ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಗೋಕರ್ಣ ಹಾಗೂ ಅಂಕೋಲಾದ ಆಂದ್ಲೆ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮುಖ್ಯಮಂತ್ರಿ ಹುದ್ದೆಯ ಕನಸು ಹಾಗೂ ರಾಜಕೀಯ ಸಮಸ್ಯೆಗಳ ಪರಿಹಾರಕ್ಕಾಗಿ ಆಂದ್ಲೆ ಜಗದೀಶ್ವರಿ ಸನ್ನಿಧಿಯಲ್ಲಿ 'ಹಿಂಗಾರ ಪ್ರಸಾದ'ದ ಮೂಲಕ ಭವಿಷ್ಯದ ಅಪ್ಪಣೆ ಕೇಳಿದ್ದಾರೆ. 

ಕಾರವಾರ (ಡಿ.19): ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಉತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಕ್ಷೇತ್ರಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮೊದಲು ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಸಾಂಪ್ರದಾಯಿಕ ಪಂಚೆ-ಶಲ್ಯ ಧರಿಸಿ ಆತ್ಮಲಿಂಗ ದರ್ಶನ ಪಡೆದರು. ಅರ್ಚಕ ರಾಜಗೋಪಾಲ ಅಡಿ ಅವರ ನೇತೃತ್ವದಲ್ಲಿ ಬಿಲ್ಪತ್ರೆ, ಪಂಚಾಮೃತ ಹಾಗೂ ನವಧಾನ್ಯ ಅಭಿಷೇಕ ಸೇರಿದಂತೆ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಮಹಾಗಣಪತಿ ದರ್ಶನ ಪಡೆದು ನೇರವಾಗಿ ಅಂಕೋಲಾದ ಆಂದ್ಲೆ ಕ್ಷೇತ್ರಕ್ಕೆ ಪ್ರಯಾಣ ಬೆಳೆಸಿದರು.

ಆಂದ್ಲೆ ಜಗದೀಶ್ವರಿ ಸನ್ನಿಧಿಯಲ್ಲಿ ಅದೃಷ್ಟ ಪರೀಕ್ಷೆ

ಗೋಕರ್ಣದಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಡಿಕೆ ಶಿವಕುಮಾರ್, ಪ್ರಸಿದ್ಧ ಶಕ್ತಿ ಕೇಂದ್ರವಾದ ಅಂಕೋಲಾದ ಆಂದ್ಲೆ ಶ್ರೀ ಜಗದೀಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಕ್ಷೇತ್ರವು 'ಹಿಂಗಾರ ಪ್ರಸಾದ'ದ ಮೂಲಕ ಭವಿಷ್ಯ ನುಡಿಯಲು ಖ್ಯಾತಿ ಪಡೆದಿದೆ. ಸಿಎಂ ಗದ್ದುಗೆ ಏರುವ ಕನಸು ಮತ್ತು ಸದ್ಯ ಎದುರಿಸುತ್ತಿರುವ ವಿವಿಧ ರಾಜಕೀಯ ಸಮಸ್ಯೆಗಳ ಪರಿಹಾರಕ್ಕಾಗಿ ದೇವಿಯ ಮುಂದೆ ಐದು ರೀತಿಯ ಪ್ರಶ್ನೆಗಳನ್ನು ಇರಿಸಿ, ತಾಯಿಯ ಅಪ್ಪಣೆಗಾಗಿ (ಪ್ರಸಾದ) ಕಾಯಲಿದ್ದಾರೆ. ದೇವಿಯ ತಲೆಯ ಬಲಭಾಗದಿಂದ ಹಿಂಗಾರ ಬಿದ್ದರೆ ಡಿಕೆಶಿ ಅಂದುಕೊಂಡ ಕೆಲಸ ಯಶಸ್ವಿಯಾಗಲಿದೆ ಎಂಬ ನಂಬಿಕೆ ಇಲ್ಲಿದೆ.

ಯಾರಿಗೂ ಇಲ್ಲ ಪ್ರವೇಶ: ಗರ್ಭಗುಡಿಯಲ್ಲಿ ಡಿಕೆಶಿ ಮಾತ್ರ!

