ಬೆಳಗಾವಿ ಅಧಿವೇಶನದಲ್ಲಿ ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದ್ದ ಶಾಸಕ ಮಹೇಶ ಟೆಂಗಿನಕಾಯಿಗೆ ಹುಬ್ಬಳ್ಳಿಯಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಗೃಹಲಕ್ಷ್ಮೀ ಮಾತ್ರವಲ್ಲದೆ ಶಕ್ತಿ ಯೋಜನೆಯಲ್ಲೂ ಸರ್ಕಾರ ಜನರಿಗೆ ಮೋಸ ಮಾಡಿದೆ ಹಣ ಬಿಡುಗಡೆಯಾಗುವವರೆಗೂ ಪ್ರತಿಭಟನೆಗೆ ಕರೆ..
ಹುಬ್ಬಳ್ಳಿ (ಡಿ.21): ಬೆಳಗಾವಿ ಅಧಿವೇಶನದಲ್ಲಿ ಫೆಬ್ರುವರಿ ಹಾಗೂ ಮಾರ್ಚ್ ತಿಂಗಳ ಗೃಹಲಕ್ಷ್ಮೀ ಹಣ ಬಿಡುಗಡೆ ಮಾಡದಿರುವ ಕುರಿತು ದಾಖಲೆ ಸಮೇತ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಶಾಸಕ ಮಹೇಶ ಟೆಂಗಿನಕಾಯಿಗೆ ಭರ್ಜರಿ ಸ್ವಾಗತ ಕೋರಲಾಯಿತು.
ಅಧಿವೇಶನ ಮುಗಿಸಿ ಶನಿವಾರ ಹುಬ್ಬಳ್ಳಿಗೆ ಆಗಮಿಸಿದ ಅವರನ್ನು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು. ಮಹಿಳಾ ಕಾರ್ಯಕರ್ತೆಯರು ಆರತಿ ಬೆಳಗಿ ಸ್ವಾಗತ ಕೋರಿದರು. ಇಲ್ಲಿನ ಗೋಕುಲ ರಸ್ತೆಯಿಂದ ಶಾಸಕರ ಕಚೇರಿವರೆಗೆ ಸುಮಾರು ಒಂದು ಕಿ.ಮೀ.ದೂರ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಈ ವೇಳೆ, ಕಾರ್ಯಕರ್ತರಿಂದ ಬೈಕ್ ರ್ಯಾಲಿ ಕೂಡ ನಡೆಯಿತು.
ಗೃಹಲಕ್ಶ್ಮಿ ಅಷ್ಟೇ ಅಲ್ಲ, ಶಕ್ತಿ ಯೋಜನೆಯಲ್ಲೂ ಅನ್ಯಾಯ:
ಈ ವೇಳೆ ಮಾತನಾಡಿದ ಶಾಸಕರು, ಗೃಹಲಕ್ಷ್ಮೀ ಯೋಜನೆ ಮಾತ್ರವಲ್ಲದೆ ಉಳಿದ ಗ್ಯಾರಂಟಿ ಯೋಜನೆಗಳಲ್ಲೂ ಸರ್ಕಾರ ಜನರಿಗೆ ಮೋಸ ಮಾಡಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಮತ್ತಷ್ಟು ಹಗರಣಗಳನ್ನು ಬಯಲಿಗೆಳೆಯಲಾಗುವುದು. ಶಕ್ತಿ ಯೋಜನೆಯಡಿ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ ಮಾಡುವಲ್ಲಿಯೂ ಅನ್ಯಾಯವಾಗಿದ್ದು, ಈ ಕುರಿತು ಶೀಘ್ರದಲ್ಲಿಯೇ ದಾಖಲೆ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದರು.
ಅಧಿವೇಶನ ಮುಗಿದರೂ ಹಣ ಬಿಡುಗಡೆ ಇಲ್ಲ:
ಹಣ ಬಿಡುಗಡೆಯಾಗದಿದ್ದರೆ ಬಿಡುಗಡೆ ಮಾಡುವುದಾಗಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟವೇ ಭರವಸೆ ನೀಡಿತ್ತು. ಆದರೆ, ಅಧಿವೇಶನ ಮುಗಿದರೂ ಹಣ ಬಿಡುಗಡೆ ಮಾಡಿಲ್ಲ. ಗೃಹಲಕ್ಷ್ಮೀ ಹಣ ಬಿಡುಗಡೆ ಕುರಿತು ಸದನದ ಒಳಗೆ ಹಾಗೂ ಹೊರಗೆ ಪ್ರತಿಭಟನೆ ನಡೆಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ಕಾರ್ಯಕರ್ತರು ರಾಜ್ಯದ 1.28 ಕೋಟಿ ಮಹಿಳೆಯರಿಗೆ ಹಣ ಬಿಡುಗಡೆಯಾಗುವವರೆಗೂ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದರು.
ಅಧಿವೇಶನದ ಹಿನ್ನೆಲೆಯಲ್ಲಿ ಸಿಎಂ ಕುರ್ಚಿ ಕದನ ವಿಚಾರ ಶಾಂತವಾಗಿತ್ತು. ಅಧಿವೇಶನ ಮುಗಿಯುತ್ತಿದ್ದಂತೆ ಈಗ ಮತ್ತೆ ಕಾಂಗ್ರೆಸ್ ಬಣ ಬಡಿದಾಟ ಆರಂಭವಾಗಿದೆ. ಜನವರಿ ಒಳಗಾಗಿ ಸರ್ಕಾರದಲ್ಲಿ ಕ್ರಾಂತಿಯಾಗುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.


