ನಾಯಕತ್ವ ಬದಲಾವಣೆಯ ಕುರಿತಾದ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ತಾವೂ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬದ್ಧರಾಗಿರುತ್ತೇವೆ ಎಂದು ಸ್ಪಷ್ಟಪಡಿಸಿದ್ದು, ಈ ಬಗ್ಗೆ ಪದೇ ಪದೇ ಪ್ರಶ್ನೆ ಕೇಳದಂತೆ ಮಾಧ್ಯಮಗಳಿಗೆ ಮನವಿ .
ಬೆಂಗಳೂರು (ಫೆ.12): ನಾಯಕತ್ವ ವಿಚಾರದಲ್ಲಿ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ಅದರಂತೆ ನಾನು, ಡಿ.ಕೆ.ಶಿವಕುಮಾರ್ ನಡೆದುಕೊಳ್ಳುತ್ತೇವೆ. ಮತ್ತೆ ಮತ್ತೆ ಇದರ ಬಗ್ಗೆಯೇ ಕೇಳಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮದವರಿಗೆ ಹೇಳಿದ್ದಾರೆ.
ಪದೇಪದೆ ಅದೇ ಪ್ರಶ್ನೆ ಕೇಳಬಾರದು
ನಗರದ ಶಕ್ತಿಸೌಧದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ನಾಯಕತ್ವ ಬದಲಾವಣೆ ವಿಚಾರದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮೂರು ತಿಂಗಳಿಂದ ಬರೀ ಇದೇ ಆಯಿತು. ಬೇರೆ ಏನೂ ಇಲ್ವಾ ಕೇಳೋಕೆ? ಕೇಳಿದ ಪ್ರಶ್ನೆಯನ್ನೇ ಪದೇ ಪದೆ ಕೇಳಬಾರದು ಎಂದರು.
ಹೈಕಮಾಂಡ್ ತೀರ್ಮಾನವೇ ಅಂತಿಮ
ಜತೆಗೆ, ಹೈಕಮಾಂಡ್‌ನವರಿಗೆ ಎಲ್ಲವೂ ಗೊತ್ತಿದೆ. ಅವರು ತೀರ್ಮಾನ ಮಾಡುತ್ತಾರೆ. ಅದರಂತೆ ನಾನೂ ನಡೆಯುತ್ತೇನೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ನಡೆದುಕೊಳ್ಳುತ್ತಾರೆ. ಇದನ್ನು ಈಗಾಗಲೇ ನಾನು ಹಲವು ಬಾರಿ ಹೇಳಿದ್ದೇನೆ. ಮತ್ತೆ ಈ ಪ್ರಶ್ನೆ ಕೇಳಬೇಡಿ ಎಂದರು.
ತಾವು ಅಧಿಕಾರ ಬಿಟ್ಟುಕೊಡುವ ವಿಶ್ವಾಸವಿದೆ ಎಂದು ಡಿ.ಕೆ.ಸುರೇಶ್ ಅವರು ಹೇಳಿದ್ದಾರಲ್ವಾ ಎಂಬ ಪ್ರಶ್ನೆಗೆ, ಅವರು ಹೇಳಿದ್ದರೆ ಅವರನ್ನು ಕೇಳಿ. ನನ್ನನ್ನು ಕೇಳಬೇಡಿ. ನಾನು ಹೈಕಮಾಂಡ್ ಹೇಳಿದಂತೆ ನಡೆಯುವವನು ಎಂದರು.



