ರಾಜ್ಯದಲ್ಲಿ ಹೆಚ್ಚುತ್ತಿರುವ ತಾಪಮಾನ ಮತ್ತು ಬಿಸಿಗಾಳಿಯ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆ ಮಹತ್ವದ ಕ್ರಮ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ 'ಹೀಟ್ ಸ್ಟ್ರೋಕ್ ಮ್ಯಾನೇಜ್‌ಮೆಂಟ್ ರೂಮ್'ಗಳನ್ನು ಸ್ಥಾಪಿಸಲು ಆದೇಶಿಸಿದ್ದು, ಉಷ್ಣಾಂಶ ಸಂಬಂಧಿತ ಕಾಯಿಲೆಗಳಿಗೆ ತುರ್ತು ಚಿಕಿತ್ಸೆ ನೀಡಲು ಹಾಸಿಗೆ ಮೀಸಲು.

ಬೆಂಗಳೂರು (ಏ.24): ರಾಜ್ಯದಾದ್ಯಂತ ತಾಪಮಾನವು ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಬಿಸಿಗಾಳಿ (Heat Wave) ಮತ್ತು ಅತಿಯಾದ ಉಷ್ಣಾಂಶದಿಂದ (Extreme Heat) ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಮತ್ತು ತಕ್ಷಣದ ಚಿಕಿತ್ಸೆ ನೀಡಲು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಹತ್ವದ ಕ್ರಮ ಕೈಗೊಂಡಿದೆ. ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ 'ಹೀಟ್ ಸ್ಟ್ರೋಕ್ ಮ್ಯಾನೇಜ್‌ಮೆಂಟ್ ರೂಮ್' (Heat Stroke Management Room) ಗಳನ್ನು ಆರಂಭಿಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಪ್ರತ್ಯೇಕ ವಾರ್ಡ್ ಮತ್ತು ಹಾಸಿಗೆಗಳ ಮೀಸಲು:

ಬೆಂಗಳೂರಿನ ಮಾಗಡಿ ರಸ್ತೆಯ ಆರೋಗ್ಯ ಸೌಧದಿಂದ ಹೊರಡಿಸಲಾದ ಅಧಿಕೃತ ಸುತ್ತೋಲೆಯ ಪ್ರಕಾರ, ಉಷ್ಣಾಂಶ ಸಂಬಂಧಿತ ಕಾಯಿಲೆಗಳಿಂದ (Heat Related Illness - HRI) ಬಳಲುವವರಿಗೆ ತುರ್ತು ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಈ ಕೆಳಗಿನಂತೆ ಸೌಲಭ್ಯ ಕಲ್ಪಿಸಬೇಕು:

  • ಜಿಲ್ಲಾ ಆಸ್ಪತ್ರೆಗಳು: ಬಿಸಿಗಾಳಿ ಸಂತ್ರಸ್ತರಿಗಾಗಿ ಪ್ರತ್ಯೇಕವಾಗಿ 2 ವಾರ್ಡ್‌ಗಳನ್ನು ಮೀಸಲಿಡಬೇಕು.
  • ತಾಲೂಕು ಆಸ್ಪತ್ರೆಗಳು: ಕನಿಷ್ಠ 5 ಹಾಸಿಗೆಗಳನ್ನು ಪ್ರತ್ಯೇಕವಾಗಿ ಕಾಯ್ದಿರಿಸಬೇಕು.
  • ಸಮುದಾಯ ಆರೋಗ್ಯ ಕೇಂದ್ರಗಳು (CHC): ಕನಿಷ್ಠ 10 ಹಾಸಿಗೆಗಳ ವ್ಯವಸ್ಥೆ ಇರಬೇಕು.
  • ಈ ವಿಶೇಷ ಚಿಕಿತ್ಸಾ ಕೊಠಡಿಗಳು ಪ್ರತಿ ವರ್ಷದ ಮಾರ್ಚ್ 1 ರಿಂದ ಮೇ 31 ರವರೆಗೆ ಕಾರ್ಯನಿರ್ವಹಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಅಗತ್ಯ ಸೌಲಭ್ಯಗಳು ಮತ್ತು ಉಪಕರಣಗಳು:

ಬಿಸಿಲ ತಾಪದಿಂದ ಸುಸ್ತಾದವರಿಗೆ ತಕ್ಷಣದ ಉಪಶಮನ ನೀಡಲು ಆಸ್ಪತ್ರೆಯ ಆವರಣದಲ್ಲಿ 'ORS Corner' ಗಳನ್ನು ಕಡ್ಡಾಯವಾಗಿ ತೆರೆಯಬೇಕು. ಅಲ್ಲಿ ಸಾರ್ವಜನಿಕರಿಗೆ ಓಆರ್‌ಎಸ್ ದ್ರಾವಣ ಲಭ್ಯವಿರಬೇಕು. ಇನ್ನು ಹೀಟ್ ಸ್ಟ್ರೋಕ್ ನಿರ್ವಹಣಾ ಕೊಠಡಿಗಳಲ್ಲಿ ಫ್ಯಾನ್, ಐಸ್ ಕ್ಯೂಬ್‌ಗಳು (Ice Cubes), ಥರ್ಮಾಮೀಟರ್‌ಗಳು ಮತ್ತು ಅಗತ್ಯ ಐವಿ ಫ್ಲೂಯಿಡ್‌ಗಳು (IV Fluids) ಲಭ್ಯವಿರುವಂತೆ ನೋಡಿಕೊಳ್ಳಲು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಸಿಬ್ಬಂದಿಗೆ ತರಬೇತಿ ಮತ್ತು ವರದಿ ಸಲ್ಲಿಕೆ:

ಬಿಸಿಲಿನಿಂದ ಉಂಟಾಗುವ ಕಾಯಿಲೆಗಳನ್ನು ಹೇಗೆ ಗುರುತಿಸಬೇಕು ಮತ್ತು ಪ್ರಥಮ ಚಿಕಿತ್ಸೆ ಹೇಗೆ ನೀಡಬೇಕು ಎಂಬ ಬಗ್ಗೆ ಆಸ್ಪತ್ರೆಯ ವೈದ್ಯರು ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ ತರಬೇತಿ ನೀಡಲು ಆದೇಶಿಸಲಾಗಿದೆ. ಅಲ್ಲದೆ, ಪ್ರತಿದಿನ ದಾಖಲಾಗುವ ಉಷ್ಣಾಂಶ ಸಂಬಂಧಿತ ಕಾಯಿಲೆಗಳ ವರದಿಯನ್ನು 'IHIP' ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು ಎಂದು ಕಮಿಷನರೇಟ್ ತಿಳಿಸಿದೆ.

ಸಾರ್ವಜನಿಕರಿಗೆ ಮುನ್ನೆಚ್ಚರಿಕೆ:

ರಾಜ್ಯದಲ್ಲಿ ಬಿಸಿಲ ತಾಪ ಮಿತಿಮೀರುತ್ತಿರುವ ಕಾರಣ, ಜನರು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು, ಸಡಿಲವಾದ ಹತ್ತಿ ಬಟ್ಟೆ ಧರಿಸಬೇಕು ಮತ್ತು ಮಧ್ಯಾಹ್ನದ ವೇಳೆಯಲ್ಲಿ ಅನಿವಾರ್ಯವಲ್ಲದಿದ್ದರೆ ಹೊರಬರದಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬಹುದಾಗಿದೆ.