ಭಾರತದ ಇಂಧನ ಭದ್ರತೆಯ ಕನಸಾದ ಕಲ್ಪಕಂ ರಿಯಾಕ್ಟರ್ ಯೋಜನೆಗೆ ಅಡ್ಡಿಯಾದ ವಿದೇಶಿ ಷಡ್ಯಂತ್ರ ಮತ್ತು 'ಆರ್ಥಿಕ ಉಗ್ರವಾದ'ದ ಕರಾಳ ಸತ್ಯವನ್ನು ತಿಳಿಯಿರಿ. ಈ ಸವಾಲುಗಳನ್ನು ಭಾರತ ಮೆಟ್ಟಿನಿಂತದ್ದು ಹೇಗೆ? ಪೂರ್ತಿ ಓದಿ.

-ಅಜಿತ್ ಶೆಟ್ಟಿ ಹೆರಂಜೆ, ಬಿಜೆಪಿ ಪ್ರಕೋಷ್ಠಕ.

ತಮಿಳುನಾಡಿನ ಕಲ್ಪಕಂನಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ರೋಟೋಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ (ಪಿಎಫ್‌ಬಿಆರ್‌) ಭಾರತದ ಪರಮಾಣು ಕ್ಷೇತ್ರದಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯ ಸಂಪೂರ್ಣ ಸ್ವದೇಶಿ ತಂತ್ರಜ್ಞಾನ ಆಧಾರಿತ ಯೋಜನೆ. ವಾಣಿಜ್ಯ ಮಟ್ಟದ ಫಾಸ್ಟ್ ಬ್ರೀಡರ್ ರಿಯಾಕ್ಟರ್ ತಂತ್ರಜ್ಞಾನ ಹೊಂದಿದ ವಿಶ್ವದ ಎರಡನೇ ದೇಶ ಭಾರತ. ರಷ್ಯಾ ಮಾತ್ರ ಭಾರತಕ್ಕಿಂತ ಮುಂಚೆ ಈ ಸಾಧನೆ ಮಾಡಿದೆ. ಇದು ಥೋರಿಯಂ ಆಧಾರಿತ ಮೂರನೇ ಹಂತದ ಅಣು ಚಕ್ರಕ್ಕೆ ದ್ವಾರ ತೆರೆಯುವ ಮಹತ್ವದ ಹೆಜ್ಜೆ. ಇಡೀ ದೇಶ ಇದರ ಸಂಪೂರ್ಣ ಲಾಭ ಪಡೆಯಲು ಇನ್ನೂ ನಾಲ್ಕೈದು ದಶಕಗಳು ಬೇಕಾಗಬಹುದು. ಆದರೆ ಆ ದಿನ ಬಂದಾಗ ಭಾರತ ಇಂಧನಕ್ಕಾಗಿ ಯಾವ ದೇಶದ ಮುಂದೆಯೂ ಕೈಚಾಚಬೇಕಾಗಿಲ್ಲ. ಇದು ಕೇವಲ ಇಂಧನ ಭದ್ರತೆಯ ವಿಷಯ ಮಾತ್ರವಲ್ಲ, ಭೌಗೋಳಿಕ ರಾಜಕೀಯ ಸ್ವಾತಂತ್ರ್ಯ ಕೂಡ ಇದರಲ್ಲಿ ಅಡಕವಾಗಿದೆ. ಆದರೆ ಇಂತಹ ಯೋಜನೆಯನ್ನು ವರ್ಷಗಟ್ಟಲೆ ಹಳ್ಳ ಹಿಡಿಸಲು ಭಾರತದ ಒಳಗೂ ಹೊರಗೂ ಒಂದು ಸಂಘಟಿತ ಷಡ್ಯಂತ್ರ ನಡೆಯಿತು. ತಮಿಳುನಾಡಿನ ಕೂಡಂಕುಳಂ ಮತ್ತು ಕಲ್ಪಕಂ ಪರಮಾಣು ಸ್ಥಾವರಗಳನ್ನು ಏಕ ಕಾಲದಲ್ಲಿ ಗುರಿಯಾಗಿಸಿಕೊಂಡು ಪರಿಸರ ಕಾಳಜಿ ಹಾಗೂ ಸಾರ್ವಜನಿಕ ಹಿತಾಸಕ್ತಿ ಹೆಸರಲ್ಲಿ ಒಂದು ಅಂತಾರಾಷ್ಟ್ರೀಯ ಷಡ್ಯಂತ್ರವನ್ನು ಮಾಡಲಾಯಿತು.

