ಪ್ರೀತಿಸಿ ಮದುವೆ ಮಾಡಿಕೊಂಡಿದ್ದ ಯುವತಿಯನ್ನು ಗಂಡನ ಮನೆಯಿಂದ ಪೋಷಕರು ಹೊತ್ತುಕೊಂಡು ಹೋದ ಘಟನೆ ಶನಿವಾರ ರಾತ್ರಿ ಇಲ್ಲಿನ ಭೈರಿದೇವರಕೊಪ್ಪದಲ್ಲಿ ನಡೆದಿದೆ.
ಹುಬ್ಬಳ್ಳಿ (ಜೂ.16): ಪ್ರೀತಿಸಿ ಮದುವೆ ಮಾಡಿಕೊಂಡಿದ್ದ ಯುವತಿಯನ್ನು ಗಂಡನ ಮನೆಯಿಂದ ಪೋಷಕರು ಹೊತ್ತುಕೊಂಡು ಹೋದ ಘಟನೆ ಶನಿವಾರ ರಾತ್ರಿ ಇಲ್ಲಿನ ಭೈರಿದೇವರಕೊಪ್ಪದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತಲ್ಲದೇ. ಪತಿ ಈ ಕುರಿತು ಪೊಲೀಸರಿಗೂ ಮಾಹಿತಿ ನೀಡಿದ್ದನಾದರೂ ಸಂಜೆ ವೇಳೆ ಯುವತಿ ಗಂಡನ ಮನೆಗೆ ಮರಳುವ ಮೂಲಕ ಪ್ರಕರಣಕ್ಕೆ ತೆರೆ ಎಳೆಯಲಾಗಿದೆ.
ಎರಡು ವರ್ಷಗಳ ಹಿಂದೆ ರಿಜಿಸ್ಟರ್ ಮದುವೆಯಾಗಿದ್ದ ಭೈರಿದೇವರಕೊಪ್ಪದ ಯುವಕ ನಿರಂಜನ್ ಮತ್ತು ಸುಷ್ಮಾ ಅವರಿಗೆ ಕೂಡಿ ಬಾಳಲು ಯುವತಿಯ ಮನೆಯವರು ಅವಕಾಶ ನೀಡಿರಲಿಲ್ಲ ಎಂದು ಆರೋಪಿಸಲಾಗಿತ್ತು. ಯುತಿಯ ತಂದೆಯ ಮನೆಯವರು ಯುವತಿಯನ್ನು ಪತಿ ಮನೆಯಿಂದ ಹೊತ್ತಿಕೊಂಡು ಹೋಗಿದ್ದ ಕುರಿತು ವಿಡಿಯೋ ವೈರಲ್ ಆಗಿದ್ದು, ಈ ಕುರಿತು ಯುವಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ. ಹೀಗಾಗಿ, ಪ್ರಕರಣ ನಗರದಲ್ಲಿ ಚರ್ಚೆಗೆ ಕಾರಣವಾಗಿತ್ತು. ಸಂಜೆ ವೇಳೆ ಪೊಲೀಸರಿಗೆ ಹೇಳಿಕೆ ನೀಡಿದ ಯುವತಿ, ತನ್ನ ತಾಯಿ ಆರೋಗ್ಯ ಸರಿ ಇಲ್ಲದ ಕಾರಣ ಆರೈಕೆ ಮಾಡಲು ಹೋಗಿದ್ದೆ. ಮತ್ತೆ ತನ್ನ ಗಂಡನ ಮನೆಗೆ ಹಿಂದಿರುಗುವುದಾಗಿ ಹೇಳಿಕೆ ನೀಡಿದ್ದಾಳೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಡಿಸಿಪಿ ಮಹಾನಿಂಗ ನಂದಗಾವಿ, ಸದ್ಯ ಯುವತಿಯು ತನ್ನ ತಾಯಿಗೆ ಅರಾಮಿಲ್ಲದ ಕಾರಣದಿಂದ ಅವರ ಆರೈಕೆಗಾಗಿ ತವರು ಮನೆಯಲ್ಲಿ ಇದ್ದಿರುವುದಾಗಿ ಹೇಳಿದ್ದಾರೆ. ಇದು ಕೌಟುಂಬಿಕ ವಿಚಾರವಾಗಿದ್ದು, ಮನೆಯಲ್ಲಿ ಕುಳಿತು ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿಕೆ ದಾಖಲಿಸಿದ್ದಾರೆ. ಹೀಗಾಗಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.
