ಕರ್ನಾಟಕದಲ್ಲಿ ಭಾರಿ ಮಳೆಯಿಂದಾಗಿ ಜಲಾವೃತ, ಮರಗಳ ಧರೆಗುರುಳುವಿಕೆ ಹಾಗೂ ಐವರಿಗೂ ಹೆಚ್ಚು ಜನರ ಸಾವು ಸಂಭವಿಸಿದೆ. ಬೆಂಗಳೂರಿನಲ್ಲಿ ಇಂದು ಆರೆಂಜ್, ನಾಳೆ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ಕರಾವಳಿಯಲ್ಲೂ ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ನೀಡಲಾಗಿದೆ. ಸ್ಪೀಕರ್ ಖಾದರ್ ಮನೆ ಮುಂದೆಯೂ ಜಲಾವೃತ, ಬಿಟಿಎಂ ಲೇಔಟ್‌ನಲ್ಲಿ ಮರ ಧರೆಗುರುಳಿದೆ. ಈ ವಾರ ಪೂರ್ತಿ ಮಳೆ ಮುಂದುವರಿಯಲಿದೆ.

ಬೆಂಗಳೂರು(ಮೇ.20) ಕರ್ನಾಟಕದಲ್ಲಿ ಭಾರಿ ಮಳೆಯಾಗುತ್ತಿದೆ. ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ರಸ್ತೆಗಳು ಸೇರಿದಂತೆ ಹಲವು ಪ್ರದೇಶ ಜಲಾವೃತಗೊಂಡಿದೆ. ಮರಗಳು ಧರೆಗುರುಳಿಸಿದೆ. ಮಳೆಗೆ 5ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಬೆಂಗಳೂರಿನ ಹಲವು ಭಾಗ ಕೆರೆಯಂತಾಗಿದೆ. ಮಳೆ ಕೊಂಚ ತಗ್ಗಿದೆ ಎಂದು ನಿಟ್ಟಿಸಿರು ಬಿಡುವಂತಿಲ್ಲ. ಕಾರಣ ಈ ವಾರ ಇಡೀ ಮಳೆ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಮುಂಗಾರು ಪೂರ್ವ ಮಳೆ ಇನ್ನು ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಮೇ.21ಕ್ಕೆ ಬೆಂಗಳೂರಿಗೆ ಯೆಲ್ಲೋ ಅಲರ್ಟ್
ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಸತತ ಮಳೆಯಾಗುತ್ತಿದೆ. ಹೀಗಾಗಿ ಬೆಂಗಳೂರು ನೀರಿನಲ್ಲಿ ತೇಲುತ್ತಿದೆ. ಇಂದು(ಮೇ.20)ಬೆಂಗಳೂರಿನಲ್ಲಿ ಆರೇಂಜ್ ಅಲರ್ಟ್ ಘೋಷಿಸಿದ್ದರೆ, ನಾಳೆ ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನಾಳೆಯೂ ಬೆಂಗಳೂರನಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.

ಕರಾವಳಿಗೆ ಭಾರಿ ಮಳೆ ಮುನ್ಸೂಚನೆ
ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ನಾಳೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬಳಿಕ ಎರಡು ದಿನ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಈ ವಾರವಿಡಿ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಸ್ವೀಕರ್ ಖಾದರ್ ಮನೆ ಮುಂದೆ ನಿಂತ ಮಳೆ ನೀರು
ಬೆಂಗಳೂರಿನ ಭಾರಿ ಮಳೆಗೆ ಹಲವು ಪ್ರದೇಶ ಜಲಾವೃತಗೊಂಡಿದೆ. ಬೆಂಗಳೂರಿನ ಒಳಚರಂಡಿ ವ್ಯವಸ್ಥೆಗಳು ಸಮಪರ್ಕವಾಗಿಲ್ಲ ಅನ್ನೋದು ಆರಂಭಿಕ ಮಳೆಯಲ್ಲಿ ಸಾಬೀತಾಗಿದೆ. ಇದೀಗ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸ್ಪೀಕರ್ ಯುಟಿ ಖಾದರ್ ಸರ್ಕಾರಿ ನಿವಾಸ ಎದುರು ಮಳೆ ನೀರು ನಿಂತುಕೊಂಡಿದೆ. ಸಚಿವ ಜಮೀರ್ ಅಹ್ಮದ್ ಮನೆ ಕೂಡ ಇದೇ ರಸ್ತೆಯಲ್ಲಿದೆ. ಸಚಿವರು ದಿನನಿತ್ಯ ಓಡಾಡುವ ರಸ್ತೆಯಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ. 

ಬಿಟಿಎಮ್‌ ಲೇಔಟ್ ವಿದ್ಯುತ್ ಕಂಬದ ಮೇಲೆ ಬಿದ್ದ ಮರ
ಬೆಂಗಳೂರಿನ ಬಿಟಿಎಮ್‌ ಲೇಔಟ್ ನ ಎರಡನೇ ಹಂತದಲ್ಲಿ ಸಂಜೆ ಸುರಿದ ಭಾರಿ ಮಳೆಗೆ ಮರ ಧರೆಗುರುಳಿದೆ. ವಿದ್ಯುತ್ ಕಂಬದ ಮೇಲೆ ಮರ ಮುರಿದು ಬಿದ್ದಿದೆ. ಆದರೆ ಅದೃಷ್ಟವಶಾತ್ ಯಾರಿಗೂ ಸಮಸ್ಯೆಯಾಗಿಲ್ಲ. ಮುಖ್ಯ ರಸ್ತೆಯಲ್ಲೇ ಮರದ ರೆಂಬೆ ಮುರಿದು ಬಿದ್ದಿದ್ದು, ಯಾವುದೇ ವಾಹನ ಸಂಚಾರವಿರಲಿಲ್ಲ. ಹೀಗಾಗಿ ಅನಾಹುತ ಸಂಭವಿಸಿಲ್ಲ. ಸ್ಥಳೀಯರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರ ತೆರುವುಗೊಳಿಸಿದ್ದರೆ.