ಷಡ್ಯಂತ್ರದ ಮುಖಗಳು, ಹೋರಾಟದ ಸ್ವರೂಪ

ಈ ಹೋರಾಟ ಕೇವಲ ಹಾದಿ ಬೀದಿಯ ಪ್ರತಿಭಟನೆಯಾಗಿರಲಿಲ್ಲ. ನಾಲ್ಕು ಸ್ತರಗಳಲ್ಲಿ ಏಕಕಾಲದಲ್ಲಿ ನಡೆದ ಸಂಘಟಿತ ಷಡ್ಯಂತ್ರವಾಗಿತ್ತು. 2011–2013ರ ನಡುವೆ ಇಡಿಂಥಕರೈ ಕೇಂದ್ರವಾಗಿ ಸಾವಿರಾರು ಮೀನುಗಾರರನ್ನು ರಸ್ತೆಗಿಳಿಸಲಾಯಿತು; ಕಡಲ ದಿಗ್ಬಂಧನ ಹಾಕಿ ಅಣು ಸ್ಥಾವರದ ನಿರ್ಮಾಣದ ಸಾಮಗ್ರಿ ಸಾಗಣೆಯನ್ನು ತಡೆಯಲಾಯಿತು; ಜಪಾನಿನ ಫುಕುಶಿಮಾ ಪರಮಾಣು ಸ್ಥಾವರ ಅವಘಡದ ಭೀತಿಯನ್ನು ಬಳಸಿ ಬಿಬಿಸಿ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಭಾರತ ವಿರೋಧಿ ನಿರೂಪಣೆ ಸಿದ್ಧಪಡಿಸಲಾಯಿತು. ವಿಶ್ವ ಸಂಸ್ಥೆ ವಿಶೇಷ ರಾಯಭಾರಿಗಳ ಮೂಲಕ ಭಾರತದ ಮೇಲೆ ರಾಜತಾಂತ್ರಿಕ ಒತ್ತಡ ತರಲಾಯಿತು. ನ್ಯಾಯಾಲಯ, ಮಾಧ್ಯಮ, ರಾಜಕೀಯ ವ್ಯವಸ್ಥೆ ಎಲ್ಲವನ್ನೂ ಬಳಸಿಕೊಂಡು ಏಕ ಕಾಲದಲ್ಲಿ ಭಾರತದ ಕನಸಿನ ಕೂಸಿನ ಕತ್ತು ಹಿಸುಕುವ ಪ್ರಯತ್ನಗಳು ನಡೆದವು. ಈ ಹೋರಾಟದ ಮುಖ್ಯ ರಣಭೂಮಿ ಕೂಡಂಕುಳಂ ಆಗಿತ್ತು. ಆದರೆ ನಿಜವಾದ ಗುರಿ ಭಾರತದ ಇಡೀ ಅಣು ಕಾರ್ಯಕ್ರಮ, ಅದರಲ್ಲೂ ವಿಶೇಷವಾಗಿ ಕಲ್ಪಕಂ ಪಿಎಫ್‌ಬಿಆರ್‌ ಆಗಿತ್ತು.

