ಉತ್ತರಕನ್ನಡದ ಕಾರವಾರದಲ್ಲಿ ಎಂಟು ವರ್ಷಗಳ ಬಳಿಕ ಕರಾವಳಿ ಉತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಈ ಉತ್ಸವದ ಅಂಗವಾಗಿ, ಶಾಸಕ ಸತೀಶ್ ಸೈಲ್ ಅವರ ಪುತ್ರಿಯ ಪ್ರಾಯೋಜಕತ್ವದಲ್ಲಿ ವಿಶೇಷ ಚೇತನ ಮಕ್ಕಳು ಮತ್ತು ಪೌರಕಾರ್ಮಿಕ ಮಹಿಳೆಯರಿಗೆ ಉಚಿತ ಹೆಲಿಕಾಪ್ಟರ್ ಜಾಲಿ ರೈಡ್ ಆಯೋಜಿಸಲಾಗಿತ್ತು.

ಉತ್ತರಕನ್ನಡ(ಡಿ.24): ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಕಳೆದ ಎಂಟು ವರ್ಷಗಳ ಬಳಿಕ ಕರಾವಳಿ ಉತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಸರಕಾರದ ಪ್ರಮುಖ ಉತ್ಸವಗಳಲ್ಲಿ ಒಂದಾದ ಕರಾವಳಿ ಉತ್ಸವ ಈ ವರ್ಷ ಸಂಭ್ರಮದಿಂದ ಏಳು ದಿನಗಳ ಕಾಲ ನಡೆಸಲಾಗುತ್ತಿದ್ದು, ಈ ಪ್ರಯುಕ್ತ ಹೆಲಿಕಾಪ್ಟರ್ ಹಾರಾಟ ಕೂಡಾ ನಡೆಸಲಾಗುತ್ತಿದೆ.

ವಿಶೇಷ ಚೇತನ ಮಕ್ಕಳು ಹೆಲಿಕಾಪ್ಟರ್‌ನಲ್ಲಿ ಹಾರಾಟ:

ಇಂದು ಮೊದಲ ದಿನ ಕಾರವಾರದ ವಿಶೇಷ ಚೇತನ ಮಕ್ಕಳು ಮತ್ತು ಪೌರಕಾರ್ಮಿಕ ಮಹಿಳೆಯರಿಗೆ ಹೆಲಿಕಾಪ್ಟರ್ ನಲ್ಲಿ ಜಾಲಿ ರೈಡ್ ಮಾಡಿಸಲಾಯಿತು. ಕಾರವಾರದ ಶಾಸಕ ಸತೀಶ್ ಸೈಲ್ ಜಾಲಿ ರೈಡ್‌ಗೆ ಅವಕಾಶ ಮಾಡಿಕೊಟ್ಟಿದ್ದು, ಸತೀಶ್ ಸೈಲ್ ಮಗಳು ಸಾಚಿ ಇದರ ಮೊತ್ತವನ್ನು ತನ್ನ ಖಾತೆಯಿಂದ ಭರಿಸಿದ್ದಾಳೆ.

ಶಾಸಕ ಸತೀಶ್ ಸೈಲ್ ಮಗಳಿಂದ ಉಚಿತ ವ್ಯವಸ್ಥೆ

ತಂದೆಯ ಹುಟ್ಟುಹಬ್ಬದ ನಿಮಿತ್ತ ವಿಶೇಷ ಚೇತನ ಮಕ್ಕಳಿಗೆ ಸ್ವಂತ ಹಣ ಖರ್ಚು ಮಾಡಿಸಿ ಉಚಿತವಾಗಿ ಹೆಲಿಕಾಪ್ಟರ್ ನಲ್ಲಿ ಜಾಲಿ ರೈಡ್ ಮಾಡಿಸಿದ್ದು, ಕಿವಿ ಮತ್ತು ಬಾಯಿ ಬಾರದ ವಿಶೇಷ ಚೇತನ ಮಕ್ಕಳು‌ ಹಾಗೂ ಪೌರ ಕಾರ್ಮಿಕ ಮಹಿಳೆಯರು ಇದರಿಂದ ಖುಷಿ ಪಟ್ಟಿದ್ದಾರೆ. ತಮ್ಮಿಂದ ಹಣಕೊಟ್ಟು ಹೆಲಿಕಾಪ್ಟರ್ ಹತ್ತಲು ಕೂಡಾ ಸಾಧ್ಯವಾಗುತ್ತಿರಲಿಲ್ಲ. ಆದ್ರೆ, ಶಾಸಕ ಸತೀಶ್ ಸೈಲ್ ಮತ್ತು ಮಗಳಿಂದಾಗಿ ಹೆಲಿಕಾಪ್ಟರ್ ನಲ್ಲಿ ಉಚಿತವಾಗಿ ಹಾರಾಟ ಮಾಡುವ ಅವಕಾಶ ಒದಗಿಬಂತು ಎಂದು ಪೌರ ಕಾರ್ಮಿಕ ಮಹಿಳೆಯರು ಖುಷಿಪಟ್ಟರು.