸಲ್ಲಿಕೆ
ನಿನ್ನೆ ಬೆಳ್ತಂಗಡಿಯ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯದಲ್ಲಿ ಚಿನ್ನಯ್ಯ ಪರವಾಗಿ ಅವರ ಪತ್ನಿ ಶ್ಯೂರಿಟಿ ಬಾಂಡ್ ಸಲ್ಲಿಸಿದ್ದರು. ಇದರೊಂದಿಗೆ ಇಬ್ಬರು ಜಾಮೀನುದಾರರ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಈ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯವು ಚಿನ್ನಯ್ಯನ ಬಿಡುಗಡೆಗೆ ಅನುಮತಿ ನೀಡಿತ್ತು.
ಇ-ಮೇಲ್ ಮೂಲಕ ತಲುಪಿದ ಕೋರ್ಟ್ ಆದೇಶ
ನ್ಯಾಯಾಲಯವು ಬಿಡುಗಡೆಗೆ ಅನುಮತಿ ನೀಡಿದ ಪತ್ರವು ನಿನ್ನೆ ಸಂಜೆ ಸುಮಾರು 7:20ಕ್ಕೆ ಇ-ಮೇಲ್ ಮೂಲಕ ಶಿವಮೊಗ್ಗ ಜೈಲಿನ ಅಧಿಕಾರಿಗಳಿಗೆ ತಲುಪಿದೆ. ತಾಂತ್ರಿಕ ಪ್ರಕ್ರಿಯೆಗಳು ನಿನ್ನೆ ರಾತ್ರಿಯೇ ಪೂರ್ಣಗೊಂಡಿರುವುದರಿಂದ ಇಂದು ಬೆಳಿಗ್ಗೆ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.
ಯಾರು ಈ ಬುರುಡೆ ಚಿನ್ನಯ್ಯ?
ಬುರುಡೆ ಚಿನ್ನಯ್ಯ (ಸಿಎನ್ ಚಿನ್ನಯ್ಯ) ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಆರೋಪಿಸಿ, ಮುಖವಾಡ ಧರಿಸಿ ತಲೆಬುರುಡೆ ಹಿಡಿದುಕೊಂಡು ನ್ಯಾಯಾಲಯಕ್ಕೆ ಬಂದು ದೂರು ನೀಡಿದ್ದ ವ್ಯಕ್ತಿ. ಈ ಹಿಂದೆ ಧರ್ಮಸ್ಥಳದಲ್ಲಿ ಕೆಲಸ ಮಾಡಿದ್ದರು. ಬುರುಡೆ ಪ್ರಕರಣದಲ್ಲಿ ಸುಳ್ಳು ಹೇಳಿಕೆ ನೀಡಿರುವುದು ತನಿಖೆಯಲ್ಲಿ ಬಯಲಾಗಿದ್ದರಿಂದ ತನಿಖೆಯ ದಿಕ್ಕುತಪ್ಪಿಸುವುದು, ಷಡ್ಯಂತ್ರದ ಭಾಗವಾಗಿದ್ದರಿದ 2025ರ ಆಗಸ್ಟ್ 23ರಂದು SIT ಬಂಧಿಸಿತ್ತು.


