ಪೊಲೀಸರೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಡಿಜಿ-ಐಜಿಪಿ ಡಾ.ಎಂಎ ಸಲೀಂ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ಕೃತ್ಯಗಳಲ್ಲಿ ಭಾಗಿಯಾಗುವ ಸಿಬ್ಬಂದಿ, ಮೇಲ್ವಿಚಾರಣೆಯಲ್ಲಿ ವಿಫಲರಾಗುವ ಹಿರಿಯ ಅಧಿಕಾರಿಗಳ ವಿರುದ್ಧವೂ ಕಠಿಣ ಶಿಸ್ತುಕ್ರಮದ ಎಚ್ಚರಿಕೆ.

ಬೆಂಗಳೂರು (ಡಿ.6): ಅಪರಾಧ ಕೃತ್ಯಗಲ್ಲಿ ಪದೇಪದೆ ಪೊಲೀಸ್ ಸಿಬ್ಬಂದಿಯೇ ಭಾಗಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಡಿಜಿ-ಐಜಿಪಿ ಡಾ.ಎಂಎ ಸಲೀಂ ಅವರು ಕಠಿಣ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಪೊಲೀಸರೇ ಕ್ರೈಂನಲ್ಲಿ ಭಾಗಿಯಾಗುತ್ತಿರುವುದರಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತಿರುವುದಕ್ಕೆ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಅಪರಾಧ ಕೃತ್ಯದಲ್ಲಿ ಭಾಗಿಯಾಗುವ ಅಧಿಕಾರಿ, ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದ್ದು, ನಿಯಮಗಳನ್ನು ಉಲ್ಲಂಘಿಸಿದಲ್ಲಿ ಶಿಸ್ತಿನ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಡಿಜಿಐಜಿಪಿ ಎಚ್ಚರಿಕೆ ನೀಡಿದ್ದಾರೆ.

ಕಾನೂನು ಪಾಲನೆ ಕಡ್ಡಾಯ:

ಪೊಲೀಸ್ ಇಲಾಖೆಯ ಘನತೆ, ಗೌರವ ಮತ್ತು ಸಮಗ್ರತೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಡಾ ಸಲೀಂ ಅವರು ಖಡಕ್ ಸೂಚನೆ ಕೊಟ್ಟಿದ್ದಾರೆ. ಆಯಾ ಜಿಲ್ಲಾ ವಿಭಾಗವಾರು ಎಲ್ಲಾ ಅಧಿಕಾರಿಗಳು ತಮ್ಮ ಅಧೀನದ ಪೊಲೀಸ್ ಅಧಿಕಾರಿ/ಸಿಬ್ಬಂದಿ ಕಾನೂನು ಪಾಲನೆ ಮಾಡುವುದನ್ನು ಕಡ್ಡಾಯಗೊಳಿಸಬೇಕು. ನೈತಿಕ ಮಾನದಂಡಗಳು, ಕಾನೂನುಬದ್ಧ ಕರ್ತವ್ಯ ಮತ್ತು ಭ್ರಷ್ಟಾಚಾರ ಸೇರಿದಂತೆ ಅಪರಾಧಗಳ ಗಂಭೀರ ಪರಿಣಾಮಗಳ ಕುರಿತು ಸಿಬ್ಬಂದಿಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಒಂದು ವೇಳೆ ಪೊಲೀಸ್ ಅಧಿಕಾರಿ, ಸಿಬ್ಬಂದಿಯ ದುರ್ವರ್ತನೆ, ಅಕ್ರಮ ಚಟುವಟಿಕೆಗಳು ಹಾಗೂ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿ್ದು ಕಂಡುಬದಲ್ಲಿ, ಕೂಡಲೇ ಆ ಬಗ್ಗೆ ಪೊಲೀಸ್ ಪ್ರಧಾನ ಕಛೇರಿಗೆ ವರದಿ ನೀಡಬೇಕು ಎಂದು ಆದೇಶಿಸಲಾಗಿದೆ.

ನಿಯಮ ಉಲ್ಲಂಘಿಸಿದರೆ ಹಿರಿಯ ಅಧಿಕಾರಿಗಳ ವಿರುದ್ಧವೇ ಕ್ರಮ!

ಇಲಾಖೆಯ ಘನತೆಯನ್ನು ಕಾಪಾಡುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ. ಪ್ರಸ್ತುತ ಜಾರಿಯಲ್ಲಿರುವ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು ಕಡ್ಡಾಯ. ಇಲಾಖೆಯಲ್ಲಿ ದುರ್ನಡತೆಯನ್ನು ತಡೆಯುವ ಮೇಲ್ಕಂಡ ಎಲ್ಲಾ ಕ್ರಮಗಳನ್ನು ಆಯಾ ವಿಭಾಗವಾರು ಅಧಿಕಾರಿಗಳು ಅನುಷ್ಠಾನಗೊಳಿಸುವುದು ಕಡ್ಡಾಯವಾಗಿದೆ. ಯಾವುದೇ ನಿಯಮವನ್ನು ಉಲ್ಲಂಘಿಸಿದ್ದಲ್ಲಿ, ಕೇವಲ ಸಿಬ್ಬಂದಿಯ ವಿರುದ್ಧ ಮಾತ್ರವಲ್ಲದೆ, ಮೇಲ್ವಿಚಾರಣೆಯಲ್ಲಿ ವಿಫಲರಾದ ಹಿರಿಯ ಅಧಿಕಾರಿಗಳ ವಿರುದ್ಧವೇ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಡಿಜಿಐಜಿಪಿ ಎಚ್ಚರಿಕೆ ನೀಡಿದ್ದಾರೆ. ಈ ಸಂಸ್ಥೆಯ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.