ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಶವ ಹೂತಿರುವ ಪ್ರಕರಣದ ತನಿಖೆಯಲ್ಲಿ ಜಿಪಿಆರ್ ತಂತ್ರಜ್ಞಾನ ಬಳಕೆಗೆ ಕೆಲವರು ಬೇಕಂತಲೇ ಅಡ್ಡಿಪಡಿಸುತ್ತಿದ್ದಾರೆ ಎಂದು ವಕೀಲ ಮಂಜುನಾಥ್ ಆರೋಪಿಸಿದ್ದಾರೆ. ಖಾಸಗಿ ಕಂಪನಿಗಳ ಮೇಲೆ ಒತ್ತಡ ಹೇರಿ ಉಪಕರಣ ಲಭ್ಯವಾಗದಂತೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ದಕ್ಷಿಣ ಕನ್ನಡ/ಧರ್ಮಸ್ಥಳ (ಆ.6): ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಶವ ಹೂತಿರುವ ಪ್ರಕರಣದ ತನಿಖೆ ಮಹತ್ವದ ಹಂತಕ್ಕೆ ತಲುಪಿರುವಾಗಲೇ ಇದೀಗ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡಕ್ಕೆ ಅಗತ್ಯವಿರುವ (ಭೂಮಿಯಲ್ಲಿರುವ ಶವಗಳನ್ನು ಪತ್ತೆ ಹಚ್ಚುವ ವೈಜ್ಞಾನಿಕ ಉಪಕರಣ) ಜಿಪಿಆರ್ (ಗ್ರೌಂಡ್ ಪೆನೆಟ್ರೇಟಿಂಗ್ ರಡಾರ್) ತಂತ್ರಜ್ಞಾನವನ್ನು ಲಭ್ಯವಾಗದಂತೆ ಮಾಡಲು ಕೃತಕ ಅಭಾವವನ್ನು ಸೃಷ್ಟಿಸಲಾಗಿದೆ ಎಂದು ವಕೀಲ ಮಂಜುನಾಥ್ ಎನ್. ಗಂಭೀರ ಆರೋಪ ಮಾಡಿದ್ದಾರೆ.

ಖಾಸಗಿ ಕಂಪನಿಗಳ ಮೇಲೆ ಒತ್ತಡ ಅಥವಾ ಬೆದರಿಕೆ?

ಧರ್ಮಸ್ಥಳದಲ್ಲಿ ನಾಪತ್ತೆ ಆಗಿರುವ ಯುವತಿ ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಪರವಾಗಿ ವಕೀಲತ್ವ ವಹಿಸಿಕೊಂಡಿರುವ ಮಂಜುನಾಥ್, ಪ್ರೆಸ್ ರಿಲೀಸ್ ಮೂಲಕ ಮಾತನಾಡುತ್ತಾ, 'ಭಾರತದಲ್ಲಿ ಜಿಪಿಆರ್ ತಂತ್ರಜ್ಞಾನವನ್ನು ತಯಾರಿಸುವ ಕಂಪನಿಗಳ ಸಂಖ್ಯೆ ಬಹಳ ಕಡಿಮೆ. ಈ ಕಾರಣದಿಂದ ಈ ಉಪಕರಣಗಳ ಮಾರುಕಟ್ಟೆ ಸಹಜವಾಗಿ ಸೀಮಿತವಾಗಿದೆ. ಆದರೆ ನಾವು ಪಡೆದ ಮಾಹಿತಿಯ ಪ್ರಕಾರ, ಲಭ್ಯವಿರುವ ಯಂತ್ರಗಳನ್ನು ಕೆಲ ಅಜ್ಞಾತ ಶಕ್ತಿಗಳು ಮುಂಗಡವಾಗಿ ಬುಕಿಂಗ್ ಮಾಡಿವೆ. ಇದರಿಂದಾಗಿ ತನಿಖೆಗೆ ಉಪಕರಣ ಲಭ್ಯವಾಗುವುದರಲ್ಲಿ ವ್ಯತ್ಯಯ ಉಂಟಾಗಿದೆ' ಎಂದು ಹೇಳಿದರು.

ವಿಜ್ಞಾನಾಧಾರಿತ ತನಿಖೆಗೆ ಅಡ್ಡಿಪಡಿಸುವ ಪ್ರಯತ್ನ?

ಎಸ್‌ಐಟಿ ತಂಡಕ್ಕೆ ಈ ತಂತ್ರಜ್ಞಾನವಿರುವುದು ಅತ್ಯವಶ್ಯಕ. ಶವದ ಅವಶೇಷಗಳನ್ನು ಪತ್ತೆಹಚ್ಚಲು ಜಿಪಿಆರ್ ಅತ್ಯಂತ ಪರಿಣಾಮಕಾರಿ ಉಪಕರಣವಾಗಿದೆ. ಈ ಸಮಯದಲ್ಲಿ ಖಾಸಗಿ ಕಂಪನಿಗಳ ಮೇಲೆ ಒತ್ತಡ ಅಥವಾ ಬೆದರಿಕೆ ಹಾಕಿ ಜಿಪಿಆರ್ ತಂತ್ರಜ್ಞಾನ ಆಧಾರಿತ ಸಾಮಗ್ರಿಗಳು ಲಭ್ಯವಾಗದಂತೆ ಮಾಡಲಾಗುತ್ತಿದೆ ಎಂಬ ಶಂಕೆ ಮೂಡುತ್ತಿದೆ. ಇದು ಎಸ್‌ಐಟಿ ತನಿಖೆಯ ಮೇಲೆ ನೇರವಾಗಿ ಪರಿಣಾಮ ಬೀರುವ ಗಂಭೀರ ಬೆಳವಣಿಗೆ ಆಗಿದೆ' ಎಂದು ವಕೀಲರು ಆರೋಪ ಮಾಡಿದರು.