ತನಿಖೆಯಲ್ಲಿ ಮಾಹಿತಿ, ವಿದೇಶಿ ಹಣದ ದಾಖಲೆ

ಅಂತಾರಾಷ್ಟ್ರೀಯ ದಾನಿಗಳ ಬೆಂಬಲದೊಂದಿಗೆ ಅನೇಕ ಎನ್‌ಜಿಒಗಳು ಅಭಿವೃದ್ಧಿ ಚಟುವಟಿಕೆಗಳಿಗೆ ವ್ಯವಸ್ಥಿತವಾಗಿ ಅಡ್ಡಿಪಡಿಸಿ ಭಾರತದ ಆರ್ಥಿಕ ಸ್ವಾಸ್ಥ್ಯಕ್ಕೆ ಅಪಾಯ ತಂದಿದ್ದವು ಎಂದು 2014ರ ಗುಪ್ತಚರ ಸಂಸ್ಥೆ ವರದಿ ದಾಖಲಿಸಿತು. ಎಫ್‌ಸಿಆರ್‌ಎ ದಾಖಲೆಗಳ ಪ್ರಕಾರ, ಫ್ರಾನ್ಸ್‌ನಿಂದ ₹10.30 ಕೋಟಿ, ಇಟಲಿಯಿಂದ ₹5.15 ಕೋಟಿ, ಜರ್ಮನಿಯಿಂದ ₹3.22 ಕೋಟಿ ಮತ್ತು ಅಮೆರಿಕದಿಂದ ₹83 ಲಕ್ಷ ದೇಣಿಗೆ ನೀಡಲಾಗಿತ್ತು. 2006-11ರ ನಡುವಿನ 5 ವರ್ಷಗಳಲ್ಲಿ ತಮಿಳುನಾಡಿನ ಎನ್‌ಜಿಒಗಳಿಗೆ ₹2,500 ಕೋಟಿಗೂ ಹೆಚ್ಚು ವಿದೇಶಿ ಹಣ ಹರಿದು ಬಂತು. ಇದೇ ಅವಧಿಯಲ್ಲಿ ಅಣು ಸ್ಥಾವರ ವಿರೋಧ ತೀವ್ರಗೊಂಡಿತ್ತು, ಇದು ಖಂಡಿತಾ ಕಾಕತಾಳೀಯವಲ್ಲ. 2012ರಲ್ಲಿ ಗೃಹ ಸಚಿವಾಲಯ ನಾಲ್ಕು ಎನ್‌ಜಿಒಗಳ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿ ತನಿಖೆ ಆರಂಭಿಸಿತು. 2014ರ ನಂತರ ನಡೆದ ತನಿಖೆಯಲ್ಲಿ ಒಟ್ಟು ತಮಿಳುನಾಡಿನ 794 ಎನ್‌ಜಿಒಗಳ ಎಫ್‌ಸಿಆರ್‌ಎ ನೋಂದಣಿ ರದ್ದಾಯಿತು.

ಮೋದಿ ಹೇಳಿದ ‘ಆರ್ಥಿಕ ಉಗ್ರವಾದ’

2014ರ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿದೇಶಿ ಹಣ ಪಡೆದು ದೇಶದ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿ ಮಾಡುವ ಶಕ್ತಿಗಳನ್ನು ನೇರವಾಗಿ ‘ಆರ್ಥಿಕ ಉಗ್ರವಾದಿಗಳು’ ಎಂದು ಕರೆದರು. ಇದೇ ಮಾತನ್ನು ಮಾಜಿ ಪ್ರಧಾನಿ ಡಾ। ಮನಮೋಹನ್ ಸಿಂಗ್ ಕೂಡ ಹೇಳಿದ್ದರೂ ಅವರು ಪ್ರಧಾನಿ ಮೋದಿ ಅವರಷ್ಟು ಸ್ಪಷ್ಟವಾಗಿ ನಿಷ್ಠುರವಾಗಿ ಸಮಸ್ಯೆಯನ್ನು ವಿಶ್ಲೇಷಿಸಿರಲಿಲ್ಲ, ಈ ಪದ ಅಂದು ವಿವಾದ ಸೃಷ್ಟಿಸಿತ್ತು. ಆದರೆ ಯಾರಾದರೂ ಬಾಂಬ್ ಇಟ್ಟು ಕಾರ್ಖಾನೆ ನಾಶ ಮಾಡಿದರೆ ಅದು ಭಯೋತ್ಪಾದನೆ, ಅದು ಕಣ್ಣಿಗೆ ಕಾಣುತ್ತದೆ, ಕಾನೂನು ಕ್ರಮ ತಕ್ಷಣ ಆಗುತ್ತದೆ. ಆದರೆ ವರ್ಷಗಟ್ಟಲೆ ಯೋಜನಬದ್ಧವಾಗಿ ಸುಳ್ಳು ಹರಡಿ, ವಿದೇಶಿ ಹಣ ತಂದು, ಕಾನೂನು ತಡೆ ಹಾಕಿ, ರಾಜತಾಂತ್ರಿಕ ಒತ್ತಡ ಬಳಸಿ ದೇಶದ ಇಂಧನ ಭದ್ರತೆಯನ್ನು ಮೂರು ದಶಕಗಳಷ್ಟು ಹಿಂದಕ್ಕೆ ತಳ್ಳಿದರೆ ಅದು ಆರ್ಥಿಕ ಉಗ್ರವಾದವೇ. ಅದೇ ಇದರ ಅಪಾಯ.