ಆಂದ್ಲೆ ದೇವಸ್ಥಾನದಲ್ಲಿ ಪೂಜೆ ನಡೆಯುವ ವೇಳೆ ಡಿಕೆ ಶಿವಕುಮಾರ್ ಅವರು ಅತ್ಯಂತ ಕಟ್ಟುನಿಟ್ಟಿನ ನಿಯಮ ಪಾಲಿಸಿದ್ದಾರೆ. ಗರ್ಭಗುಡಿಯೊಳಗೆ ಡಿಕೆಶಿ ಮತ್ತು ಅವರು ಸೂಚಿಸಿದ ಕೆಲವೇ ಕೆಲವು ಆಪ್ತರಿಗೆ ಮಾತ್ರ ಪ್ರವೇಶ ನೀಡಲಾಗಿದ್ದು, ಸ್ಥಳೀಯ ಸಚಿವ ಮಾಂಕಾಳು ವೈದ್ಯ ಹಾಗೂ ಶಾಸಕ ಸತೀಶ್ ಸೈಲ್ ಅವರಿಗೂ ಒಳಹೋಗಲು ಅನುಮತಿ ನಿರಾಕರಿಸಲಾಗಿದೆ. ದೇವಿಯ ಮುಂದೆ ಕೇಳುವ ಪ್ರಶ್ನೆಗಳು ಯಾರಿಗೂ ಕೇಳಿಸಬಾರದು ಎಂಬ ಕಾರಣಕ್ಕೆ ದೇವಸ್ಥಾನದ ಪ್ರಾಂಗಣದಲ್ಲಿ ಯಾರೂ ಇರದಂತೆ ಖಡಕ್ ಸೂಚನೆ ನೀಡಲಾಗಿದೆ.

ಹಳೆಯ ನಂಟು: ಅಧ್ಯಕ್ಷ ಪಟ್ಟ ತಂದುಕೊಟ್ಟಿದ್ದ ಕ್ಷೇತ್ರ

ಈ ಹಿಂದೆ 2019ರಲ್ಲಿ ಡಿಕೆಶಿ ಇದೇ ಕ್ಷೇತ್ರಕ್ಕೆ ಭೇಟಿ ನೀಡಿ ಸುಮಾರು 3 ಗಂಟೆಗಳ ಕಾಲ ದೇವಿಯ ಮುಂದೆ ನಿಂತು ಪ್ರಾರ್ಥಿಸಿದ್ದರು. ಅಂದು ಸ್ವಲ್ಪ ತಡವಾದರೂ ತಾಯಿ ಬಲಭಾಗದಿಂದ ಹಿಂಗಾರ ಪ್ರಸಾದ ನೀಡಿ ಅನುಗ್ರಹಿಸಿದ್ದಳು. ಆ ಭೇಟಿಯ ನಂತರವೇ ಡಿಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಒಲಿದು ಬಂದಿತ್ತು ಮತ್ತು ಹಲವು ಕಾನೂನು ಸಂಕಷ್ಟಗಳಿಂದ ಅವರು ಮುಕ್ತಿ ಪಡೆದಿದ್ದರು. ಅದೇ ನಂಬಿಕೆಯಿಂದ ಈಗ ಮುಖ್ಯಮಂತ್ರಿ ಹುದ್ದೆಗಾಗಿ ಮತ್ತೆ ದೇವಿಯ ಮೊರೆ ಹೋಗಿದ್ದಾರೆ.

ಜ್ಯೋತಿಷಿಗಳ ಸೂಚನೆ: 'ಸುಗಂಧ ರಾಜ' ಹೂವಿಗೆ ನಿಷೇಧ!

ಈ ಬಾರಿ ಡಿಕೆಶಿ ಭೇಟಿಯಲ್ಲಿ ಒಂದು ವಿಶೇಷ ಅಂಶ ಗಮನ ಸೆಳೆದಿದೆ. ಜ್ಯೋತಿಷಿಗಳ ಸಲಹೆಯ ಮೇರೆಗೆ ಡಿಕೆ ಶಿವಕುಮಾರ್ ಅವರು ಸುಗಂಧ ರಾಜ ಹೂವಿನಿಂದ ದೂರ ಉಳಿದಿದ್ದಾರೆ. ದೇವಸ್ಥಾನದ ಆವರಣದೊಳಗೆ ಯಾರೂ ಸುಗಂಧ ರಾಜ ಹೂವು ತರದಂತೆ ಅವರು ಮೊದಲೇ ಸೂಚನೆ ನೀಡಿದ್ದರು. ಹೀಗಾಗಿ ಪೊಲೀಸರು ದೇವಸ್ಥಾನದ ಗೇಟ್ ಬಳಿಯೇ ಕಾರ್ಯಕರ್ತರು ತಂದಿದ್ದ ಸುಗಂಧ ರಾಜ ಹೂವುಗಳನ್ನು ತಡೆಯುತ್ತಿರುವುದು ಕಂಡುಬಂದಿದೆ. ಕಾಲರಾತ್ರಿ ಎಳ್ಳು ಅಮವಾಸ್ಯೆಯ ಹಿನ್ನೆಲೆಯಲ್ಲಿ ವಿಶೇಷ ಮಾಲೆ ಪೂಜೆಯನ್ನೂ ಅವರು ನೆರವೇರಿಸಲಿದ್ದಾರೆ.