ನ್ಯಾಯಕ್ಕಾಗಿ ಹೋರಾಡುವ ಕುಟುಂಬಗಳಿಗೆ ಅನ್ಯಾಯ?

ಸುಜಾತಾ ಭಟ್ ಅವರು ತಮ್ಮ ಮಗಳ ನಾಪತ್ತೆ ಪ್ರಕರಣದಲ್ಲಿ ಸತ್ಯ ಅರಿಯಬೇಕೆಂಬ ಉದ್ದೇಶದಿಂದ ಈ ತಂತ್ರಜ್ಞಾನ ಬಳಸುವಂತೆ ಆಗ್ರಹಿಸಿದ್ದಾರೆ. 'ವಿಜ್ಞಾನಾಧಾರಿತ ವಿಧಾನಗಳಿಲ್ಲದೆ ಶವಗಳ ಶೋಧ ಕಾರ್ಯಗಳಿಗೆ (ಸತ್ಯಾನ್ವೇಷಣೆಗೆ) ದೊಡ್ಡ ಮಟ್ಟದ ಯಶಸ್ಸು ಸಿಗುವುದಿಲ್ಲ. ಇನ್ನು ಈಗಾಗಲೇ ಧರ್ಮಸ್ಥಳದಲ್ಲಿ ತಮ್ಮ ಕುಟುಂಬಸ್ಥರನ್ನು ಕಳೆದುಕೊಂಡು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಕುಟುಂಬಗಳಿಗೆ ಬಹುದೊಡ್ಡ ಅನ್ಯಾಯವಾಗುತ್ತದೆ' ಎಂದು ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

ಜಿಪಿಆರ್ ಬಳಸಿದರೆ ಪತ್ತೆ ಸುಲಭ:

ಈಗಾಗಲೇ ಅನಾಮಿಕ ವ್ಯಕ್ತಿ ತೋರಿಸಿದ ಸಮಾಧಿಗಳನ್ನು ಅಗೆದು ಶವಗಳನ್ನು ಶೋಧ ಕಾರ್ಯ ಮಾಡುತ್ತಿರುವ ಎಸ್‌ಐಟಿ ತಂಡವು ಜಿಪಿಆರ್ ತಂತ್ರಜ್ಞಾನವನ್ನು ಬಳಸಿದರೆ ಭೂಮಿಯ ಆಂತರಿಕ ಸ್ಥಿತಿಯನ್ನು ವಿಶ್ಲೇಷಿಸಿ ಶವದಂತಹ ವಸ್ತುಗಳ ಇರುವಿಕೆಯನ್ನು ಪತ್ತೆ ಹಚ್ಚಬಹುದು ಎಂಬುದು ತಜ್ಞರ ಅಭಿಪ್ರಾಯ. ಇದು ತನಿಖೆಯನ್ನು ವೇಗಗೊಳಿಸುವುದಲ್ಲದೆ, ಕುಟುಂಬಗಳಿಗೆ ಸಮಾಧಾನ ಹಾಗೂ ನ್ಯಾಯ ನೀಡುವಲ್ಲಿ ಸಹಕಾರಿಯಾಗುತ್ತದೆ. ಆದರೆ, ಎಸ್‌ಐಟಿ ತಂಡವು ಇಂತಹ ತಂತ್ರಜ್ಞಾನವನ್ನು ಬಳಕೆ ಮಾಡುವುದಕ್ಕೆ ಅನುಕೂಲ ಆಗದಂತೆ ತಡೆಯಲು ಹುನ್ನಾರ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡುತ್ತಿದ್ದಾರೆ.

ಜಿಪಿಆರ್ ಲಭ್ಯತೆ ಕೊರತೆ ಬಗ್ಗೆ ಸರ್ಕಾರ ಸ್ಪಷ್ಟನೆ ಕೊಡಲಿ:

ಈ ಹಿನ್ನೆಲೆಗಳಲ್ಲಿ ಸರಕಾರ ಹಾಗೂ ತನಿಖಾ ಸಂಸ್ಥೆಗಳು ಜಿಪಿಆರ್ ಲಭ್ಯತೆಯ ಕೊರತೆ ಬಗ್ಗೆ ಸ್ಪಷ್ಟನೆ ನೀಡಬೇಕಿದೆ. ಈ ಉಪಕರಣಗಳ ಲಭ್ಯತೆ ಹಾಗೂ ಬಳಕೆಗೆ ಸಂಬಂಧಿಸಿದ ಎಲ್ಲಾ ಅಡೆತಡೆಗಳನ್ನು ನಿವಾರಿಸಿ, ನಿಷ್ಠಾವಂತ ತನಿಖೆಗೆ ನೆರವಾಗಬೇಕಾದ ಅವಶ್ಯಕತೆ ಎದುರಾಗಿದೆ.