ಭಾರತ ಸಾಧಿಸಿದೆ- ಆದರೆ ಮರೆಯಲಾಗದ ಪಾಠ

ಇಂದು ಕಲ್ಪಕಂ ಪಿಎಫ್‌ಬಿಆರ್‌ ಅಂತಿಮ ಹಂತದ ಕಾರ್ಯಾರಂಭಕ್ಕೆ ಸಿದ್ಧವಾಗಿದೆ. ಈ ಯೋಜನೆಯು 1980ರಲ್ಲಿ ರೂಪಗೊಂಡಿದ್ದು, 2003ರಲ್ಲಿ ಕೇಂದ್ರ ಸರಕಾರ ₹3,492 ಕೋಟಿ ವೆಚ್ಚದಲ್ಲಿ ಇದಕ್ಕೆ ಅನುಮೋದನೆ ನೀಡಿತು, 2004ರಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಯಿತು, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸೆಪ್ಟೆಂಬರ್ 2010ರಲ್ಲಿ ಇದು ಕ್ರಿಟಿಕಲ್ ಮಾಸ್ ತಲುಪಬೇಕಿತ್ತು. ಆದರೆ 2006ರಲ್ಲಿ ಇದರ ವಿರುದ್ಧ ಪ್ರತಿಭಟನೆಗಳು ಪ್ರಾರಂಭವಾಗಿ 2011-13ರ ಹೊತ್ತಿಗೆ ಇದು ತಾರಕಕ್ಕೆ ಏರಿತು. ಸೋಡಿಯಂ ಶೀತಕ ವ್ಯವಸ್ಥೆಯ ತಾಂತ್ರಿಕ ಸವಾಲುಗಳು ವಿಳಂಬಕ್ಕೆ ಭಾಗಶಃ ಕಾರಣವಾಗಿದ್ದವು. ಆದರೆ ಪ್ರತಿಭಟನೆ, ಪಿಐಎಲ್‌ ಮತ್ತು ವಿದೇಶಿ ಒತ್ತಡ ಇಲ್ಲದಿದ್ದರೆ ಆ ತಾಂತ್ರಿಕ ಸಮಸ್ಯೆಗಳನ್ನು ಬಹಳ ಮೊದಲೇ ಪರಿಹರಿಸಿ ಯೋಜನೆ ಮುಂದುವರೆಯುತ್ತಿತ್ತು, 2014ರ ತನಕ ಕೆಲಸದಲ್ಲಿ ಯಾವುದೇ ಪ್ರಗತಿ ಆಗಿರಲಿಲ್ಲ, 2014ರಲ್ಲಿ ಬಂದ ಮೋದಿ ಸರಕಾರ ಇದಕ್ಕೆ ವೇಗ ಕೊಟ್ಟಿತು ಮತ್ತು 2019ರಲ್ಲಿ ₹6,480 ಕೋಟಿ ಹೆಚ್ಚುವರಿ ವೆಚ್ಚಕ್ಕೆ ಅನುಮೋದನೆ ನೀಡಿತು, 2026ರಲ್ಲಿ ಅದು ತನ್ನ ಕಾರ್ಯಾರಂಭ ಮಾಡುವಷ್ಟರ ಹೊತ್ತಿಗೆ ಅದರ ವೆಚ್ಚ ₹8,181 ಕೋಟಿಗೆ ಏರಿತು. ಅಂದರೆ ಯೋಜನೆಯು 16 ವರ್ಷ ಹಿಂದಕ್ಕೆ ಹೋಗುವುದರ ಜೊತೆಗೆ, ಸರಕಾರದ ಬೊಕ್ಕಸಕ್ಕೆ ₹4,000 ಕೋಟಿ ಹೆಚ್ಚುವರಿ ಹೊರೆಯಾಯಿತು, ಈ ಎಲ್ಲಾ ವ್ಯವಸ್ಥಿತ ಷಡ್ಯಂತ್ರದ ನಡುವೆಯೂ ಭಾರತ ಈ ಯೋಜನೆಯನ್ನು ಉಳಿಸಿಕೊಂಡು ಮುನ್ನಡೆದಿದೆ. ಭಾರತದ ಅಣು ವಿಜ್ಞಾನಿಗಳ ಅದಮ್ಯ ಛಲ, ಸರ್ಕಾರದ ರಾಜಕೀಯ ಇಚ್ಛಾಸಕ್ತಿ ಮತ್ತು ದೇಶಭಕ್ತ ಜನರ ಬೆಂಬಲ ಇವೆಲ್ಲವೂ ಈ ಸಾಧನೆಯ ಮೂಲ ಕಾರಣ. ಆರ್ಥಿಕ ಉಗ್ರವಾದಿಗಳ ಬಹುಮುಖ ದಾಳಿಯನ್ನು ಎದುರಿಸಿ ಭಾರತವು ಶಕ್ತಿ ಸ್ವಾವಲಂಬನೆಯ ಹಾದಿಯಲ್ಲಿ ನಿಂತಿದೆ. ಇದು ನಿಜಕ್ಕೂ ಹೆಮ್ಮೆಯ ಸಂಗತಿ.

