ಸಚಿವ ಡಿ.ಸುಧಾಕರ್‌ ಅವರ ಆರೋಗ್ಯ ಕುರಿತು ರಾಜ್ಯ ಸರ್ಕಾರ ವಾಸ್ತವಾಂಶವನ್ನು ಜನರ ಮುಂದೆ ಇಡಬೇಕು. ವಾಸ್ತವಾಂಶವನ್ನು ಜನರ ಮುಂದೆ ಇಟ್ಟಿದ್ದರೆ ನಾನು ಅದನ್ನು ಪ್ರಶ್ನಿಸುತ್ತಿರಲಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಮಾಲೂರು (ಏ.28): ಸಚಿವ ಡಿ.ಸುಧಾಕರ್‌ ಅವರ ಆರೋಗ್ಯ ಕುರಿತು ರಾಜ್ಯ ಸರ್ಕಾರ ವಾಸ್ತವಾಂಶವನ್ನು ಜನರ ಮುಂದೆ ಇಡಬೇಕು. ವಾಸ್ತವಾಂಶವನ್ನು ಜನರ ಮುಂದೆ ಇಟ್ಟಿದ್ದರೆ ನಾನು ಅದನ್ನು ಪ್ರಶ್ನಿಸುತ್ತಿರಲಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಕೋಲಾರ ಜಿಲ್ಲೆ ಮಾಲೂರಿಗೆ ಸೋಮವಾರ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ, ‘ಹೆಬ್ಬೆಟ್ಟು ಒತ್ತಿಸಿಕೊಳ್ಳಲು ಸುಧಾಕರ್‌ ಆರೋಗ್ಯ ವಿಷಯ ಮುಚ್ಚಿಟ್ರಾ?’ ಎಂಬ ತಮ್ಮ ಮಾರ್ಮಿಕ ಹೇಳಿಕೆಗೆ ಸಮಜಾಯಿಷಿ ನೀಡಿದರು. ಸಚಿವರ ಆರೋಗ್ಯ ಕುರಿತು ಸರ್ಕಾರ ವಾಸ್ತವಾಂಶವನ್ನು ಜನರ ಮುಂದೆ ಇಟ್ಟಿದ್ದರೆ ನಾನು ಅದನ್ನು ಕೇಳುತ್ತಿರಲಿಲ್ಲ ಎಂದರು.

ಇದೇ ವೇಳೆ, ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ ಎಚ್ಡಿಕೆ, ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದ ಪೈಪೋಟಿ ಜೋರಾಗಿ ನಡೆಯುತ್ತಿದೆ. ಮೇಕೆದಾಟು ಯೋಜನೆ ವಿಷಯದಲ್ಲಿ ಸುಪ್ರೀಂಕೋರ್ಟ್‌ ಕೇಂದ್ರದ ಪರವಾಗಿದೆ ಎಂದು ಬಾಲಿಶವಾಗಿ ಮಾತನಾಡುವ ಕಾಂಗ್ರೆಸ್‌, ಅದಕ್ಕೆ ಅಡ್ಡಿಯಾಗಿರುವ ಅವರ ಮಿತ್ರ ಪಕ್ಷದ ಪರವಾಗಿ ತಮಿಳುನಾಡಿನಲ್ಲಿ ಬಿರುಸಿನ ಪ್ರಚಾರ ನಡೆಸಿದೆ. ಚುನಾವಣಾ ಪ್ರಚಾರದಲ್ಲಿ ಯಾಕೆ ಈ ವಿಷಯವನ್ನು ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.

ನೀರು ಪೂರೈಕೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನೀರಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲೆಗೆ 45 ಕೋಟಿ ರು.ಬಿಡುಗಡೆ ಮಾಡಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಈ ಹಣ ಯಾರ ಅಕೌಂಟ್‌ಗೆ ಹೋಗುತ್ತದೆ ಎಂಬುದು ಗೊತ್ತಾಗುವುದಿಲ್ಲ ಎಂದು ದೂರಿದರು.

ಒಳ ಮೀಸಲಾತಿ ವಿಷಯವನ್ನು ನಾನು ರಾಜಕೀಯವಾಗಿ ಬಳಸಿಕೊಳ್ಳುವುದಿಲ್ಲ. ಅವರಿಗೆ ತೃಪ್ತಿ ಇದ್ದರೆ ಕಡ್ಡಿಗೀರೋದು ಬೇಡ. ದಲಿತರನ್ನು ಎತ್ತಿ ಕಟ್ಟಿ ಅದರ ಬೇಳೆ ಬೇಯಿಸಿಕೊಳ್ಳಲ್ಲ. ಆದರೆ, ಪ್ರಾಮಾಣಿಕವಾಗಿ ಪ್ರತಿ ಕುಟುಂಬಕ್ಕೂ ಮೀಸಲಾತಿ ಸಿಗಬೇಕು ಎಂದು ಹೇಳಿದರು.