ಆದರೆ ಈ ವಿಜಯದ ಸಂತೋಷದಲ್ಲಿ ನಾವು ಅನುಭವಿಸಿದ ನೋವನ್ನು ಮರೆಯಬಾರದು. ಕಳೆದ ಒಂದೂವರೆ ದಶಕಗಳ ವಿಳಂಬ, ಕಳೆದುಹೋದ ಸಂಪನ್ಮೂಲ, ಅನಗತ್ಯ ವಿದ್ಯುತ್ ಕೊರತೆ ಮತ್ತು ಅದಕ್ಕೆ ದೇಶ ತೆತ್ತ ಬೆಲೆ - ಇವನ್ನೆಲ್ಲ ರಾಷ್ಟ್ರವು ಗಂಭೀರವಾಗಿ ಮನನ ಮಾಡಿಕೊಳ್ಳಬೇಕು. ಯಾವ ಎನ್‌ಜಿಒಗಳು, ಯಾವ ವ್ಯಕ್ತಿಗಳು, ಯಾವ ಮಾಧ್ಯಮ ಸಂಸ್ಥೆಗಳು ಭಾರತದ ಅಭಿವೃದ್ಧಿ ಪಥದಲ್ಲಿ ಅಡ್ಡಗಾಲು ಹಾಕಿದವು ಎಂಬುದು ಭಾರತದ ಇತಿಹಾಸದಲ್ಲಿ ದಾಖಲಾಗಬೇಕು. ಅವರ ಹೆಸರು, ಅವರ ಸಂಘಟನೆ, ಅವರ ಆರ್ಥಿಕ ಮೂಲ, ಅವರ ವಿದೇಶಿ ನಂಟು - ಇವೆಲ್ಲ ಭವಿಷ್ಯದ ತಲೆಮಾರಿಗೆ ಎಚ್ಚರಿಕೆಯ ದಾಖಲೆಯಾಗಿ ಉಳಿಯಬೇಕು. ಭವಿಷ್ಯದಲ್ಲಿ ಇಂತಹ ತಪ್ಪುಗಳು ಮರುಕಳಿಸದಿರಲು ಕಾನೂನಿನಲ್ಲಿ ಕಠಿಣ ತಿದ್ದುಪಡಿಗಳು ಅಗತ್ಯ. ಇದೇ ಕಾರಣಕ್ಕೆ 2020ರಲ್ಲಿ ಎಫ್‌ಸಿಆರ್‌ಎ ಕಾಯ್ದೆಯಲ್ಲಿ ತಿದ್ದುಪಡಿ ತರಲಾಯಿತು. ನ್ಯಾಯಸಮ್ಮತ ಪ್ರಶ್ನೆ ಕೇಳುವ ಹಕ್ಕನ್ನು ಗೌರವಿಸುತ್ತಲೇ, ವಿದೇಶಿ ಶಕ್ತಿಗಳ ಅಜೆಂಡಾ ಹೊತ್ತ ಧ್ವನಿಗಳನ್ನು ಸ್ಪಷ್ಟವಾಗಿ ಗುರುತಿಸುವ ಮತ್ತು ಲೆಕ್ಕ ಕೇಳುವ ವ್ಯವಸ್ಥೆ ನಿರ್ಮಾಣಗೊಳ್ಳಬೇಕು. ಕಲ್ಪಕಂ ಕೊಟ್ಟ ನೋವು ಮತ್ತು ಕಲ್ಪಕಂ ಸಾಧಿಸಿ ತೋರಿದ ಛಲ - ಎರಡೂ ಭಾರತದ ಮುಂದಿನ ಪ್ರತಿ ಹೆಜ್ಜೆಗೆ ದಾರಿದೀಪವಾಗಬೇಕು. ಈ ಪಾಠವನ್ನು ಮರೆತರೆ, ಇತಿಹಾಸ ಮತ್ತೆ ಮರುಕಳಿಸುತ್ತದೆ.